- ಉತ್ತರಪ್ರದೇಶ, ಉತ್ತರಾಖಂಡ್, ಗೋವಾ, ಮಣಿಪುರ, ಪಂಜಾಬ್ ಚುನಾವಣೆಯ ಮತ ಎಣಿಕೆ
- ಮಧ್ಯಾಹ್ನ 12ಕ್ಕೆ ಸ್ಪಷ್ಟಚಿತ್ರಣ ಸಾಧ್ಯತೆ
- ಲೋಕಸಭೆ ಚುನಾವಣೆ ದೃಷ್ಟಿಯಿಂದ ಮಹತ್ವದ ‘ಉಪಸಮರ’ ಇದು
- 4 ರಾಜ್ಯಗಳಲ್ಲಿ ಬಿಜೆಪಿಗೆ ಮರಳಿ ಅಧಿಕಾರಕ್ಕೇರುವ ಸವಾಲು
ನವದೆಹಲಿ (ಮಾ.10): ಭಾರೀ ನಿರೀಕ್ಷೆ ಮೂಡಿಸಿರುವ ಪಂಚರಾಜ್ಯಗಳ ವಿಧಾನಸಭಾ ಕ್ಷೇತ್ರಗಳಿಗೆ (Five State Assembly elections Result) ಚುನಾವಣೆಯ ಮತ ಎಣಿಕೆ ಗುರುವಾರ ನಡೆಯಲಿದೆ. ಮುಂದಿನ ಲೋಕಸಭಾ ಚುನಾವಣೆ (Loksabha Election) ದೃಷ್ಟಿಯಿಂದ ಉತ್ತರಪ್ರದೇಶ (Uttar Pradesh), ಉತ್ತರಾಖಂಡ್ (Uttarakhand), ಗೋವಾ (Goa), ಮಣಿಪುರ (Manipur) ಹಾಗೂ ಪಂಜಾಬ್ (Punjab) ಈ 5 ರಾಜ್ಯಗಳ ಚುನಾವಣೆಗಳು ಅತ್ಯಂತ ಮಹತ್ವ ಪಡೆದಿವೆ. ಹೀಗಾಗಿ ಸಾಕಷ್ಟುರಾಜಕೀಯ ಹೈಡ್ರಾಮಗಳಿಗೆ ವೇದಿಕೆಯಾಗಿದ್ದ ಪಂಜಾಬ್ ಫಲಿತಾಂಶ ಸಹ ಸಾಕಷ್ಟುಕುತೂಹಲ ಕೆರಳಿಸಿದೆ. ಮಧ್ಯಾಹ್ನ 12ರ ವೇಳೆಗೆ ಫಲಿತಾಂಶದ ಸ್ಪಷ್ಟಚಿತ್ರಣ ಲಭಿಸುವ ಸಾಧ್ಯತೆ ಇದೆ.
ಚುನಾವಣಾ ಪೂರ್ವ ಸಮೀಕ್ಷೆಗಳು (Exit Poll)ಕೆಲವು ರಾಜ್ಯಗಳಲ್ಲಿ ಬಿಜೆಪಿ ಬರುವ ಸುಳಿವು ನೀಡಿದರೆ, ಮತ್ತೆ ಹಲವು ಕಡೆ ಅತಂತ್ರ ಪರಿಸ್ಥಿತಿ ಉಂಟಾಗುತ್ತದೆ ಎಂದು ಹೇಳಿವೆ. ಇತ್ತ ಆಪ್ ದೆಹಲಿಯಿಂದ ಹೊರಭಾಗಕ್ಕೆ ವಿಸ್ತರಿಸುವ ಸಾಧ್ಯತೆಯನ್ನು ಎಕ್ಸಿಟ್ ಪೋಲ್‌ಗಳು ತೆರೆದಿಟ್ಟಿವೆ. ಉತ್ತರಪ್ರದೇಶ,ಮಣಿಪುರ ಹಾಗೂ ಉತ್ತರಾಖಂಡ್‌ನಲ್ಲಿ ಬಿಜೆಪಿ ತನ್ನ ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಆದರೆ ಗೋವಾದ ಪರಿಸ್ಥಿತಿ ಅತಂತ್ರವಾಗಲಿದೆ ಎನ್ನುತ್ತಿವೆ ಸಮೀಕ್ಷೆಗಳು. ಪಂಜಾಬ್‌ನಲ್ಲಿ ಆಪ್ ಲಗ್ಗೆ ಇಡಲು ಎದುರು ನೋಡುತ್ತಿದೆ.
ಪಂಜಾಬಲ್ಲಿ ಆಪ್ ಜಯದ ನಗೆ?: ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷ ಪಂಜಾಬ್ ಚುನಾವಣಾ ಕಣಕ್ಕೆ ಕಾಲಿಟ್ಟಿದ್ದೇ ತಡ ಪಂಜಾಬ್ ಚುನಾವಣಾ ಕಣ ರಂಗೇರಿತ್ತು. 117 ವಿಧಾನಸಭೆಯ ಸ್ಥಾನಗಳನ್ನು ಹೊಂದಿರುವ ಪಂಜಾಬ್‌ನಲ್ಲಿ ಚುನಾವಣೆಗೆ ಒಟ್ಟು 1,304 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ರಾಜ್ಯದಲ್ಲಿ ಶೇ.71.95 ರಷ್ಟುಮತದಾನವಾಗಿದೆ. 66 ಸ್ಥಳಗಳಲ್ಲಿರುವ 117 ಕೇಂದ್ರಗಳಲ್ಲಿ ಮತ ಎಣಿಕೆ ನಡೆಯಲಿದೆ. ಆಡಳಿತರೂಢ ಕಾಂಗ್ರೆಸ್‌ಗೆ ಪಂಜಾಬ್‌ನಲ್ಲಿ ಆಪ್ ಪ್ರಬಲ ಪ್ರತಿಸ್ಪರ್ಧಿ. ಅಧಿಕಾರವನ್ನು ತನ್ನಲ್ಲೇ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಕಾಂಗ್ರೆಸ್‌ಗೆ ಆಪ್ ಬಹುದೊಡ್ಡ ಆಘಾತ ನೀಡಬಲ್ಲದು. ಮೊದಲ ಬಾರಿ ತೃತೀಯ ಶಕ್ತಿ (ಆಪ್) ರಾಜ್ಯದಲ್ಲಿ ಎಂಬುದನ್ನು ಚುನಾವಣಾ ಪೂರ್ವೋತ್ತರ ಸಮೀಕ್ಷೆಗಳು ಪುಷ್ಟೀಕರಿಸಿವೆ. ಇಲ್ಲಿ ಶಿರೋಮಣಿ ಅಕಾಲಿದಳ ಹಾಗೂ ಅಮರೀಂದರ್ ಸಿಂಗ್-ಬಿಜೆಪಿ ಮೈತ್ರಿಕೂಟ ಸೋಲುವ ಸಾಧ್ಯತೆ ಇದೆ ಎಂದು ಸಮೀಕ್ಷೆಗಳು ಹೇಳಿವೆ.
ಉತ್ತರಪ್ರದೇಶದಲ್ಲಿ ಮತ್ತೆ ಯೋಗಿ?: ಸಾಕಷ್ಟುಜಿದ್ದಾಜಿದ್ದಿನ ಕಣವಾಗಿರುವ ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದೆ. ಇದಕ್ಕೆ ಇಂಬು ನೀಡುವಂತೆ ಚುನಾವಣೋತ್ತರ ಸಮೀಕ್ಷೆಗಳು ಉತ್ತರಪ್ರದೇಶದಲ್ಲಿ ಯಯೋಗಿ ಆದಿತ್ಯನಾಥ್ ನೇತೃತ್ವದ ಬಿಜೆಪಿಗೆ ಸ್ಪಷ್ಟಬಹುಮತ ಲಭಿಸಲಿದೆ ಎಂದಿವೆ. ಉತ್ತರಪ್ರದೇಶದ 403 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು, ಸರ್ಕಾರ ರಚನೆಗೆ 202 ಸೀಟು ಬೇಕು. 4518 ಅಭ್ಯರ್ಥಿಗಳು ಸ್ಪರ್ಧಿಸಿದ್ದು, 7 ಹಂತಗಳಲ್ಲಿ ನಡೆದ ಚುನಾವಣೆ ಸೋಮವಾರವಷ್ಟೇ ಮುಕ್ತಾಯಗೊಂಡಿದೆ. ಮೋದಿ-ಯೋಗಿ ಜೋಡಿಯ ಅಬ್ಬರದ ಮಂದೆ ಎಸ್‌ಪಿ, ಬಿಎಸ್‌ಪಿ, ಕಾಂಗ್ರೆಸ್ ಸೋಲಲಿವೆ ಎಂದು ಸಮೀಕ್ಷೆಗಳು ವಿವರಿಸಿವೆ.
ಮಣಿಪುರದಲ್ಲಿ ಮತ್ತೆ ಬಿಜೆಪಿ ಗೆಲ್ಲುತ್ತಾ?: ಮಣಿಪುರದಲ್ಲಿ 60 ವಿಧಾನಸಭಾ ಕ್ಷೇತ್ರಗಳಿದ್ದು, ಚುನಾವಣೆಗೆ ಸ್ಪರ್ಧಿಸಿರುವ ಒಟ್ಟು 265 ಅಭ್ಯರ್ಥಿಗಳ ಭವಿಷ್ಯ ಗುರುವಾರ ನಿರ್ಧಾರವಾಗಲಿದೆ. ಶೇ.77ರಷ್ಟುಮತದಾನ ರಾಜ್ಯದಲ್ಲಿ ನಡೆದಿತ್ತು. ಬಿಜೆಪಿ ಅಧಿಕಾರದಲ್ಲಿರುವ ಮಣಿಪುರದಲ್ಲಿ ,ಕಾಂಗ್ರೆಸ್ ಪುನಃ ಅಧಿಕಾರಕ್ಕೆ ಬರಲು ಹವಣಿಸುತ್ತಿದೆ. ಅಲ್ಲದೆ ಪ್ರಾದೇಶಿಕ ಪಕ್ಷಗಳಾದ ಎನ್‌ಪಿಪಿ ಮತ್ತು ಎನ್‌ಪಿಎಫ್ ಕೂಡ ಚುನಾವಣಾ ಕಣದಲ್ಲಿವೆ. ಹಲವಾರು ಮಾಜಿ ಬಿಜೆಪಿ ನಾಯಕರು ಚುನಾವಣೆಗಳಲ್ಲಿ ಟಿಕೆಟ್ ಸಿಗದ ಕಾರಣ, ಜೆಡಿಯುಗೆ ಜೈ ಅಂದಿದ್ದಾರೆ. ಕೆಲವು ಎಕ್ಸಿಟ್ ಪೋಲ್‌ಗಳು ಬಿಜೆಪಿಗೆ ಸ್ಪಷ್ಟಬಹುಮತ ಎಂದಿದ್ದರೆ, ಕೆಲವು ಅತಂತ್ರ ಸ್ಥಿತಿಯ ಭವಿಷ್ಯ ನುಡಿದಿವೆ. ಪ್ರತಿಪಕ್ಷಗಳು ಮಾತ್ರ ಈಶಾನ್ಯ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ವ್ಯಕ್ತಪಡಿಸಿವೆ.
ಗೋವಾದಲ್ಲಿ ಅತಂತ್ರ ಸ್ಥಿತಿ?: ಅತೀ ಚಿಕ್ಕ ರಾಜ್ಯವಾದರೂ ಚುನಾವಣಾ ದೃಷ್ಟಿಯಿಂದ ಸಾಕಷ್ಟುಸದ್ದು ಮಾಡುತ್ತಿರುವ ಗೋವಾದ ಒಟ್ಟು 40 ವಿಧಾನಸಭಾ ಕ್ಷೇತ್ರಗಳಿಗೆ ಫೆ.14 ರಂದು ಚುನಾವಣೆ ನಡೆದಿದ್ದು, ಒಟ್ಟು 332 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಗೋವಾ ಶೇ. 79 ರಷ್ಟುಮತದಾನ ದಾಖಲಿಸಿತ್ತು.
Election Results ಉತ್ತರ ಪ್ರದೇಶದಲ್ಲಿ ಎಣ್ಣೆ ಅಂಗಡಿಗಳು ಕ್ಲೋಸ್!
ಬಿಜೆಪಿ ಆಡಳಿತವಿರುವ ಗೋವಾಕ್ಕೆ ಕಾಂಗ್ರೆಸ್ ಪ್ರಬಲ ಪ್ರತಿಸ್ಪರ್ಧಿ. ಅಲ್ಲದೇ ಈ ಬಾರಿ ಗೋವಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಪಕ್ಷ ಹಾಗೂ ಆಪ್ ಸಹ ಪದಾರ್ಪಣೆ ಮಾಡಿವೆ. ಇನ್ನು ಮಹಾರಾಷ್ಟ್ರ ಗೋಮಂತಕ್ ಪಾರ್ಟಿ(ಎಂಜಿಪಿ) , ಗೋವಾ ಫಾರ್ವರ್ಡ್ ಪಾರ್ಟಿ( ಜಿಎಫ್‌ಪಿ) ಸಹ ಚುನಾವಣಾ ಕಣದಲ್ಲಿವೆ. ಚುನಾವಣಾ ಪೂರ್ವ ಸಮೀಕ್ಷೆಗಳು ಯಾವುದೇ ಪಕ್ಷಗಳಿಗೆ ಸ್ಪಷ್ಟಬಹುಮತದ ದೊರೆಯದೇ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದಿವೆ. ಹೀಗಾಗಿ ಬಿಜೆಪಿ, ಕಾಂಗ್ರೆಸ್ ಹೊರತಾದ ಇತರ ಪಕ್ಷಗಳು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದೆ.
ಗೋವಾ, ಉತ್ತಾರಾಖಂಡದಲ್ಲಿ ಕಾಂಗ್ರೆಸ್-ಬಿಜೆಪಿ ಫೈಟ್
ಉತ್ತರಾಖಂಡ ಬಿಜೆಪಿಗೆ ಅಗ್ನಿಪರೀಕ್ಷೆ: ಉತ್ತರಾಖಂಡ್‌ನಲ್ಲಿ 70 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು. ಶೇ.65 ರಷ್ಟುಮತದಾನವಾಗಿದೆ. ಒಟ್ಟು 632 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಉತ್ತರಾಖಂಡ್ ಸರ್ಕಾರದ ರಚನೆಗೆ 36 ಬಹುಮತ ಮ್ಯಾಜಿಕ್ ನಂಬರ್. ಕೆಲವು ಚುನಾವಣಾ ಪೂರ್ವ ಸಮೀಕ್ಷೆಗಳು ಇಲ್ಲಿ ಬಿಜೆಪಿಯೇ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದಿದ್ದು, ಕೆಲವು ಕಾಂಗ್ರೆಸ್ ಸಹ ಗೆಲುವಿನ ಅಂಚಿಗೆ ಬರಲಿದೆ. ಆಮ್ ಆದ್ಮಿ ಪಕ್ಷ ಸಹ ಕೆಲವು ಸ್ಥಾನವನ್ನು ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿವೆ. ಅತಂತ್ರ ಸ್ಥಿತಿ ಎದುರಾದರೆ ಮೈತ್ರಿ ಲೆಕ್ಕಾಚಾರದಲ್ಲಿ ವಿಪಕ್ಷಗಳು ತೊಡಗಿವೆ.