ಮುಂಬರುವ ವಿಧಾನಸಭೆ ಚುನಾವಣೆಗೆ ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು(ನ.3): ಮುಂಬರುವ ವಿಧಾನಸಭೆ ಚುನಾವಣೆಗೆ ನವೆಂಬರ್ ತಿಂಗಳ ಅಂತ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ದರಾಮಯ್ಯ ಖಳನಾಯಕ, ನರಹಂತಕ: ನಳಿನ್‌ಕುಮಾರ್ ಕಟೀಲ್ ಟೀಕೆ
ಇಂದು ಚಿಕ್ಕಮಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ಅರ್ಜಿ ಸಲ್ಲಿಸಲು ನವೆಂಬರ್ 15ರ ಕಡೆಯ ದಿನವಾಗಿದೆ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆಎಐಸಿಸಿ ಅಧ್ಯಕ್ಷರಾಗಿರುವುದು ಪಕ್ಷಕ್ಕೆ ಆನೆ ಬಲ ಬಂದಿದೆ. ರಾಹುಲ್ ಗಾಂಧಿ ಅವರು 21 ದಿನ 510 ಕಿ.ಮೀ ಪಾದ ಯಾತ್ರೆ ಮಾಡಿದ್ದಾರೆ. ಇದು ಐತಿಹಾಸಿಕವಾಗಿದ್ದು, ನಿರೀಕ್ಷೆಗೆ ಮೀರಿ ಜನ ಸ್ಪಂದಿಸಿದರು. ಅದೂ ಸಹ ಕಾಂಗ್ರೆಸ್ ಪಕ್ಷಕ್ಕೆ ಇನ್ನಷ್ಟು ಬಲ ತಂದಿದೆ. ಮುಂಬರುವ ಚುನಾವಣೆಯಲ್ಲಿ ಗರಿಷ್ಠ 130 ರಿಂದ 150 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೊರಗಿನಿಂದ ಬಂದವರೂ ಚುನಾವಣೆ ಸ್ಪರ್ಧೆಗೆ ಅರ್ಜಿ ಹಾಕಬಹುದು ಎಂದು ಡಿ.ಕೆ.ಶಿವಕುಮಾರ್ ತಿಳಿಸಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಬೇರೆಯವರು ಅರ್ಜಿ ಹಾಕಬಹುದಾ ಎಂದು ಕೇಳಿದ್ದಕ್ಕೆ ಹಾಕಬಹದು ಎಂದಿದ್ದಾರೆ. ಯಾರಿಗೆ ಕಾಂಗ್ರೆಸ್ ಸಿದ್ಧಾಂತ, ನಾಯಕತ್ವದಲ್ಲಿ ನಂಬಿಕೆ ಇದೆ ಅವರು ಅರ್ಜಿ ಹಾಕಬಹುದು. ಅದನ್ನು ಸ್ವೀಕರಿಸಬಹುದೇ, ಬೇಡವೇ ಎನ್ನುವುದನ್ನು ಪರಿಶೀಲಿಸಲು ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿ ಇದೆ. ಅದು ತೀರ್ಮಾನ ಮಾಡುತ್ತದೆ ಎಂದರು.
ಸಚಿವ ಶ್ರೀರಾಮುಲು ವಿರುದ್ದ ಸಿದ್ದರಾಮಯ್ಯ ಕಿಡಿ:
ಕಾಲುವೆ ದುರಸ್ಥಿಗೆ ಆಗ್ರಹಿಸಿ ಸಚಿವ ಶ್ರೀರಾಮುಲು ಸ್ಥಳದಲ್ಲಿ ಮೊಕ್ಕಂ ಹೂಡಿರುವ ಸಂಬಂಧ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಅವರು ಈ ಬಾರಿ ಮೊಣಕಾಲ್ಮೂರಿನಲ್ಲಿ ನಿಂತು ಗೆಲ್ಲಲಿ. ಬಿಎಸ್ಆರ್ ಪಕ್ಷ ಮಾಡಿದ್ದವರಿಗೆ ಯಾವ ಸಿದ್ಧಾಂತ ಇಲ್ಲ. ರೈತರಿಗೆ ಸರಿಯಾದ ಪರಿಹಾರ ಕೊಟ್ಟಿಲ್ಲ ಇವರಿಗೆ ಯಾವ ಕಾಳಜಿ ಇದೆ ತೋರಿಸಲಿ. ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ ದಾಸ್ ವರದಿಯನ್ನು ಜಾರಿಗೆ ಕೊಡುತ್ತೇವೆ ಎಂದು ಹೇಳಿದ್ದರು ಅದೇಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.
ಸಿ.ಟಿ ರವಿ ಎಂದರೆ ಸುಳ್ಳಿನ ರವಿ
ಮೂಡಿಗೆರೆ ಕ್ಷೇತ್ರದಲ್ಲಿ ನಯನ ಮೋಟಮ್ಮ ಅವರಿಗೆ ಟಿಕೆಟ್ ಕೊಡುವ ಸಂಬಂಧ ಪಕ್ಷದಲ್ಲೇ ಅಪಸ್ವರ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲಿ ಆಂತರಿಕ ಪ್ರಜಾಪ್ರಭುತ್ವ ಇರುತ್ತದೆ ಅಲ್ಲಿ ಇದೆಲ್ಲಾ ಇರುತ್ತದೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವವೇ ಇಲ್ಲ. ಸಿ.ಟಿ.ರವಿ ಅವರು ತಮ್ಮ ವಿರುದ್ಧ ಮಾಡಿರುವ ಆರೋಪದ ಬಗ್ಗೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಸಿ.ಟಿ.ರವಿ ಎಂದರೆ ಸುಳ್ಳಿನ ರವಿ ಎಂದರ್ಥ ಅದಕ್ಕೆ ನಾನು ಸುಮ್ಮನಿದ್ದೇನೆ ಎಂದರು.
ಆರೇಳು ಕ್ಷೇತ್ರದಿಂದ ಸ್ಪರ್ಧೆಗೆ ಒತ್ತಡವಿದೆ: ಸಿದ್ದರಾಮಯ್ಯ
ಯಾವ ಕ್ಷೇತ್ರ ತೀರ್ಮಾನಿಸಿಲ್ಲ
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಮಗೆ ರಾಜ್ಯದ ಬಹಳ ಕಡೆ ಆಹ್ವಾನ ಇದೆ. ನಾವು ಇನ್ನೂ ತೀರ್ಮಾನ ಮಾಡಿಲ್ಲ. ಬಾದಾಮಿಯವರು ಅಲ್ಲೇ ಸ್ಪರ್ಧಿಸೇಬೇಕು ಎಂದು ಒತ್ತಾಯ ಹಾಕುತ್ತಿದ್ದಾರೆ. ಕೋಲಾರ, ಚಿಕ್ಕಮಗಳೂರು, ವರುಣಾದವರೂ ಹೇಳುತ್ತಿದ್ದಾರೆ. ಅಂತಿಮವಾಗಿ ಪಕ್ಷದ ಹೈಕಮಾಂಡ್ ಹೇಳಿದ ಕಡೆ ಸ್ಪರ್ಧಿಸುತ್ತೇವೆ ಎಂದರು.