* ಮೇಲ್ಮನೆ ಚುನಾವಣೆಗೆ ಕೈ, ಕಮಲ ಪಾಳಯದಲ್ಲಿ ಈಗಾಗಲೇ ಘಟಾನುಘಟಿಗಳಿಂದ ಕಸರತ್ತು
* ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಎರಡು ಸ್ಥಾನಗಳಿಗೆ ಚುನಾವಣೆ
* ಬಿಜೆಪಿ- ಕಾಂಗ್ರೆಸ್‌ನಲ್ಲೂ ಭಾರೀ ಪೈಪೋಟಿ
ಶ್ರೀಶೈಲ ಮಠದ
ಬೆಳಗಾವಿ(ಅ.04): ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿನ(Vidhana Parishat) ಎರಡು ಸ್ಥಾನಗಳ ಅವಧಿ 2022ರ ಜನವರಿಯಲ್ಲಿ ಮುಕ್ತಾಯವಾಗಲಿದ್ದು, ಚುನಾವಣೆ(Election) ಘೋಷಣೆಗೂ ಮುನ್ನವೇ ಕೈ, ಕಮಲ ಪಾಳಯದಲ್ಲಿ ಟೆಕೆಟ್ ಫೈಟ್ ಶುರುವಾಗಿದೆ. ಅದರಲ್ಲಿಯೂ ಕೈ ಟಿಕೆಟ್‌ಗೆ ಘಟಾನುಘಟಿ ನಾಯಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ.
ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ಎರಡು ಸ್ಥಾನಗಳಿಗೆ ಆಯ್ಕೆ ಮಾಡಬೇಕಿದೆ. ಸದ್ಯ ಬಿಜೆಪಿಯಿಂದ ಮಹಾಂತೇಶ ಕವಟಗಿಮಠ ಹಾಗೂ ವಿವೇಕರಾವ್ ಪಾಟೀಲ (ಪಕ್ಷೇತರ) ಸದಸ್ಯರಿದ್ದಾರೆ. ಈ ಎರಡೂ ಕ್ಷೇತ್ರಗಳ ಅವಧಿ ಮುಕ್ತಾಯವಾಗಿದೆ. ಎಲ್ಲರೂ ಇದೀಗ ವಿಧಾನ ಪರಿಷತ್ ಚುನಾವಣೆಯನ್ನೇ ಎದುರು ನೋಡುತ್ತಿದ್ದಾರೆ. ಜಿಲ್ಲೆಯಲ್ಲಿ ಮತ್ತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಇತ್ತೀಚೆಗಷ್ಟೇ ನಡೆದ ವಿಧಾನಸಭೆ ಉಪಚುನಾವಣೆ, ಲೋಕಸಭೆ ಉಪಚುನಾವಣೆಗಿಂತಲೂ ಪರಿಷತ್ ಚುನಾವಣೆ ಮತ್ತಷ್ಟು ರಂಗೇರುವ ಸಾಧ್ಯತೆಗಳು ದಟ್ಟವಾಗಿವೆ.
ಕಾಂಗ್ರೆಸ್(Congress) ಪಕ್ಷ ಟಿಕೆಟ್ ಪಡೆಯಲು ಘಟಾನುಘಟಿ ನಾಯಕರ ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿದೆ. ಚಿಕ್ಕೋಡಿ ಮಾಜಿ ಸಂಸದ, ಮಾಜಿ ಸಚಿವ ಪ್ರಕಾಶ ಹುಕ್ಕೇರಿ ಇದೀಗ ಎದುರಾಗುವ ಮೇಲ್ಮನೆ ಚುನಾವಣೆಗೆ ಸ್ಪರ್ಧಿಸಲು ತಮಗೆ ಅವಕಾಶ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಕಳೆದ ಲೋಕಸಭೆ ಉಪಚುನಾವಣೆಯಲ್ಲಿ ಟಿಕೆಟ್ ಕೈತಪ್ಪಿದವರು ಪರಿಷತ್ ಟಿಕೆಟ್‌ಗೆ ತಮ್ಮ ನಾಯಕರ ಮೂಲಕ ಲಾಭಿ ನಡೆಸಿದ್ದಾರೆ. ಬೆಳಗಾವಿ(Belagavi) ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಹೋದರ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಉದ್ಯಮಿ ಕಿರಣ ಸಾಧುನವರ, ವಿಧಾನ ಪರಿಷತ್‌ಮಾಜಿ ಸದಸ್ಯ ವೀರಕುಮಾರ ಪಾಟೀಲ, ಅಂಕಲಿಯ ಡಾ. ಎನ್.ಎ. ಮಗದುಮ್ಮ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದೆ. ಅಂತಿಮವಾಗಿ ಕಾಂಗ್ರೆಸ್ ಟಿಕೆಟ್‌ಯಾರಿಗೆ ದೊರೆಯಲಿದೆ ಎನ್ನುವುದನ್ನು ಕಾಯ್ದುನೋಡಬೇಕು.
136 ವರ್ಷಗಳ ಸಮಸ್ಯೆಗೆ ತೆರೆ ಎಳೆದ ಬಿಜೆಪಿ ಸರ್ಕಾರ..!
ಕೈ ಟಿಕೆಟ್ ಅರ್ಜಿಗೆ 1 ಲಕ್ಷ:
ವಿಪ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳು ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ನಮೂನೆಗೆ ಪಡೆಯಲು ಕಾಂಗ್ರೆಸ್ ಭವನ ಕಟ್ಟಡಕ್ಕೆ .1 ಲಕ್ಷ ಬಿಲ್ಡಿಂಗ್ ಫಂಡ್ ಡಿಡಿ ಕಟ್ಟಬೇಕು. ಅಂದಾಗ ಮಾತ್ರ ಅರ್ಜಿ ನಮೂನೆ ಸಿಗುತ್ತದೆ. ಅರ್ಜಿಗೆ 1 ಲಕ್ಷ ನಿಗದಿ ಪಡಿಸಿರುವ ವಿಚಾರ ಸಾಮಾನ್ಯ ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸುವಂತೆ ಮಾಡಿದೆ. ಚುನಾವಣೆಗೆ ದುಡ್ಡಿದ್ದವರು ಮಾತ್ರ ನಿಲ್ಲಬೇಕೆ? ನಿಗದಿತ ಅರ್ಜಿ ನಮೂನೆ ಪಡೆಯಲು 1 ಲಕ್ಷ ಹಣ ನೀಡಿದರೂ ಟಿಕೆಟ್ ಸಿಗುವ ಭರವಸೆಯೂ ದೊರೆಯುತ್ತಿಲ್ಲ ಎನ್ನುವುದು ಕಾಂಗ್ರೆಸ್ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲೂ ಪೈಪೋಟಿ:
ಕೇಸರಿ ಪಾಳಯದಲ್ಲಿಯೂ ಟಿಕೆಟ್‌ಗೆ ಪೈಪೋಟಿ ನಡೆಯುತ್ತಿದೆ. ಸದ್ಯ ಮಹಾಂತೇಶ ಕವಟಗಿಮಠ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಮುಂಬರುವ ಚುನಾವಣೆಗೆ ಸ್ಪರ್ಧಿಸಲು ಪಕ್ಷವು ತಮಗೆ ಟಿಕೆಟ್‌ನೀಡುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಬೈಲಹೊಂಗಲ ಮಾಜಿ ಶಾಸಕ ಡಾ.ವಿ.ಐ.ಪಾಟೀಲ, ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ ಕೂಡ ಆಕಾಂಕ್ಷಿಗಳಾಗಿದ್ದಾರೆ. ಗೋಕಾಕ ಶಾಸಕ ರಮೇಶ ಜಾರಕಿಹೊಳಿ ತಮ್ಮ ಕಿರಿಯ ಸಹೋದರ ಲಖನ್ ಜಾರಕಿಹೊಳಿ ಅವರಿಗೆ ಟಿಕೆಟ್ ಕೊಡಿಸಲು ತೆರೆಯ ಮರೆಯ ಕಸರತ್ತು ನಡೆಸಿದ್ದಾರೆ ಎನ್ನಲಾಗಿದೆ. ಬಿಜೆಪಿ(BJP) ಟಿಕೆಟ್ ಸಿಗದಿದ್ದರೆ ಲಖನ್ ಜಾರಕಿಹೊಳಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಿದ್ಧತೆ ನಡೆಸಿದ್ದಾರೆ ಎನ್ನಲಾಗಿದೆ. ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಬಯಿಸಿ, ಏಳು ಜನ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ನಾನು ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದೇನೆ ಎಂದು ಜಿಲ್ಲಾ ಕಾಂಗ್ರೆಸ್ ಕಮೀಟಿ ಗ್ರಾಮೀಣ ಅಧ್ಯಕ್ಷ ವಿನಯ ನಾವಲಗಟ್ಟಿ ತಿಳಿಸಿದ್ದಾರೆ.