
ರಾಮನಗರ (ಅ.04): ಪಕ್ಷದಲ್ಲಿ ಬೆಳೆದು ಬಳಿಕ ಬಿಟ್ಟು ಹೊರಹೋಗಿ ತೆಗಳಿದರೆ ಸುಮ್ಮನಿರಲಾಗದು. ಅತೃಪ್ತ ಶಾಸಕರು ಮಾತ್ರವಲ್ಲ ಯಾರೇ ಆಗಿರಲಿ ಪಕ್ಷದ ಚೌಕಟ್ಟಿನಲ್ಲಿ ಚರ್ಚೆ ಮಾಡಲು ನಾನು ತಯಾರಿದ್ದೇನೆ ಎನ್ನುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದ್ದಾರೆ. ಈ ಮೂಲಕ ಪಕ್ಷದ ಅಸಮಾಧಾನಿತ ಮುಖಂಡರ ಜತೆಗೆ ಮಾತುಕತೆಗೆ ಸಿದ್ಧ ಎಂಬ ಸಂದೇಶ ರವಾನಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕೆಲ ಶಾಸಕರ ಬಹಿರಂಗ ಹೇಳಿಕೆಗಳಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಬಾಗಿಲು ತಟ್ಟಿದ್ದು ಕಾಂಗ್ರೆಸ್, ದೊಣ್ಣೆ ನಾಯಕನ ಕೇಳಿ ಅಭ್ಯರ್ಥಿ ಹಾಕ್ಬೇಕಾ? ಸಿದ್ದು ವಿರುದ್ಧ HDK ವಾಗ್ದಾಳಿ!
ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸಬಹುದಾದ ವಿಚಾರಗಳನ್ನು ಹೊರಗೆ ಹೇಳುವುದು ಸರಿಯಲ್ಲ. ನಮ್ಮಿಂದ ಯಾವುದೇ ಶಾಸಕರಿಗೆ ಅಪಚಾರವಾಗಿಲ್ಲ. ಪಕ್ಷ ಬಿಡುವವರು ಮೊದಲು ಆತ್ಮ ವಿಮರ್ಶೆ ಮಾಡಿಕೊಳ್ಳಲಿ. ಯಾರೇ ಶಾಸಕರು ಬಂದರು ಮುಕ್ತವಾಗಿ ನಾನು ಯಾವಾಗಲೂ ಮಾತನಾಡುತ್ತೇನೆ. ಅವರ ಸಮಸ್ಯೆಗಳನ್ನು ಬಗೆಹರಿಸಲು ಸಿದ್ಧನಿದ್ದೇನೆ. ನಮ್ಮ ಪಕ್ಷದ ಬಾಗಿಲು ಸದಾ ತೆರೆದಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಇದೇವೇಳೆ ಮೂರು ನಾಲ್ಕು ಜನ ಪಕ್ಷ ತೊರೆಯುವ ಮಾತನಾಡುತ್ತಿದ್ದಾರೆ. ಅವರ ಕ್ಷೇತ್ರಗಳಲ್ಲಿ ಪರ್ಯಾಯ ಅಭ್ಯರ್ಥಿಗಳನ್ನು ಹುಡುಕಿದ್ದೇವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಡಿಕೆಶಿ ಯಾವಾಗ ಭಯಪಡ್ತಾರೆ ಅನ್ನೋದು ಗೊತ್ತಿದೆ: ಎಚ್‌ಡಿಕೆ
ರಾಮನಗರ: ‘ನಾನು ಭಯಬೀಳುತ್ತೇನೋ ಇಲ್ಲವೋ ಎಂಬುದು ಕುಮಾರಸ್ವಾಮಿಗೆ ಗೊತ್ತಿದೆ’ ಎಂಬ ಕೆಪಿಸಿಸಿ (KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್ (DK Shivakumar) ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಭಯ ಪಡುವುದು ಯಾವಾಗ ಎಂಬುದು ನನಗೆ ಚೆನ್ನಾಗಿ ಗೊತ್ತಿದೆ. ಅವೆಲ್ಲವನ್ನು ಇಲ್ಲಿ ಹೇಳಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆಗೆ ಮಾತನಾಡಿ, ಡಿ.ಕೆ. ಶಿವಕುಮಾರ್ ಬಗ್ಗೆ ನನಗೆ ಶೇ.200ರಷ್ಟುಚೆನ್ನಾಗಿ ಗೊತ್ತಿದೆ. ಅವರು ಯಾವಾಗ ಭಯಭೀತರಾಗುತ್ತಾರೆ, ಯಾವಾಗ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅನ್ನುವ ಅರಿವಿದೆ. ಇದು ನನಗೂ ಅವರಿಗೆ ಮಾತ್ರ ಗೊತ್ತಿರುವ ಸತ್ಯ ಎಂದು ಮಾರ್ಮಿಕವಾಗಿ ಹೇಳಿದರು.
ನನ್ನ ಬಗ್ಗೆ ಡಿ.ಕೆ.ಶಿವಕುಮಾರ್ ಅಷ್ಟಾದರೂ ತಿಳಿದುಕೊಂಡಿದ್ದಾರಲ್ಲ ಸಾಕು. ಅವರು ಭಯಪಡುವ ಇನ್ನಷ್ಟುವಿಷಯಗಳಿವೆ. ಅವೆಲ್ಲವನ್ನೂ ಇಲ್ಲಿ ಹೇಳಲು ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.