136 ವರ್ಷಗಳ ಸಮಸ್ಯೆಗೆ ತೆರೆ ಎಳೆದ ಬಿಜೆಪಿ ಸರ್ಕಾರ..!
* ಸ್ಲಂ ನಿವಾಸಿಗಳಿಗೆ ಅ.2 ರಿಂದ ಹಕ್ಕುಪತ್ರ ವಿತರಣೆ
* ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್, ಪ್ರಹ್ಲಾದ ಜೋಶಿ, ಮುನೇನಕೊಪ್ಪ ಹೋರಾಟಕ್ಕೆ ಜಯ
* ಭಾರತ್ ಮಿಲ್‌ನ 7.17 ಎಕರೆ ಭೂಮಿ ಕರ್ನಾಟಕ ಕೊಳಚೆ ಮಂಡಳಿಗೆ ಹಸ್ತಾಂತರ
ಹುಬ್ಬಳ್ಳಿ(ಅ.02): ಈ ವರೆಗೆ ಸರ್ಕಾರಿ ಜಾಗೆಯಲ್ಲಿ ವಾಸವಾಗಿರುವ ಸ್ಲಂ ನಿವಾಸಿಗಳಿಗೆ ‘ಹಕ್ಕು ಪತ್ರ’ ವಿತರಿಸುವ ಕಾರ್ಯಕ್ರಮ ಅ. 2ರಿಂದ ಆರಂಭವಾಗಲಿದೆ.
ಕೆಲವು ಸ್ಲಂ ನಿವಾಸಿಗಳ ಗುಡಿಸಲುಗಳಿಗೆ ಸ್ವಾಧೀನ ಪತ್ರ(ಪರಿಚಯ ಪತ್ರ) ನೀಡಲಾಗಿದೆ. ಆದರೆ ಅವು ನೋಂದಣಿ ಆಗುತ್ತಿಲ್ಲ. ಇದನ್ನು ಮನಗಂಡು ಇದೀಗ ಹಕ್ಕುಪತ್ರ ನೀಡಲಾಗುತ್ತಿದೆ. ಅ. 2ರಂದು ಹುಬ್ಬಳ್ಳಿಯ(Hubballi) ಚಾಮುಂಡೇಶ್ವರಿ ನಗರ, ಲೋಕಪ್ಪನಹಕ್ಕಲ, ಗಾಂಧಿನಗರ ಬೆಂಗೇರಿ ಹೀಗೆ ಮೂರು ಕಡೆ ಕಾರ್ಯಕ್ರಮ ನಡೆಸಿ ಆಯಾ ಸ್ಲಂಗಳ ತಲಾ 10 ಜನ ಫಲಾನುಭವಿಗಳಿಗೆ ಅಂದು ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿ ನೋಂದಣಿ ಮಾಡಿಸಲಾಗುತ್ತಿದೆ. ಅಂದಿನ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ವಸತಿ ಸಚಿವ ವಿ. ಸೋಮಣ್ಣ, ಜವಳಿ, ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಗಿರಣಿಚಾಳ ಸೇರಿದಂತೆ ಉಳಿದ ಕೊಳಚೆ ಪ್ರದೇಶಗಳಲ್ಲಿನ ಫಲಾನುಭವಿಗಳಿಗೆ ಪ್ರತಿವಾರ ಕಾರ್ಯಕ್ರಮ ಆಯೋಜಿಸಿ ವಿತರಿಸಲಾಗುವುದು. ಒಂದೇ ದಿನ ಎಲ್ಲರಿಗೂ ವಿತರಿಸಲು ಸಾಧ್ಯವಾಗದು. ಹೀಗಾಗಿ ಅಧಿಕಾರಿಗಳು ಪ್ರತಿ ಕೊಳಚೆ ಪ್ರದೇಶಗಳಿಗೆ ತೆರಳಿ ಸಮೀಕ್ಷೆ ನಡೆಸಿ ವಿತರಿಸಲಿದ್ದಾರೆ.
ಕೋವಿಡ್ ಬಿಟ್ಟರೂ ವಾಯುವ್ಯ ಸಾರಿಗೆ ಸಂಸ್ಥೆಗೆ ತಪ್ಪದ ಸಂಕಷ್ಟ
‘ಹುಬ್ಬಳ್ಳಿ ಗಿರಣಿಚಾಳ್ ಕನಸು ನನಸು’
ದೇಶದ ಹಿರಿಮೆ ಎನಿಸಿದ್ದ ಹುಬ್ಬಳ್ಳಿಯಲ್ಲಿನ ‘ಭಾರತ್ ಮಿಲ್’ನ ನಿವೃತ್ತ ಕಾರ್ಮಿಕರ 136 ವರ್ಷಗಳ ಸೂರಿನ ಕನಸನ್ನು ಇದೀಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ9BJP) ಸರ್ಕಾರ ನನಸು ಮಾಡಿದೆ.
1997ರಲ್ಲಿ ಭಾರತ್ ಮಿಲ್(ಮಹಾದೇವ ಜವಳಿ ಗಿರಣಿ) ತನ್ನ ಕಾರ್ಯ ಚಟುವಟಿಕೆ ನಿಲ್ಲಿಸಿದ ಬಳಿಕ ಇತ್ತ ಕೆಲಸವೂ ಇಲ್ಲದೇ, ಅತ್ತ ತಾವು ವಾಸಿಸುವ ಗುಡಿಸಲುಗಳಿಗೆ ಪಟ್ಟಾಇಲ್ಲದೇ ಅತಂತ್ರತೆ ಎದುರಿಸುತ್ತಿದ್ದ 588 ನಿವೃತ್ತ ಕಾರ್ಮಿಕರ ಕಣ್ಣೀರಿಗೆ ಕರಗಿದ ಸರ್ಕಾರ ಪಟ್ಟಾನೀಡುತ್ತಿದೆ.
1885ರಿಂದಲೇ ಗಿರಣಿ ವ್ಯಾಪ್ತಿಯ 7.17 ಎಕರೆ ಪ್ರದೇಶದಲ್ಲಿ 580 ಕಾರ್ಮಿಕರು ಜೋಪಡಿ ಹಾಕಿಕೊಂಡು ವಾಸಿಸುತ್ತ ಬಂದಿದ್ದರು. ಮಹಾನಗರ ಪಾಲಿಕೆ ಈ ಎಲ್ಲ ಗುಡಿಸಲುಗಳಿಗೆ ವಿದ್ಯುತ್, ಕುಡಿಯುವ ನೀರು, ಒಳಚರಂಡಿ, ಗಟಾರು, ರಸ್ತೆ ನಿರ್ಮಿಸಿ ಮೂಲ ಸೌಕರ್ಯಗಳನ್ನು ಕಲ್ಪಿಸಿತ್ತು. ಆದರೆ ಪಟ್ಟಾನೀಡಿರಲಿಲ್ಲ.
2001ರಿಂದ ಕಾರ್ಮಿಕರು ‘ಕೊಳಚೆ ಪ್ರದೇಶ ಹಿತರಕ್ಷಣಾ ಸಮಿತಿ’ ಕಟ್ಟಿಕೊಂಡು ತಮ್ಮ ಸೂರುಗಳಿಗೆ ಪಟ್ಟಾನೀಡಬೇಕೆಂದು ಆಗ್ರಹ ಆರಂಭಿಸಿದ್ದರು. ಈ ಹೋರಾಟ, ಪ್ರತಿಭಟನೆಯಲ್ಲಿ ಜಗದೀಶ ಶೆಟ್ಟರ, ಬಸವರಾಜ ಬೊಮ್ಮಾಯಿ, ಪ್ರಹ್ಲಾದ ಜೋಶಿ, ಶಂಕರ ಪಾಟೀಲ ಮುನೇನಕೊಪ್ಪ ಸಕ್ರೀಯವಾಗಿ ಭಾಗವಹಿಸಿ, ಕಾರ್ಮಿಕರ ಬೆನ್ನಿಗೆ ನಿಂತು ಹೋರಾಟಕ್ಕೆ ಬಲ ತುಂಬಿದ್ದರು. ಈ ಹೋರಾಟಕ್ಕೆ ಮಣಿದ ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಇಡೀ ಗಿರಣಿಚಾಳ್ ಪ್ರದೇಶದಲ್ಲಿ ‘ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ’ ಮೂಲಕ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿತು. ಜತೆಗೆ ಶೀಘ್ರದಲ್ಲಿ ಕಾರ್ಮಿಕರ ಹಿತ ಕಾಯುವುದಾಗಿ ಭರವಸೆ ನೀಡಿತ್ತು.
ಆದರೆ, ಭೂಮಿಯ ಮೂಲ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿದ್ದರಿಂದ ಈ ಬಡವರಿಗೆ ಹಕ್ಕುಪತ್ರ ನೀಡಲು ಸಾಧ್ಯವಾಗಲಿಲ್ಲ. ಮುಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಹಿಂದೆ ಹೋರಾಡಿದ ಮಹನೀಯರೆಲ್ಲ ಸೇರಿ ಸರ್ಕಾರದ ಮೇಲೆ ಒತ್ತಡ ಹೇರಿ 2011ರಲ್ಲಿ ಈ ಗುಡಿಸಲುಗಳಿಗೆ ಸ್ವಾಧೀನ ಪತ್ರ(ಪರಿಚಯ ಪತ್ರ) ಕೊಡಿಸುವಲ್ಲಿ ಯಶಸ್ವಿಯಾದರು. ಆದಾಗ್ಯೂ ಅವು ನೋಂದಣಿಗೆ ಅರ್ಹವಾಗಲಿಲ್ಲ.
ಅಂದು ಹೋರಾಟದ ನೇತೃತ್ವ ವಹಿಸಿದ್ದ ಶಂಕರ ಪಾಟೀಲ್ ಮುನೇನಕೊಪ್ಪ ಇಂದು ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರು. ಹೋರಾಟಕ್ಕೆ ಬೆಂಬಲ ನೀಡಿದ್ದ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮುಖ್ಯಮಂತ್ರಿ, ಜಗದೀಶ ಶೆಟ್ಟರ್ ಮಾಜಿ ಮುಖ್ಯಮಂತ್ರಿ, ಪ್ರಹ್ಲಾದ ಜೋಶಿ ಕೇಂದ್ರ ಸಚಿವರು ಆಗಿದ್ದು, ಎಲ್ಲರೂ ಸೇರಿ ಒಮ್ಮತದ ನಿರ್ಣಯ ಮಾಡಿ ಆ ಎಲ್ಲ 580 ಮನೆಗಳಿಗೆ ಹಕ್ಕುಪತ್ರ ನೀಡಿ ನೋಂದಣಿ ಮಾಡಿಸಲು ಮುಂದಾಗಿದ್ದಾರೆ. ಅದಕ್ಕೆ ಅನುಕೂಲವಾಗುವಂತೆ ಆ ಮನೆಗಳಿರುವ ಗಿರಣಿಚಾಳ ಪ್ರದೇಶದ 7.17 ಎಕರೆ ಭೂಮಿಯನ್ನು ‘ಭಾರತ್ ಮಿಲ್’ ಮಾಲೀಕತ್ವದಿಂದ ‘ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿ’ಗೆ ಹಸ್ತಾಂತರಿಸಿದ್ದಾರೆ. ಹಾಗಾಗಿ ಈ ಬಡ ಕಾರ್ಮಿಕರ ಸೂರಿನ ಕನಸು ನನಸಾಗಿದೆ. ಬಡವರೊಂದಿಗೆ ನಿಂತು ಸೂರಿನ ಹಕ್ಕಿಗಾಗಿ ಹೋರಾಡಿದವರೇ ಇಂದು ಸ್ವತಃ ನಿಂತು ಹಕ್ಕುಪತ್ರ ನೀಡುತ್ತಿರುವುದು ಐತಿಹಾಸಿಕ ನಿರ್ಣಯವಾಗಿದೆ. ಇದರಿಂದ ನಿವೃತ್ತ ಕಾರ್ಮಿಕರ 136 ವರ್ಷಗಳ ಅತಂತ್ರತೆ, ಆತಂಕಕ್ಕೆ ತೆರೆ ಬಿದ್ದಿದ್ದು, ಅವರು ವಾಸಿಸುವ ಸೂರುಗಳ ಹಕ್ಕುದಾರಿಕೆ ಅವರಿಗೇ ಲಭಿಸಿದ್ದರಿಂದ ಇಡೀ ಗಿರಣಿಚಾಳ ಪ್ರದೇಶದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.
3000 ಕಾರ್ಮಿಕರು:
1885ರಲ್ಲಿ ಬ್ರಿಟಿಷರು ಸ್ಥಳೀಯರಿಗೆ ಉದ್ಯೋಗ ನೀಡಲು ಮತ್ತು ಇಲ್ಲಿ ಉತ್ಪಾದಿಸಿದ ಬಟ್ಟೆಯನ್ನು ವಿದೇಶಕ್ಕೆ ರಫ್ತು ಮಾಡುವ ಉದ್ದೇಶದಿಂದ ಇಲ್ಲಿನ ಕಾರವಾರ ರಸ್ತೆಯ 60 ಎಕರೆ ಪ್ರದೇಶದಲ್ಲಿ ‘ಭಾರತ್ ಮಿಲ್’ ಎಂಬ ಜವಳಿ ಗಿರಣಿ ಆರಂಭಿಸಿದರು. ಚಿಟಗುಪ್ಪಿ, ಇರಕಲ್, ದೇಶಪಾಂಡೆ ಮನೆತನಗಳಿಗೆ ಸೇರಿದ ಭೂಮಿ ಇದು.
ಜವಳಿ ಗಿರಣಿಗಾಗಿ ಈ ಭೂಮಿಯನ್ನು ಸ್ವಾಧೀನ ಮಾಡಿಕೊಂಡಾಗ ‘ಗಿರಣಿ ಬಂದ್ ಆದ ಕಾಲಕ್ಕೆ ಭೂಮಿಯನ್ನು ಮೂಲ ಮಾಲೀಕರಿಗೆ ವಾಪಸ್ ನೀಡುವ ಮತ್ತು ವರ್ಷಕ್ಕೆ .100 ಲೀಜ್ ಹಣ ಕೊಡುವ ಕರಾರು’ ಹಾಕಲಾಗಿತ್ತು. ತಾಮ್ರಪತ್ರದ ಕರಾರು ಪತ್ರ ಇದಾಗಿದೆ.
‘ಭಾರತ್ ಮಿಲ್’ ಆರಂಭವಾದಾಗ 3000 ಕಾರ್ಮಿಕರು ಇದ್ದರು. ಅವರಲ್ಲಿ ಬಹುತೇಕರು ಈಗಿನ ಆಂಧ್ರಪ್ರದೇಶ, ಮಹಾರಾಷ್ಟ್ರ, ಉತ್ತರ ಕರ್ನಾಟಕದವರು ಆಗಿದ್ದರು. ಬಳಿಕ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಈ ಮಿಲ್ ಅವಸಾನ ಕಾಣುತ್ತ ಬಂದಿತು. ಕರ್ನಾಟಕ ಜವಳಿ ಗಿರಣಿ, ಮಹಾದೇವ ಜವಳಿ ಗಿರಣಿ ಎಂದು ಹೆಸರು ಬದಲಾಯಿಸುತ್ತ ಬಂದು ಕೊನೆಗೆ 1997ರಲ್ಲಿ ಸಂಪೂರ್ಣವಾಗಿ ಕಣ್ಣು ಮುಚ್ಚಿತು. ಆಗ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೇವಲ 1200 ಮಂದಿ ಮಾತ್ರ.
ಶಿಕ್ಷಕರ ವರ್ಗಾವಣೆ ವಿಳಂಬಕ್ಕೆ ದರಿದ್ರ ಅಧಿಕಾರಿಗಳೇ ಕಾರಣ: ಬಸವರಾಜ ಹೊರಟ್ಟಿ
ಗಿರಣಿಚಾಳ್ ಕಥೆ:
ಮಹಾದೇವ ಜವಳಿ ಗಿರಣಿ ಹುಬ್ಬಳ್ಳಿಯ ಪ್ರಮುಖ ಕೈಗಾರಿಕೆಯಾಗಿತ್ತು. ಇಲ್ಲಿ ಕೆಲಸ ಮಾಡುವ ಕಾರ್ಮಿಕರೆಲ್ಲರೂ ಪಕ್ಕದಲ್ಲೇ ಗುಡಿಸಲುಗಳನ್ನು ಹಾಕಿಕೊಂಡು ವಾಸವಾಗಿದ್ದರು. ಅದಕ್ಕೆ ಗಿರಣಿಚಾಳ ಎಂಬ ಹೆಸರು ಬಂತು. ಆದರೆ ಮುಂದೆ ಮಹಾದೇವ ಜವಳಿ ಲಾಕೌಟ್ ಆಯಿತು. ಆದರೆ ಆಗ ಕಾರ್ಮಿಕರು ಈ ಜಾಗ ಬಿಟ್ಟು ಹೋಗಲಿಲ್ಲ. ಹಿಂದೆ ಸರ್ಕಾರಿ ಜಾಗದಲ್ಲಿದ್ದ ಜನರನ್ನೆಲ್ಲ ಒಕ್ಕಲೆಬ್ಬಿಸಲು ಮುಂದಾದಾಗ ಇಲ್ಲಿನ ಜನತೆಯೆಲ್ಲ ಹೋರಾಟಕ್ಕಿಳಿದರು. ಹಲವರು ಈ ಹೋರಾಟ ಬೆಂಬಲಿಸಿದ್ದರಿಂದ ಸರ್ಕಾರ ಇಂದು ಬಡ ಕಾರ್ಮಿಕರ ಹಿತ ಕಾಯಲು ಮುಂದಾಗಿದೆ. ಇದು ಈ ಭಾಗದ ಜನತೆಯಲ್ಲಿ ಸಂತಸದ ಹೊನಲು ಹೊಮ್ಮಿದೆ.
ಧಾರವಾಡ ಜಿಲ್ಲೆಯಲ್ಲಿ 128 ಸ್ಲಂ:
ಧಾರವಾಡ ಜಿಲ್ಲೆಯಲ್ಲಿ ಬರೋಬ್ಬರಿ 128 ಸ್ಲಂಗಳಿವೆ. ಅವುಗಳಲ್ಲಿ 49 ಸ್ಲಂಗಳು ಸರ್ಕಾರಿ ಜಾಗೆಯಲ್ಲಿವೆ. ಇನ್ನುಳಿದ 79 ಸ್ಲಂಗಳು ಖಾಸಗಿ ಜಾಗೆಯಲ್ಲಿವೆ. ಸದ್ಯಕ್ಕೆ ಸರ್ಕಾರಿ ಜಾಗೆಯಲ್ಲಿನ ಕೊಳಚೆ ಪ್ರದೇಶಗಳಲ್ಲಿ ಈಗ ಹಕ್ಕುಪತ್ರ ನೀಡಲಾಗುತ್ತಿದೆ. ಹುಬ್ಬಳ್ಳಿ- ಧಾರವಾಡ ಪೂರ್ವ ಕ್ಷೇತ್ರದಲ್ಲಿ 18, ಪಶ್ಚಿಮದಲ್ಲಿ 10 ಹಾಗೂ ಸೆಂಟ್ರಲ್ ಕ್ಷೇತ್ರದಲ್ಲಿ 13 ಸೇರಿ ಪಾಲಿಕೆ ವ್ಯಾಪ್ತಿಯಲ್ಲಿ 41 ಕೊಳಚೆ ಪ್ರದೇಶಗಳು ಸರ್ಕಾರಿ ಭೂಮಿಯಲ್ಲಿವೆ. ಸೆಂಟ್ರಲ್‌ನಲ್ಲಿ 5159 ಫಲಾನುಭವಿಗಳು, ಪೂರ್ವದಲ್ಲಿ 2385 ಫಲಾನುಭವಿಗಳು, ಪಶ್ಚಿಮ ಕ್ಷೇತ್ರದ 6875 ಫಲಾನುಭವಿಗಳಿಗೆ ಇದರಿಂದ ಲಾಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
ಭಾರತ್ ಮಿಲ್ ಕಾರ್ಮಿಕರ ಸೂರಿಗಾಗಿ ಹಿಂದೆ ಸಾಕಷ್ಟು ಹೋರಾಟ ಮಾಡಿದ್ದೆವು. ನಮ್ಮ ಹೋರಾಟಕ್ಕೆ ಮಾಜಿ ಸಿಎಂ ಜಗದೀಶ ಶೆಟ್ಟರ್, ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರೆಲ್ಲ ಕೈಜೋಡಿಸಿದ್ದರು. ಸ್ವಾಧೀನ ಪತ್ರ ಸಿಕ್ಕಿತ್ತು. ಆದರೆ ಅವುಗಳ ನೋಂದಣಿ ಆಗುತ್ತಿರಲಿಲ್ಲ. ಇದೀಗ ಹಕ್ಕುಪತ್ರ ನೀಡುತ್ತಿದ್ದರಿಂದ ನೋಂದಣಿ ಮಾಡಿಸಲು ಅವಕಾಶ ದೊರೆತಿದೆ ಎಂದು ಧಾರವಾಡ ಜಿಲ್ಲಾ ಉಸ್ತುವಾರಿ, ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದ್ದಾರೆ.