ಅರಕಲಗೂಡು ಜಿದ್ದಾಜಿದ್ದಿ: ಅಭ್ಯರ್ಥಿಗಳು ಅವರೇ, ಆದರೆ ಪಕ್ಷ ಮಾತ್ರ ಅದಲು ಬದಲು?

By Kannadaprabha NewsFirst Published Mar 19, 2023, 11:16 AM IST
Highlights

ಕ್ಷೇತ್ರದಲ್ಲಿ ಶಾಸಕರಾದವರು ಎ.ಮಂಜು ಮತ್ತು ಎ.ಟಿ.ರಾಮಸ್ವಾಮಿ. ಇವರನ್ನು ಹೊರತುಪಡಿಸಿ ಉಳಿದವರಾರ‍ಯರಿಗೂ ಅಧಿಪತ್ಯ ಸ್ಥಾಪಿಸಲಾಗಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಈ ಇಬ್ಬರೂ ನಾಯಕರ ನಡೆ ಹಾಗೂ ನಿರ್ಧಾರಗಳು ಕ್ಷೇತ್ರದ ಜನರನ್ನು ಗೊಂದಲಕ್ಕೀಡು ಮಾಡಿದೆ. 

ಎಚ್‌.ಟಿ. ಮೋಹನ್‌ ಕುಮಾರ್‌

ಹಾಸನ(ಮಾ.19):  ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಜೋತುಬೀಳದೆ ಆಯಾ ಕಾಲಕ್ಕೆ ತಕ್ಕಂತೆ ಆಯ್ಕೆ ಮಾಡುತ್ತಾ ಬಂದಿರುವ ಅರಕಲಗೂಡು ವಿಧಾನಸಭಾ ಕ್ಷೇತ್ರದ ಜನ ಈ ಬಾರಿ ಯಾರನ್ನು ಆಯ್ಕೆ ಮಾಡುತ್ತಾರೆ ಎನ್ನುವುದೇ ಯಕ್ಷ ಪ್ರಶ್ನೆ. ಏಕೆಂದರೆ ಇರುವ ಇಬ್ಬರು ಪ್ರಮುಖ ನಾಯಕರ ಪೈಕಿ ಎ.ಮಂಜು ಜೆಡಿಎಸ್‌ ಸಖ್ಯ ಬೆಳೆಸಿದ್ದರೆ, ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಜೆಡಿಎಸ್‌ನೊಂದಿಗೆ ದೂರವುಳಿದಿದ್ದಾರೆ. ಹಾಗಾಗಿ ಎ.ಟಿ.ರಾಮಸ್ವಾಮಿ ಅವರ ನಡೆ ಈ ಕ್ಷೇತ್ರದ ಮುಂದಿನ ಶಾಸಕ ಯಾರು ಎನ್ನುವುದನ್ನು ನಿರ್ಧರಿಸುತ್ತದೆ.

Latest Videos

ಕ್ಷೇತ್ರದಲ್ಲಿ ಶಾಸಕರಾದವರು ಎ.ಮಂಜು ಮತ್ತು ಎ.ಟಿ.ರಾಮಸ್ವಾಮಿ. ಇವರನ್ನು ಹೊರತುಪಡಿಸಿ ಉಳಿದವರಾರ‍ಯರಿಗೂ ಅಧಿಪತ್ಯ ಸ್ಥಾಪಿಸಲಾಗಿಲ್ಲ. ಆದರೆ, ಇತ್ತೀಚಿನ ಬೆಳವಣಿಗೆಗಳಲ್ಲಿ ಈ ಇಬ್ಬರೂ ನಾಯಕರ ನಡೆ ಹಾಗೂ ನಿರ್ಧಾರಗಳು ಕ್ಷೇತ್ರದ ಜನರನ್ನು ಗೊಂದಲಕ್ಕೀಡು ಮಾಡಿದೆ. ಮಾಜಿ ಸಚಿವರೂ ಆಗಿದ್ದ ಎ.ಮಂಜು ಆರಂಭದಲ್ಲಿ ಬಿಜೆಪಿಯಿಂದಲೇ ತಮ್ಮ ರಾಜಕೀಯ ವೃತ್ತಿ ಜೀವನ ಅರಂಭಿಸಿದರಾದರೂ ನಂತರದಲ್ಲಿ ಸಖ್ಯ ಬೆಳೆಸಿದ್ದು ಕಾಂಗ್ರೆಸ್‌ನೊಡನೆ. ಆ ಪಕ್ಷದಲ್ಲಿದ್ದುಕೊಂಡು ಶಾಸಕರೂ ಆದರು, ಸಚಿವರೂ ಆದರು. ಅದಾದ ನಂತರ ಮತ್ತೆ ಅವರು ಮುಖ ಮಾಡಿದ್ದು ಬಿಜೆಪಿಯತ್ತ. ಆದರೆ, ಅಲ್ಲಿಯೂ ಬದ್ಧತೆ ತೋರದ ಕಾರಣ ಇದೀಗ ಜೆಡಿಎಸ್‌ನತ್ತ ಮುಖ ಮಾಡಿದ್ದಾರೆ. ಹಾಗಾಗಿ ಎ.ಮಂಜು ಅವರು ಇದೀಗ ಜೆಡಿಎಸ್‌ ಸೇರಿದ್ದು, ಕ್ಷೇತ್ರದ ಮುಂದಿನ ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಪಕ್ಕಾ ಆಗಿದೆ.

ಹಾಸನದಲ್ಲಿ ಭವಾನಿ, ಸ್ವರೂಪ್‌ ಇಬ್ಬರನ್ನೂ ಬಿಟ್ಟು ರಾಜೇಗೌಡ?

ಕ್ಷೇತ್ರದ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಹಿಂದಿನಿಂದಲೂ ಜೆಡಿಎಸ್‌ನಲ್ಲಿ ಗುರುತಿಸಿಕೊಂಡವರು. ಆದರೆ, ಇತ್ತೀಚಿನ ದಿನಗಳಲ್ಲಿ ಎಚ್‌.ಡಿ.ರೇವಣ್ಣ ಅವರ ಕುಟುಂಬದ ಕಿರುಕುಳದ ಆರೋಪ ಮಾಡಿ ಜೆಡಿಎಸ್‌ನಿಂದ ದೂರವುಳಿದಿದ್ದಾರೆ. ಆದರೆ ಅವರು, ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಹೋಗುತ್ತಾರೆನ್ನುವುದು ಮಾತ್ರ ಈವರೆಗೂ ಗುಟ್ಟಾಗಿಯೇ ಇಟ್ಟಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್‌ ಟಿಕೆಟ್‌ಗಾಗಿ ಭಾರೀ ಹಣಾಹಣಿ ಇದೆ. ಹಣಬಲ ತೋಳ್ಬಲ ಇರುವವರು ಕೈ ಟಿಕೆಟ್‌ಗಾಗಿ ಈಗಾಗಲೇ ಕೋಟಿಗಟ್ಟಲೆ ಖರ್ಚು ಮಾಡಿದ್ದಾರೆ. ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ಗೆ ಹೋಗುತ್ತಾರಾ ಎಂಬ ಕುತೂಹಲವಿದ್ದರೂ ಸ್ಪಷ್ಟಉತ್ತರ ಸಿಕ್ಕಿಲ್ಲ.

ಇನ್ನು ಬಾಕಿ ಉಳಿದಿರುವುದು ಬಿಜೆಪಿ. ಇಡೀ ಅರಕಲಗೂಡು ಕ್ಷೇತ್ರದಲ್ಲಿ ಪ್ರಮುಖ ಬಿಜೆಪಿ ನಾಯಕ ಅಂತ ಇರುವುದು ಯೋಗಾ ರಮೇಶ್‌. ಇವರು ಆರಂಭದಿಂದಲೂ ಬಿಜೆಪಿಯಲ್ಲಿದ್ದಾರೆ. ಬಿಜೆಪಿ ಅಭ್ಯರ್ಥಿಯಾಗಿ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದವರು. ಇದರ ಮಧ್ಯೆ ಜೆಡಿಎಸ್‌ಗೂ ಸಹ ಹೋಗಿ ಮತ್ತೆ ಬಿಜೆಪಿಗೆ ವಾಪಸ್‌ ಬಂದಿದ್ದಾರೆ. ಆದರೆ, ಇವರು ತಾವೆಲ್ಲೂ ಟಿಕೆಟ್‌ ಆಕಾಂಕ್ಷಿ ಎಂದು ಗಟ್ಟಿಯಾಗಿ ಹೇಳುತ್ತಿಲ್ಲ. ಹಾಗಾಗಿ ಎ.ಟಿ.ರಾಮಸ್ವಾಮಿಯವರಿಗೆ ಬಿಜೆಪಿ ಹಾದಿಯೂ ಸುಗಮವಾಗಿದೆ.

ಸಿದ್ದರಾಮಯ್ಯಗೆ ಗೆಲುವಿನ ಗ್ಯಾರಂಟಿ ಇಲ್ಲ, ಇತರರನ್ನು ಹೇಗೆ ಗೆಲ್ಲಿಸುತ್ತಾರೆ: ಎಚ್‌.ಡಿ.ಕುಮಾರಸ್ವಾಮಿ

ಕ್ಷೇತ್ರದ ಹಿನ್ನೆಲೆ

ಅರಕಲಗೂಡು ಕ್ಷೇತ್ರದಲ್ಲಿ ಈವರೆಗೆ ನಾಲ್ಕು ಬಾರಿ ಕಾಂಗ್ರೆಸ್‌ ಹಾಗೂ ಮೂರು ಬಾರಿ ಜೆಡಿಎಸ್‌ ಗೆದ್ದಿದೆ. ಈ ಕ್ಷೇತ್ರದ ಹಾಲಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಮೂರು ಬಾರಿ ಗೆದ್ದಿದ್ದು, ಎರಡು ಬಾರಿ ಎ.ಮಂಜು ಅವರು ಗೆಲುವಿನ ನಗೆ ನಕ್ಕಿದ್ದಾರೆ. ಈ ಬಾರಿ ಮತ್ತೆ ಇಬ್ಬರೂ ನಾಯಕರು ಪರಸ್ಪರ ಎದುರಾಳಿಗಳಾಗುವುದು ಖಚಿತವಾಗಿದೆ. ಆದರೆ, ಎ.ಮಂಜು ಈ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿದರೆ, ಎ.ಟಿ.ರಾಮಸ್ವಾಮಿ ಮಾತ್ರ ಯಾವ ಪಕ್ಷದಿಂದ ಸ್ಪರ್ಧಿಸ್ತಾರೆ ಎನ್ನುವುದು ಖಚಿತವಾಗಿಲ್ಲ.

ಜಾತಿ ಲೆಕ್ಕಾಚಾರ

ಕ್ಷೇತ್ರದಲ್ಲಿ ಕುರುಬ ಸಮುದಾಯವೇ ನಿರ್ಣಾಯಕ. ಕ್ಷೇತ್ರದಲ್ಲಿ ಒಟ್ಟು 2,20,014 ಮತದಾರರಿದ್ದು, ಇವರಲ್ಲಿ 1,08,779 ಪುರುಷ, 1,01,235 ಮಹಿಳಾ ಮತದಾರರಿದ್ದಾರೆ. ಜಾತಿವಾರು ಲೆಕ್ಕಾಚಾರ ನೋಡಿದರೆ ಒಕ್ಕಗಲಿಗ ಮತದಾರರು 66,000 ಸಂಖ್ಯೆಯಲ್ಲಿದ್ದಾರೆ. ಕುರುಬರು-48,000, ಎಸ್ಸಿ- 18,000, ಎಸ್ಟಿ- 17,000, ಮುಸ್ಲಿಂ- 7,000, ಬ್ರಾಹ್ಮಣ-1000, ವಿಶ್ವಕರ್ಮ-3000, ಬೆಸ್ತ-2000, ಕ್ರಿಶ್ಚಿಯನ್‌-2000, ಮಡಿವಾಳ-3000, ಕುಂಬಾರ-3000, ಸವಿತ ಸಮಾಜ-3000, ಮರಾಠ- 2000, ಜೈನ-2000 ಹಾಗೂ ಇತರೆ ಸಮುದಾಯದವರು 5000 ಮಂದಿ ಇದ್ದಾರೆ. ಒಕ್ಕಲಿಗರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಕುರುಬರೇ ಬಹುತೇಕ ನಿರ್ಣಾಯಕರಾಗಿದ್ದಾರೆ.

click me!