
ಶಿಕಾರಿಪುರ (ಜು.10): ರಾಜ್ಯದಲ್ಲಿ ಕಾಂಗ್ರೆಸ್ ಅಭೂತ ಪೂರ್ವ ಜಯಗಳಿಸಲು ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿ ಯೋಜನೆಗಳು ಪ್ರಮುಖ ಕಾರಣವಾಗಿವೆ. ಈ ಕಾರಣಕ್ಕಾಗಿ ಕಾಂಗ್ರೆಸ್ ಸರ್ಕಾರ ವಾಗ್ದಾನದಂತೆ ಈ ಎಲ್ಲ ಗ್ಯಾರಂಟಿಗಳನ್ನು ಈಡೇರಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಕ್ಷೇತ್ರ ಶಾಸಕ ಆರಗ ಜ್ಞಾನೇಂದ್ರ ಎಚ್ಚರಿಸಿದರು. ಭಾನುವಾರ ಪಟ್ಟಣದ ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ಬಿಜೆಪಿ ವಿವಿಧ ಮೋರ್ಚಾಗಳ ಸಂಯುಕ್ತ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಗೆ ಎಲ್ಲ ಮೋರ್ಚಾಗಳು ಪ್ರಬಲ ಶಕ್ತಿಯಾಗಿದ್ದು, ಪಕ್ಷವನ್ನು ಸದೃಢಗೊಳಿಸುವ ದಿಸೆಯಲ್ಲಿ ಮೋರ್ಚಾಗಳನ್ನು ಸಕ್ರಿಯಗೊಳಿಸುವುದು ಸಾಮಾನ್ಯ ಪ್ರಕ್ರಿಯೆ. ಮೋರ್ಚಾಗಳನ್ನು ಸಕ್ರಿಯಗೊಳಿಸುವ ಮೂಲಕ ಮತದಾರರಿಗೆ ಪಕ್ಷದ ಸಾಧನೆಯನ್ನು ಜನಪರ ಕಾರ್ಯಕ್ರಮದ ಬಗ್ಗೆ ಸೂಕ್ತ ಮಾಹಿತಿಯನ್ನು ತಲುಪಿಸಬೇಕಾಗಿದೆ ಎಂದು ತಿಳಿಸಿದರು. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜನಪರವಾದ ಹಲವು ಯೋಜನೆಯನ್ನು ಜಾರಿಗೊಳಿಸಿದ್ದು, ರಾಜ್ಯ ಸರ್ಕಾರ ನೀಡುತ್ತಿರುವ 5 ಕೆಜಿ ಅಕ್ಕಿಯನ್ನು ಕೇಂದ್ರ ನೀಡುತ್ತಿದೆ. ರೈತರು, ಮಹಿಳೆಯರು, ಹಿಂದುಳಿದವರ ಸಹಿತ ಸರ್ವರ ಕಲ್ಯಾಣಕ್ಕಾಗಿ ಹಲವು ಯೋಜನೆಯನ್ನು ರೂಪಿಸಿದೆ.
ಜೈನಮುನಿ ಹತ್ಯೆ ಕೇಸ್‌ನಲ್ಲಿ ರಾಜಕಾರಣ ಬೆರೆಸುವ ಪ್ರಯತ್ನ ಬೇಡ: ಶಾಸಕ ಲಕ್ಷ್ಮಣ ಸವದಿ
ಈ ಬಗ್ಗೆ ಜನತೆಯಲ್ಲಿ ಜಾಗೃತಿಯನ್ನು ಮೂಡಿಸಬೇಕಾಗಿದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಮತದಾರರು ಕಾಂಗ್ರೆಸ್ ನಾಯಕರನ್ನು ನೋಡಿ ಮತಹಾಕಿಲ್ಲ ಗ್ಯಾರಂಟಿ ನೋಡಿ ಹಾಕಿದ್ದಾರೆ ಗ್ಯಾರಂಟಿಯ ವ್ಯಾಲಿಡಿಟಿ ಬಗ್ಗೆ ಯಾವುದೇ ನಿಖರತೆ ಇಲ್ಲ. ಕಾಂಗ್ರೆಸ್ ಅಧಿಕಾರ ಗಳಿಸಲು ಚುನಾವಣಾ ಪೂರ್ವದಲ್ಲಿ ನೀಡಿದ ಗ್ಯಾರಂಟಿ ವಾಗ್ದಾನ ಪೂರ್ಣ ಈಡೇರಿಸಬೇಕು. ತಪ್ಪಿದಲ್ಲಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು. ಈ ಬಗ್ಗೆ ಕಾರ್ಯಕರ್ತರು ಗ್ರಾಮೀಣ ಪ್ರದೇಶಕ್ಕೆ ತೆರಳಿ ಜನತೆಯನ್ನು ಜಾಗ್ರತೆಗೊಳಿಸಬೇಕು ಎಂದು ತಿಳಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ಧಿಗೆ ಅನುದಾನದ ಹೊಳೆ ಹರಿಸಿದೆ. ಆದರೆ ಈ ಬಾರಿಯ ಬಜೆಟ್‌ನಲ್ಲಿ ಕಾಂಗ್ರೆಸ್ ಸರ್ಕಾರ ಜಿಲ್ಲೆಗೆ ಅನುದಾನ ನೀಡದೇ ದ್ರೋಹ ಬಗೆದಿದೆ. ಈ ಬಗ್ಗೆ ಜಿಲ್ಲೆಯ 3 ಕಾಂಗ್ರೆಸ್ ಶಾಸಕರು ಆಕ್ಷೇಪಿಸದೇ ಮೌನ ವಹಿಸಿದ್ದಾರೆ ಎಂದು ಟೀಕಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಉಚಿತ 10 ಕೆಜಿ ಅಕ್ಕಿ ಘೋಷಣೆ ಮೂಲಕ ಅಧಿಕಾರಕ್ಕೇರಿದ ಕಾಂಗ್ರೆಸ್ ಇದೀಗ ಕೇಂದ್ರ ಸಹಕರಿಸುತ್ತಿಲ್ಲ ಎಂದು ವೃಥಾ ಆರೋಪ ಮಾಡುತ್ತಿದೆ. ದೇಶ ಬರಗಾಲದಿಂದ ತತ್ತರಿಸಿದಾಗ ವಿತರಿಸುವ ಮುಂದಾಲೋಚನೆಯಂತೆ ಭಾರತ ಆಹಾರ ನಿಗಮ ಆಹಾರದ ಭದ್ರತೆಗಾಗಿ ಅಕ್ಕಿಯನ್ನು ಗೋದಾಮಿನಲ್ಲಿ ಸಂಗ್ರಹಿಸಿಡುವುದು ನಿಗಮದ ಜವಾಬ್ದಾರಿಯಾಗಿದೆ. ಇದೀಗ 5 ಕೆಜಿ ಅಕ್ಕಿ ವಿತರಣೆ ಬದಲಿಗೆ ಹಣ ನೀಡುವ ಮೂಲಕ ಮತದಾರರಿಗೆ ದ್ರೋಹ ಬಗೆಯುತ್ತಿದೆ. ಹಣ ತಿನ್ನಲು ಬರುವುದಿಲ್ಲ ಎಂದು ಟೀಕಿಸಿದರು.
ರಾಜ್ಯದಲ್ಲಿ ಎಲ್ಲ ಜಾತಿ, ಧರ್ಮ ಜನಾಂಗದವರಿದ್ದು, ಎಲ್ಲರ ಭಾವನೆಯನ್ನು ಗೌರವಿಸಬೇಕು. ಗೋಹತ್ಯೆ ನಿಷೇಧವಿದ್ದರೂ ಅವ್ಯಾಹತವಾಗಿದ್ದು, ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಅಲ್ಪಸಂಖ್ಯಾತರ ಓಲೈಕೆಯ ರಾಜಕಾರಣ ವಿಪರೀತವಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಕನಿಷ್ಠ ಅನುದಾನ ನೀಡದ ಕಾಂಗ್ರೆಸ್‌ಗೆ ಬಿಜೆಪಿಯನ್ನು ಟೀಕಿಸುವ ನೈತಿಕ ಹಕ್ಕು ಇಲ್ಲ ಎಂದರು. ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಮುಖಂಡ ಕೊಳಗಿ ರೇವಣಪ್ಪ, ಎಚ್.ಟಿ. ಬಳಿಗಾರ್, ವೀರೇಂದ್ರ ಪಾಟೀಲ್, ಗಾಯತ್ರಿದೇವಿ, ಚನ್ನವೀರಪ್ಪ, ವಸಂತಗೌಡ, ಮಿಲ್ಟಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.
ಧುಮ್ಮಿಕ್ಕುತ್ತಿರುವ ಜೋಗದ ಸೊಬಗು: ರಾಜ, ರಾಣಿ, ರೋರರ್, ರಾಕೆಟ್, ಲೇಡಿ ನೋಡಲು ಪ್ರವಾಸಿಗರ ದಂಡು
ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಎಲ್ಲ ಸಮುದಾಯದ ಮಧ್ಯೆ ಸಾಮರಸ್ಯದ ವಾತಾವರಣವಿದ್ದು, ಇದೀಗ ಕಾಂಗ್ರೆಸ್ ಅಧಿಕಾರದ ಆರಂಭದಲ್ಲಿಯೇ ಹಿಂದೂಗಳ ವಿರುದ್ಧದ ಗಲಾಟೆ ಹೆಚ್ಚಾಗುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಎಲ್ಲವನ್ನು ನಿಭಾಯಿಸುವ ಭ್ರಮೆ ಹೆಚ್ಚಾಗುತ್ತಿದೆ. ಇದಕ್ಕೆ ಆಸ್ಪದ ನೀಡುವುದಿಲ್ಲ
- ಬಿ.ವೈ.ವಿಜಯೇಂದ್ರ, ಶಾಸಕ, ಶಿಕಾರಿಪುರ ಕ್ಷೇತ್ರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.