ಕಾಮಕುಮಾರ ನಂದಿ ಮಹಾರಾಜರ ಕಗ್ಗೊಲೆ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಆದರೆ, ಇದರಲ್ಲಿ ಯಾರೂ ರಾಜಕಾರಣ ಬೆರೆಸುವ ಪ್ರಯತ್ನ ಮಾಡುವುದು ಬೇಡ ಎಂದು ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಬೆಳಗಾವಿ/ಚಿಕ್ಕೋಡಿ (ಜು.10): ಕಾಮಕುಮಾರ ನಂದಿ ಮಹಾರಾಜರ ಕಗ್ಗೊಲೆ ನಾಗರಿಕ ಸಮಾಜ ತಲೆ ತಗ್ಗಿಸುವ ಘಟನೆ. ಆದರೆ, ಇದರಲ್ಲಿ ಯಾರೂ ರಾಜಕಾರಣ ಬೆರೆಸುವ ಪ್ರಯತ್ನ ಮಾಡುವುದು ಬೇಡ ಎಂದು ಮಾಜಿ ಡಿಸಿಎಂ, ಅಥಣಿ ಶಾಸಕ ಲಕ್ಷ್ಮಣ ಸವದಿ ಹೇಳಿದರು. ಮುನಿಗಳ ಪಾರ್ಥಿವ ಶರೀರದ ಅಂತ್ಯಕ್ರಿಯೆ ಬಳಿಕ ಭಾನುವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಶಾಸಕರು, ಈ ಘಟನೆ ನಮ್ಮ ರಾಜ್ಯ ಅದರಲ್ಲೂ ಬೆಳಗಾವಿ ಜಿಲ್ಲೆಯಲ್ಲಿ ನಡೆದಿರುವುದು ತಲೆತಗ್ಗಿಸುವ ವಿಚಾರ. ಮುನಿಗಳ ಹತ್ಯೆ ಬಗ್ಗೆ ಅಧಿವೇಶನದಲ್ಲಿ ಚರ್ಚೆ ಮಾಡುತ್ತೇವೆ. ಜಿಲ್ಲೆಯ ಎಲ್ಲಾ ಶಾಸಕರು ಪಕ್ಷಾತೀತವಾಗಿ ಈ ಹತ್ಯೆಯನ್ನು ಖಂಡಿಸುತ್ತೇವೆ. ಅಧಿವೇಶನದಲ್ಲಿ ಸಂತಾಪ ಸೂಚನೆ ನಿಲುವಳಿ ಮಂಡಿಸುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಮುನಿಗಳ ಬರ್ಬರ ಹತ್ಯೆ ಇಡೀ ಸಮಾಜವನ್ನು ಬೆಚ್ಚಿ ಬೀಳಿಸುವ ಘಟನೆ. ವಿಶ್ವಕ್ಕೆ ಶಾಂತಿ ಕೋರುವ ಮುನಿಗಳ ಬರ್ಬರ ಹತ್ಯೆ ಆಗಿರುವುದು ಖೇದಕರ. ಪ್ರಕರಣ ದಾಖಲಾದ ಕೆಲವೇ ಗಂಟೆಗಳಲ್ಲಿ ತೀವ್ರ ಶೋಧ ನಡೆಸಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು, ನಮ್ಮ ಅಧಿಕಾರಿಗಳು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ ಸವದಿ ಪೊಲೀಸ್ ತನಿಖೆಯನ್ನು ಸಮರ್ಥಿಸಿಕೊಂಡರು. ಕಾಮಕುಮಾರ ಮುನಿಗಳು ಪೂರ್ವಾಶ್ರಮದಲ್ಲಿ ಅಥಣಿಯಲ್ಲಿ ಬೆಳೆದಿದ್ದಾರೆ. ಸನ್ಯಾಸ ದೀಕ್ಷೆ ಪಡೆದ ಬಳಿಕ ಉತ್ತರ ಭಾರತದಲ್ಲಿ ಧರ್ಮ ಬೋಧನೆ ಮಾಡಿದ್ದರು ಎಂದು ಸ್ಮರಿಸಿಕೊಂಡರು.
ಆಸ್ತಿ ವಿವರ ಸಲ್ಲಿಸದ ಗ್ರಾ.ಪಂ ಸದಸ್ಯರನ್ನು ವಜಾಗೊಳಿಸಲು ಶೋಕಾಸ್ ನೋಟಿಸ್ ಅಗತ್ಯವಿಲ್ಲ: ಹೈಕೋರ್ಟ್
ಜೈನಮುನಿ ಮಹಾರಾಜರು ಪಂಚಭೂತಗಳಲ್ಲಿ ಲೀನ: ಹಣದ ವಿಚಾರಕ್ಕೆ ಬರ್ಭರ ಹತ್ಯೆಗೀಡಾಗಿದ್ದ ಹಿರೇಕೋಡಿ ನಂದಿ ಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಅಂತ್ಯ ಆಶ್ರಮದ ಪಕ್ಕದ ಜಮೀನಿನಲ್ಲೇ ಭಾನುವಾರ ಮಧ್ಯಾಹ್ನ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ನೆರವೇರಿತು.
ಮಹಾರಾಷ್ಟ್ರ ಮತ್ತು ಹುಬ್ಬಳ್ಳಿ ವರೂರು ಭಟ್ಟಾರಕರ ನೇತೃತ್ವದಲ್ಲಿ ಜೈನ ಸಮುದಾಯದ ವಿಧಿ ವಿಧಾನದಂತೆ ನಮೋಕಾರ ಮಂತ್ರ ಪಠಣದೊಂದಿಗೆ ಅಗ್ನಿಸ್ಪರ್ಶಿಸುವ ಮೂಲಕ ಅಂತ್ಯಕ್ರಿಯೆ ನರೆವೇರಿಸಲಾಯಿತು. ಮುನಿಗಳ ಹತ್ಯೆ ಸುದ್ದಿ ಹರಡುತ್ತಲೇ ವಿವಿಧೆಡೆಯಿಂದ ಹಿರೇಕೋಡಿ ಗ್ರಾಮಕ್ಕೆ ತಂಡೋಪ ತಂಡವಾಗಿ ಬಂದ ಭಕ್ತ ವೃಂದ, ಮುನಿಗಳ ಚಿತೆಗೆ ಹಾಕಲೆಂದು ಹಾಲು, ಕಾರೀಕು, ಬೆಲ್ಲ, ಅಕ್ಕಿ, ಕಡ್ಲಿಬೇಳೆ, ಕರ್ಪೂರ, ತುಪ್ಪ, ಬದಾಮಿ, ಗಂಧದ ಕಟ್ಟಿಗೆ, ಕೊಬ್ಬರಿ, ಅಡಿಕೆ ಹೀಗೆ ವಿವಿಧ ವಸ್ತುಗಳನ್ನು ತಂದು ಅರ್ಪಿಸಿದರು. ಮುನಿಗಳ ಅಂತಿಮ ದರ್ಶನ ಪಡೆದು ಕಂಬನಿ ಮಿಡಿದರು. ಜೈನ ಮುನಿಗಳನ್ನು ನೆನೆದು ಮಹಿಳಾ ಭಕ್ತರಲ್ಲಿ ದುಃಖ ಉಮ್ಮಳಿಸಿತ್ತು.
ಭಾನುವಾರ ಮಧ್ಯಾಹ್ನ 1 ಗಂಟೆ ಹೊತ್ತಿಗೆ ಕಾಮಕುಮಾರ ನಂದಿ ಮುನಿಗಳ ಪಾರ್ಥಿವ ಶರೀರರಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಇದಕ್ಕೂ ಮುನ್ನ ಕೊಲ್ಲಾಪುರದ ನಾಂದಿನಿ ಮಠದ ಜಿನಸೇನ ಭಟ್ಟಾರಕ ಪಟ್ಟಾಚಾರ್ಯರು, ಹುಬ್ಬಳ್ಳಿ ವರೂರಿನ ಧರ್ಮಸೇನಾ ಭಟ್ಟಾರಕ ಪಟ್ಟಾಚಾರ್ಯರು ಆಶ್ರಮದ ಪಕ್ಕದ ಗದ್ದೆ ಪರೀಕ್ಷಿಸಿ ಸ್ಥಳ ಗುರುತು ಮಾಡಿದರು. ಬೆಳಗಾವಿ ಎಸ್ಪಿ ಡಾ.ಸಂಜೀವ್ ಪಾಟೀಲ ಸೇರಿ ಹಲವರು ಸಾಥ್ ನೀಡಿದರು. ಬಳಿಕ ಭಟ್ಟಾರಕರು ಪ್ರಶಸ್ತ ಸ್ಥಳಕ್ಕೆ ಪೂಜೆ ಸಲ್ಲಿಸಿ ಮುನಿಗಳ ಅಂತ್ಯ ಸಂಸ್ಕಾರದ ಸಿದ್ಧತೆ ನಡೆಸಿದರು.
ಎಚ್.ಡಿ.ಕುಮಾರಸ್ವಾಮಿಗೆ ಒಕ್ಕಲಿಗರು ಬೆಳೆಯೋದು ಇಷ್ಟವಿಲ್ಲ: ಸಚಿವ ಚಲುವರಾಯಸ್ವಾಮಿ
ಪಂಚಭೂತಗಳಲ್ಲಿ ಲೀನ: ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರು ಭಾನುವಾರ ಪಂಚಭೂತಗಳಲ್ಲಿ ಲೀನರಾದರು. ಅಗ್ನಿ ಸ್ಪರ್ಶವಾಗುತ್ತಿದ್ದಂತೆ 30 ಸೆಕೆಂಡುಗಳ ಕಾಲ ಬಂದ ಮಳೆ ಭಕ್ತರಲ್ಲಿ ಅಚ್ಚರಿ ಮೂಡಿಸಿತು. ಅಗ್ನಿ ಸ್ಪರ್ಶಿಸುತ್ತಲೇ ಬಂದ ಮಳೆ ಮತ್ತೆ ನಿಂತು ಅಂತ್ಯಕ್ರಿಯೆಗೆ ಸಹಕರಿಸಿತು. ಅಂತ್ಯಕ್ರಿಯೆ ವೇಳೆ ಬಂದ ವರುಣ ಧರೆಗಿಳಿದಿದ್ದರಿಂದ ಇದೊಂದು ಶುಭ ಸಂದೇಶ ಎಂದೇ ಭಕ್ತರು ಭವಿಸಿದರು.