ಕಾವೇರಿ ಜಲಾನಯನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುತ್ತಿದ್ದಾರೆ. ಜನರು ಎಲ್ಲಿ ಅವರನ್ನು ತಿರಸ್ಕರಿಸುತ್ತಾರೊ ಎಂಬ ಭಯದಿಂದ ದೇವೇಗೌಡರು ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.
ರಾಮನಗರ (ಮಾ.29): ಕಾವೇರಿ ಜಲಾನಯನ ಪ್ರದೇಶದ ಮೂರು ಕ್ಷೇತ್ರಗಳಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದ ಸದಸ್ಯರು ಸ್ಪರ್ಧೆ ಮಾಡುತ್ತಿದ್ದಾರೆ. ಜನರು ಎಲ್ಲಿ ಅವರನ್ನು ತಿರಸ್ಕರಿಸುತ್ತಾರೊ ಎಂಬ ಭಯದಿಂದ ದೇವೇಗೌಡರು ಮೇಕೆದಾಟು ಯೋಜನೆಗೆ ಪಕ್ಷಾತೀತ ಹೋರಾಟ ಮಾಡಬೇಕೆಂದು ಹೇಳುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟೀಕಿಸಿದರು.
ನಾವು ಮೇಕೆದಾಟು ಯೋಜನೆಗಾಗಿ ಪಾದಯಾತ್ರೆ ಮಾಡಿದೆವು. ಆಗ ದೇವೇಗೌಡರು ಬೆಂಬಲ ನೀಡಲಿಲ್ಲ. ಈಗ ತಮ್ಮ ಕುಟುಂಬದವರ ಸೋಲಿನ ಭೀತಿಯಿಂದ ಎಲ್ಲಾ ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕೆಂದು ಹೇಳುತ್ತಿದ್ದಾರೆ. ದೇವೇಗೌಡರೇ ಈ ಜನರು ದಡ್ಡರಲ್ಲ. ನಿಮ್ಮನ್ನು, ಕುಮಾರಣ್ಣನವರನ್ನು ನೋಡಿದ್ದಾರೆ. ಇಂದು ನಮ್ಮ ಸರ್ಕಾರ ಅಧಿಕಾರದಲ್ಲಿದ್ದು, ನಾನು ನೀರಾವರಿ ಹಾಗೂ ಬೆಂಗಳೂರಿನ ಜವಾಬ್ದಾರಿ ತೆಗೆದುಕೊಂಡಿರುವುದೇ ಈ ಯೋಜನೆ ಮಾಡಿ ಇತಿಹಾಸ ಸೃಷ್ಟಿಸಲು. ಈ ಯೋಜನೆಗೆ ಪೂರ್ವಭಾವಿ ಸಿದ್ಧತೆ ಮಾಡಿಕೊಂಡಿದ್ದೇವೆ.
ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್‌ಗೆ ನಿದ್ದೆ ಬರ್ತಿಲ್ಲ: ವಿಜಯೇಂದ್ರ
ಅರಣ್ಯ ಪ್ರದೇಶಕ್ಕೆ ಪರ್ಯಾಯ ಭೂಮಿಯನ್ನು ಗುರುತಿಸಿ ಸರ್ವೇ ಮಾಡಲಾಗುತ್ತಿದೆ. ಈ ಯೋಜನೆ ಜಾರಿಯಾದರೆ ಕಾವೇರಿ ಜಲಾನಯನ ಪ್ರದೇಶದ ಎಲ್ಲಾ ಜನರಿಗೂ ಪ್ರಯೋಜನವಾಗಲಿದೆ ಎಂದರು. ಯಾರು ಬೆಂಬಲ ನೀಡುತ್ತಾರೋ ಇಲ್ಲವೋ ನಾವಂತೂ ಈ ಯೋಜನೆ ಮಾಡೇ ಮಾಡುತ್ತೇವೆ. ಈ ವಿಚಾರವಾಗಿ ನ್ಯಾಯಾಲಯದ ಆದೇಶ ಪಾಲಿಸುತ್ತೇವೆ. ಈ ಹಿಂದೆ 450 ಟಿಎಂಸಿ ನೀರು ಸಮುದ್ರ ಸೇರಿದೆ. ಅದರಲ್ಲಿ 64 ಟಿಎಂಸಿ ನೀರನ್ನು ಹಿಡಿದಿಟ್ಟು ಈ ಭಾಗದ ಜನರ ಬದುಕು ಹಸನ ಮಾಡಲು, ಪ್ರತಿ ಕುಟುಂಬಕ್ಕೆ ಕುಡಿಯಲು ಕಾವೇರಿ ನೀರು ನೀಡಲು ನಾವು ತೀರ್ಮಾನಿಸಿದ್ದೇವೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಅಸಮಾಧಾನಿತರ ಜತೆ ಚರ್ಚೆ: ಕೋಲಾರ ಲೋಕಸಭಾ ಕ್ಷೇತ್ರದ ಟಿಕೆಟ್ ಆಯ್ಕೆ ಕುರಿತು ಬಂಡಾಯ ಎದ್ದಿರುವ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರೊಂದಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ತಡರಾತ್ರಿವರೆಗೆ ಸಂಧಾನ ಸಭೆ ನಡೆಸಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ಕೆ.ಎಚ್. ಮುನಿಯಪ್ಪ ಅವರ ಅಳಿಯ ಚಿಕ್ಕ ಪೆದ್ದಯ್ಯ ಅವರಿಗೆ ಟಿಕೆಟ್ ನೀಡಲು ತೀರ್ಮಾನಿಸಿದೆ ಎಂಬ ಸುದ್ದಿ ಹೊರ ಬಿದ್ದ ಕೂಡಲೇ ಮಾಜಿ ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ಬಣದಲ್ಲಿ ಗುರುತಿಸಿಕೊಂಡಿರುವ ಸಚಿವ ಡಾ.ಎಂ.ಸಿ. ಸುಧಾಕರ್, ಕೋಲಾರ ಶಾಸಕ ಕೊತ್ತೂರು ಜಿ. ಮಂಜುನಾಥ್, ಮಾಲೂರಿನ ಶಾಸಕ ಕೆ.ವೈ. ನಂಜೇಗೌಡ ಹಾಗೂ ವಿಧಾನಪರಿಷತ್ ಸದಸ್ಯರಾದ ನಸೀರ್ ಅಹ್ಮದ್, ಅನಿಲ್ ಕುಮಾರ್ ಸಾಮೂಹಿಕ ರಾಜೀನಾಮೆಗೆ ಮುಂದಾಗಿದ್ದರು.
ಸಚಿವ ಮಧು ಬಂಗಾರಪ್ಪ ನಾಲಿಗೆ ಮೇಲೆ ಹಿಡಿತ ಇಟ್ಟುಕೊಳ್ಳಲಿ: ಬಿ.ವೈ.ರಾಘವೇಂದ್ರ
ಈ ಹಿನ್ನೆಲೆಯಲ್ಲಿ ಅವರ ಮನವೊಲಿಸಲು ಡಿ.ಕೆ. ಶಿವಕುಮಾರ್ ಅವರು ಐದೂ ಮಂದಿಯನ್ನೂ ಕರೆಸಿಕೊಂಡು ಚರ್ಚೆ ನಡೆಸಿದರು. ಮೂಲಗಳ ಪ್ರಕಾರ, ಅಸಮಾಧಾನಿತ ಶಾಸಕರ ಜತೆಗಿನ ಚರ್ಚೆ ಬಳಿಕ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೂ ಸಹ ಶಿವಕುಮಾರ್ ಅವರು ಚರ್ಚೆ ನಡೆಸುವ ಸಾಧ್ಯತೆಯಿದೆ. ಈ ವೇಳೆ ಮುನಿಯಪ್ಪ ಅವರು ಹೈಕಮಾಂಡ್ ನಿರ್ಧಾರದಂತೆ ತಮ್ಮ ಅಳಿಯನಿಗೆ ಟಿಕೆಟ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸುವ ಸಾಧ್ಯತೆ ಇದೆ. ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನಿತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದ್ದೇನೆ. ಟಿಕೆಟ್ ಬಗ್ಗೆ ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದಷ್ಟೇ ತಿಳಿಸಿದರು.