ಸೋಲಾರ್ ಬಳಕೆಗೆ ರೈತರು ಆದ್ಯತೆ ನೀಡಲಿ: ಸಚಿವ ಕೆ.ಜೆ.ಜಾರ್ಜ್

By Kannadaprabha News  |  First Published Dec 28, 2023, 11:30 PM IST

ಸೋಲಾರ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. 


ಬಾಳೆಹೊನ್ನೂರು (ಡಿ.28): ಸೋಲಾರ್ ಉತ್ಪಾದನೆ ಹೆಚ್ಚಿಸಲು ಸರ್ಕಾರ ಆದ್ಯತೆ ನೀಡುತ್ತಿದ್ದು, ಮುಂದಿನ ದಿನಗಳಲ್ಲಿ ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸೋಲಾರ್ ವಿದ್ಯುತ್ ಬಳಕೆಗೆ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಹೇಳಿದರು. ಖಾಂಡ್ಯ ಹೋಬಳಿಯ ಜೇನುಗದ್ದೆಯಲ್ಲಿ ಕೆಪಿಟಿಸಿಎಲ್‌ನಿಂದ ನೂತನವಾಗಿ ನಿರ್ಮಾಣಗೊಂಡ 66/11 ಕೆವಿ ವಿದ್ಯುತ್ ವಿತರಣಾ ಉಪಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಸರ್ಕಾರಿ ಭೂಮಿ ಇದ್ದಲ್ಲಿ ಸೋಲಾರ್ ಉತ್ಪಾದನಾ ಕೇಂದ್ರ ಆರಂಭಿಸಲಾಗುವುದು. ಖಾಸಗಿ ಭೂಮಿ ದೊರೆತಲ್ಲಿ ಲೀಸ್‌ಗೆ ಪಡೆದು ಅಲ್ಲೂ ಸಹ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮ ಕೈಗೊಳ್ಳಲಾಗುವುದು. 

ಪ್ರತೀ ಕೇಂದ್ರದಲ್ಲಿ ತಲಾ 750 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಕ್ರಮವಹಿಸಲಾಗುವುದು ಎಂದರು. ರೈತರು ತಮ್ಮ ಕೃಷಿ ಜಮೀನುಗಳಲ್ಲಿ ಸೋಲಾರ್ ಕೇಂದ್ರೀತ ಪಂಪ್‌ಸೆಟ್‌ಗಳನ್ನು ಅಳವಡಿಸಿದಲ್ಲಿ ಶೇ.80ರಷ್ಟು ಸಬ್ಸಿಡಿ ಸರ್ಕಾರದಿಂದ ದೊರೆಯಲಿದೆ. ಈ ಪೈಕಿ ಶೇ.30ರಷ್ಟು ಕೇಂದ್ರ , ಶೇ.50 ರಾಜ್ಯ ಸರ್ಕಾರ ಹಣ ನೀಡಲಿದೆ. ಪಂಪ್‌ ಸೆಟ್‌ಗೂ ಸರ್ಕಾರವೇ ಹಣ ನೀಡಲಿದೆ. ಈಗಾಗಲೇ 2500 ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಯನ್ನು ರಾಜ್ಯದಲ್ಲಿ ಮಾಡಿ ದೇಶದಲ್ಲಿಯೇ ಮೊದಲಡನಿಸಿದೆ ಎಂದರು.

Tap to resize

Latest Videos

undefined

3 ವರ್ಷದಲ್ಲಿ 3 ಸಾವಿರ ಕೆಪಿಎಸ್ ಶಾಲೆ ಸ್ಥಾಪನೆ ಗುರಿ: ಸಚಿವ ಮಧು ಬಂಗಾರಪ್ಪ

ರೈತರ ಕೈ ಬಲಪಡಿಸುವುದೇ ಸರ್ಕಾರದ ಮೂಲ ಗುರಿ, ರೈತರು ಬೆಳೆದ ಆಹಾರ ಧಾನ್ಯಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆತಾಗ ಅವರು ಯಾವುದನ್ನೂ ನಿರೀಕ್ಷೆ ಮಾಡಲ್ಲ. ಆಹಾರ ಉತ್ಪಾದನೆ ಕುಂಠಿತಗೊಂಡಲ್ಲಿ ದೇಶದ ಆರ್ಥಿಕ ಪರಿಸ್ಥಿತಿಯೇ ಪಾತಾಳಕ್ಕೆ ಇಳಿಯಲಿದೆ ಎಂದು ಹೇಳಿದರು. ರಾಜ್ಯ ಸರ್ಕಾರ ಇದೀಗ ನೀಡುತ್ತಿರುವ ಗ್ಯಾರಂಟಿ ಯೋಜನೆಗಳು ಜನರಿಂದ ಸ್ವೀಕರಿಸಿದ ತೆರಿಗೆ ಹಣವೇ ಹೊರತು ಯಾವುದೇ ಉಚಿತ ಹಣವಲ್ಲ. ಜನರಿಂದ ಬಂದ ಹಣ ಅವರಿಗೆ ನೀಡಲಾಗುತ್ತಿದೆ ಎಂದರು. ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಖಾಂಡ್ಯ ಹೋಬಳಿ ಜನರ ಬಹುದಿನದ ಬೇಡಿಕೆ ಇದೀಗ ಉಪಕೇಂದ್ರ ಉದ್ಘಾಟನೆ ಮೂಲಕ ಸಾಕಾರಗೊಂಡಿದೆ. ಹಲವಾರು ಗ್ರಾಮಗಳಿಗೆ ಇದರ ಉಪಯೋಗ ವಾಗಲಿದ್ದು, ಈ ಹಿಂದೆ ಇಂಧನ ಸಚಿವರಾಗಿದ್ದ ಡಿ.ಕೆ.ಶಿವಕುಮಾರ್, ಸುನೀಲ್‌ಕುಮಾರ್, ಹಾಲಿ ಸಚಿವ ಕೆ.ಜೆ.ಜಾರ್ಜ್ ಅವರ ಶ್ರಮದ ಫಲ ಇದಾಗಿದೆ ಎಂದರು.

ಶೃಂಗೇರಿ ಕ್ಷೇತ್ರಕ್ಕೆ ಇನ್ನೂ 3 ವಿದ್ಯುತ್ ಉಪಕೇಂದ್ರಗಳ ಅಗತ್ಯವಿದ್ದು, ಸಚಿವರು ಮಂಜೂರು ಮಾಡಿಕೊಡಬೇಕಿದೆ. ಅಗತ್ಯವಿರುವ 150 ಹೆಚ್ಚುವರಿ ಪರಿವರ್ತಕಗಳನ್ನು ಪೂರೈಸಿ. ಕೊಪ್ಪ ವಿಭಾಗಕ್ಕೆ ವಿದ್ಯುತ್ ಪರಿವರ್ತಕ ದುರಸ್ತಿ ಕೇಂದ್ರ ಮಂಜೂರು ಮಾಡಬೇಕು ಎಂದು ಸಚಿವರಲ್ಲಿ ಮನವಿ ಮಾಡಿದರು. ಹಿಂದಿನ ಬಿಜೆಪಿ ಸರ್ಕಾರ ಘೋಷಿಸಿದ್ದ ಬೆಳೆಗಾರರಿಗೆ 10 ಹೆಚ್‌ಪಿವರೆಗಿನ ಉಚಿತ ವಿದ್ಯುತ್ತನ್ನು ಹಾಲಿ ಸರ್ಕಾರ ಜಾರಿಗೆ ತಂದಿದ್ದು, ರೈತರು ಈ ಹಿಂದಿನ ವಿದ್ಯುತ್ ಬಿಲ್ ಬಾಕಿ ಪಾವತಿಸಿ ಯೋಜನೆ ಲಾಭ ಪಡೆಯಬಹುದು. ಯೋಜನೆ ಫಲಾನುಭವಿ ಯಾಗುವವರು 10 ಅಶ್ವ ಶಕ್ತಿವರೆಗಿನ ವಿದ್ಯುತ್ ಉಪಯೋಗಿಸಿ ಇಲಾಖೆಗೆ ಬಿಲ್ ಪಾವತಿಸಿದಲ್ಲಿ ಡಿಬಿಟಿ ಮೂಲಕ ವಾಪಾಸ್ ರೈತರ ಖಾತೆಗೆ ಹಣ ಜಮೆಯಾಗಲಿದೆ ಎಂದರು.

ಕ್ಷೇತ್ರದಲ್ಲಿ ಉದ್ಭವಿಸಿರುವ ಸೊಪ್ಪಿನ ಬೆಟ್ಟ, ಕಂದಾಯ ಭೂಮಿ, ಗೋಮಾಳಗಳು ಡೀಮ್ಡ್ ಫಾರೆಸ್ಟ್ನ ಸಮಸ್ಯೆಗಳ ಪರಿಹಾರಕ್ಕೆ ಉಸ್ತುವಾರಿ ಸಚಿವರು, ಅರಣ್ಯ, ಕಂದಾಯ ಸಚಿವರು ಹಾಗೂ ಮುಖ್ಯಮಂತ್ರಿಗಳ ಬಳಿಗೆ ನಿಯೋಗ ತೆರಳಿ ಸಭೆ ನಡೆಸಿ ಸಮಸ್ಯೆ ತೀವ್ರತೆಯನ್ನು ಮನವರಿಕೆ ಮಾಡಿದ್ದಾರೆ. ಈಗಾಗಲೇ ಸಮಸ್ಯೆ ಪರಿಹಾರಕ್ಕಾಗಿ ಜಿಲ್ಲೆಗೆ 15 ಜನ ಸರ್ವೆಯರ್‌ಗಳ ನೇಮಕ ಮಾಡಲಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಯುವ ನಿರೀಕ್ಷೆಯಿದೆ ಎಂದರು. ಕೆಪಿಟಿಸಿಎಲ್ ಅಧೀಕ್ಷಕ ಎಂಜಿನಿಯರ್ ಸುರೇಶ್ ಮಾತನಾಡಿ, ಖಾಂಡ್ಯ ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆ ಹಿನ್ನೆಲೆ ಆರಂಭಿಸಿರುವ ನೂತನ ಉಪಕೇಂದ್ರದಿಂದ ಹತ್ತಾರು ಗ್ರಾಮಗಳಿಗೆ ಗುಣಮಟ್ಟದ ವಿದ್ಯುತ್ ಪೂರೈಕೆ ಸಾಧ್ಯವಿದೆ.

ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಿದ್ದಾರೆ: ಪ್ರತಾಪ್‌ ಸಿಂಹ

ರು.12.95 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದು, ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣ ಗೊಳಿಸಲಾಗಿದೆ ಎಂದರು. ಮಾಜಿ ಎಂಎಲ್‌ಸಿ ಎಸ್.ವಿ.ಮಂಜುನಾಥ್, ಚಿಕ್ಕಮಗಳೂರು ಶಾಸಕ ಎಚ್.ಡಿ.ತಮ್ಮಯ್ಯ, ದೇವದಾನ ಗ್ರಾಪಂ ಅಧ್ಯಕ್ಷೆ ಶೀಲಾವತಿ, ಕೆಪಿಟಿಸಿಎಲ್ ನಿರ್ದೇಶಕ ಜಯಕುಮಾರ್, ಎಂ.ಆರ್.ಶ್ಯಾನುಬೋಗ್, ಮೆಸ್ಕಾಂ ಎಂಡಿ ರಂಗನಾಥ್, ಜಿಪಂ ಸಿಇಓ ಗೋಪಾಲಕೃಷ್ಣ, ಉಪವಿಭಾಗಾಧಿಕಾರಿ ಜಲ್‌ಜಿತ್‌ಕುಮಾರ್, ನಿರ್ಗಮಿತ ಎಸಿ ರಾಜೇಶ್, ಮೆಸ್ಕಾಂ ಎಂಜಿನಿಯರ್ ಬಸಪ್ಪ, ಕೆಪಿಟಿಸಿಎಲ್ ಇಇ ಮುರಳಿ ಮೋಹನ್, ಸಚಿವರ ಆಪ್ತ ಕಾರ್ಯದರ್ಶಿ ಸತೀಶ್, ಪ್ರಮುಖರಾದ ಎಸ್.ಪೇಟೆ ಸತೀಶ್, ರಂಜಿತಾ, ಗುರುಮೂರ್ತಿ ಬೆಳಸೆ, ಎಂ.ಜೆ.ಚಂದ್ರಶೇಖರ್, ಡಾ.ಅಂಶುಮಂತ್, ಕೆ.ಎಲ್.ಚಂದ್ರೇಗೌಡ, ರತ್ನಾಕರ ಬೆಳಸೆ ಮತ್ತಿತರರು ಇದ್ದರು.

click me!