Latest Videos

ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿಲ್ಲ, ನನ್ನ ಹೇಳಿಕೆಯನ್ನು ತಿರುಚಿದ್ದಾರೆ: ಪ್ರತಾಪ್‌ ಸಿಂಹ

By Kannadaprabha NewsFirst Published Dec 28, 2023, 10:03 PM IST
Highlights

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಸ್ಪಷ್ಟಪಡಿಸಿದ್ದಾರೆ. 

ಮೈಸೂರು (ಡಿ.28): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಿರುಚಿದ್ದಾರೆ ಎಂದು ಸಂಸದ ಪ್ರತಾಪ್‌ ಸಿಂಹ ಸ್ಪಷ್ಟಪಡಿಸಿದ್ದಾರೆ. ತಿರುಪತಿಯಲ್ಲಿ ನಡೆಯುತ್ತಿರುವ ಪ್ರಸಾದ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿರುವ ಪ್ರತಾಪ ಸಿಂಹ ಅವರು, ಫೇಸ್ ಬುಕ್ ಲೈವ್ ಮೂಲಕ ಹುಣಸೂರಿನಲ್ಲಿ ಮಾಧ್ಯಮಗಳಿಗೆ ನೀಡಿದ ಹೇಳಿಕೆ ಸಂಬಂಧ ಅವರು ಪ್ರತಿಕ್ರಿಯಿಸಿದ್ದಾರೆ.

ಸಿದ್ದರಾಮಯ್ಯ ಅವರ ಬೆಂಬಲಿಗರು, ಬಾಲಬುಡಕರು ನನ್ನ ಹೇಳಿಕೆ ತಿರುಚಿದ್ದಾರೆ. ಸೋಮಾರಿ ಸಿದ್ಧ ಎಂಬ ಮಾತು ವ್ಯಕ್ತಿ ನಿರ್ದಿಷ್ಟವಾದದ್ದಲ್ಲ. ಒಂದು ಪರಿಸ್ಥಿತಿಯನ್ನು ಸೂಚಿಸುವ ಪದ ಎಂದು ಅವರು ಹೇಳಿದ್ದಾರೆ. ನಾನೆಷ್ಟು ಗೌರವ ಕೊಡುತ್ತೇನೆ ಎಂಬುದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಮಲ್ಲಿಕಾರ್ಜುನ ಖರ್ಗೆ ಸಹಿತವಾಗಿ ನಮ್ಮ ನಾಡಿನ ಯಾರೇ ಹಿರಿಯರು ಸಿಕ್ಕರೂ ಕೊಡಗಿನ ಸಂಸ್ಕೃತಿಗೆ ಪೂರಕವಾಗಿ ಕಾಲಿಗೆ ನಮಸ್ಕಾರ ಮಾಡುತ್ತೇನೆ ಎಂದು ಅವರು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಯಾರನ್ನಾದರೂ ಬಹುವಚನದಲ್ಲಿ ಮಾತನಾಡಿಸಿದ ಉದಾಹರಣೆ ಇದೆಯೇ? ಎಂದು ಕೇಳಿದ್ದಾರೆ. ಪ್ರಧಾನಿ ನರೇಂದ್ರಮೋದಿ ಅವರನ್ನು ಮಿಸ್ಟರ್ ಮೋದಿ, ದೇವೇಗೌಡ, ಯಡಿಯೂರಪ್ಪ ಅವರನ್ನು ಗೌರವದಿಂದ ಮಾತಾಡಿದ್ದಾರ? ಕಾಂಗ್ರೆಸ್ ಸೇರುವ ಮೊದಲು ಸೋನಿಯಾ ಗಾಂಧಿ ಅವರನ್ನು ಏಕವಚನದಿಂದ ಸಂಬೋಧಿಸುತ್ತಿದ್ದರು. ಆದರೆ ಸಿದ್ದರಾಮಯ್ಯ ಬೆಂಬಲಿಗರು, ಬಾಲಬುಡಕರು ನನಗೆ ಏಕವಚನ, ಬಹುವಚನ ವ್ಯಾಕರಣ ಹೇಳಿಕೊಡಲು ಹೊರಟಿದ್ದಾರೆ ಎಂದು ಅವರು ಟೀಕಿಸಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಕೋಲಾರದಿಂದ ಬಿಜೆಪಿಯನ್ನು ಗೆಲ್ಲಿಸಿ: ಸಂಸದ ಮುನಿಸ್ವಾಮಿ

ಸಿದ್ದರಾಮಯ್ಯ ಅವರು 2024 ರಲ್ಲಿ ನನ್ನ ವಿರುದ್ಧ ಅಭ್ಯರ್ಥಿ ಯಾರು ಎಂಬುದನ್ನು ಘೋಷಿಸಿದರೆ, ನಿಗಮ, ಮಂಡಳಿ ಸ್ಥಾನಗಳಿಗೆ ನೇಮಿಸಿದರೆ ಪ್ರತಿಭಟಿಸುವ ಅಪಬ್ಧಗಳು ನಿಲ್ಲುತ್ತವೆ. ನಿಮ್ಮ ಮೇಲೆ ಪ್ರಭಾವ ಬೀರಲು ವಿನಾಕಾರಣ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಅವರು ಪುನರುಚ್ಚರಿಸಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವಂತೆ ಹೇಳುತ್ತಿದ್ದೇನೆ. ಮರಕ್ಕೆ ಕಲ್ಲೆಸೆದರೆ ಮಾವಿನ ಕಾಯಿ ಉದುರುತ್ತದೆ. ಪ್ರತಾಪ ಸಿಂಹನಿಗೆ ಕಲ್ಲೆಸೆದರೆ ಹಣ್ಣಲ್ಲ, ತಿರುಗಿ ಕಲ್ಲೇ ಬರುತ್ತದೆ. ಹಾಗಾಗಿ ಸಿದ್ದರಾಮಯ್ಯ ಅವರು ತಮ್ಮ ಬಾಲ ಬಡುಕರಿಗೆ ಬುದ್ಧಿ ಹೇಳುವಂತೆ ಪ್ರತಾಪ ಸಿಂಹ ಮನವಿ ಮಾಡಿದ್ದಾರೆ.

click me!