
ಬೆಂಗಳೂರು (ಆ.09): ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆದ ರೀತಿಯನ್ನು ಸಾಕ್ಷ್ಯ ಸಮೇತ ಸವಿವರವಾಗಿ ಬಿಚ್ಚಿಟ್ಟಿರುವ ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಈ ಕ್ರಿಮಿನಲ್ ಅಪರಾಧದ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳನ್ನು ಶಿಕ್ಷೆಗೆ ಒಳಪಡಿಸುವಂತೆ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಆಗ್ರಹಿಸಿದ್ದಾರೆ. ಸ್ವಾತಂತ್ರ್ಯ ಉದ್ಯಾನದಲ್ಲಿ ಮತಗಳ್ಳತನ ವಿರುದ್ಧ ನಡೆದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಮಾತನಾಡಿ, ಈ ಹಿಂದೆಯೂ ಬಿಜೆಪಿ ಸರ್ಕಾರವಿದ್ದಾಗ ಕರ್ನಾಟಕದಲ್ಲಿ ಮತಗಳ್ಳತನ ನಡೆದಿತ್ತು.
ಇದೀಗ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಮತಗಳ್ಳತನ ನಡೆಸಿದ್ದು, ಸಾಕ್ಷ್ಯಾಧಾರ ಸಮೇತ ಬಹಿರಂಗಗೊಂಡಿದೆ. ಹೀಗಾಗಿ ಈ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು ಎಂದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಕೇಂದ್ರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿನ 1 ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಕಳ್ಳತನ ಮಾಡಿದ ಪರಿಣಾಮ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸುವಂತಾಗಿದೆ. ಬಿಜೆಪಿ ಮತ್ತು ಚುನಾವಣಾ ಆಯೋಗ ಜಂಟಿಯಾಗಿ ನಡೆಸಿದ ಅಕ್ರಮವನ್ನು ನಾವು ಬಹಿರಂಗಪಡಿಸಿದ್ದೇವೆ ಎಂದರು.
16ರ ನಿರೀಕ್ಷೆಯಲ್ಲಿದೆವು, 9ರಲ್ಲಿ ಗೆದ್ದೆವು: ಕಳೆದ ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರಗಳ ಪೈಕಿ 16ರಲ್ಲಿ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂಬ ವಿಶ್ವಾಸವಿತ್ತು. ಆದರೆ, ಬಿಜೆಪಿ ಮತ್ತು ಚುನಾವಣಾ ಆಯೋಗದ ಅಕ್ರಮದಿಂದಾಗಿ 9ರಲ್ಲಿ ಗೆಲ್ಲುವಂತಾಯಿತು. ಅದರಲ್ಲೂ ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಆರಂಭದಲ್ಲಿ ಭಾರೀ ಮುನ್ನಡೆಯಲಿದ್ದ ನಮ್ಮ ಅಭ್ಯರ್ಥಿ ಅಂತಿಮವಾಗಿ ಸೋಲನ್ನನುಭವಿಸಿದರು. ಅದರ ಬಗ್ಗೆ ಅನುಮಾನಗೊಂಡು ಪರಿಶೀಲಿಸಿದಾಗ ನಕಲಿ ಮತದಾರರಿರುವುದು ಪತ್ತೆಯಾಗಿದೆ ಎಂದು ರಾಹುಲ್ ಗಾಂಧಿ ತಿಳಿಸಿದರು.
ಅಫಿಡವಿಟ್ ನೀಡಲ್ಲ: ಚುನಾವಣಾ ಅಕ್ರಮ ಬಯಲಿಗೆಳೆದಿದ್ದಕ್ಕೆ ಚುನಾವಣಾ ಆಯೋಗ ನನ್ನಿಂದ ಅಫಿಡವಿಟ್ ಕೇಳುತ್ತಿದೆ ಮತ್ತು ಪ್ರತಿಜ್ಞೆ ಮಾಡುವಂತೆ ಕೇಳುತ್ತಿದೆ. ಆದರೆ, ನಾನು ಸಂವಿಧಾನದ ಮೇಲೆ ಲೋಕಸಭೆಯಲ್ಲಿ ಪ್ರಮಾಣವಚನ ಸ್ವೀಕರಿಸಿದವನು. ನಾನು ಹೇಳುವುದೆಲ್ಲವೂ ಸತ್ಯ. ನಾವು ಅನುಮಾನ ವ್ಯಕ್ತಪಡಿಸಿದ್ದೇವೆ, ಅದರ ಹಿಂದಿನ ಸತ್ಯಾಸತ್ಯತೆಯನ್ನು ಜನರ ಮುಂದಿಡುವುದು ಚುನಾವಣಾ ಆಯೋಗದ ಕೆಲಸ ಎಂದು ರಾಹುಲ್ ಗಾಂಧಿ ತಿಳಿಸಿದರು. ಅಲ್ಲದೆ ಜನ ಪ್ರಶ್ನೆ ಕೇಳುತ್ತಾರೆ ಎಂಬ ಕಾರಣಕ್ಕೆ ಬಿಹಾರ, ರಾಜಸ್ಥಾನ ಸೇರಿ ಇನ್ನಿತರ ರಾಜ್ಯಗಳ ಚುನಾವಣಾ ಆಯೋಗದ ವೆಬ್‌ಸೈಟ್ ಅನ್ನೇ ಸ್ಥಗಿತಗೊಳಿಸಲಾಗಿದೆ. ಆ ಮೂಲಕ ಆಯೋಗ ಮತ್ತೊಂದು ನಾಟಕ ಆರಂಭಿಸಲಾಗಿದೆ ಎಂದು ರಾಹುಲ್ ಆರೋಪಿಸಿದರು.
ಬಿಜೆಪಿ ಮತ್ತು ಚುನಾವಣಾ ಆಯೋಗ ಸಂವಿಧಾನದ ಅಡಿಪಾಯವನ್ನೇ ಬುಡಮೇಲು ಮಾಡುತ್ತಿವೆ. ಒಬ್ಬರಿಗೆ ಒಂದೇ ಮತ ಎಂಬುದು ಸಂವಿಧಾನದಲ್ಲಿರುವ ಅಂಶ. ಆ ಮತದ ಹಕ್ಕನ್ನೇ ಕಸಿಯಲು ಬಿಜೆಪಿ-ಚುನಾವಣಾ ಆಯೋಗ ಮುಂದಾಗಿವೆ. ಈ ಅಕ್ರಮವನ್ನು ಬಯಲಿಗೆಳೆಯಲು ಸಮಯ ಬೇಕಾಗುತ್ತದೆ. ಆದರೂ ನಾವು ಅದನ್ನು ಜನರಿಗೆ ತಿಳಿಸುತ್ತೇವೆ. ಇನ್ನು, ಸಂವಿಧಾನದ ಮೇಲೆ ಯಾರೇ ದಾಳಿ ಮಾಡಿದರೂ ಅವರ ಮೇಲೆ ನಾವು ದಾಳಿ ಮಾಡುತ್ತೇವೆ ಎಂಬುದನ್ನು ಎಲ್ಲರೂ ಅರಿಯಬೇಕು. ಕಾಂಗ್ರೆಸ್ ಕಾರ್ಯಕರ್ತರ ಡಿಎನ್‌ಎನಲ್ಲಿ ಸಂವಿಧಾನ ಇದೆ ಎಂಬುದನ್ನು ದೇಶಕ್ಕೇ ತಿಳಿಸಬೇಕಿದೆ ಎಂದರು.
25 ಸೀಟಿನ ಪ್ರಧಾನಿ: ಪ್ರಧಾನಿ ಮೋದಿ ಅವರು ಸದ್ಯ 25 ಸೀಟುಗಳನ್ನೇ ಆಧಾರವಾಗಿಟ್ಟುಕೊಂಡು ಅಧಿಕಾರದಲ್ಲಿದ್ದಾರೆ. ಆ 25 ಕ್ಷೇತ್ರಗಳಲ್ಲಾಗಿರುವ ಕಳ್ಳತನವನ್ನೂ ಪತ್ತೆ ಮಾಡಿ, ಬಹಿರಂಗಪಡಿಸುತ್ತೇವೆ. ಅವರ ಕಳ್ಳತನವನ್ನು ಮತ್ತಷ್ಟು ತಿಳಿಸುತ್ತೇವೆ. ಇನ್ನು, ಚುನಾವಣಾ ಆಯೋಗ ನಾವು ಕೇಳುತ್ತಿರುವ ದಾಖಲೆಗಳನ್ನು ನೀಡುವಂತೆ ಕೋರಿದರೂ ಕೊಡುತ್ತಿಲ್ಲ. ಆ ದಾಖಲೆಗಳನ್ನು ಬಚ್ಚಿಡಲಾಗದು ಮತ್ತು ಅಕ್ರಮ ಮಾಡಿದವರು ಬಚ್ಚಿಟ್ಟುಕೊಳ್ಳಲಾಗದು. ವಿರೋಧ ಪಕ್ಷಗಳನ್ನು ಅವರು ಎದುರಿಸಬೇಕಾಗುತ್ತದೆ. ಇನ್ನು, ಈ ರೀತಿಯ ಕ್ರಿಮಿನಲ್ ಅಪರಾಧ ಎಸಗಿದ ಅಧಿಕಾರಿಗಳನ್ನೂ ಪತ್ತೆ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಗುಡುಗಿದರು.
ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ಐದು ಪ್ರಶ್ನೆ:
1. ಡಿಜಿಟಲ್ ರೀಡೆಬಲ್ ಫಾರ್ಮ್ಯಾಟ್‌ನಲ್ಲಿ ಮತದಾರರ ಪಟ್ಟಿ ನೀಡಲು ಹಿಂದೇಟು ಹಾಕುತ್ತಿರುವುದೇಕೆ?
2. ಮತದಾನಕ್ಕೆ ಸಂಬಂಧಿಸಿದ ವೀಡಿಯೋ ಸಾಕ್ಷ್ಯಗಳನ್ನು ನಾಶ ಮಾಡಿದ್ದೇಕೆ?
3. ಚುನಾವಣಾ ಆಯೋಗ ಮತದಾರರ ಪಟ್ಟಿಯಲ್ಲಿ ಭಾರೀ ಅಕ್ರಮ ಎಸಗಲು ಕಾರಣವೇನು?
4. ಮತಗಳ್ಳತನದ ಪ್ರಶ್ನೆ ಕೇಳುವ ವಿಪಕ್ಷಗಳನ್ನು ಬೆದರಿಸುತ್ತಿರುವುದೇಕೆ?
5. ಚುನಾವಾಣಾ ಆಯೋಗ ಬಿಜೆಪಿ ಏಜೆಂಟ್ ರೀತಿ ವರ್ತಿಸುತ್ತಿರುವುದೇಕೆ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.