
ಮಂಡ್ಯ (ಏ.16): ದಲಿತ ಸಿಎಂ (Dalit CM) ಮಾಡುವ ಮನಸ್ಥಿತಿ ಜೆಡಿಎಸ್‌ಗೆ (JDS) ಇದ್ದಿದ್ದರೆ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರನ್ನೇ ಮಾಡಬಹುದಿತ್ತು. ಖರ್ಗೆ ಅವರನ್ನು ವಂಚಿಸಿ ಈಗ ದಲಿತ ಸಿಎಂ ಮಾಡುವ ನಾಟಕವಾಡುತ್ತಿದ್ದಾರೆ. ಇದು ಕುಮಾರಸ್ವಾಮಿ (HD Kumaraswamy) ಎಲೆಕ್ಷನ್ ಗಿಮಿಕ್ ಎಂದು ಮಾಜಿ ಸಚಿವ ಪಿ.ಎಂ.ನರೇಂದ್ರ ಸ್ವಾಮಿ (PM Narendra Swamy) ಟೀಕಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ದಲಿತ ಮುಖ್ಯಮಂತ್ರಿ ಬಗ್ಗೆ ಈಗ ಮಾತನಾಡುತ್ತಿದ್ದಾರೆ. ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ದಲಿತ ಸಿಎಂ ಬಗ್ಗೆ ಅರಿವರಿಗೆ ಜ್ಞಾನೋದಯವಾಗಿದೆ. ತಾವೇ ಮುಖ್ಯಮಂತ್ರಿಯಾಗಿದ್ದ ವೇಳೆ ಅಥವಾ 2004ರಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡಬಹುದಿತ್ತು. ಆದರೆ, ಅವರು ನಿಮ್ಮ ಮಾತು ಕೇಳುವುದಿಲ್ಲವೆಂಬ ಕಾರಣಕ್ಕೆ ಧರ್ಮಸಿಂಗ್ ಅವರನ್ನು ಮುಖ್ಯಮಂತ್ರಿ ಮಾಡಲು ಸಹಕಾರ ನೀಡಿದಿರಿ ಎಂಬುದು ಈ ರಾಜ್ಯದ ಜನತೆಗೆ ತಿಳಿದಿರುವ ಸತ್ಯ ಎಂದು ಛೇಡಿಸಿದರು.
ಸಂವಿಧಾನ, ಸಮಾನತೆಯ ಬಗ್ಗೆ ಮಾತನಾಡುವ ನೈತಿಕತೆ ಜೆಡಿಎಸ್‌ನವರಿಗಿಲ್ಲ. ಪಕ್ಷದ ಚಿಹ್ನೆಯಲ್ಲಿ ಮಹಿಳೆ ತಲೆ ಮೇಲೆ ಹೊರೆ ಹೊರಿಸಿದ್ದೀರಿ. ಆಕೆಗೆ ಸಮಾನತೆಯನ್ನೇ ನೀಡಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಒಬ್ಬ ಮಹಿಳೆಗೂ ಮಂತ್ರಿಸ್ಥಾನ ಕೊಡಲಿಲ್ಲ. ಎಷ್ಟುದಲಿತರನ್ನು ನೀವು ಮಂತ್ರಿ ಮಾಡಿದ್ದೀರಿ ಎಂದು ಸವಾಲು ಹಾಕಿದರು.
Hanuman Jayanti: ಯಲಗೂರು ಆಂಜನೇಯ ದರ್ಶನ ಪಡೆದ ಮಾಜಿ ಸಿಎಂ: HDK ಸಾಫ್ಟ್ ಹಿಂದೂತ್ವ ಪ್ರದರ್ಶನ..!
ಮಂಡ್ಯ ಜಿಲ್ಲೆ ಮೇಲೆ ಕುರುಡು ಪ್ರೀತಿ: ರಾಮನಗರ ಮತ್ತು ಹಾಸನ ಜಿಲ್ಲೆಗೆ ಸಾವಿರಾರು ಕೋಟಿ ರು. ಅನುದಾನ ತೆಗೆದುಕೊಂಡು ಹೋಗಿ ಅಭಿವೃದ್ಧಿ ಮಾಡಿದ್ದೀರಿ. ಮಂಡ್ಯ ಜಿಲ್ಲೆಗೆ ನಿಮ್ಮ ಕೊಡುಗೆ ಏನು. ಯಾವ ಅಭಿವೃದ್ಧಿ ಮಾಡಿದ್ದೀರಿ, ಯಾವ ಯೋಜನೆ ರೂಪಿಸಿದ್ದೀರಿ. ಈ ನೆಲದ ಜನರು ನಿಮಗೆ ಮಾಡಿರುವ ಅನ್ಯಾಯವಾದರೂ ಏನು ಎಂದು ಪ್ರಶ್ನಿಸಿದರಲ್ಲದೆ, ಅಧಿಕಾರವಿದ್ದಾಗ ಅಭಿವೃದ್ಧಿ ಮಾಡದೆ ಅಧಿಕಾರ ಹೋದಾಗ ಕಣ್ಣೀರಿಡುತ್ತಾ ಬರುತ್ತೀರಿ. ಕಣ್ಣೀರಿಟ್ಟು ಜನರನ್ನು ಮರಳು ಮಾಡುವುದೇ ನಿಮ್ಮ ರಾಜಕೀಯ ಕುತಂತ್ರವಾಗಿದೆ. ಅಂಧತ್ವದ ಪ್ರೀತಿ ಏಕೆ ಮಾಡುತ್ತೀರಿ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಗೆ 8 ಸಾವಿರ ಕೋಟಿ ರು. ಅನುದಾನ ಕೊಟ್ಟರೂ ಅದನ್ನು ಜಾರಿಗೊಳಿಸುವಷ್ಟರಲ್ಲಿ ಕಾಂಗ್ರೆಸ್ಸಿಗರು ಅಧಿಕಾರದಿಂದ ಕೆಳಗಿಳಿಸಿದರು ಎನ್ನುವ ಕುಮಾರಸ್ವಾಮಿ ಅವರು, ಹಾಸನ ಮತ್ತು ರಾಮನಗರಕ್ಕೆ ಸಾವಿರಾರು ಕೋಟಿ ರು. ತೆಗೆದುಕೊಂಡು ಹೋಗಿ ಅಭಿವೃದ್ಧಿ ಮಾಡಿದಾಗ ಯಾವುದೇ ಅಡ್ಡಿಯಾಗಲಿಲ್ಲವೇ. ಅಭಿವೃದ್ಧಿಯಲ್ಲಿ ಬದ್ಧತೆ ಪ್ರದರ್ಶಿಸಲಾಗದೆ ಸುಳ್ಳು ಹೇಳಿಕೊಂಡು ತಿರುಗುವವರಿಂದ ಏನನ್ನೂ ನಿರೀಕ್ಷಿಸಲಾಗುವುದಿಲ್ಲ ಎಂದು ಮೊನಚು ಮಾತಿನಿಂದ ಚುಚ್ಚಿದರು.
ಯಾವ ಯೋಜನೆ ಕೊಟ್ಟಿದ್ದೀರಿ?: ಇಸ್ರೇಲ್ ಮಾದರಿಯ ಹನಿ ನೀರಾವರಿಯನ್ನು ರಾಜ್ಯದಲ್ಲಿ ಅಳವಡಿಸುವುದಾಗಿ ಹೇಳಿದ್ದಿರಿ. ನಿಮಗೆ ಹನಿ ನೀರಾವರಿಯನ್ನು ವ್ಯವಸ್ಥಿತವಾಗಿ ಜಾರಿಗೊಳಿಸುವ ಇಚ್ಛಾಶಕ್ತಿ ಇದ್ದಿದ್ದರೆ ನಾನು ಮಳವಳ್ಳಿ ಕ್ಷೇತ್ರದಲ್ಲಿ ಜಾರಿಗೊಳಿಸಿದ್ದ ಪೂರಿಗಾಲಿ ಹನಿ ನೀರಾವರಿ ಯೋಜನೆಗೆ ಅನುದಾನ, ಅನುಷ್ಠಾನಕ್ಕೆ ತರಲಿಲ್ಲವೇಕೆ. ಮುಂದಿನ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸುವಂತೆ ಜನರಲ್ಲಿ ಮನವಿ ಮಾಡಿರುವ ನಿಮ್ಮ ಶಿಷ್ಯ (ಕೆ.ಅನ್ನದಾನಿ) ಮಳವಳ್ಳಿ ಕ್ಷೇತ್ರಕ್ಕೆ ಯಾವ ಯೋಜನೆ ಕೇಳಿದ್ದರು, ನೀವು ಯಾವ ಯೋಜನೆ ಕೊಟ್ಟಿದ್ದೀರಿ ಎನ್ನುವುದನ್ನು ಬಹಿರಂಗಪಡಿಸುವಂತೆ ಸವಾಲು ಹಾಕಿದರು.
ಮತ ಬ್ಯಾಂಕ್ ರಾಜಕಾರಣ ಬೇಡ: ಚುನಾವಣೆಗೆ ಒಂದು ವರ್ಷವಿರುವಾಗಲೇ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಭಯ ಕಾಡುತ್ತಿರುವಂತೆ ಕಂಡುಬರುತ್ತಿದ್ದಾರೆ. ಅದೇ ಕಾರಣಕ್ಕೆ ದಲಿತ ಸಿಎಂ ವಿಷಯವನ್ನು ಮತಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದ್ದಾರೆ. ದಲಿತರ ಬಗ್ಗೆ ನಿಮಗೆ ಅಷ್ಟೊಂದು ಕಾಳಜಿ ಇದ್ದಿದ್ದರೆ ಕೊರೋನಾ ಸಂಕಷ್ಟಸಮಯದಲ್ಲಿ ಬಿಜೆಪಿ ಸರ್ಕಾರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯ 19 ಸಾವಿರ ಕೋಟಿ ರು. ಹಣವನ್ನು ವಾಪಸ್ ಪಡೆದಾಗ ನೀವು ಸೇರಿದಂತೆ ನಿಮ್ಮ ಪಕ್ಷದ ದಲಿತ ಶಾಸಕರು ಪ್ರಶ್ನಿಸಲಿಲ್ಲವೇಕೆ. ಎಷ್ಟುದಿನ ಅಂತ ಈ ರೀತಿ ಸುಳ್ಳು ಹೇಳಿಕೊಂಡು ತಿರುಗುತ್ತೀರಿ. ಜನರ ದಿಕ್ಕು ತಪ್ಪಿಸುವುದೇ ನಿಮ್ಮ ಕೆಲಸವೇ. ಚುನಾವಣೆ ಬಂದ ಸಮಯದಲ್ಲೆಲ್ಲಾ ಹೊಸ ಹೊಸ ರೂಪದೊಂದಿಗೆ ಜನರ ಮುಂದೆ ಬರುವುದೇಕೆ ಎಂದು ಮತ್ತೊಮ್ಮೆ ಪ್ರಶ್ನಿಸಿದರು. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ. ಗಂಗಾಧರ್, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಸುರೇಶ್ ಕಂಠಿ, ಮುಖಂಡರಾದ ಎಚ್.ಕೆ. ರುದ್ರಪ್ಪ, ಶ್ರೀಧರ್ ಇತರರು ಗೋಷ್ಠಿಯಲ್ಲಿದ್ದರು.
ಮಗನಿಗೆ ಹಿನ್ನಡೆ ತಂದವನು ಆಯ್ಕೆಯಾಗಬೇಕಾ?: ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಜೆಡಿಎಸ್‌ಗೆ ಅತಿ ಹೆಚ್ಚು ಮತಗಳ ಹಿನ್ನಡೆ ತಂದುಕೊಟ್ಟಿದ್ದು ಮಳವಳ್ಳಿ ಕ್ಷೇತ್ರ. ಆ ಕ್ಷೇತ್ರದ ಶಾಸಕರಾಗಿದ್ದವರೂ ನಿಮ್ಮ ಶಿಷ್ಯನೇ. ಅವನು (ಕೆ.ಅನ್ನದಾನಿ) ಮತ್ತೆ ಚುನಾವಣೆಯಲ್ಲಿ ಗೆದ್ದುಬರಬೇಕಾ. ನಾನೇನಾದರೂ ಅವನ ಜಾಗದಲ್ಲಿದ್ದಿದ್ದರೆ ಯಾವ ರೀತಿ ಶಕ್ತಿ ಪ್ರದರ್ಶನ ಮಾಡುತ್ತಿದ್ದೆನೆಂಬುದನ್ನು ನೀವೇ ಊಹಿಸಿಕೊಳ್ಳಿ. ಮಗನು ಸೋಲಿಸಿದರೆಂಬ ಏಕೈಕ ಕಾರಣಕ್ಕೆ ಮಂಡ್ಯ ಜನರನ್ನು ವಂಚಿಸುವುದು, ಅಭಿವೃದ್ಧಿ ಶೂನ್ಯವಾಗುವಂತೆ ಮಾಡುವುದು ಒಳ್ಳೆಯ ರಾಜಕಾರಣದ ಲಕ್ಷಣವಲ್ಲ ಎಂದು ಕುಟುಕಿದರು.
Suicide Case: ಈಶ್ವರಪ್ಪನವರೇ ಮೊದಲು ರಾಜೀನಾಮೆ ನೀಡಿ: ಹೆಚ್.ಡಿ.ಕುಮಾರಸ್ವಾಮಿ
ಆಡಳಿತ ನಡೆಸುವ ವೈಖರಿಯೇ?: ಮಳವಳ್ಳಿ ಕ್ಷೇತ್ರದ ಆಡಳಿತ ಹೇಗಿದೆ, ದುರಾಡಳಿತ ಹೇಗೆ ವ್ಯಾಪಿಸಿದೆ, ಅಭಿವೃದ್ಧಿ ಶೂನ್ಯದೊಂದಿಗೆ ಹಣದ ಲೂಟಿ ಹೇಗೆ ನಡೆಯುತ್ತಿದೆ. ಜನರ ಜೀವನ ಹೇಗೆ ಹಳ್ಳ ಹಿಡಿದಿದೆ. ಯೋಜನೆಗಳು ಹೇಗೆ ದಿಕ್ಕು ತಪ್ಪಿವೆ ಎನ್ನುವುದನ್ನು ಕಣ್ಣಾರೆ ನೋಡಿ ಅಥವಾ ಕಾರ್ಯಕರ್ತರಿಂದ ಕೇಳಿ ತಿಳಿದುಕೊಳ್ಳಿ. ಬಡವರಿಗೆ ಇದುವರೆಗೆ ಒಂದು ಮನೆಯನ್ನು ಕೊಡಲಾಗಲಿಲ್ಲ. ಅವರ ಗತಿ ಏನಾಗಬೇಡ. ಇದು ಆಡಳಿತ ನಡೆಸುವ ವೈಖರಿಯೇ ಎಂದು ಆಕ್ರೋಶದಿಂದ ಹೇಳಿದರು.
18ರಂದು ಬೃಹತ್ ಪ್ರತಿಭಟನೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ದುರಾಡಳಿತದಿಂದ ಕೂಡಿದೆ. ಸರ್ಕಾರದ ನಡೆಸಿರುವ ಭ್ರಷ್ಟಾಚಾರದ ವಿರುದ್ಧ ಏ. 18ರಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಡ್ಯದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.