
ದಾವಣಗೆರೆ (ನ.13): ಬಿಜೆಪಿಯಲ್ಲಿ ರೇಣುಕಾಚಾರ್ಯ ಒಬ್ಬ ಸಾಮಾನ್ಯ ಕಾರ್ತಕರ್ತನಾಗಿದ್ದು, ಇಡೀ ರಾಜ್ಯದಲ್ಲಿ ಯುವಕರು, ಮುಖಂಡರ ಅಪೇಕ್ಷೆ ಇತ್ತು. ಅದಕ್ಕಾಗಿ ತಾವು ಮಾತನಾಡಿದ್ದಷ್ಟೇ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು. ನನ್ನಿಂದಾಗಿ ವಿಜಯೇಂದ್ರ ರಾಜ್ಯಾಧ್ಯಕ್ಷರಾದರು ಎಂಬುದು ಸುಳ್ಳು. ವಿಜಯೇಂದ್ರ ಸಮರ್ಥ ನಾಯಕ. ಚುನಾವಣಾ ರಣತಂತ್ರ ಹೆಣೆಯುವಲ್ಲಿ, ಸಂಘಟನೆಯಲ್ಲೂ ಯುವ ರಾಜಕಾರಣಿಗಳಲ್ಲಿಯೇ ವಿಜಯೇಂದ್ರ ಮುಂಚೂಣಿ ನಾಯಕ. ಇದನ್ನೆಲ್ಲಾ ಗುರುತಿಸಿ, ರಾಜ್ಯಾಧ್ಯಕ್ಷ ಸ್ಥಾನವನ್ನು ರಾಷ್ಟ್ರೀಯ ನಾಯಕರು ನೀಡಿದ್ದಾರೆ ಎಂದು ತಿಳಿಸಿದರು.
ನಾನು ಬಿಜೆಪಿ ಬಿಡುವುದಾಗಿ ಎಲ್ಲೂ ಹೇಳಿಲ್ಲ. ನಾನು ಸಿಎಂ, ಡಿಸಿಎಂ. ಸಚಿವರು, ಉಸ್ತುವಾರಿ ಸಚಿವರ ಭೇಟಿ ಮಾಡಿದ್ದು ತಮ್ಮ ಅವಳಿ ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಿ, ಬರ ಪರಿಹಾರ ಕಾರ್ಯ ಕೈಗೊಳ್ಳುವಂತೆ ಒತ್ತಾಯಿಸಲು ಮಾತ್ರ. ನಮ್ಮಲ್ಲೇ ಕೆಲವರಿಗೆ ರೇಣುಕಾಚಾರ್ಯನಿಗೆ ಪಕ್ಷದಿಂದ ಹೊರಗೆ ಕಳಿಸಬೇಕೆಂಬ ಆಲೋಚನೆ ಇತ್ತು ಎಂದು ದೂರಿದರು. ಕಾರ್ಯಕರ್ತರು, ಮುಖಂಡರ ಅಪೇಕ್ಷೆ ನನ್ನ ಮೇಲಿದೆಯೆಂಬುದನ್ನು ಗಟ್ಟಿಯಾಗಿ ಹೇಳುತ್ತೇನೆ. ಇದೇ ಎಲ್ಲರ ಒತ್ತಾಯಕ್ಕೆ ಮಣಿದು ನಾನು ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಪ್ರಬಲ ಆಕಾಂಕ್ಷಿಯೆಂಬುದಾಗಿ ಹೇಳಿದ್ದೇನೆ. ಸೋಲು, ಗೆಲುವು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದೇನೆ. ಹಾಗಾಗಿ ಕಳೆದ 6 ತಿಂಗಳಿನಿಂದ ಒಂದು ದಿನವೂ ಮನೆಯಲ್ಲಿ ಕುಳಿತುಕೊಳ್ಳದೇ, ಅವಳಿ ತಾಲೂಕು ಪ್ರವಾಸ ಮಾಡಿದ್ದೇನೆ ಎಂದು ಹೇಳಿದರು.
ಬರ ನಿರ್ವಹಣೆ ಹಣ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲ: ಆರಗ ಜ್ಞಾನೇಂದ್ರ
ವಿಜಯೇಂದ್ರ ಆಯ್ಕೆ ತುಂಬಾ ಸಂತಸ ತಂದಿದೆ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಮರ್ಥ ಯುವ ನಾಯಕನ ಆಯ್ಕೆ ಮಾಡಿದ್ದು ನನಗೂ, ರಾಜ್ಯದ ಜನರಿಗೂ ತುಂಬಾ ಸಂತಸ ತಂದಿದ್ದು, ಇದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಎಲ್ಲರಿಗೂ ಧನ್ಯವಾದ ಸಲ್ಲಿಸುವೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ನಗರದ ಹೊರ ವಲಯದ ಶಿರಮಗೊಂಡನಹಳ್ಳಿ ಗ್ರಾಮದಲ್ಲಿ ಭಾನುವಾರ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಪತ್ನಿ ರತ್ನಮ್ಮ ರವೀಂದ್ರನಾಥ ದಂಪತಿಗೆ ದೀಪಾವಳಿ ಹಬ್ಬಕ್ಕೆ ಶುಭ ಹಾರೈಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿದ್ದು ಕಾರ್ಯಕರ್ತರ ಹುಮ್ಮಸ್ಸು ಹೆಚ್ಚಿಸಿದೆ. ಇದರಿಂದ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಿದೆ. ಹಳೆ ಬೇರು, ಹೊಸ ಚಿಗುರು ಎಂಬಂತೆ ವಿಜಯೇಂದ್ರ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಪಕ್ಷ ಮುನ್ನಡೆಸುತ್ತಾರೆಂಬ ಸಂಪೂರ್ಣ ವಿಶ್ವಾಸವಿದೆ.
ದೀಪಾವಳಿಗೆ ಬಂಪರ್ ಕೊಡುಗೆ : ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರ ಗೆದ್ದಿತ್ತು. ಈಗ ವಿಜಯೇಂದ್ರ ಸಾರಥ್ಯದಲ್ಲಿ 28 ಕ್ಷೇತ್ರಗಳ ಗೆಲ್ಲುವ ವಿಶ್ವಾಸವಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲೂ ಕನಿಷ್ಟ 125-130 ಕ್ಷೇತ್ರ ಗೆದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೂ ಬರಲಿದೆ. 2016ರಲ್ಲಿ ಯುಗಾದಿ ಹಬ್ಬದ ವೇಳೆ ಯಡಿಯೂರಪ್ಪನರಿಗೆ ರಾಜ್ಯಾಧ್ಯಕ್ಷರಾಗಿ ಮಾಡಿ, ಬಂಪರ್ ಕೊಡುಗೆ ನೀಡಿದ್ದ ಕೇಂದ್ರ ನಾಯಕರು ಈಗ ದೀಪಾವಳಿಗೆ ವಿಜಯೇಂದ್ರಗೆ ಸಾರಥ್ಯ ನೀಡಿ, ಬಂಪರ್ ಕೊಡುಗೆ ನೀಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಮಗೆ ಭಯಪಟ್ಟು ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ನಡೆದಿದೆ: ಆಯನೂರು ಮಂಜುನಾಥ್
ಬಿಜೆಪಿ ರಾಜ್ಯಾಧ್ಯಕ್ಷರಿಲ್ಲವೆಂದು ಟೀಕಿಸುತ್ತಿದ್ದ ಆಡಳಿತ ಪಕ್ಷ ಕಾಂಗ್ರೆಸ್ ನಾಯಕರಿಗೆ ವಿಜಯೇಂದ್ರ ಆಯ್ಕೆ ಮಾಡುವ ಮೂಲಕ ಬಿಜೆಪಿ ಮಾಸ್ಟರ್ ಸ್ಟ್ರೋಕ್ ನೀಡಿದೆ. ವಿಜಯೇಂದ್ರ ಸಂಘಟನಾ ಚತುರ. ಸಂಘ ಪರಿವಾರದ ಹಿನ್ನೆಲೆ ಇದೆ. ಬೆಂಗಳೂರು ಮಹಾ ನಗರ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಯುವ ಮೋರ್ಚಾ ಅಧ್ಯಕ್ಷ, ಕಳೆದ 3 ವರ್ಷದಿಂದ ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷರಾಗಿ ಉಪ ಚುನಾವಣೆಯಲ್ಲಿ ಬಹುತೇಕರ ಗೆಲ್ಲಿಸಿದ್ದಾರೆ ಎಂದು ತಿಳಿಸಿದರು. ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ರತ್ನಮ್ಮ ರವೀಂದ್ರನಾಥ, ಸುಮಾ ರೇಣುಕಾಚಾರ್ಯ, ಪಕ್ಷದ ಯುವ ಮುಖಂಡರಾದ ರಾಜು ವೀರಣ್ಣ, ಬಸವರಾಜ, ಪ್ರವೀಣ ಜಾಧವ್, ಕೂಲಂಬಿ ಬಸವರಾಜ, ಕಕ್ಕರಗೊಳ್ಳ ಕೆ.ಪಿ.ಕಲ್ಲಿಂಗಪ್ಪ ಇತರರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.