ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಬಂಡವಾಳ ಬಿಚ್ಚಿಡ್ತೀನಿ: ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ

Published : Jan 31, 2025, 07:57 PM IST
ವಿಜಯೇಂದ್ರ ಬಗ್ಗೆ ಮಾತಾಡಿದ್ರೆ ಬಂಡವಾಳ ಬಿಚ್ಚಿಡ್ತೀನಿ: ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯ

ಸಾರಾಂಶ

ಒಬ್ಬ ಹೊಸ ಯುವಕನ ವಿರುದ್ಧ ಸುಧಾಕರ್‌ ಅವರಿಗೆ ಗೆಲ್ಲಲಿಕ್ಕಾಗಲಿಲ್ಲ. ಆರೋಗ್ಯ ಸಚಿವರಾಗಿದ್ದ ನೀವು ನಿಮ್ಮ ಭಾಗದಲ್ಲಿ ಎಷ್ಟು ಸೀಟುಗಳನ್ನು ಗೆಲ್ಲಿಸಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ಮಾಜಿ ಸಚಿವ ಡಾ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ದಾವಣಗೆರೆ (ಜ.31): ಒಬ್ಬ ಹೊಸ ಯುವಕನ ವಿರುದ್ಧ ಸುಧಾಕರ್‌ ಅವರಿಗೆ ಗೆಲ್ಲಲಿಕ್ಕಾಗಲಿಲ್ಲ. ಆರೋಗ್ಯ ಸಚಿವರಾಗಿದ್ದ ನೀವು ನಿಮ್ಮ ಭಾಗದಲ್ಲಿ ಎಷ್ಟು ಸೀಟುಗಳನ್ನು ಗೆಲ್ಲಿಸಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸ್ವಪಕ್ಷದ ಮಾಜಿ ಸಚಿವ ಡಾ.ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ಹೊಸ ಯುವಕ ಪ್ರದೀಪ ಈಶ್ವರ ವಿರುದ್ಧ ಸೋತಿರಿ. ಆತನ ವಿರುದ್ಧ ಗೆಲ್ಲುವುದಕ್ಕೆ ನಿನ್ನಿಂದ ಆಗಲಿಲ್ಲ. ಆರೋಗ್ಯ ಸಚಿವನಾಗಿದ್ದ ನೀನೊಬ್ಬ ಬ್ಲಾಕ್‌ ಮೇಲ್ ರಾಜಕಾರಣಿ ಎಂದರು.

ಕಮರ್ಷಿಯಲ್ ಆಗಿ ಎರಡು ಖಾತೆಯನ್ನು ಕೇಳಿದ್ದ ನೀನೊಬ್ಬ ಕಚಡಾ ರಾಜಕಾರಣಿ. ಆರೋಗ್ಯ ಸಚಿವನಾಗಿ ಎಷ್ಟು ಜಿಲ್ಲೆಯಲ್ಲಿ ಏನು ದಬ್ಬಾಕಿದ್ದೆ? ಬಿಜೆಪಿ ಶಾಸಕರಿಗೆ ಎಷ್ಟು ಸಮಯ ಮೀಸಲಿಟ್ಟಿದ್ದಿ? ಒಬ್ಬ ಸಚಿವನಾಗಿ ಎಷ್ಟು ಜನ ಬಿಜೆಪಿ, ಕಾಂಗ್ರೆಸ್ ಶಾಸಕರ ಕರೆಗಳನ್ನು ಸ್ವೀಕರಿಸಿದ್ದಿ? ನೀನೊಬ್ಬ ಥರ್ಡ್‌ ಕ್ಲಾಸ್ ರಾಜಕಾರಣಿ ಎಂದು ಅವರು ಟೀಕಿಸಿದರು. ನಿನ್ನ ವಿಲಾಸಿ ಜೀವನಕ್ಕಾಗಿ ಎರಡು ಖಾತೆಗಳನ್ನು ತೆಗೆದುಕೊಂಡಿದ್ದಿ. ವಿಜಯೇಂದ್ರ ಬಗ್ಗೆ ಮಾತನಾಡುವ ನೈತಿಕತೆ ನಿನಗೇನಿದೆ? ನಿನ್ನ ಸ್ವಾರ್ಥಕ್ಕೋಸ್ಕರ ದಾವಣಗೆರೆಗೆ ಮಂಜೂರಾಗಿದ್ದ ಜಯದೇವ ಆಸ್ಪತ್ರೆಯನ್ನು ಬೇರೆ ಕಡೆಗೆ ಮಾಡಿದ್ದಿ. ಮಿಸ್ಟರ್ ಸುಧಾಕರ್ ನೀವು ಮಾಡಬಾರದ್ದನ್ನೆಲ್ಲಾ ಮಾಡಿದ್ದೀರಿ. ನಿಮ್ಮ ಅವಾಂತರಗಳ ಬಗ್ಗೆ ನನ್ನ ಬಳಿ ರಾಶಿ ರಾಶಿ ಮಾಹಿತಿ ಇದೆ ಎಂದು ಅವರು ಎಚ್ಚರಿಸಿದರು.

ಕಿತ್ತೂರು ರಾಣಿಗೆ ಮಲ್ಲಿಕಾರ್ಜುನ ಖರ್ಗೆ ಅವಮಾನ: ರೇಣುಕಾಚಾರ್ಯ ಆಕ್ರೋಶ

ರೀ ಮಿಸ್ಟರ್ ಸುಧಾಕರ್ ನಮ್ಮ ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಇನ್ನೊಂದು ಮಾತನಾಡಿದರೂ ನಿನ್ನ ಬಂಡವಾಳವನ್ನೇ ಬಿಚ್ಚಿಡುತ್ತೇನೆ. ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಲು ನಿಮ್ಮಂತಹವರೇ ಕಾರಣ. ಏ ಸುಧಾಕರ್ ನೀನೊಬ್ಬ ಐರನ್‌ ಲೆಗ್. ಕಮರ್ಷಿಯಲ್ ರಾಜಕಾರಣ. ನಿನ್ನ ಬಂಡವಾಳವನ್ನು ಶೀಘ್ರದಲ್ಲೇ ಬಿಚ್ಚಿಡುತ್ತೇನೆ. ನೋಡುತ್ತಿರು. ಯಡಿಯೂರಪ್ಪ, ವಿಜಯೇಂದ್ರ ಎಷ್ಟು ಕ್ಷೇತ್ರ, ಸೀಟುಗಳನ್ನು ಗೆಲ್ಲಿಸಿದ್ದಾರೆಂಬ ಲೆಕ್ಕವನ್ನೂ ಕೊಡುತ್ತೇನೆ ಎಂದು ಅವರು ಗುಟುರು ಹಾಕಿದರು.

ಏ ಹರೀಶ ನನ್ನ ಬಗ್ಗೆ ಮಾತನಾಡುವ ನೈತಿಕತೆಯೇ ನಿನಗಿಲ್ಲ. ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹೇಳಿದಂತೆ ಕಾಂಗ್ರೆಸ್‌ ಪಕ್ಷದವರ ಮನೆ ಬಾಗಿಲು ಕಾದಿದ್ದು ನೀನು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸದಿದ್ದರೆ, ಮುಂದೆ ನಿನಗೂ ಇದೆ ಎಂದು ಹರಿಹರದ ಸ್ವಪಕ್ಷದ ಶಾಸಕ ಬಿ.ಪಿ.ಹರೀಶ ಗೌಡ ವಿರುದ್ಧವೂ ರೇಣುಕಾಚಾರ್ಯ ವಾಗ್ದಾಳಿ ಮುಂದುವರಿಸಿದರು. ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮುಖಂಡರಾದ ಲೋಕಿಕೆರೆ ನಾಗರಾಜ, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್ ಇತರರು ಇದ್ದರು.

ಕುಮಾರ ದೊಡ್ಡ ಮನುಷ್ಯ, ಈಗ ಬಂದಿದ್ದಾನೆ: ಕುಮಾರ ಬಂಗಾರಪ್ಪ ದೊಡ್ಡಮನುಷ್ಯ, ಈಗ ಬಂದಿದ್ದಾನೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವ್ಯಂಗ್ಯವಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿಮ್ಮ ಹೋರಾಟವನ್ನು ಯಡಿಯೂರಪ್ಪ, ವಿಜಯೇಂದ್ರ ಬಿಟ್ಟು, ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾಡಿ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ವಿರುದ್ಧ ಮಾಡಿ ಎಂದರು. ಸದ್ಯಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಕುರ್ಚಿ ಖಾಲಿ ಇಲ್ಲ. ವಿಜಯೇಂದ್ರ ಕುರ್ಚಿಗೆ ಯಾವುದೇ ಧಕ್ಕೆಯೂ ಇಲ್ಲ. ರಾಜ್ಯದ ಜನ ಮಾನಸದಲ್ಲಿ ಯಡಿಯೂರಪ್ಪ, ವಿಜಯೇಂದ್ರ ಇದ್ದಾರೆ. ರಾಜ್ಯದ ಎಲ್ಲಾ ಬೆಳವಣಿಗೆಗಳ ಬಗ್ಗೆ ಪಕ್ಷದ ರಾಷ್ಟ್ರೀಯ ನಾಯಕರಿಗೂ ಗೊತ್ತಿದೆ ಎಂದು ಅವರು ಹೇಳಿದರು.

ರಮೇಶ್ ಜಾರಕಿಹೊಳಿ, ಯತ್ನಾಳ್‌ರನ್ನು ಎತ್ತಿಕಟ್ಟುತ್ತಿದ್ದಾರೆ: ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ

ರಾಷ್ಟ್ರೀಯ ನಾಯಕರು ಇಲ್ಲಿನ ಎಲ್ಲಾ ಬೆಳವಣಿಗೆಗಳ ಬಗ್ಗೆ ಅರಿವು ಹೊಂದಿದ್ದಾರೆ. ಸೂರ್ಯ ಚಂದ್ರರು ಇರುವುದು ಎಷ್ಟು ಸತ್ಯವೋ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿ ಯುವುದೂ ಅಷ್ಟೇ ಸತ್ಯ ಎಂದು ಅವರು ತಿಳಿಸಿದರು. ಬಸವನಗೌಡ ಪಾಟೀಲ್‌ ಯತ್ನಾಳ್ ಸೇರಿದಂತೆ ಅವರಿರುವುದು ಏಳೆಂಟು ಜನರು ಮಾತ್ರ. ಅಲ್ಲಪ್ಪಾ ಯತ್ನಾಳ್, ನೀನು ಹಿಂದುವೇ ಅಲ್ಲ. ಜೆಡಿಎಸ್‌ಗೆ ಏಕೆ ಹೋಗಿದ್ದೆ? ಅಲ್ಲಿ ಏಕೆ ಬಿರಿಯಾನಿ ತಿಂದೆ? ಆ ಟೋಪಿ ಯಾಕೆ ಹಾಕಿದ್ದಿ? ಮಕ್ಕಳ ಆಟಕ್ಕೆ ಸಂಖ್ಯೆ ಹೆಚ್ಚಿಸಿಕೊಳ್ಳಲು ಮಾಡುವಂತೆ ಅವರಿರವರನ್ನು ಕರೆಯುವ ಕೆಲಸ ಯತ್ನಾಳ್ ಮಾಡುತ್ತಿದ್ದಾರೆ ಎಂದು ರೇಣುಕಾಚಾರ್ಯ ಕುಟುಕಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು