ಡಿಕೆಶಿ ವಕೀಲರೇ ಈಗ ಸರ್ಕಾರದ ಅಡ್ವೋಕೇಟ್ ಜನರಲ್‌: ಎಂ.ಪಿ.ರೇಣುಕಾಚಾರ್ಯ ಟೀಕೆ

By Kannadaprabha News  |  First Published Nov 26, 2023, 9:23 PM IST

ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. 
 


ದಾವಣಗೆರೆ (ನ.26): ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿರುವ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುವ ಮೂಲಕ ರಾಜ್ಯ ಸರ್ಕಾರವು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದ್ದಾರೆ. ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ವಿರುದ್ಧ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳಲ್ಲಿ ಚಾರ್ಜ್‌ಶೀಟ್ ಹಾಕುವ ಸಂದರ್ಭದಲ್ಲಿಯೇ ಸರ್ಕಾರವು ಕೇಸ್ ಹಿಂಪಡೆಯುವ ನಿರ್ಣಯ ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದರು.

ಕಾಂಗ್ರೆಸ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರವೆಂದರೆ ಕಾಂಗ್ರೆಸ್ ಎಂಬುದಕ್ಕೆ ಇದೇ ಸಾಕ್ಷಿ. ಡಿ.ಕೆ. ಶಿವಕುಮಾರ ಪರವಾಗಿದ್ದ ವಕೀಲರಾದ ಕೆ.ಶಶಿಕಿರಣ ಶೆಟ್ಟಿ ಎಂಬುವರು ಈಗ ಸರ್ಕಾರದ ಅಡ್ವೋಕೇಟ್ ಜನರಲ್ ಆಗಿದ್ದಾರೆ. ಈಗ ಶಿವಕುಮಾರ ವಿರುದ್ಧ ಸಿಬಿಐ ತನಿಖೆಗೆ ಅನುಮತಿ ನೀಡಿ 25.9.2019ರಲ್ಲಿ ಹೊರಡಿಸಿದ್ದ ಆದೇಶ ಕಾನೂನು ಬದ್ಧವಾಗಿಲ್ಲವೆಂದು ಎಜಿ ಉಲ್ಲೇಖಿಸಿದ್ದಾರೆ. ಇದರಿಂದಲೇ ಕಾಂಗ್ರೆಸ್ ಸರ್ಕಾರದ ಉದ್ದೇಶ ಏನೆಂಬದು ಸ್ಪಷ್ಟವಾಗುತ್ತದೆ ಎಂದು ದೂರಿದರು.

Tap to resize

Latest Videos

ಡಿ.ಕೆ. ಶಿವಕುಮಾರ ಉದ್ದೇಶಪೂರ್ವಕವಾಗಿ ಸಂಪುಟ ಸಭೆಗೆ ಹಾಜರಾಗಿಲ್ಲ. ಸಂಪುಟ ಸಭೆಯಲ್ಲಿದ್ದರೆ ಯಾರಾದರೂ ಪ್ರಶ್ನೆ ಮಾಡಬಹುದೆಂಬ ಕಾರಣಕ್ಕೆ ಉದ್ದೇಶಪೂರ್ವಕವಾಗಿ ಡಿಸಿಎಂ ಶಿವಕುಮಾರ ಗೈರಾಗಿದ್ದಾರೆ. ಕೇಸ್ ಹಿಂಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವು ಅಕ್ಷಮ್ಯ ಅಪರಾಧ ಎಸಗಿದೆ ಎಂದು ಕಿಡಿಕಾರಿದರು. ಬಿಜೆಪಿಯವರ ಮೇಲೆ ಕಾಂಗ್ರೆಸ್‌ ಮಾಡುತ್ತಿರುವ ಆರೋಪಗಳೆಲ್ಲಾ ಕಟ್ಟುಕತೆಗಳು. ಕಾಂಗ್ರೆಸ್ ಸರ್ಕಾರವು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡಿದೆ. ಸಿಬಿಐಗೆ ಮರು ಪರಿಶೀಲನೆಗೆ ಅವಕಾಶ ಮಾಡಿಕೊಡಬೇಕು. ಇಲ್ಲದಿದ್ದರೆ ಸದನದ ಒಳಗೆ ಮತ್ತು ಹೊರಗೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ಡಿಕೆಶಿ ಸಿಬಿಐ ತನಿಖೆ ವಾಪಸ್‌, ಜಾತಿ ಗಣತಿ ವಿವಾದ ಸರ್ಕಾರ ಪತನದ ಹೆಜ್ಜೆ: ಈಶ್ವರಪ್ಪ

ಸುಳ್ಳು ಭರವಸೆ, ಪೊಳ್ಳು ಆಶ್ವಾಸನೆಗಳನ್ನು ನೀಡಿಯೇ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಈಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧದ ಕೇಸ್ ಹಿಂಪಡೆಯುವ ಮೂಲಕ ತಾನು ಏನೆಂಬುದನ್ನು ಮತ್ತೆ ಸಾಬೀತುಪಡಿಸಿದೆ ಎಂದು ರೇಣುಕಾಚಾರ್ಯ ದೂರಿದರು.

click me!