ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ವಿಶ್ವಾಸವಿಟ್ಟು 136 ಸ್ಥಾನಗಳನ್ನು ಗೆಲ್ಲಿಸಿರುವುದನ್ನು ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ್ದಕ್ಕಾಗಿ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದ್ದೇವೆ.
ನಾಗಮಂಗಲ (ನ.26): ರಾಜ್ಯದ ಜನರು ಕಾಂಗ್ರೆಸ್ ಪಕ್ಷದ ಮೇಲೆ ನಂಬಿಕೆ ವಿಶ್ವಾಸವಿಟ್ಟು 136 ಸ್ಥಾನಗಳನ್ನು ಗೆಲ್ಲಿಸಿರುವುದನ್ನು ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ. ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಿಸಿದ್ದಕ್ಕಾಗಿ ಕೊಟ್ಟಿದ್ದ ಎಲ್ಲಾ ಭರವಸೆಗಳನ್ನು ಈಡೇರಿಸುತ್ತಿದ್ದೇವೆ. ಇದು ಇನ್ನೊಂದು ರೀತಿಯಲ್ಲಿ ಅವರಿಗೆ ಹೊಟ್ಟೆಯೊಳಗೆ ಕಿವುಚಿದಂತಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಜೆಡಿಎಸ್ ಮತ್ತು ಬಿಜೆಪಿ ನಾಯಕರನ್ನು ಕುಟುಕಿದರು.
ಪಟ್ಟಣದ ಟಿ.ಬಿ.ಬಡಾವಣೆಯ ಶ್ರೀ ಬಡಗೂಡಮ್ಮದೇವಿ ದೇವಸ್ಥಾನದ ಆವರಣದಲ್ಲಿ ಎಂಡಿಸಿಸಿ ಬ್ಯಾಂಕ್ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾಲೂಕಿನ 100ಕ್ಕೂ ಹೆಚ್ಚು ಸ್ವಸಹಾಯ ಗುಂಪುಗಳಿಗೆ 8.28 ಕೋಟಿ ರು.ಗಳ ಬಡ್ಡಿರಹಿತ ಸಾಲ ಮಂಜೂರಾತಿ ಪತ್ರ ವಿತರಣೆ ಮತ್ತು ಸರ್ಕಾರದ ವಿವಿಧ ಯೋಜನೆಗಳ ಕುರಿತು ರೈತರಿಗೆ ಮಾಹಿತಿ ನೀಡುವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
undefined
ರೈತರು ಕಾವೇರಿ ಹೋರಾಟ ಕೈಬಿಡಿ: ಸಚಿವ ಚಲುವರಾಯಸ್ವಾಮಿ
ಜೆಡಿಎಸ್ ಹಾಗೂ ಬಿಜೆಪಿಯವರಿಗೆ ಹಗಲು-ರಾತ್ರಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ನನ್ನ ಬಗ್ಗೆ ಮಾತನಾಡಲಿಲ್ಲವೆಂದರೆ ಅವರಿಗೆ ಊಟ ಸೇರುವುದಿಲ್ಲ. ನಿದ್ರೆಯೂ ಬರುವುದಿಲ್ಲ. ಅದಕ್ಕಾಗಿಯೇ ಸರ್ಕಾರದ ಗ್ಯಾರಂಟಿಗಳು ನಿಂತು ಹೋಗುತ್ತವೆ ಎಂದು ನಿತ್ಯ ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆಂದು ವ್ಯಂಗ್ಯವಾಡಿದರು.
20 ಕೋಟಿ ರು.ಕೊಡಲಿ ಬರೆದುಕೊಡುವೆ: ಮಹಾರಾಜರ ಕಾಲದಲ್ಲಿ ಹರಾಜು ಮಾಡಿರುವ ಜಾಗವನ್ನು ಯಾರೋ ಒಬ್ಬ ವ್ಯಕ್ತಿ ಪಡೆದು, ಹತ್ತಾರು ವ್ಯಕ್ತಿಗಳ ನಂತರ ಆ ಜಾಗವನ್ನು ನನ್ನ ಅಣ್ಣ 15ವರ್ಷಗಳ ಹಿಂದೆ ಖರೀದಿಸಿ ನನಗೆ ದಾನವಾಗಿ ಕೊಟ್ಟಿದ್ದಾರೆ. ಈ ಜಮೀನನ್ನು ಜೆಡಿಎಸ್ ನಾಯಕರು 100 ಕೋಟಿ ರು. ಬೆಲೆ ಬಾಳುತ್ತದೆ ಎಂದು ಬರೆಸಿದ್ದಾರೆ. 80 ಕೋಟಿ ರು. ಅವರೇ ಇಟ್ಟುಕೊಂಡು ನನಗೆ ಕೇವಲ 20 ಕೋಟಿ ರು.ಕೊಡಲಿ. ನಾಳೆಯೇ ಅವರ ಹೆಸರಿಗೆ ನೋಂದಣಿ ಮಾಡಿಸಿಕೊಡುತ್ತೇನೆ. ಈ ವಿಚಾರವನ್ನು ಅವರೊಂದಿಗೆ ಚೆನ್ನಾಗಿರುವವರು ಹೇಳಿ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿದರು.
ಸುರೇಶ್‌ಗೆ ಕೆಲಸ ಕೊಡಿಸಿದವನು ನಾನು: 1996ರಲ್ಲಿ ಸುರೇಶ್‌ಗೌಡನನ್ನು ಎಚ್‌ಎಎಲ್ ಕಂಪನಿ ಕೆಲಸದಿಂದ ತೆಗದು ಹಾಕಿತ್ತು. ಆಗ ಇಲ್ಲಿನ ಕೆಲ ಜೆಡಿಎಸ್ ಮುಖಂಡರು ಮಧ್ಯರಾತ್ರಿ ವೇಳೆ ಮೈಸೂರಿನ ನಮ್ಮ ಮನೆಗೆ ಬಂದರು. ಈತನಿಗೆ ಮತ್ತೆ ಕೆಲಸ ಕೊಡಿಸುವ ಸಲುವಾಗಿ ನನ್ನನ್ನು ಮಧ್ಯರಾತ್ರಿಯೇ ದೇವೇಗೌಡರ ಬಳಿ ಕರೆದುಕೊಂಡು ಹೋದರು. ಈ ವ್ಯಕ್ತಿಯನ್ನು ಮತ್ತೆ ಕೆಲಸಕ್ಕೆ ತೆಗೆದುಕೊಂಡರೆ ಕಂಪನಿ ಮುಚ್ಚಿಸಿಬಿಡುತ್ತಾರೆಂದು ಅಂದಿನ ಎಚ್‌ಎಎಲ್ ಅಧ್ಯಕ್ಷರು ಹೇಳಿದ್ದರು. ಅದಕ್ಕೆ ನಾನು ಈತ ನಮ್ಮ ತಾಲೂಕಿನ ಹುಡುಗ ಮುಂದೆ ಸರಿಹೋಗುತ್ತಾನೆಂದು ಹೇಳಿ ನಾನೂ ಮತ್ತು ಎಸ್.ಡಿ. ಜಯರಾಂ ಸೇರಿ ಅವನಿಗೆ ವಾಪಸ್ ಕೆಲಸ ಕೊಡಿಸಿದ್ದೆವು. ಆದರೆ ಇಂದು ಆತ ನನ್ನ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾನೆ ಎಂದು ಸುರೇಶ್‌ಗೌಡರ ಹಿಂದಿನ ಕಥೆಯನ್ನು ನೆನಪಿಸಿದರು.
ನನ್ನ ಹೆಚ್‌ಡಿಕೆ ಸಂಬಂಧ ಅವನಿಗೇನು ಗೊತ್ತು?: ನನ್ನ ಮತ್ತು ಕುಮಾರಸ್ವಾಮಿ ಅವರ ಸಂಬಂಧ ಅವನಿಗೇನು ಗೊತ್ತು. ಕುಮಾರಸ್ವಾಮಿ ಶಾಸಕ, ಸಚಿವರಾಗಿದ್ದಾಗ ನಾವು ಹೇಗೆ ಕರೆದುಕೊಂಡು ಓಡಾಡುತ್ತಿದ್ದವು. ಮುಖ್ಯಮಂತ್ರಿ ಮಾಡಲು ಎಷ್ಟು ಪ್ರಯತ್ನ ಪಟ್ಟೆವು ಎನ್ನುವುದು ಮಾಜಿ ಶಾಸಕ ಸುರೇಶ್‌ಗೌಡನಿಗೇನು ಗೊತ್ತು. ಚಲುವರಾಯಸ್ವಾಮಿ ಬಗ್ಗೆ ಮಾತಾಡಿದರೆ ನನ್ನನ್ನೂ ರಾಜ್ಯಮಟ್ಟಕ್ಕೆ ಕರೆದೊಯ್ಯುತ್ತಾರೆಂಬ ಚಪಲಕ್ಕೆ ಏನೇನೋ ಮಾತನಾಡುತ್ತಾನೆ. ಅವನ ಮಾತುಗಳಿಗೆ ಉತ್ತರ ಕೊಡುವ ಅವಶ್ಯಕತೆಯಿಲ್ಲ. ಅವನಿಗೆ ಉತ್ತರ ಕೊಡುವ ಬದಲು ಜನರಿಗೆ ಸಾಧ್ಯವಾದಷ್ಟು ಒಳ್ಳೆ ಕೆಲಸ ಮಾಡಬೇಕೆಂಬುದೇ ನನ್ನ ಯೋಚನೆ ಎಂದು ಮಾಜಿ ಶಾಸಕ ಸುರೇಶ್‌ಗೌಡಗೆ ಚಾಟಿ ಬೀಸಿದರು.
1999ರಲ್ಲಿ ಹಳೇ ಮೈಸೂರು ಭಾಗದಲ್ಲಿ ನಾನೊಬ್ಬನೇ ಜೆಡಿಎಸ್ ಶಾಸಕನಾಗಿ ಆಯ್ಕೆಯಾಗಿದ್ದೆ. ಆಗಲೂ ಸಹ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅಭಿವೃದ್ಧಿ ಕೆಲಸ ಮಾಡಲು ನಮ್ಮ ಸರ್ಕಾರವೇ ಇರಬೇಕೆಂದೇನಿಲ್ಲ. ಇಚ್ಛಾಶಕ್ತಿಯಿದ್ದರೆ ವಿರೋಧ ಪಕ್ಷದ ಶಾಸಕನಾಗಿದ್ದರೂ ಸಹ ಕೆಲಸ ಮಾಡಬಹುದು. 14 ತಿಂಗಳ ಕಾಲ ಅವರದ್ದೇ ಪಕ್ಷದ ಅಧಿಕಾರದಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆಂಬುದನ್ನು ತೋರಿಸಲಿ ಎಂದು ಸವಾಲು ಹಾಕಿದರು.
ವೇದಿಕೆಯಲ್ಲಿ ಸಚಿವ ಚಲುವರಾಯಸ್ವಾಮಿ ಪತ್ನಿ ಧನಲಕ್ಷ್ಮಿ, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ, ನಿರ್ದೇಶಕ ಕೆ.ವಿ.ದಿನೇಶ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವನಜಾಕ್ಷಿ ಮಾತನಾಡಿದರು. ಬಳಿಕ ತಾಲೂಕಿನ ವಿವಿಧ ಸ್ತ್ರೀ ಶಕ್ತಿ ಸ್ವ ಸಹಾಯ ಗುಂಪುಗಳಿಗೆ ಬಡ್ಡಿರಹಿತ ಸಾಲದ ಮಂಜೂರಾತಿ ಪತ್ರ ಮತ್ತು ಕ್ಷೀರ ಸಮೃದ್ಧಿ ಫಲಾನುಭವಿಗಳಿಗೆ ಸಾಲದ ಚೆಕ್ ವಿತರಿಸಲಾಯಿತು. ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ಪಡೆದುಕೊಂಡ ತಾಲೂಕಿನ ಹಿರಿಯ ಸಹಕಾರಿಗಳಾದ ಎಚ್.ಟಿ.ಕೃಷ್ಣೇಗೌಡ ಮತ್ತು ಬಿ.ರಾಜೇಗೌಡ ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಅಂಬರೀಶ್ ಗುರಿ, ಉದ್ದೇಶಗಳನ್ನು ಮುಂದುವರೆಸಿಕೊಂಡು ಹೋಗಲು ಸಂಕಲ್ಪ: ಸುಮಲತಾ
ಎಂಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಹರದನಹಳ್ಳಿ ನರಸಿಂಹಯ್ಯ, ಚಂದ್ರಶೇಖರ್, ಹಾಲಹಳ್ಳಿ ಅಶೋಕ್, ಪಾಂಡವಪುರ ಉಪ ವಿಭಾಗಾಧಿಕಾರಿ ಎಲ್.ನಂದೀಶ್, ಜಿಲ್ಲಾ ನೋಂದಣಾಧಿಕಾರಿ ಕಾಂತರಾಜೇ ಅರಸ್, ಎಸ್‌ಎಲ್‌ಡಿಬಿ ನಿರ್ದೇಶಕ ತಿಮ್ಮರಾಯಿಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಟಿಎಪಿಸಿಎಂಎಸ್ ಅಧ್ಯಕ್ಷ ಎಸ್.ಸಿ.ಚೇತನ್‌ಕುಮಾರ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಸತೀಶ್‌ಚಂದ್ರ, ಮಹಿಳಾ ಕಾಂಗ್ರೆಸ್ ಮುಖಂಡರಾದ ಯಶೋಧಮ್ಮ, ಎನ್.ಕೆ.ವಸಂತಮಣಿ, ನೀಲಾ ಶಿವಮೂರ್ತಿ, ಗೀತಾ ದಾಸೇಗೌಡ, ಪುರಸಭೆ ಸದಸ್ಯರಾದ ರಮೇಶ್, ತಿಮ್ಮಪ್ಪ, ಟಿಎಪಿಸಿಎಂಎಸ್ ಕಾರ್ಯದರ್ಶಿ ಮೋಹನ್‌ರಾಜ್ ಸೇರಿದಂತೆ ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ಸಿಇಓಗಳು ಮತ್ತು ನಾಲ್ಕು ಸಾವಿರಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರು ಪಾಲ್ಗೊಂಡಿದ್ದರು.