ಬಿ.ಕೆ.ಹರಿಪ್ರಸಾದ್‌ ನೋವು ಸರ್ಕಾರಕ್ಕೆ ಅಪಾಯಕಾರಿ: ಕೋಟ ಶ್ರೀನಿವಾಸ ಪೂಜಾರಿ

By Kannadaprabha News  |  First Published Jul 23, 2023, 7:02 PM IST

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್‌ ಅವರ ಮಾತು, ನೋವು, ಚಟುವಟಿಕೆಗಳು ರಾಜ್ಯದಲ್ಲಿ ಆಳುವ ಕಾಂಗ್ರೆಸ್‌ ಸರ್ಕಾರಕ್ಕೆ ಅಪಾಯಕಾರಿಯಾಗಲಿವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ.


ಉಡುಪಿ (ಜು.23): ಕಾಂಗ್ರೆಸ್‌ ಸರ್ಕಾರದ ವಿರುದ್ಧ ಬಿ.ಕೆ. ಹರಿಪ್ರಸಾದ್‌ ಅವರ ಮಾತು, ನೋವು, ಚಟುವಟಿಕೆಗಳು ರಾಜ್ಯದಲ್ಲಿ ಆಳುವ ಕಾಂಗ್ರೆಸ್‌ ಸರ್ಕಾರಕ್ಕೆ ಅಪಾಯಕಾರಿಯಾಗಲಿವೆ ಎಂದು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಿ.ಕೆ. ಹರಿಪ್ರಸಾದ್‌ ಅವರ ಮಾತಿನ ಬಗ್ಗೆ ಪ್ರತಿಕ್ರಿಯೆ ನೀಡಿದರು. ಸಿದ್ದರಾಮಯ್ಯ ಅವರಂತೆ ಬಿ.ಕೆ. ಹರಿಪ್ರಸಾದ್‌ ಅವರೂ ಮೇಲ್ಮನೆಯ ವಿಪಕ್ಷ ನಾಯಕರಾಗಿದ್ದರು. ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಹರಿಪ್ರಸಾದ್‌ ಕೂಡ ಶ್ರಮಿಸಿದ್ದಾರೆ. ವೈಚಾರಿಕವಾಗಿ ನನಗೂ ಅವರಿಗೂ ಬಹಳ ಅಭಿಪ್ರಾಯ ಭೇದವಿದೆ. ನಾವು ವೈಚಾರಿಕಾ ಚರ್ಚೆ, ಸಂಘರ್ಷ ಮಾಡಿದ್ದೇವೆ ಎಂದವರು ಹೇಳಿದ್ದಾರೆ.

ಖಾದರ್‌ ನಡೆ ದುರಂತ: ವಿಧಾನಸಭೆಯಲ್ಲಿ ಸ್ಪೀಕರ್‌ ಬೇಜವಾಬ್ದಾರಿಯಿಂದ ಸದನ ನಿರ್ವಹಣೆ ವೈಫಲ್ಯವಾಗಿದೆ. ಸಭೆಯನ್ನು ಮುಂದೂಡಿ ಸ್ಪೀಕರ್‌, ಸಿಎಂ ಮತ್ತು ವಿಪಕ್ಷ ನಾಯಕನ ಜೊತೆ ಮಾತನಾಡಬೇಕಿತ್ತು, ನಡೆದದ್ದು ಮರೆಯೋಣ ಎಂದು ಸದನವನ್ನು ಮುಂದುವರಿಸಬಹುದಿತ್ತು ಎಂದು ಕೋಟ ಅಭಿಪ್ರಾಯಪಟ್ಟರು. ಬಿಜೆಪಿ ಶಾಸಕರ ಅಮಾನತು ಮಾಡಿದ ಸ್ಪೀಕರ್‌ ಖಾದರ್‌ ನಡೆ ಪ್ರಜಾಪ್ರಭುತ್ವದ ದುರಂತ ಎಂದ ಅವರು, ಹಿಂದೆ ಸಿದ್ದರಾಮಯ್ಯ ಅವರೂ ವಿಪಕ್ಷ ನಾಯಕನಾಗಿ ಸದನದ ಬಾಗಿಲಿಗೇ ಒದ್ದಿದ್ದರು, ಡಿ.ಕೆ. ಶಿವಕುಮಾರ್‌ ಬಜೆಟ್‌ ಪುಸ್ತಕ ಹರಿದು ಬಿಸಾಡಿದ್ದರು, ಕಾಂಗ್ರೆಸ್‌ ಶಾಸಕರು ಸ್ಪೀಕರ್‌ ಮೈಕ್‌ ಕಿತ್ತು ಬಿಸಾಡಿದ್ದರು ಎಂದು ನೆನಪಿಸಿಕೊಂಡರು.

Tap to resize

Latest Videos

undefined

ಗೃಹಜ್ಯೋತಿ, ಗೃಹಲಕ್ಷ್ಮಿಯಿಂದ ಬಡವರಿಗೆ ಸಹಾಯ: ಸಚಿವ ನಾಗೇಂದ್ರ

ಹಾಲಿನ ದರ ಏರಿಸಿದರೆ, ಗ್ರಾಹಕರಿಗೆ ಸಬ್ಸಿಡಿ ನೀಡಿ: ಸರ್ಕಾರ ಹಾಲಿನ ದರ ಏರಿಸಿದ್ದಕ್ಕೆ ಪ್ರತಿಕ್ರಿಯಿಸಿದ ಕೋಟ, ರೈತರಿಗೆ ಸಹಾಯವಾಗುವಂತೆ ಹಾಲಿನ ದರ ಏರಿಸಿದ್ದರೇ ಯಾರ ಆಕ್ಷೇಪವೂ ಇಲ್ಲ, ಆದರೇ ಹಾಲಿನ ದರ ಏರಿಸಿದರೆ ಸಾಲದು, ಮಾರಾಟ ದರದಲ್ಲಿ ಸಬ್ಸಿಡಿಯನ್ನೂ ಕೊಡಿ, ಇಲ್ಲದಿದ್ದರೆ ದರ ಏರಿಕೆಯಿಂದ ಸಾಮಾನ್ಯ ಬಡ ಗ್ರಾಹಕರ ಗತಿ ಏನು ? ಅರ್ಧ ಲೀಟರ್‌ ಹಾಲು ಕುಡಿಯಲು ಕಷ್ಟದ ಪರಿಸ್ಥಿತಿ ಬರಬಹುದು ಎಂದವರು ಹೇಳಿದರು.

ಭಾರತ ಮಾತೆಗೆ ಜೈ ಎಂದವರನ್ನು ಸರ್ಕಾರ ಗಡಿಪಾರು ಮಾಡುತ್ತಿದೆ: ದ.ಕ. ಜಿಲ್ಲೆಯಲ್ಲಿ ಬಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಿದ ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತೀವ್ರವಾಗಿ ಖಂಡಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ನಾಯಕರು ಕುಕ್ಕರ್‌ನಲ್ಲಿ ಬಾಂಬ್‌ ಇಟ್ಟವರ ಮೇಲೆ ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಬೆಂಗಳೂರಿನಲ್ಲಿ ಮನೆಯಲ್ಲಿ ಗ್ರೆನೇಡ್‌ ಇಟ್ಟುಕೊಂಡಿದ್ದ ದುಷ್ಕರ್ಮಿಗಳನ್ನು ಉಗ್ರಗಾಮಿಗಳು ಎನ್ನಲು ಗೃಹಸಚಿವರು ಹಿಂದೇಟು ಹಾಕುತ್ತಿದ್ದಾರೆ. ಅಂತಾರಾಷ್ಟ್ರೀಯ ಭಯೋತ್ಪಾದಕರ ಸಂಪರ್ಕ ಇದ್ದರೂ ಅವರನ್ನು ಉಗ್ರಗಾಮಿ ಎಂದು ಕರೆಯಲು ಗೃಹಮಂತ್ರಿ ಸಿದ್ದರಿಲ್ಲ ಎಂದು ಕೋಟ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕಾಂಗ್ರೆಸ್ಸಿಂದ ರಾಜ್ಯ ಉಳಿಯುವ ಗ್ಯಾರಂಟಿಯಿಲ್ಲ: ಮಾಜಿ ಸಚಿವ ಹಾಲಪ್ಪ ಆಚಾರ್

ಬಜರಂಗ ದಳದ ಕಾರ್ಯಕರ್ತರು ಸಮಾಜ ವಿರೋಧಿ ಯಾವ ಕೃತ್ಯ ಮಾಡಿದ್ದಾರೆ ಎಂದು ಗಡಿಪಾರು ಆದೇಶ ಹೊರಡಿಸಿರುವ ಮಂಗಳೂರು ಪೊಲೀಸ್‌ ಕಮಿಷನರ್‌ ಉತ್ತರ ಕೊಡಬೇಕು, ಬಜರಂಗ ದಳದವರು ಕುಕ್ಕರ್‌ನಲ್ಲಿ ಬಾಂಬ್‌ ಸ್ಫೋಟ ಮಾಡಿದ್ದಾರಾ, ಅಂತಾರಾಷ್ಟ್ರೀಯ ಲಿಂಕ್‌ ಇಟ್ಟುಕೊಂಡು ಮನೆಯಲ್ಲಿ ಗೆನೆಡ್‌ ಇಟ್ಟುಕೊಂಡಿದ್ದರಾ? ಎಂದು ಪ್ರಶ್ನಿಸಿದ್ದಾರೆ. ಭಾರತ ಮಾತೆಗೆ ಜೈ ಅನ್ನುವ ಭಜರಂಗದಳ ಕಾರ್ಯಕರ್ತರನ್ನು ಗಡಿಪಾರು ಮಾಡಲು ಹೊರಟಿದಾರೆ. ಬಜರಂಗ ದಳ ದೇಶ ಮೊದಲು ಎಂಬ ವಿಚಾರಕ್ಕೆ ಒತ್ತು ಕೊಡುವವರು, ನಾಳೆ ಅದೇ ವಿಚಾರ ಇಟ್ಟುಕೊಂಡಿರುವ ಕರಾವಳಿ ಜಿಲ್ಲೆಯ ಶಾಸಕರನ್ನು ಕಾಂಗ್ರೆಸ್‌ ಸರ್ಕಾರ ಗಡಿಪಾರು ಮಾಡಬಹುದು ಎಂದವರು ಆತಂಕ ವ್ಯಕ್ತಪಡಿಸಿದರು.

click me!