ಗೆಲುವಿಗಾಗಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೆಯೇ ಹೊರತು ರಾಜ್ಯದ ಹಿತಕ್ಕೆ ಕಾಂಗ್ರೆಸ್ ನಿಂತಿಲ್ಲ. ಗ್ಯಾರಂಟಿಗಳಿಂದ ರಾಜ್ಯ ಉಳಿಯುವ ಗ್ಯಾರಂಟಿ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ ಆರೋಪಿಸಿದರು.
ಕುಕನೂರು (ಜು.23): ಗೆಲುವಿಗಾಗಿ ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದೆಯೇ ಹೊರತು ರಾಜ್ಯದ ಹಿತಕ್ಕೆ ಕಾಂಗ್ರೆಸ್ ನಿಂತಿಲ್ಲ. ಗ್ಯಾರಂಟಿಗಳಿಂದ ರಾಜ್ಯ ಉಳಿಯುವ ಗ್ಯಾರಂಟಿ ಇಲ್ಲ ಎಂದು ಸಚಿವ ಹಾಲಪ್ಪ ಆಚಾರ ಆರೋಪಿಸಿದರು. ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಯಲಬುರ್ಗಾ ಬಿಜೆಪಿ ಮಂಡಲದಿಂದ ಹಮ್ಮಿಕೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 9 ವರ್ಷದ ಸಾಧನೆ ಕುರಿತು ಕರಪತ್ರ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಆರೋಗ್ಯ, ಶಿಕ್ಷಣ, ನೀರಾವರಿ, ರೈತಪರ ಕೆಲಸಗಳಿಗೆ ರಾಜ್ಯ ಸರ್ಕಾರ ಯಾವುದೇ ಗ್ಯಾರಂಟಿ ನೀಡಲಿಲ್ಲ.
ಇದುವರೆಗೂ ಕೇಂದ್ರ ಸರ್ಕಾರ ನೀಡುವ ಐದು ಕೆಜಿ ಅಕ್ಕಿಯನ್ನೇ ಇವರು ನೀಡುತ್ತಿದ್ದಾರೆ. 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಜನರಿಗೆ ಮೋಸ ಮಾಡಿದರು. ಉಚಿತ ಮಹಿಳಾ ಬಸ್ ಪ್ರಯಾಣದಿಂದ ವಿದ್ಯಾರ್ಥಿಗಳಿಗೆ, ಜನರಿಗೆ ತೊಂದರೆ ಆಗುತ್ತಿದೆ. ಆ ತೊಂದರೆ ನಿವಾರಿಸಲು ಪರ್ಯಾಯ ಯೋಜನೆ ಏನು ಮಾಡಿಲ್ಲ ಎಂದರು. ಬೆಂಗಳೂರಲ್ಲಿ ಉಗ್ರರು ಕಾಣುತ್ತಿದ್ದಾರೆ. ಅದರ ಬಗ್ಗೆ ಯಾವುದೇ ರೀತಿಯ ಎಚ್ಚರಿಕೆ ಕ್ರಮವನ್ನು ಕಾಂಗ್ರೆಸ್ ತೆಗೆದುಕೊಳ್ಳದೇ ಬೇಜವಾಬ್ದಾರಿ ಮೆರೆಯುತ್ತಿದೆ. ಗೃಹ ಸಚಿವ ಪರಮೇಶ್ವರರು ತನಿಖೆ ಮಾಡ್ತೀವಿ ಅಂತ ಜಾರಿಕೊಳ್ತಿದ್ದಾರೆ. ಈ ಹಿಂದೆ ಸಹ ರಾಷ್ಟ್ರ ಕಾಂಗ್ರೆಸ್ ಆಡಳಿತದಲ್ಲಿ ಉಗ್ರರ ತಾಣವಾಗಿತ್ತು.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ: ಜಗದೀಶ್ ಶೆಟ್ಟರ್
ನರೇಂದ್ರ ಮೋದಿ ಪ್ರಧಾನಿ ಆದ ನಂತರ ಭಯೋತ್ಪಾದಕತೆ ರಾಷ್ಟ್ರದಲ್ಲಿ ನಶಿಸಿತು. ಆದರೀಗ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಉಗ್ರರ ಜಾಡು ಕಾಣುತ್ತಿದೆ ಎಂದು ದೂರಿದರು. ಶಾಸಕ ಬಸವರಾಜ ರಾಯರಡ್ಡಿ ಈ ಹಿಂದೆ ನಾನು ಬೇವೂರಿನಲ್ಲಿ ಕೃಷ್ಣ ಬೀ ಸ್ಕೀಂಗೆ ಅಡಿಗಲ್ಲು ಹಾಕಿದ್ದನ್ನು ಅಡ್ಡಗಲ್ಲು ಎಂದು ಜರಿದು, ಸತ್ಯ ಹರಿಶ್ಚಂದ್ರ ಬಂದ್ರೂ ನೀರು ಬರುವುದಿಲ್ಲ ಎಂದಿದ್ದರು. ಅವರ ಮುಖಕ್ಕೆ ಹೊಡೆದಂಗೆ ಯಲಬುರ್ಗಾ ಕ್ಷೇತ್ರಕ್ಕೆ ಕೃಷ್ಣೆ ನೀರು ತಂದಿದ್ದೇನೆ. ರಾಯರಡ್ಡಿ ಅವರಿಗೆ ಸದ್ಯ ರೈತರ ಬಗ್ಗೆ ಕಾಳಜಿ ಕಂಡಿದೆ. ಕ್ಷೇತ್ರದಲ್ಲಿ 38 ನೂತನ ಕೆರೆಗಳನ್ನು 2000 ಎಕರೆಯಲ್ಲಿ .2500 ಕೋಟಿ ತಂದು ನಿರ್ಮಿಸುತ್ತೇನೆ ಎಂದಿದ್ದಾರೆ.
ಅದಕ್ಕೂ ಮೊದಲು ಹಿಂದೆ ತಮ್ಮ ಸರ್ಕಾರದಲ್ಲಿ ಘೋಷಣೆ ಆಗಿದ್ದ ತುಂಗಾಭದ್ರಾ ನದಿಯಿಂದ ನೀರು ತಂದು 12 ಕೆರೆ ತುಂಬಿಸುವ ಕೆಲಸ ಮೊದಲು ಮಾಡಿ ಎಂದು ತಾಕೀತು ಮಾಡಿದರು. ಕುಕನೂರು ತಾಲೂಕು ಕ್ರೀಡಾಂಗಣ, ಮಿನಿವಿಧಾನಸೌಧ ನಿರ್ಮಾಣಕ್ಕೆ ಬಿಜೆಪಿ ಸರ್ಕಾರ ಹಣ ನೀಡಿತ್ತು. ಆ ಕೆಲಸಗಳನ್ನು ಶಾಸಕ ರಾಯರಡ್ಡಿ ಮಾಡಬೇಕು. ಕ್ಷೇತ್ರದ ಅಭಿವೃದ್ಧಿ ಕುಂಠಿತವಾದರೆ, ನಾವು ನೋಡುತ್ತಾ ಸುಮ್ಮನೆ ಕೂಡಲು ದೃತರಾಷ್ಟ್ರರಲ್ಲ. ಹಳೆ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಬೇಕು ಎಂದರು. ಗದಗ-ವಾಡಿ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿದ್ದರಿಂದ ಕೆಲಸ ವೇಗ ಪಡೆಯಿತು. ರಾಜೂರು, ಸಂಗನಹಾಳ ಬೈಪಾಸ್ ಪೂರ್ಣ ಆಗಿದ್ದು, ಕುಕನೂರು, ಯಲಬುರ್ಗಾ ಬೈಪಾಸ್ ಸರ್ವೇ ಕಾರ್ಯ ಆರಂಭವಾಗಿವೆ ಎಂದರು.
ಶೀಘ್ರದಲ್ಲಿ ಚಿತ್ರದುರ್ಗ ಮೆಡಿಕಲ್ ಕಾಲೇಜು ಶುರು: ಸಚಿವ ಡಿ.ಸುಧಾಕರ್
ಬಿಜೆಪಿ ವಕ್ತಾರ ವೀರಣ್ಣ ಹುಬ್ಬಳ್ಳಿ ಮಾತನಾಡಿದರು. ಈ ವೇಳೆ ಬಿಜೆಪಿ ಬೆಂಬಲಿತ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಪ್ರಮುಖರಾದ ರತನ್ ದೇಸಾಯಿ, ಸಿ.ಎಚ್. ಪೊಪಾ, ಬಸಲಿಂಗಪ್ಪ ಭೂತೆ, ಅರವಿಂದಗೌಡ, ಅಯ್ಯನಗೌಡ, ಶರಣಪ್ಪ ಬಣ್ಣದಬಾವಿ, ಜಗನ್ನಾಥಗೌಡ್ರು, ಬಸನವನಗೌಡ ತೊಂಡಿಹಾಳ, ಶಿವಪ್ಪ ವಾದಿ, ಹಂಚ್ಯಾಳಪ್ಪ ತಳವಾರ, ದ್ಯಾಮಣ್ಣ ಜಮಖಂಡಿ, ಫಕೀರಪ್ಪ ತಳವಾರ, ಮಾರುತಿ ಗಾವರಾಳ, ಸುಧಾಕರ ದೇಸಾಯಿ, ವೆಂಕಟೇಶ ನಾಯಕ, ಶಿವಕುಮಾರ ನಾಗಲಾಪುರಮಠ, ಕರಬಸಯ್ಯ ಬಿನ್ನಾಳ ಇತರರಿದ್ದರು.