ಗೃಹಜ್ಯೋತಿ, ಗೃಹಲಕ್ಷ್ಮಿಯಿಂದ ಬಡವರಿಗೆ ಸಹಾಯ: ಸಚಿವ ನಾಗೇಂದ್ರ

By Kannadaprabha NewsFirst Published Jul 23, 2023, 6:30 PM IST
Highlights

ರಾಜ್ಯ ಸರ್ಕಾರದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟುಸಹಾಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು.

ಬಳ್ಳಾರಿ (ಜು.23): ರಾಜ್ಯ ಸರ್ಕಾರದ ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಯಿಂದ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಾಕಷ್ಟುಸಹಾಯವಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಹೇಳಿದರು. ದಿನದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಬಡ ಕುಟುಂಬಗಳು ಜೀವನ ನಿರ್ವಹಣೆ ಕಷ್ಟಸಾಧ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಕಾಂಗ್ರೆಸ್‌ ಸರ್ಕಾರ ಜನಹಿತ ಕಾಯಬೇಕು ಎಂಬ ಆಶಯದಿಂದ ಐದು ಗ್ಯಾರಂಟಿಗಳನ್ನು ಘೋಷಿಸಿ, ಅನುಷ್ಠಾನಕ್ಕೆ ಮುಂದಾಗಿದೆ. ಜನಪರ ಸರ್ಕಾರದಲ್ಲಿ ನಾನು ಸಹ ಭಾಗಿಯಾಗಿದ್ದೇನೆ ಎಂಬ ಸಂತಸವಿದೆ ಎಂದರು.

ಗೃಹಲಕ್ಷ್ಮಿ ಯೋಜನೆಯ ನೋಂದಣಿ ಕಾರ್ಯ ಜಿಲ್ಲೆಯಲ್ಲಿ ಶುರುಗೊಂಡಿದೆ. ನೋಂದಣಿಗೆ ದಿನಾಂಕ ಹಾಗೂ ಸಮಯ ನಿಗದಿ ಮಾಡಿಲ್ಲ. ಹೀಗಾಗಿ ಅರ್ಹ ಫಲಾನುಭವಿಗಳು ಯಾವುದೇ ಆತಂಕವಿಲ್ಲದೆ ತಮಗೆ ನಿಗದಿಯಾದ ಸೇವಾಕೇಂದ್ರಕ್ಕೆ ತೆರಳಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿಗೆ ಯಾವುದೇ ಶುಲ್ಕ ಇರುವುದಿಲ್ಲ. ಮಧ್ಯವರ್ತಿಗಳಿಗೆ ಯಾರೂ ಹಣ ನೀಡಬಾರದು. ಒಂದು ವೇಳೆ ಸೇವಾ ಕೇಂದ್ರಗಳು ಹಣ ಪಡೆದರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ದೂರು ನೀಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾಂಗ್ರೆಸ್ಸಿಂದ ರಾಜ್ಯ ಉಳಿಯುವ ಗ್ಯಾರಂಟಿಯಿಲ್ಲ: ಮಾಜಿ ಸಚಿವ ಹಾಲಪ್ಪ ಆಚಾರ್

ಜನಾರ್ದನ ರೆಡ್ಡಿ ಹೇಳಿಕೆ ಸರಿಯಲ್ಲ: ಬಳ್ಳಾರಿಯಲ್ಲಿ ಈಚೆಗೆ ಜರುಗಿದ ರಿಯಲ್‌ ಎಸ್ಟೇಟ್‌ ಉದ್ಯಮಿಯ ಹತ್ಯೆ ಪ್ರಕರಣದಲ್ಲಿ ರಾಜಕೀಯ ಎಳೆ ತರುವುದು ಸರಿಯಲ್ಲ. ಶಾಸಕ ಜನಾರ್ದನ ರೆಡ್ಡಿ ಅವರು ತಮ್ಮ ಪಕ್ಷದ ಕಾರ್ಯಕರ್ತನನ್ನು ಕಾಂಗ್ರೆಸ್‌ನ ಕಾರ್ಯಕರ್ತರು ಕೊಲೆ ಮಾಡಿದ್ದಾರೆ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಜನಾರ್ದನ ರೆಡ್ಡಿ ಸದನದಲ್ಲಿ ಹೇಳುವಾಗ ನಾನು ಇರಲಿಲ್ಲ. ವಿಧಾನ ಪರಿಷತ್‌ನಲ್ಲಿದ್ದೆ. ಒಂದು ವೇಳೆ ನಾನಿರುವಾಗ ಹೇಳಿದ್ದರೆ ಅಲ್ಲಿಯೇ ಉತ್ತರ ನೀಡುತ್ತಿದೆ ಎಂದರು.

ಜಿಲ್ಲಾಧಿಕಾರಿ ನೇಮಕ ಸರ್ಕಾರಕ್ಕೆ ಬಿಟ್ಟ ವಿಚಾರ: ಸಂಡೂರು ಶಾಸಕ ತುಕಾರಾಂ ಅವರಿಗೂ ನನಗೂ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ವಿಷಯ ನಾವಿಬ್ಬರೂ ಚರ್ಚಿಸಿಯೇ ಇಲ್ಲ. ಬಳ್ಳಾರಿ ಜಿಲ್ಲೆಯಲ್ಲಿ ಕೈಗೊಳ್ಳುವ ಕಾಮಗಾರಿಗೆ ಹಣದ ಕೊರತೆ ಇಲ್ಲ. ವಿಮಾನ ನಿಲ್ದಾಣ ಕಾಮಗಾರಿಯನ್ನು ನಮ್ಮ ಅವಧಿಯಲ್ಲಿಯೇ ಪೂರ್ಣಗೊಳಿಸುತ್ತೇವೆ. ಡೊಮೆಸ್ಟಿಕ್‌ ಬದಲಾಗಿ ಕಾರ್ಗೋ ಏರ್‌ಕ್ರಾಫ್ಟ್ (ಸರಕು ಸಾಗಣೆ) ವಿಮಾನವಾಗಿ ಬದಲಾಯಿಸುವ ಚಿಂತನೆ ಇದೆ. ಇದರಿಂದ ದೇಶ-ವಿದೇಶಗಳಿಗೆ ಜಿಲ್ಲೆಯ ಉತ್ಪನ್ನಗಳನ್ನು ರಫ್ತು ಮಾಡಲು ಸಾಧ್ಯವಾಗಲಿದೆ. ಈ ಹಿಂದಿನ ಸರ್ಕಾರದಲ್ಲಿ ಶುರುವಾದ ಯೋಜನೆಗಳನ್ನು ಸಹ ಪೂರ್ಣಗೊಳಿಸಲಾಗುವುದು. 

ಬಳ್ಳಾರಿ ನಗರಕ್ಕೆ 24 ತಾಸುಗಳ ಕಾಲ ಕುಡಿಯುವ ನೀರು ಪೂರೈಕೆಯ ಯೋಜನೆ ವಿಫಲವಾಗಿದೆ. ಗುತ್ತಿಗೆದಾರರನ್ನು ಬ್ಲಾಕ್‌ ಲಿಸ್ಟ್‌ಗೆ ಇಡಲಾಗಿದೆ. ಪೂರಕವಾದ ಮತ್ತೊಂದು ಯೋಜನೆ ಜಾರಿಗೊಳಿಸುವ ಯೋಚನೆ ಇದೆ ಎಂದು ತಿಳಿಸಿದರು. ರೂಪನಗುಡಿ ಗ್ರಾಮಕ್ಕೆ ಬಸ್‌ ಸೌಕರ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿರುವುದು ಗಮನಕ್ಕೆ ಬಂದಿದೆ. ರೂಪನಗುಡಿ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲೆಲ್ಲಿ ಬಸ್‌ಗಳ ಸಮಸ್ಯೆ ಇದೆ ಎಂಬುದನ್ನು ತಿಳಿದು ಮುಂದಿನ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸುವೆ ಎಂದು ಸಚಿವ ನಾಗೇಂದ್ರ ತಿಳಿಸಿದರು.

ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಲಿ: ಜಗದೀಶ್‌ ಶೆಟ್ಟರ್‌

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಕೆ.ಎಚ್‌. ವಿಜಯಕುಮಾರ್‌, ಬಳ್ಳಾರಿ ನಗರ ಸಿಡಿಪಿಒ ಪಿ. ನಾಗರಾಜ್‌ ಮತ್ತಿತರರಿದ್ದರು. ಬಳಿಕ ಇಲಾಖೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಚಿವ ಬಿ. ನಾಗೇಂದ್ರ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು. ಮೇಯರ್‌ ಡಿ. ತ್ರಿವೇಣಿ, ಹಿರಿಯ ಕಾಂಗ್ರೆಸ್‌ ಮುಖಂಡ ಎಲ್‌. ಮಾರೆಣ್ಣ ಭಾಗವಹಿಸಿದ್ದರು.

click me!