ಬಿಜೆಪಿ ಆಡಳಿತದ ವಿಫಲತೆಗಳನ್ನು ದೇಶಕ್ಕೆ ಪರಿಚಯಿಸುವ ಕಾರ್ಯ ಭಾರತ್ ಜೋಡೊ ಯಾತ್ರೆಯ ಮೂಲಕ ಆಗಿದೆ. ಮುಂದೆ ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಶಿವಮೊಗ್ಗ (ಸೆ.08): ಬಿಜೆಪಿ ಆಡಳಿತದ ವಿಫಲತೆಗಳನ್ನು ದೇಶಕ್ಕೆ ಪರಿಚಯಿಸುವ ಕಾರ್ಯ ಭಾರತ್ ಜೋಡೊ ಯಾತ್ರೆಯ ಮೂಲಕ ಆಗಿದೆ. ಮುಂದೆ ದೇಶ ಉಳಿಯಬೇಕಾದರೆ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಬೇಕಿದೆ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಗೆ 1 ವರ್ಷ ಪೂರ್ಣಗೊಂಡ ಹಿನ್ನೆಲೆ ಗುರುವಾರ ಟಿ.ಸೀನಪ್ಪ ಶೆಟ್ಟಿ (ಗೋಪಿ ವೃತ್ತ) ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾರತ್ ಜೋಡೋ ಯಾತ್ರೆ ಆಚರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಧರ್ಮದ ಹೆಸರಿನಲ್ಲಿ ಬಿಜೆಪಿ ದೇಶವನ್ನೇ ಹೊಡೆಯುವ ಕೆಲಸ ಮಾಡುತ್ತಿದೆ. ದೇಶದ ಅಳಿವು, ಉಳಿವು ಈ ನಮ್ಮ ಕೈಯಲ್ಲಿದೆ. ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸದೇ ಹೋದರೆ, ಈಗಿರುವ ಒಂದು ದೇಶವನ್ನು 50 ದೇಶಗಳಾಗಿ ವಿಂಗಡಿಸುತ್ತಾರೆ. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹರಿಹಾಯ್ದರು. ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾರತ್ ಜೊಡೋ ಯಾತ್ರೆ ಆರಂಭಿಸಿದ್ದಾಗ ಬಿಜೆಪಿ ಅವರು ಟೀಕೆ ಮಾಡಿದ್ದರು. ಇದು ಮೂರು ದಿನದ ಸಂತೆ, ರಾಹುಲ್ ಗಾಂಧಿಗೆಲ್ಲಿ ನಡೆಯಲು ಸಾಧ್ಯ ಎಂದು ಗೇಲಿ ಮಾಡಿದ್ದರು.
ಇಂಡಿಯಾ ಬದಲು ಭಾರತ ಹೆಸರಿನಲ್ಲೂ ಕಾಂಗ್ರೆಸ್ ರಾಜಕೀಯ: ಸಂಸದ ರಾಘವೇಂದ್ರ
ಆದರೆ, ರಾಹುಲ್ ಗಾಂಧಿ ಅವರು ಎಲ್ಲ ಟೀಕೆಗಳನ್ನು ಬದಿಗೊತ್ತಿ, ದೇಶದ ಉದ್ದಗಲಕ್ಕೂ ಸಂಚರಿಸಿ, ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಆದರೆ, ಬಿಜೆಪಿಯರಿಗೆ ಜನರ ಸಮಸ್ಯೆಗಳಿಂತ ಕಾಂಗ್ರೆಸ್ ಟೀಕೆ ಮಾಡುವುದೇ ಅಭಿವೃದ್ಧಿಯಾಗಿದೆ ಎಂದು ಹರಿಹಾಯ್ದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ರಾಜ್ಯದ ಜನ ಕಾಂಗ್ರೆಸ್ ದೊಡ್ಡ ಪ್ರಮಾಣದಲ್ಲಿ ಬಹುಮತ ಕೊಟ್ಟಿದ್ದರಿಂದ ಜನಪರವಾದ ರಾಜಕಾರಣ ಮಾಡಿಕೊಂಡು ಬರಲು ಸಾಧ್ಯವಾಗಿದೆ. ಕಾಂಗ್ರೆಸ್ ಸರ್ಕಾರ ಗ್ಯಾರೆಂಟಿ ಯೋಜನೆ ಜಾರಿಯಿಂದ ಜನರು ನೆಮ್ಮದ್ಯ ಬದುಕ ಕಾಣುತ್ತಿದ್ದಾರೆ. ಇದು ಆರಂಭವಷ್ಟೆ, ಸದಾ ಜನಪರ ಆಡಳಿತ ನೀಡಲು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬದ್ಧ ಎಂದು ಹೇಳಿದರು.
'ಸ್ವಾತಂತ್ರ್ಯ ಹೋರಾಟಗಾರರು ಭಾರತ ಮಾತೆಗೆ ಜೈ ಎಂದರೇ ಹೊರತು ಇಂಡಿಯಾ ಮಾತೆಗೆ ಜೈ ಎನ್ನಲಿಲ್ಲ': ಡಾ.ಕೆ.ಸುಧಾಕರ್
ಇದಕ್ಕೂ ಮುನ್ನ ಬಿ.ಎಚ್.ರಸ್ತೆಯ ಶಿವಪ್ಪನಾಯಕ ವೃತ್ತದಿಂದ ಭಾರತ್ ಜೋಡೊ ಯಾತ್ರೆಯ ಮೊದಲ ವಾರ್ಷಿಕೋತ್ಸವದ ನೆನಪಿಗಾಗಿ ಎಐಸಿಸಿ ಮತ್ತು ಕೆಪಿಸಿಸಿ ನಿರ್ದೇಶನದಂತೆ ಟಿ.ಸೀನಪ್ಪ ಶೆಟ್ಟಿ( ಗೋಪಿವೃತ್ತ) ವೃತ್ತದವರೆಗೆ ಕಾಂಗ್ರೆಸ್ ಮುಖಂಡರು ಪಾದಯಾತ್ರೆ ನಡೆಸಿದರು. ಮುಖಂಡರಾದ ಆರ್.ಎಂ.ಮಂಜುನಾಥ್‌ಗೌಡ, ಎನ್.ರಮೇಶ್, ಮುಖಂಡರಾದ ಕಲಗೋಡು ರತ್ನಾಕರ್, ಎಸ್.ಕೆ.ಮರಿಯಪ್ಪ, ಜಿ.ಪಲ್ಲವಿ, ಕೆ. ದೇವೆಂದ್ರಪ್ಪ, ಸಿ.ಎಸ್.ಚಂದ್ರಭೂಪಾಲ್, ವಿಶ್ವನಾಥ್ ಕಾಶಿ, ಎಸ್.ಪಿ.ಶೇಷಾದ್ರಿ, ಸುವರ್ಣ ನಾಗರಾಜ್, ಸೌಗಂಧಿಕ ರಘುನಾಥ್ ಜಾಥಾದಲ್ಲಿ ಪಾಲ್ಗೊಂಡಿದ್ದರು.