ಕಳೆದ ಚುನಾವಣೆಯಲ್ಲಿ ಹಣದ ಬಲದಿಂದಲೇ ಗೆದ್ದಿರುವ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ನಾನು ಏನೂ ಮಾಡಿದರೂ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಅಹಂಕಾರದಲ್ಲಿದ್ದಾರೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಆರೋಪಿಸಿದರು.
ತೀರ್ಥಹಳ್ಳಿ (ಅ.21): ಕಳೆದ ಚುನಾವಣೆಯಲ್ಲಿ ಹಣದ ಬಲದಿಂದಲೇ ಗೆದ್ದಿರುವ ಶಾಸಕ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಲ್ಲಿ ದ್ವೇಷದ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ನಾನು ಏನೂ ಮಾಡಿದರೂ ಚುನಾವಣೆಯಲ್ಲಿ ಗೆಲ್ಲುತ್ತೇನೆ ಎಂಬ ಅಹಂಕಾರದಲ್ಲಿದ್ದಾರೆ ಎಂದು ಮಾಜಿ ಶಾಸಕ ಕಿಮ್ಮನೆ ರತ್ನಾಕರ್ ಆರೋಪಿಸಿದರು. ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಚುನಾವಣೆ ಗೆಲುವಿನಲ್ಲಿ ಹಲವು ವಿಚಾರಗಳು ನಿರ್ಣಾಯಕವಾಗಿರುತ್ತವೆ. ಹಾಗಂತ ಸೋತವರು ಕೆಟ್ಟವರು ಎಂಬ ಅರ್ಥವಲ್ಲ. ಕಾಂಗ್ರೆಸ್‍ನವರು ಭ್ರಷ್ಟಾಚಾರಿಗರು ಎಂದು ಗುಲ್ಲೆಬ್ಬಿಸುವ ಜ್ಞಾನೇಂದ್ರ ಅವರು, ವ್ಯಾಪಾರ ಮಾಡಿದ ಹಣದಲ್ಲಿ 10 ಚುನಾವಣೆ ಮಾಡಿದ್ದಾರೆಯೇ?
ಕಳೆದ ಚುನಾವಣೆಯಲ್ಲಿ ಒಬ್ಬ ಗ್ರಾಮ ಪಂಚಾಯಿತಿ ಸದಸ್ಯರಿಗೆ ₹2 ಲಕ್ಷ ಆಮಿಷ ಒಡ್ಡಿದ್ದರು. ಮುಖ್ಯವಾಗಿ ₹5 ಸಾವಿರ ಕೋಟಿ ಇದ್ದ ಬಿಜೆಪಿ ಪಕ್ಷದ ಪಾರ್ಟಿ ಫಂಡ್ ಕೇವಲ ಐದು ವರ್ಷದಲ್ಲಿ ₹10 ಸಾವಿರ ಕೋಟಿ ಹೇಗಾಯ್ತು ಎಂಬುದನ್ನೂ ಅರಿಯಬೇಕಿದೆ ಎಂದರು. ಬಿ.ಎಸ್. ವಿಶ್ವನಾಥನ್ ಸಂತಾಪ ಸೂಚಕ ಸಭೆಯಲ್ಲೂ ಶಾಸಕರು ದ್ವೇಷವನ್ನು ಬಿಡದೇ ಆರ್.ಎಂ. ಮಂಜುನಾಥಗೌಡ ಮತ್ತು ಎಚ್.ಎನ್. ವಿಜಯದೇವ್ ಅವರನ್ನು ಟೀಕೆ ಮಾಡಿದ್ದರು. ಗೃಹ ಸಚಿವರಾಗಿ ಎಲೆಚುಕ್ಕಿ ರೋಗದ ಪರಿಹಾರದ ಸಲುವಾಗಿ ಘೋಷಣೆ ಮಾಡಿದ್ದ ₹10 ಕೋಟಿಗಳಲ್ಲಿ ಒಂದು ರು. ಕೂಡ ಬಂದಿಲ್ಲ. ಸಾಗರ ಶಾಸಕರು ಮತ್ತು ನಮ್ಮ ಪ್ರಯತ್ನದಿಂದ ₹19 ಲಕ್ಷ ಪರಿಹಾರದ ಹಣ ಬಂದಿದೆ ಎಂದು ಹೇಳಿದರು.
ಶಿವಮೊಗ್ಗಕ್ಕೆ ಬರುತ್ತಿದ್ದ ಹಿಂದೂ ನಾಯಕರನ್ನು ತಡೆದಿದ್ದು ನೀಚ ಕೃತ್ಯ: ಶಾಸಕ ಚನ್ನಬಸಪ್ಪ
ಹೆದ್ದೂರಿನ ಕಾಂತರಾಜ್ ಎಂಬವರು ತಮ್ಮ ತಾಯಿ ಸವಿತಮ್ಮ ಅವರ ಹೃದಯ ಚಿಕಿತ್ಸೆಗೆ ಸಂಬಂಧಿಸಿ ₹6 ಲಕ್ಷ ವೆಚ್ಚದ ಬಗ್ಗೆ ಸಿಎಂ ಪರಿಹಾರ ಕೊಡಿಸುವಂತೆ ಕಳೆದ ವರ್ಷ ಜುಲೈ ತಿಂಗಳಲ್ಲಿ ನೀಡಿದ ₹4.61 ಸಾವಿರದ ಬಿಲ್ ಮತ್ತು ಅರ್ಜಿಯನ್ನು ತಮ್ಮ ಪಕ್ಷದವರು ಅಲ್ಲ ಎಂಬ ಕಾರಣಕ್ಕೆ ಸಿಎಂ ಕಚೇರಿಗೂ ಕಳಿಸದೇ ಪರಿಹಾರ ಸಿಗುವುದನ್ನು ತಪ್ಪಿಸಿದ್ದಾರೆ. ಇದು ಜ್ಞಾನೇಂದ್ರ ಅವರ ದ್ವೇಷದ ರಾಜಕಾರಣಕ್ಕೆ ಮಾದರಿ. ಇನ್ನಾದರೂ ದ್ವೇಷದ ರಾಜಕಾರಣವನ್ನು ಬಿಡಬೇಕು ಎಂದು ಸಲಹೆ ನೀಡಿದರು. ಸುದ್ದಿಗೋಷ್ಠಿಯಲ್ಲಿ ಕೆಸ್ತೂರು ಮಂಜುನಾಥ್, ಪಪಂ ಅಧ್ಯಕ್ಷೆ ಗೀತಾ ರಮೇಶ್, ಉಪಾಧ್ಯಕ್ಷ ರಹಮತ್ ಉಲ್ಲಾ ಅಸಾದಿ. ಡಿ.ಎಸ್. ವಿಶ್ವನಾಥ ಶೆಟ್ಟಿ, ಅಮರನಾಥ ಶೆಟ್ಟಿ, ವಿಲಿಯಂ ಮಾರ್ಟಿಸ್, ಪಡುವಳ್ಳಿ ಹಷೇಂದ್ರ ಇದ್ದರು.
ಇ.ಡಿ ದಾಳಿ ರಾಜಕೀಯ ತಂತ್ರಗಾರಿಕೆ: ಲೋಕಸಭಾ ಚುನಾವಣೆಯಲ್ಲಿ ವಿರೋಧಿಗಳನ್ನು ಹತ್ತಿಕ್ಕಬೇಕು ಎಂಬ ತಂತ್ರಗಾರಿಕೆಯಿಂದ ಚುನಾವಣಾ ಸಮೀಪದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರ ಮನೆಗಳ ಮೇಲೆ ಇ.ಡಿ ದಾಳಿ ನಡೆದಿದೆ ಎಂದು ಕಾಂಗ್ರೆಸ್ ವಕ್ತಾರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಕಿಡಿಕಾರಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೌಡರ ಮನೆ ಮೇಲೆ ನಡೆದಿರುವ ದಾಳಿ ಬಿಜೆಪಿಯವರ ಹಿಡನ್ ಅಜೆಂಡಾದ ಮುಂದುವರಿದ ಭಾಗವಾಗಿದೆ. ಇದರಿಂದ ಚುನಾವಣೆಯಲ್ಲಿ ಲಾಭ ಗಳಿಸಬಹುದು ಎಂಬ ಬಿಜೆಪಿಯವರ ಭ್ರಮೆ. ಪಾರ್ಲಿಮೆಂಟ್ ಚುನಾವಣೆ ಹತ್ತಿರ ಆಗುತ್ತಿರುವ ಹಿನ್ನೆಲೆ ಇ.ಡಿ ದಾಳಿಯ ತೀವ್ರತೆ ಇನ್ನೂ ಹೆಚ್ಚುವ ಸಾಧ್ಯತೆಯೂ ಇದೆ ಎಂದು ಹರಿಹಾಯ್ದರು.
ಸಿಎಂ, ಡಿಕೆಶಿಯಿಂದ ರಾಜ್ಯದ ಹಣ ಲೂಟಿ: ಕೆ.ಎಸ್.ಈಶ್ವರಪ್ಪ ಆರೋಪ
ಬಿಜೆಪಿ ಆಡಳಿತದಲ್ಲಿ ಕೋಮುಭಾವನೆ ಕೆರಳಿಸುವ ಮತ್ತು ಇ.ಡಿ ಇಲಾಖೆಯನ್ನು ಬಳಸಿ, ವಿರೋಧಿಗಳಿಗೆ ಕಿರುಕುಳ ಕೊಡುವುದೇ ಬಿಜೆಪಿ ಜನಪರ ಕಾರ್ಯಕ್ರಮ ಎಂದು ಭಾವಿಸಿದೆ ಎಂದು ಟೀಕಿಸಿದರು. ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಜೆಡಿಎಸ್ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ಜೆಡಿಎಸ್ ಪ್ರಬಲವಾಗಿದ್ದ ಕ್ಷೇತ್ರದಲ್ಲಿ ಬಿಜೆಪಿ ಅಸ್ತಿತ್ವವೇ ಇರಲಿಲ್ಲ. ಈ ಮೊದಲು ಕೂಡ ಆ ಪಕ್ಷ ಬಿಜೆಪಿ ಜೊತೆ ಹೊಂದಾಣಿಕೆಯಲ್ಲಿತ್ತು. ಕಾಂಗ್ರೆಸ್ಸಿಗೆ ಈ ಬಗ್ಗೆ ಭಯ ಇಲ್ಲ. ಚುನಾವಣೆಯಲ್ಲಿ ಸೋಲುವ ಭಯದಿಂದ ಬಿಜೆಪಿ- ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.