ಐಪಿಎಸ್ ಹುದ್ದೆಗೆ ರಾಜೀನಾಮೆ ನೀಡಿ ಹೋದ ಬಳಿಕ ಇದೇ ಮೊದಲ ಬಾರಿಗೆ ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಮೈಸೂರು ಭೇಟಿ ನೀಡಿದ್ದಾರೆ.
ಮೈಸೂರು, (ಡಿ.26): ಇಲ್ಲಿನ ಆರ್.ಎಸ್.ಎಸ್. ಕಚೇರಿಗೆ ನಿವೃತ್ತ ಐಪಿಎಸ್ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯ ಉಪಾಧ್ಯಕ್ಷ ಕೆ. ಅಣ್ಣಾಮಲೈ ಭೇಟಿ ನೀಡಿ ಬಿಜೆಪಿ ಮುಖಂಡರೊಂದಿಗೆ ಕೆಲಕಾಲ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು, ರಾಜಕೀಯ ತುಂಬಾ ಕಷ್ಟ ಎನ್ನುತ್ತಾ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಸದ್ಯ ತಮಿಳುನಾಡು ರಾಜ್ಯ ಬಿಜೆಪಿ ಉಪಾಧ್ಯಕ್ಷರಾಗಿರುವ ಅಣ್ಣಾಮಲೈ, ರಾಜಕೀಯ ತುಂಬಾ ಕಷ್ಟ. ಸಿಕ್ಕಾಪಟ್ಟೆ ಪ್ರವಾಸ ಮಾಡುತ್ತಿದ್ದೇನೆ. ತಮಿಳುನಾಡಿನಲ್ಲಿ ಮೊದಲಿನಿಂದಲೂ ದ್ರಾವಿಡ ರಾಜಕಾರಣ ಇದೆ. ಅದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ. ನಾಲ್ಕೈದು ದಶಕಗಳಿಂದ ವ್ಯಕ್ತಿಗತ ರಾಜಕಾರಣ ನಡೆದಿದೆ ಎಂದರು.
undefined
ಪಕ್ಷ ಸೇರಿದ ನಾಲ್ಕೇ ದಿನದಲ್ಲಿ ಅಣ್ಣಾಮಲೈಗೆ ಬಿಜೆಪಿಯಿಂದ ಭರ್ಜರಿ ಗಿಫ್ಟ್...!
ಎಂಜಿಆರ್, ಕರುಣಾನಿಧಿ, ಜಯಲಲಿತಾ ಹೀಗೆ ವ್ಯಕ್ತಿ ಆಧಾರಿತ ರಾಜಕಾರಣ ನಡೆದಿದೆ. ಈಗ ಅಂತಹ ಪರಿಸ್ಥಿತಿ ಇಲ್ಲ. ಅಂತಹ ನಾಯಕರೂ ಇಲ್ಲ. ರಜನಿಕಾಂತ್, ಕಮಲ್ಹಸನ್ ಮುಂತಾದ ಚಿತ್ರನಟರು ರಾಜಕೀಯ ಪ್ರವೇಶ ಮಾಡಿದ್ದಾರೆ. ಇದರಿಂದಾಗಿ ರಾಜಕೀಯದಲ್ಲಿ ಸ್ಪೇಸ್ ಕ್ರಿಯೇಟ್ ಆಗಿದೆ. ಇದನ್ನು ಬಳಸಿಕೊಂಡು ಬಿಜೆಪಿ ಬೆಳೆಯಲಿದೆ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ತಮಿಳುನಾಡಿನಲ್ಲಿ ಹಲವು ಹಿರಿಯ ನಾಯಕರಿದ್ದಾರೆ. ಕೇಂದ್ರ ಸಚಿವರಾಗಿ ಕೆಲಸ ಮಾಡಿದವರೂ ಇದ್ದಾರೆ. ನಾನು ಸಾಮಾನ್ಯ ಕಾರ್ಯಕರ್ತ ಮಾತ್ರ. ನಮ್ಮೆಲ್ಲರ ನಾಯಕ ಪ್ರಧಾನಿ ನರೇಂದ್ರ ಮೋದಿ. ತಮಿಳುನಾಡಿನಲ್ಲಿ ವ್ಯಕ್ತಿಗತ ರಾಜಕಾರಣ ಈಗ ನಡೆಯಲ್ಲ ಎಂದು ತಿಳಿಸಿದರು.