ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ಘೋಷಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು.
ಕನಕಗಿರಿ (ನ.09): ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡುವುದನ್ನು ಬಿಟ್ಟು ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ಘೋಷಿಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದರು. ಕನಕಗಿರಿ, ಗಂಗಾವತಿ ಕ್ಷೇತ್ರ ವ್ಯಾಪ್ತಿಯಲ್ಲಿ ಮಂಗಳವಾರ ಬರ ವೀಕ್ಷಿಸಿದ ಅವರು, ಮುಸಲಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲವೂ ಕೇಂದ್ರ ಸರ್ಕಾರವೇ ಮಾಡುವಂತಿದ್ದರೆ ರಾಜ್ಯ ಸರ್ಕಾರದ ಕಾರ್ಯವೇನು?
ಜನತೆ ಕೊಟ್ಟಿರುವ ಅಧಿಕಾರವನ್ನು ಕಾಂಗ್ರೆಸ್ ನಾಯಕರು ನಿರ್ವಹಿಸಬೇಕೇ ಹೊರತು ವಿಪಕ್ಷಗಳ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಬಾರದು ಎಂದರು. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಮನೆ ಯಜಮಾನನಿದ್ದಂತೆ. ಮನೆಯಲ್ಲಿ ಏನೇ ಸಮಸ್ಯೆ ಇದ್ದರೂ ಎಲ್ಲವನ್ನೂ ಸರಿಪಡಿಸಿಕೊಂಡು ಹೋಗಬೇಕು. ಅದು ಬಿಟ್ಟು ಇನ್ನೊಬ್ಬರ ಮೇಲೆ ಬೊಟ್ಟು ಮಾಡಿದರೆ ಫಲವಿಲ್ಲ. ನಿಮ್ಮ ಜವಾಬ್ದಾರಿ ಅರಿತು ಮಾತನಾಡಬೇಕು ಎಂದರು.
undefined
ಕುರ್ಚಿ ಉಳಿಸಿಕೊಳ್ಳಲು ಸಿದ್ದು, ಕಿತ್ತುಕೊಳ್ಳಲು ಡಿಕೆಶಿ ಸಭೆ ಮೇಲೆ ಸಭೆ: ಸಿ.ಟಿ.ರವಿ
ಕೇಂದ್ರ ಅನುದಾನ ನೀಡುತ್ತೆ: ಬರ ಪರಿಸ್ಥಿತಿ ಅವಲೋಕಿಸಿರುವ ರಾಜ್ಯ ಸರ್ಕಾರ ಇನ್ನೂ ಅನುದಾನ ಬಿಡುಗಡೆ ಮಾಡಿಲ್ಲ. ಹೀಗಿರುವಾಗ ಕೇಂದ್ರ ಸರ್ಕಾರ ಹೇಗೆ ಅನುದಾನ ಬಿಡುಗಡೆ ಮಾಡುತ್ತದೆ? ಮೊದಲು ರಾಜ್ಯ ಸರ್ಕಾರ ನೀಡಿರುವ ಅನುದಾನವನ್ನು ನೋಡಿಕೊಂಡು ಕೇಂದ್ರವೂ ಹಣ ನೀಡಲಿದೆ. ಇದರಲ್ಲಿ ರೈತರಿಗೆ ಅನುಮಾನ ಬೇಡ ಎಂದರು. ಬರ ವೀಕ್ಷಣೆಗೆ ರಾಜ್ಯದಲ್ಲಿ 17 ತಂಡಗಳು ಕೆಲಸ ಮಾಡುತ್ತಿವೆ. ಇದುವರೆಗೂ ಸಚಿವರು, ಅಧಿಕಾರಿಗಳ್ಯಾರೂ ಬರ ಪರಿಸ್ಥಿತಿ ಬಗ್ಗೆ ರೈತರ ಹೊಲ, ತೋಟಗಳಿಗೆ ಹೋಗಿ ಅವಲೋಕಿಸಿಲ್ಲ. ಎಲ್ಲ ರೈತರಿಗೆ ಅಕ್ರಮ-ಸಕ್ರಮದಡಿ ವಿದ್ಯುತ್ ಮೀಟರ್, ವೈರ್, ಕಂಬ ನೀಡುವಂತಾಗಬೇಕು ಎಂದು ಆಗ್ರಹಿಸಿದರು.
ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದ್ರಿ: ಮಳಿಯಿಲ್ದ ಬೊಗಸೆ ನೀರು ಸಿಗದಂಗಾಗೈತ್ರಿ. ಮನುಷ್ಯರಿಗೆ ಹಿಂಗಾದ್ರ ಬಾಯಿಲ್ದ ಪ್ರಾಣಿಗಳ ಪರಿಸ್ಥಿತಿ ಹೆಂಗ್ರಿ? ಮಳಿಗಾಲ ಇನ್ನೂ ಮುಗಿದಿಲ್ಲ. ಈಗ್ಲೇ ಕುಡಿಯೋ ನೀರಿನ ಸಮಸ್ಯೆ ಆಗೈತ್ರಿ. ನಮ್ಮ ಪರಿಸ್ಥಿತಿ ಯಾರಿಗೂ ಬರಬಾರದ್ರಿ. ನಮಗ ಪಾವು ಕಾಳು ಸಿಗೋದಿಲ್ರಿ. ತೆನೆಯಲ್ಲಿರೋ ಕಾಳೆಲ್ಲ ಜೊಳ್ಳಾಗೇವು ಎಂದು ರೈತ ಮಹಿಳೆಯರು ಸಪ್ಪೆ ಮೋರೆ ಹಾಕಿ ಅಳಲು ತೋಡಿಕೊಂಡರು. ಕಾಳಿಲ್ಲದ ಸಜ್ಜೆ ತೆನೆ, ಒಣಗಿದ ಬೆಳೆ ಕಂಡು ಬರ ವೀಕ್ಷಣಾ ತಂಡ ಮರುಗಿತು. ಹೀಗೆ ರೈತ ಮಹಿಳೆಯರಿಂದ ಬರದ ಕುರಿತು ಕೆ.ಎಸ್. ಈಶ್ವರಪ್ಪ ಮಾಹಿತಿ ಪಡೆದರು.
ಇದಕ್ಕೂ ಮೊದಲು ಮುಸಲಾಪುರ ಗ್ರಾಮದ ರೈತ ನಾಗರಾಜ ಅಂಬಾಡಿ ಹೊಲಕ್ಕೆ ತೆರಳಿದ ತಂಡ ಮೆಕ್ಕೆಜೋಳ ಬೆಳೆ ವೀಕ್ಷಿಸಿತು. ಮಳೆಯಾಗದೇ ಭೂಮಿಯ ಮೇಲೆ ತಾಪ ಹೆಚ್ಚಾಗಿ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ. ಈಗ ಮಳೆ ಬಂದರೂ ಯಾವ ರೈತನಿಗೂ ಉಪಯೋಗವಿಲ್ಲ. ಉತ್ತಮ ಮಳೆಯಾದರೆ ಕುಡಿಯಲು ನೀರು ಸಿಗಬಹುದು ಎಂದು ಸ್ಥಳದಲ್ಲಿದ್ದ ರೈತರು ವಾಸ್ತವವನ್ನು ಬರ ಅಧ್ಯಯನ ತಂಡದ ಎದುರು ತೆರೆದಿಟ್ಟರು.
ಈ ಸಂದರ್ಭದಲ್ಲಿ ಸಂಸದ ಸಂಗಣ್ಣ ಕರಡಿ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕರಾದ ಹಾಲಪ್ಪ ಆಚಾರ್, ಬಸವರಾಜ ದಡೇಸೂಗುರು, ಸೋಮಲಿಂಗಪ್ಪ, ಪರಣ್ಣ ಮುನವಳ್ಳಿ, ಪ್ರಮುಖರಾದ ಚನ್ನಪ್ಪ ಮಳಗಿ, ಮಹಾಂತೇಶ ಸಜ್ಜನ, ವಾಗೀಶ ಹಿರೇಮಠ, ಹರೀಶ ಪೂಜಾರ, ಗ್ಯಾನಪ್ಪ ಗಾಣದಾಳ, ಗಂಗಾಧರಯ್ಯಸ್ವಾಮಿ ಮುಸಲಾಪುರ ಸೇರಿದಂತೆ ರೈತರು ಇದ್ದರು.
ಕೇಂದ್ರದ ಕಡೆ ಕೈ ತೋರುವ ಬದಲು ತಮ್ಮ ಕೆಲಸ ಮಾಡಲಿ: ಸಿಎಂಗೆ ಎಚ್‌ಡಿಕೆ ತಿರುಗೇಟು
ಹಾರ-ತುರಾಯಿ ನಿರಾಕರಿಸಿದ ಈಶ್ವರಪ್ಪ: ಮುಸಲಾಪುರ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು ಬೃಹತ್ ಹೂವಿನ ಹಾರದೊಂದಿಗೆ ಸನ್ಮಾನಿಸಲು ಬಂದಾಗ ಈಶ್ವರಪ್ಪ ನಿರಾಕರಿಸಿ, ತಮ್ಮ ವಾಹನದಲ್ಲಿ ಬರ ವೀಕ್ಷಣೆಗೆ ಮುಂದಾದರು. ಹೀಗೆ ಒಂದೆರಡು ಕಿ.ಮೀ. ಅಂತರದಲ್ಲಿರುವ ಗಂಗನಾಳ ಗ್ರಾಮದ ಜಮೀನುವೊಂದಕ್ಕೆ ತೆರಳಲು ಕಾರಿನಿಂದ ಇಳಿದು ಮುಂದೆ ಸಾಗಿದರು. ಈ ವೇಳೆ ಮಾತನಾಡಿದ ಅವರು, ನಾನು ಬರ ವೀಕ್ಷಣೆಗೆ ಬಂದಿದ್ದೇನೆ. ಸನ್ಮಾನ ಮಾಡಿಸಿಕೊಳ್ಳುವುದಕ್ಕಲ್ಲ. ಕಾರ್ಯಕರ್ತರು ಬೇಸರ ಪಟ್ಟುಕೊಳ್ಳಬಾರದು ಎಂದು ಮನವಿ ಮಾಡಿದರು.