
ಶಿವಮೊಗ್ಗ (ಜ.03): ಅಯೋಧ್ಯೆಯ ಭವ್ಯ ರಾಮಮಂದಿರದಲ್ಲಿ ನಡೆಯಲಿರುವ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಪ್ರಭು ಶ್ರೀರಾಮಚಂದ್ರ ಭಕ್ತರು ಇದ್ದಾರೋ ಅವರಿಗೆ ಆಹ್ವಾನ ಕೊಟ್ಟಿದ್ದೇವೆ. ಬಿಜೆಪಿಯ ರಾಮ ಎನ್ನುವವರಿಗೆ ಕೇಂದ್ರದ ನಾಯಕರು ಆಹ್ವಾನ ಕೊಟ್ಟಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಕುಟುಕಿದರು. ಶಿವಮೊಗ್ಗದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮ ಮಂದಿರದಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆಹ್ವಾನಿಸಿಲ್ಲ.
ಕಾರಣ ರಾಮಮಂದಿರವನ್ನು ರಾಜಕಾರಣ ದೃಷ್ಟಿಯಿಂದ ನೋಡುವವರಿಗೆ, ರಾಮನನ್ನು ಬಿಜೆಪಿಯ ರಾಮ ಅಂತ ವರ್ಗೀಕರಿಸುವವರಿಗೆ ಕೇಂದ್ರದ ರಾಮಮಂದಿರ ಸಮಿತಿ ಆಮಂತ್ರಣ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 496 ವರ್ಷದ ಕೆಳಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಧ್ವಂಸ ಮಾಡಿದ್ದರು. ಬಾಬರ್ ಮಸೀದಿ ಕಟ್ಟಿದ್ದರು. ಈಗ ಗುಲಾಮಗಿರಿ ಮಸೀದಿ ಒಡೆದು ರಾಮಮಂದಿರ ಕಟ್ಟಿದ್ದೇವೆ. ನಮ್ಮೆಲ್ಲರ ಸೌಭಾಗ್ಯ, ನಾವು ಬದುಕಿರುವ ದಿನದಲ್ಲೇ ಬಾಲರಾಮನ ವಿಗ್ರಹ ಪ್ರತಿಷ್ಠಾಪನೆ ಆಗುತ್ತಿದೆ.
ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಫೈನಲ್ ಆಗಿದೆ: ಕೃಷಿ ಸಚಿವ ಚಲುವರಾಯಸ್ವಾಮಿ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆಗಬೇಕೆಂಬ ತೀರ್ಮಾನ ಆಗುತ್ತಿದ್ದಂತೆ ಕಾಶಿ ಮಥುರಾದಲ್ಲಿ ಸರ್ವೇಗೆ ಆದೇಶವಾಗಿದೆ. ನಮ್ಮ ಪರವಾಗಿ ತೀರ್ಪು ಬರುತ್ತದೆ. ಕಾಶಿಯಲ್ಲೂ ಮಸೀದಿ ಒಡೆದು ಹಾಕಿ ಕಾಶಿ ಮಂದಿರ ಕಟ್ಟುತ್ತೇವೆ. ಮಥುರಾದಲ್ಲೂ ಶ್ರೀ ಕೃಷ್ಣನ ದೇವಸ್ಥಾನ ಕಟ್ಟಿಯೇ ಕಟ್ಟುತ್ತೇವೆ ಎಂದು ಹೇಳಿದರು. ಮನೆ ಮನೆಗೆ ಮಂತ್ರಾಕ್ಷತೆ ಕೊಡ್ತಿದ್ದೇವೆ. ಜ.22ರಂದು ದೇವರ ಮನೆಯಲ್ಲಿಟ್ಟು ಪೂಜೆ ಮಾಡಿ, ಸಿಹಿ ಮಾಡಿ, ಊಟ ಮಾಡಬೇಕು. ಬಳಿಕ ದೀಪಾವಳಿ ಹಬ್ಬದ ರೀತಿ ಭಕ್ತರು ಆಚರಣೆ ಮಾಡಬೇಕು ಎಂದು ಈಶ್ವರಪ್ಪ ಹೇಳಿದರು.
ಬಿಜೆಪಿ ಹಿರಿಯ ನಾಯಕರಿಂದ ರಾಜ್ಯ ಪ್ರವಾಸ: ಮುಂಬರುವ ಲೋಕಸಭಾ ಚುನಾವಣೆಗೆ ಪಕ್ಷದ ಸಂಘಟನೆ ಬಲಪಡಿಸುವುದರ ಜತೆಗೆ ಕಾರ್ಯಕರ್ತರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶೀಘ್ರದಲ್ಲೇ ಹಿರಿಯ ನಾಯಕರ ತಂಡಗಳನ್ನು ರಚಿಸಿಕೊಂಡು ರಾಜ್ಯ ಪ್ರವಾಸ ಕೈಗೊಳ್ಳಲು ಬಿಜೆಪಿ ನಾಯಕರು ತೀರ್ಮಾನಿಸಿದ್ದಾರೆ. ಪಕ್ಷದ ಕಚೇರಿಯಲ್ಲಿ ನಡೆದ ಹಿರಿಯ ನಾಯಕರ ವಿಶೇಷ ಸಮಾಲೋಚನಾ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದು ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಜಿಲ್ಲಾ ಮತ್ತು ಮಂಡಲ ಘಟಕಗಳ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯ ಪ್ರವಾಸ ಆರಂಭಿಸಲು ಉದ್ದೇಶಿಸಲಾಗಿದೆ.
ಧರ್ಮ, ದೇವರ ವಿಷಯದಲ್ಲಿ ಬಿಜೆಪಿ ರಾಜಕೀಯ: ಸಚಿವ ಚಲುವರಾಯಸ್ವಾಮಿ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಸಿ.ಟಿ.ರವಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಸ್ಥಾನ ಗೆಲ್ಲಲು ನಮ್ಮ ರಣತಂತ್ರ ಏನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಸಿದ್ದೇವೆ ಎಂದು ಹೇಳಿದರು. ರಾಜ್ಯ ಮತ್ತು ದೇಶದ ಜನರು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಮಂತ್ರಿ ಆಗಬೇಕು ಎಂದು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಜನರು ನಮ್ಮನ್ನು ಬಯಸುತ್ತಿದ್ದಾರೆ. ನಾವು ವಿಶೇಷ ಪ್ರಯತ್ನ ಮಾಡಿದರೆ, ಒಂದಾಗಿ ಹೋದರೆ 28ಕ್ಕೆ 28 ಲೋಕಸಭಾ ಕ್ಷೇತ್ರ ಗೆಲ್ಲುವ ವಿಶ್ವಾಸ ನಮಗಿದೆ ಎಂದರು. ಲೋಕಸಭಾ ಚುನಾವಣೆಯಲ್ಲಿ 28ರಲ್ಲಿ 28 ಸ್ಥಾನಗಳನ್ನೂ ಗೆಲ್ಲುವ ಕುರಿತು ಯಾವ ರೀತಿ ಕಾರ್ಯಯೋಜನೆ ರೂಪಿಸಬೇಕು, ಜೆಡಿಎಸ್ ಜೊತೆ ಸಮನ್ವಯ ಸಾಧಿಸಿ ಹೇಗೆ ಒಟ್ಟಾಗಿ ಕೆಲಸ ಮಾಡಬೇಕು ಎಂಬ ವಿಷಯ ಚರ್ಚಿಸಲಾಗಿದೆ. ರಣತಂತ್ರದ ಮಾರ್ಗಸೂಚಿಯ ಚರ್ಚೆ ನಡೆದಿದೆ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.