ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಮಹಾಮೋಸ, ಅಸ್ಪೃಶ್ಯ ಜನಾಂಗಕ್ಕೆ ಮಹಾ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ಹುಬ್ಬಳ್ಳಿ (ಜ.22): ಒಳಮೀಸಲಾತಿ ವಿಷಯದಲ್ಲಿ ರಾಜ್ಯ ಸರ್ಕಾರ ಮಹಾಮೋಸ, ಅಸ್ಪೃಶ್ಯ ಜನಾಂಗಕ್ಕೆ ಮಹಾ ಅನ್ಯಾಯ ಮಾಡುತ್ತಿದೆ ಎಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸಿದ್ದರಾಮಯ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿಗೆ ಸಂವಿಧಾನದ ಕಲಂ 341ನ್ನು ತಿದ್ದುಪಡಿ ಮಾಡಲು ಶಿಫಾರಸು ಮಾಡಿದೆ. ಇದು ನಿಜಕ್ಕೂ ಮಹಾ ಮೋಸ ಎಂದು ತಿಳಿಸಿದೆ ಎಂದರು.
ಸಂವಿಧಾನ ತಿದ್ದುಪಡಿ ಮಾಡುವ ಅಗತ್ಯವಿಲ್ಲ ಎಂದು ಈಗಾಗಲೇ ಅಂದರೆ 2020ರಲ್ಲೇ ಸುಪ್ರೀಂಕೋರ್ಟ್ ನ್ಯಾ.ಅರುಣಕುಮಾರ್ ಮಿಶ್ರಾ ಅವರು ಆದೇಶ ಮಾಡಿದ್ದಾರೆ. ಅದರ ಅನುಗುಣವಾಗಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮತ್ತು ಎಸ್ಟಿ ಜನಾಂಗದ ಮೀಸಲಾತಿ ಹೆಚ್ಚಿಸಿ ಎಸ್ಸಿ ಮೀಸಲಾತಿ 15ರಿಂದ 17, ಎಸ್ಟಿ ಮೀಸಲಾತಿ 3ರಿಂದ 7ಕ್ಕೆ ಹೆಚ್ಚಿಸಿ ಕಳೆದ ವರ್ಷವೇ ಆದೇಶ ಮಾಡಿತ್ತು. 2022ರ ನವೆಂಬರ್ 1ರಿಂದ ರಾಜ್ಯದಲ್ಲಿ ಮೀಸಲಾತಿ ಹೆಚ್ಚಳ ಆದೇಶ ಜಾರಿಗೆ ಬಂದಿದೆ. ಅನುಷ್ಠಾನ ಕೂಡ ಆಗಿದೆ ಎಂದಿದ್ದಾರೆ.
2012ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಆಗ ನಾವು ಒಳ ಮೀಸಲಾತಿಗೆ ಸಂವಿಧಾನ ತಿದ್ದುಪಡಿಗೆ ಕೇಂದ್ರಕ್ಕೆ ಪ್ರಸ್ತಾವನೆ ಕಳುಹಿಸಿದ್ದೇವು. ಕೇಂದ್ರದಲ್ಲಿ ಮನಮೋಹನ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿತ್ತು. ಆಮೇಲೆ ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ಬದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆಗ ಒಳಮೀಸಲಾತಿ ಬಗ್ಗೆ ಯಾವುದೇ ಪ್ರಯತ್ನ ಮಾಡದೇ ಈಗ ಚುನಾವಣೆಗಾಗಿ ಕಪಟ ನಾಟಕ ಮಾಡುತ್ತಿದ್ದಾರೆ. ಒಳ ಮೀಸಲಾತಿಯನ್ನೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಮಾಡಿದೆ. ಮಾದಿಗ ಜನಾಂಗಕ್ಕೆ ಶೇ. 6, ಛಲವಾದಿ ಜನಾಂಗಕ್ಕೆ ಶೇ.5.5, ಲಂಬಾಣಿ, ಬೋವಿ, ಕೊರಮ, ಕೊರಚ ಜನಾಂಗಕ್ಕೆ ಶೇ.4.5 ಹಾಗೂ ಎಸ್ಸಿ ಅಲೆಮಾರಿ ಜನಾಂಗಕ್ಕೆ ಶೇ.1 ನೀಡಿದೆ. ಶೇ.17 ಮೀಸಲಾತಿ ಎಸ್ಸಿ ಜನಾಂಗಕ್ಕೆ ಹಂಚಿಕೆ ಮಾಡಲಾಗಿದೆ.
ಕಾರ್ಮಿಕ ಇಲಾಖೆಯಲ್ಲಿ 2.5 ಲಕ್ಷ ಬೋಗಸ್ ಕಾರ್ಡ್ ರದ್ದು: ಸಚಿವ ಸಂತೋಷ್ ಲಾಡ್
ಸಿದ್ದರಾಮಯ್ಯ ಅವರೇ ನಿಮಗೆ ಅಸ್ಪೃಶ್ಯರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಮಾಡಿದ ಆದೇಶವನ್ನು ನಾಳೆಯೇ ಆದೇಶ ಮಾಡಿ ಈ ಜನಾಂಗಕ್ಕೆ ನ್ಯಾಯ ಕೊಡಿಸಿ, ಚುನಾವಣೆ ಬಂದಾಗ ವಿಧಾನಸಭೆ ಚುನಾವಣೆ 2023ರ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ವಾಗ್ದಾನ ಮಾಡಿದ್ದೀರಿ. ಅಧಿಕಾರ ಬಂದು 24 ಗಂಟೆಗಳಲ್ಲೇ ಕ್ಯಾಬಿನೆಟ್ ಕರೆದು ಮೊದಲನೇ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಹೇಳಿದ್ದೀರಿ. ಈಗ ಲೋಕಸಭೆ ಚುನಾವಣೆಯಲ್ಲಿ ಎಸ್ಸಿ ಜನಾಂಗಕ್ಕೆ ಮೋಸ ಮಾಡಲು ಈ ಆಟ ಆಡುತ್ತಿದ್ದೀರಿ. ಮೋಸದಾಟ ಬಿಟ್ಟು ನೀವು ಪ್ರಣಾಳಿಕೆಯಲ್ಲಿ ಹೇಳಿದಂತೆ ಮಾಡಿ ಬದ್ಧತೆ ತೋರಿಸಬೇಕು ಎಂದು ಒತ್ತಾಯಿಸಿದ್ದಾರೆ.