ವ್ಯಕ್ತಿಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯನ್ನು ಕೆಲ ರಾಜ್ಯಗಳು ವಿರೋಧಿಸುತ್ತಿವೆ. ಅದರಲ್ಲಿ ಕರ್ನಾಟಕ ಸರ್ಕಾರ ಕೂಡ. ಇದು ಸರಿಯಲ್ಲ ಒಂದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.
ಹುಬ್ಬಳ್ಳಿ (ಜ.22): ವ್ಯಕ್ತಿಯ ವ್ಯಕ್ತಿತ್ವದ ಸರ್ವತೋಮುಖ ಬೆಳವಣಿಗೆಯ ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಜಾರಿಗೊಳಿಸಿದ ಹೊಸ ಶಿಕ್ಷಣ ನೀತಿಯನ್ನು ಕೆಲ ರಾಜ್ಯಗಳು ವಿರೋಧಿಸುತ್ತಿವೆ. ಅದರಲ್ಲಿ ಕರ್ನಾಟಕ ಸರ್ಕಾರ ಕೂಡ. ಇದು ಸರಿಯಲ್ಲ ಒಂದು ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು. ನಗರದ ಕುಸುಗಲ್ ರಸ್ತೆಯ ಹೋಟೆಲ್ ಗ್ರ್ಯಾಂಡ್‌ಲಾನ್ಸ್‌ನಲ್ಲಿ ಏರ್ಪಡಿಸಿದ್ದ ಶಿಕ್ಷಣ ತಜ್ಞರ ಸಮಾವೇಶದಲ್ಲಿ ಮಾತನಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದೆ. ಕೌಶಲಯುಕ್ತ ಶಿಕ್ಷಣ ನೀಡುವುದು ಅದರ ಉದ್ದೇಶ. ಆದರೆ, ಕೆಲವು ರಾಜ್ಯಗಳು ಇದನ್ನು ವಿರೋಧಿಸುತ್ತಿವೆ ಎಂದು ಹೇಳಿದರು.
ಶಿಕ್ಷಣ ಮತ್ತು ಸಾಕ್ಷರತೆಗೆ ಸಾಕಷ್ಟು ವ್ಯತ್ಯಾಸ ಇದೆ. ವ್ಯಕ್ತಿಯ ವ್ಯಕ್ತಿತ್ವ ಸರ್ವತೋಮುಖ ಬೆಳವಣಿಗೆಯೇ ಶಿಕ್ಷಣದ ಉದ್ದೇಶ. ಸಮಾಜ, ದೇಶ, ಸಂಸ್ಕೃತಿ, ಪರಂಪರೆಯ ಸಂಪೂರ್ಣ ಅರಿವು ಇರಬೇಕು. ಆದರೆ, ಇಂತಹ ಶಿಕ್ಷಣ ಸಿಗುವುದು ವಿರಳವಾಗಿದೆ ಎಂದರು. ಇದನ್ನೆಲ್ಲ ನಿವಾರಣೆ ಮಾಡುವ ಉದ್ದೇಶದಿಂದ ಹೊಸ ಶಿಕ್ಷಣ ನೀತಿ ಜಾರಿಗೊಳಿಸಿರುವುದು ಎಂದರು. ಸ್ವಾತಂತ್ರ್ಯಾ ನಂತರವೂ ಬ್ರಿಟಿಷ್ ಶಿಕ್ಷಣ ಪದ್ಧತಿಯನ್ನು ದೇಶದಲ್ಲಿ ಅನುಸರಿಸಲಾಗುತ್ತಿತ್ತು. ಆದರೆ, ತಕ್ಷಶಿಲಾ, ನಳಂದಾದಂತಹ ವಿಶ್ವವಿದ್ಯಾಲಯಗಳು ಜಗತ್ತನ್ನು ಆಕರ್ಷಿಸುತ್ತಿದ್ದವು. ಈಗ ಆ ಸ್ಥಿತಿ ಬದಲಾಗಿದೆ. ಕೌಶಲ್ಯ, ಸಾಮರ್ಥ್ಯ, ಮೂಲಸೌಕರ್ಯ ಕಲ್ಪಿಸುವ ಜತೆಗೆ ಕ್ರಿಯಾಶೀಲ ಮನಸ್ಸುಗಳನ್ನು ಬೆಳೆಸುವ ಕೆಲಸವಾಗಬೇಕು ಎಂದರು.
ಯಾವುದೇ ಕ್ಷಣದಲ್ಲಿ ನಿಗಮ ಮಂಡಳಿ ನೇಮಕ ಪ್ರಕಟ: ಡಿ.ಕೆ.ಶಿವಕುಮಾರ್
ಅಂಕ ಗಳಿಕೆ ಮಾತ್ರ ಶಿಕ್ಷಣದ ಉದ್ದೇಶವಲ್ಲ. ಮಗುವಿನ ಸರ್ವತೋಮುಖ ಬೆಳವಣಿಗೆ ಆಗಬೇಕು. ಮಕ್ಕಳಲ್ಲಿರುವ ಆಸಕ್ತಿ ಗುರುತಿಸುವ ಕೆಲಸ ಶಾಲೆಗಳಲ್ಲಿ ಆಗಬೇಕು ಎಂದು ಹೇಳಿದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳಿವೆ. ಹೀಗಾಗಿ ಪೋಷಕರು ಶಿಕ್ಷಣಕ್ಕಾಗಿ ಮಕ್ಕಳನ್ನು ಬೇರೆ ಕಡೆ ಕಳಿಸಬಾರದು. ತಂದೆ ತಾಯಿಯೊಂದಿಗೆ ಇದ್ದುಕೊಂಡು ಮಕ್ಕಳು ಕಲಿತರೆ ಅವರಿಗೆ ಕೌಟುಂಬ ಮೌಲ್ಯಗಳ ಬಗ್ಗೆ ಗೊತ್ತಾಗುತ್ತದೆ, ಸಂಸ್ಕಾರವಂತರಾಗುತ್ತಾರೆ ಎಂದರು.
ಎಜಿಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ನಿರ್ದೇಶಕ ಪ್ರೊ. ಸಂದೀಪ ಕ್ಯಾತನವರ ಮಾತನಾಡಿ, ವರೂರಿನ ನವಗ್ರಹ ತೀರ್ಥಕ್ಷೇತ್ರದ ಎಸ್‌ಡಿಎಂ ಜೈನಮಠ ಟ್ರಸ್ಟ್‌ನ ಎಜಿಎಂ ರೂರಲ್ ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ವತಿಯಿಂದ ಜ.20ರಂದು ಶಿಕ್ಷಣ ತಜ್ಞರ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಬಿ.ಇ. ರಂಗಸ್ವಾಮಿ ಮಾತನಾಡಿ, ದೇಶದಲ್ಲಿ ಶೇ. 54ರಷ್ಟು ಯುವಕರಿದ್ದಾರೆ. ಆದರೆ, ಶೇ. 50ರಷ್ಟು ಯುವಕರಿಗೆ ಕೌಶಲ್ಯ ತರಬೇತಿಯ ಕೊರತೆ ಇದೆ. ಗುಣಮಟ್ಟದ ಶಿಕ್ಷಣದ ಜತೆಗೆ ಕೌಶಲ ಶಿಕ್ಷಣ ನೀಡುವುದು ಇಂದಿನ ಅಗತ್ಯ ಎಂದು ತಿಳಿಸಿದರು.
ಮಗನ ಹೆಗಲ ಮೇಲೆ ಬಂದೂಕಿಟ್ಟು ಡಿಕೆಶಿಗೆ ಸಿದ್ದು ಗುಂಡು: ಸಂಸದ ಪ್ರತಾಪ ಸಿಂಹ
ನವಗ್ರಹ ತೀರ್ಥಕ್ಷೇತ್ರದ ಆಚಾರ್ಯ ಗುಣಧರ ನಂದಿ ಮಹಾರಾಜರು ಮಾತನಾಡಿದರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಕೆ.ಬಿ.ಗುಡಸಿ, ಸಂದೀಪ ಬೂದಿಹಾಳ, ಕಾಂಗ್ರೆಸ್ ಮುಖಂಡ ಅನಿಲಕುಮಾರ ಪಾಟೀಲ, ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ವಿನಯಸಿಂಗ್ ರಜಪೂತ್, ಅರಸು ಎಂ., ಇದ್ದರು.