‘ನನ್ನನ್ನು ಅಣ್ಣ ಎಂದು ಕರೆಯುತ್ತೀರಲ್ಲ. ಅಣ್ಣನಾಗಿ ಹೇಳುತ್ತೇನೆ. ಇನ್ನಾದರೂ ಈ ಲೂಟಿ ನಿಲ್ಲಿಸಿ. ನನ್ನ ಕಿವಿಮಾತು ಕೇಳಿದರೆ ನಿಮ್ಮನ್ನು ನನ್ನ ತಮ್ಮ (ಸಹೋದರ) ಎಂಬುದಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ.
ಬೆಂಗಳೂರು (ಆ.23): ‘ನನ್ನನ್ನು ಅಣ್ಣ ಎಂದು ಕರೆಯುತ್ತೀರಲ್ಲ. ಅಣ್ಣನಾಗಿ ಹೇಳುತ್ತೇನೆ. ಇನ್ನಾದರೂ ಈ ಲೂಟಿ ನಿಲ್ಲಿಸಿ. ನನ್ನ ಕಿವಿಮಾತು ಕೇಳಿದರೆ ನಿಮ್ಮನ್ನು ನನ್ನ ತಮ್ಮ (ಸಹೋದರ) ಎಂಬುದಾಗಿ ಒಪ್ಪಿಕೊಳ್ಳುತ್ತೇನೆ’ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದ್ದಾರೆ. ‘ಶಿವಕುಮಾರ್ ಅವರಿಗೆ ಯಾರನ್ನು ಬೇಕಾದರೂ ಖರೀದಿಸುವ ಶಕ್ತಿಯಿದೆ. ಬಿಜೆಪಿಯ ದೆಹಲಿಯ ನಾಯಕರನ್ನೇ ಖರೀದಿ ಮಾಡಿದ್ದರೂ ಆಶ್ಚರ್ಯವಿಲ್ಲ’ ಎಂದೂ ಅವರು ತೀಕ್ಷ್ಣವಾಗಿ ಹೇಳಿದ್ದಾರೆ.
ಮಂಗಳವಾರ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರ ಅಕ್ರಮಗಳು ಹೊರಗೆ ಬರಬೇಕಾದದ್ದು ಬಂದೇ ಬರುತ್ತವೆ. ಈವರೆಗೂ ಮಾಡಿಕೊಂಡಿದ್ದು ಸಾಕು. ಇನ್ನಾದರೂ ಲೂಟಿ ಹೊಡೆಯುವುನ್ನು ನಿಲ್ಲಿಸಿ ಎಂದರು. ತಮ್ಮ ವಿರುದ್ಧ ದಾಖಲೆ ಬಿಡುಗಡೆ ಮಾಡಿದರೆ ಭಯ ಇಲ್ಲ ಎಂದು ಶಿವಕುಮಾರ್ ಭಂಡತನದ ಹೇಳಿಕೆ ನೀಡಿದ್ದಾರೆ. ಅವರು ಯಾರಿಗೂ ಹೆದರುವುದಿಲ್ಲ. ಯಾರನ್ನು ಬೇಕಾದರೂ ಖರೀದಿ ಮಾಡುತ್ತಾರೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ಕುಟುಂಬವನ್ನು ಬಿಟ್ಟು ಯಾರನ್ನು ಬೇಕಾದರೂ ಖರೀದಿ ಮಾಡುವ ಶಕ್ತಿ ಇದೆ. ಬಿಜೆಪಿಯ ದೆಹಲಿಯ ನಾಯಕರನ್ನೇ ಖರೀದಿ ಮಾಡಿದ್ದರೂ ಅಚ್ಚರಿ ಇಲ್ಲ ಎಂದು ಕಿಡಿಕಾರಿದರು.
ಈ ಸರ್ಕಾರ 5 ವರ್ಷ ಇರುವುದಿಲ್ಲ, ಜೆಡಿಎಸ್ ಕಾರ್ಯಕರ್ತರು ಭಯಪಡಬೇಕಿಲ್ಲ: ಎಚ್‌ಡಿಕೆ
ರಾಜ್ಯದ ಹಿತ ರಕ್ಷಣೆಗೆ ಕ್ರಮ ಕೈಗೊಳ್ಳಬೇಕಾದ ಜಲಸಂಪನ್ಮೂಲ ಸಚಿವರೂ, ಉಪಮುಖ್ಯಮಂತ್ರಿಯಾಗಿರುವ ಅವರು ಯಾವುದೋ ಹಳೆಯ ಟ್ವೀಟ್ ಪ್ರಸ್ತಾಪಿಸಿದ್ದಾರೆ. ಆ ಟ್ವೀಟ್‌ನಲ್ಲಿ ಎರಡೂ ರಾಜ್ಯಗಳ ಜನರು ಅಣ್ಣ-ತಮ್ಮಂದಿರ ರೀತಿ ಇರಬೇಕು ಎಂದು ತಿಳಿಸಿದ್ದೇನೆ. ತಮಿಳುನಾಡಿನ ರೈತರಿಗೆ ನಾವು ಎಂದೂ ದ್ರೋಹ ಮಾಡಿಲ್ಲ. ನಮ್ಮ ರಾಜ್ಯದ ರೈತರಿಗೆ ಅನ್ಯಾಯ ಮಾಡಬೇಡಿ ಎಂದು ಹೇಳಿದ್ದೇನೆ. ಇದರಲ್ಲಿ ಹುಳುಕು ಹುಡುಕುವಂತಹ ಅಂಶ ಏನಿದೆ? ಸುಳ್ಳು ಹೇಳಿಕೊಂಡು ರಾಜಕಾರಣ ಮಾಡಬೇಡಿ. ಪ್ರಸ್ತುತ ಇರುವ ಸ್ಥಾನದ ಗಾಂಭೀರ್ಯತೆ ಕಾಪಾಡಿಕೊಳ್ಳಬೇಕು. ಆ ಸ್ಥಾನದ ಗೌರವವನ್ನು ಉಳಿಸಿಕೊಳ್ಳಿ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವೇತನ ಕೊಡದ ಹಿನ್ನೆಲೆ ಡಿಕೆಶಿ ಸ್ವ-ಕ್ಷೇತ್ರದಲ್ಲಿ ಚರಂಡಿ ನೀರು ಸುರಿದುಕೊಂಡು ಕಾರ್ಮಿಕರ ಪ್ರತಿಭಟನೆ
ಕಾಂಗ್ರೆಸ್‌ನ 30 ಶಾಸಕರೇ ಪಕ್ಷ ಬಿಡ್ತಾರೆ: ಕಾಂಗ್ರೆಸ್‌ನಲ್ಲಿಯೇ ಕಿತ್ತಾಟ ಶುರುವಾಗಿದ್ದು, ಈ ಸರ್ಕಾರ ಐದು ವರ್ಷ ಇರುವುದಿಲ್ಲ. ಅವರ ಪಕ್ಷದ 30 ಶಾಸಕರೇ ಪಕ್ಷ ಬಿಡಲು ಮುಂದಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಯಶವಂತಪುರ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ಗೆ ಬಿಜೆಪಿಯ ಶಾಸಕರು ಹೋಗಬಹುದು. ಆದರೆ ನಮ್ಮ ಶಾಸಕರು ಪಕ್ಷ ಬಿಡುಗಡೆ ಸಾಧ್ಯತೆ ಇಲ್ಲ. ಕಾಂಗ್ರೆಸ್‌ನವರು ಯಾಕೆ ಈ ರೀತಿಯ ಚರ್ಚೆ ಹುಟ್ಟು ಹಾಕಿದ್ದಾರೆ ಎಂದರೆ, ಅವರೇ ಪಕ್ಷದ 30 ಶಾಸಕರು ಪಕ್ಷ ಬಿಡಲು ಮುಂದಾಗಿದ್ದಾರೆ. ಅದನ್ನು ಸರಿ ಮಾಡಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್‌ನವರು ಬೇರೆ ಪಕ್ಷಗಳ ಶಾಸಕರು ಬರುತ್ತಿದ್ದಾರೆ ಎಂದು ಗುಲ್ಲು ಹಬ್ಬಿಸುತ್ತಿದ್ದಾರೆ. ಇದಕ್ಕೆಲ್ಲಾ ನಮ್ಮ ಕಾರ್ಯಕರ್ತರು ಭಯಪಡಬೇಕಾದ ಅಗತ್ಯವಿಲ್ಲ. ಜೆಡಿಎಸ್ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದರು.