ವರ್ಗಾವಣೆ ಹಿಂದೆ 1000 ಕೋಟಿ ದಂಧೆ: ಎಚ್‌ಡಿಕೆ ಮತ್ತೆ ಬಾಂಬ್‌!

By Kannadaprabha NewsFirst Published Aug 5, 2023, 11:08 PM IST
Highlights

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಮತ್ತು ಕಾಸಿಗಾಗಿ ಪೋಸ್ಟಿಂಗ್‌ ವ್ಯವಹಾರದಲ್ಲಿ ಒಂದು ಸಾವಿರ ಕೋಟಿ ರು.ಗಿಂತ ಹೆಚ್ಚು ಅಕ್ರಮ ವಹಿವಾಟು ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. 

ಬೆಂಗಳೂರು (ಆ.05): ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ವರ್ಗಾವಣೆ ದಂಧೆ ಮತ್ತು ಕಾಸಿಗಾಗಿ ಪೋಸ್ಟಿಂಗ್‌ ವ್ಯವಹಾರದಲ್ಲಿ ಒಂದು ಸಾವಿರ ಕೋಟಿ ರು.ಗಿಂತ ಹೆಚ್ಚು ಅಕ್ರಮ ವಹಿವಾಟು ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. ಶನಿವಾರ ಜೆಡಿಎಸ್‌ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಲೆಕ್ಕಕ್ಕೆ ಇಲ್ಲದಷ್ಟುದೊಡ್ಡ ಪ್ರಮಾಣದಲ್ಲಿ ವರ್ಗಾವಣೆ ದಂಧೆಯಲ್ಲಿ ತೊಡಗಿದೆ. 

ದಿನದಿಂದ ದಿನಕ್ಕೆ ಅದರ ಅವ್ಯವಹಾರ ಎಲ್ಲೆ ಮೀರುತ್ತಿದೆ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ದಂಧೆಯಲ್ಲಿ ಒಂದು ಸಾವಿರ ಕೋಟಿ ರು.ಗಿಂತ ಹೆಚ್ಚು ಕೈ ಬದಲಾಗಿದೆ ಎಂಬುದಾಗಿ ಅಧಿಕಾರಿಗಳೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು. ಪ್ರತಿಯೊಂದು ಹುದ್ದೆಯನ್ನು ಸರ್ಕಾರ ಮಾರಿಕೊಳ್ಳುತ್ತಿದೆ. ಪ್ರತಿ ಹುದ್ದೆಗೂ ಹಣ ಪಡೆದು ವರ್ಗಾವಣೆ ಮಾಡುತ್ತಿದೆ. ಒಂದೊಂದು ಪೋಸ್ಟ್‌ಗೆ ಮೂವರು ಅಧಿಕಾರಿಗಳ ನಿಯೋಜನೆಯಾಗುತ್ತದೆ. 

Latest Videos

ಮೈಸೂರು- ಕೊಡಗು ಲೋಕಸಭೆ ಸೀಟಿಗೆ ನಾನು ಆಕಾಂಕ್ಷಿ: ಎಚ್‌.ವಿಶ್ವನಾಥ್‌

ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಕಚೇರಿಯ ಅಡಿ ಟಿಪ್ಪಣಿಗಳು ಹಾದಿಬೀದಿಯಲ್ಲಿ ಬಿಕರಿಯಾಗುತ್ತಿವೆ. ಈ ಸರ್ಕಾರದ ಒಬ್ಬ ಸಚಿವನ ಬಳಿ ಈಗಾಗಲೇ ಇಡೀ ಜೀವಮಾನ ಕಳೆಯುವಷ್ಟುಹಣ ಇದೆ. ಐದಾರು ಜನ್ಮಕ್ಕೆ ಆಗುವಷ್ಟು ಸಂಪತ್ತು ಇದೆ. ಆದರೂ ಆ ಸಚಿವ ಸಣ್ಣ ಸಣ್ಣ ಪೋಸ್ಟಿಗೂ 10-15 ಲಕ್ಷ ರು. ಕೇಳುತ್ತಿದ್ದಾರೆ. ಇದಕ್ಕಿಂತ ಹೇಸಿಗೆಯ ವಿಷಯ ಬೇರೆ ಇದೆಯಾ ಎಂದು ಕಿಡಿಕಾರಿದರು. ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ, ಪಕ್ಷದ ನಗರ ಘಟಕದ ಅಧ್ಯಕ್ಷ ಎಚ್‌.ಎಂ.ರಮೇಶ್‌ಗೌಡ ಇತರರು ಉಪಸ್ಥಿತರಿದ್ದರು.

ಮಂತ್ರಿಗಳಿಂದ ಪರ್ಸೆಂಟೇಜ್‌ ವಸೂಲಿ: ರಾಜ್ಯದಲ್ಲಿ ಗುತ್ತಿಗೆದಾರರಿಂದ ನಿಗದಿತ ಪರ್ಸೆಂಟೇಜ್‌ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದ್ದು, ಸಚಿವರು ಮತ್ತು ಅವರ ಹಿಂಬಾಲಕರು ಗುತ್ತಿಗೆದಾರರಿಂದ ಪರ್ಸೆಂಟೇಜ್‌ಗೆ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೊಸ ‘ಬಾಂಬ್‌’ ಹಾಕಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧಿಕಾರಿಗಳಿಗೆ 250 ಕೋಟಿ ರು.ಗಳನ್ನು ಸಂಗ್ರಹಿಸಿ ಕೊಡುವಂತೆ ‘ಮಹಾನುಭಾವ’ರೊಬ್ಬರು ತಾಕೀತು ಮಾಡಿದ್ದಾರೆ ಎಂದೂ ಅವರು ಆಪಾದಿಸಿದ್ದಾರೆ.

ಯೂರೋಪ್‌ ಪ್ರವಾಸ ಮುಗಿಸಿಕೊಂಡು ವಾಪಸಾದ ಬಳಿಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ರಾಜ್ಯ ಕಾಂಗ್ರೆಸ್‌ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಸಚಿವರೊಬ್ಬರು ನೇರವಾಗಿ ಗುತ್ತಿಗೆದಾರರಿಂದ ಕಮಿಷನ್‌ ಕೇಳುತ್ತಿದ್ದಾರೆ. ಇತ್ತೀಚೆಗೆ ಸಚಿವರನ್ನು ಭೇಟಿಯಾಗಲು ಹೋಗಿದ್ದ ಗುತ್ತಿಗೆದಾರರಿಗೆ ಹಣ ತಂದಿದ್ದರೆ ಒಳಗೆ ಬನ್ನಿ, ಇಲ್ಲವಾದರೆ ಹೊರಗೆ ಇರಿ ಎಂದು ಆ ಸಚಿವರ ಹಿಂಬಾಲಕರು ತಾಕೀತು ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ನೈಸ್ ಅಕ್ರಮಗಳ ಬಗ್ಗೆ ಪ್ರಧಾನಿ ಮೋದಿ, ಶಾಗೆ ಶೀಘ್ರ ದೂರು: ಎಚ್‌ಡಿಕೆ

ಗುತ್ತಿಗೆದಾರರಿಂದ ಪರ್ಸೆಂಟೇಜ್‌ ಕೇಳುತ್ತಿರುವ ಇವರು ಹೋಗಿ ದೆಹಲಿಯಲ್ಲಿ ಭ್ರಷ್ಟಾಚಾರ ಕಡಿಮೆ ಮಾಡುತ್ತೇವೆ ಎಂದು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರಿಗೆ ಹೇಳುತ್ತಾರೆ! ಇಂತಹವರಿಂದ ರಾಜ್ಯ ಉದ್ಧಾರ ಸಾಧ್ಯವೇ? ಪಾರದರ್ಶಕ ಆಡಳಿತ ನೀಡಲಾಗುತ್ತದೆಯೇ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್‌ ಪಕ್ಷ ಈಸ್ಟ್‌ ಇಂಡಿಯಾ ಕಂಪನಿಯಂತೆ ರಾಜ್ಯವನ್ನು ಲೂಟಿ ಮಾಡುತ್ತಿದೆ. ಜನರಿಗೆ ಗ್ಯಾರಂಟಿ ತುಪ್ಪ ಸವರಿ ವರ್ಗಾವಣೆ ದಂಧೆಯಲ್ಲಿ ಕೊಳ್ಳೆ ಹೊಡೆಯುತ್ತಿದೆ. ಬೆಂಗಳೂರನ್ನು ಸಿಂಗಾಪುರ ಮಾಡುತ್ತೇವೆ ಎಂದವರು ಇದೇ ಬೆಂಗಳೂರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ. ಹೊರನೋಟಕ್ಕೆ ಭ್ರಷ್ಟಾಚಾರವನ್ನು ತೊಡೆದು ಹಾಕುವ ಮಾತು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು.

click me!