
ಬೆಂಗಳೂರು (ಆ.05): ನೈಸ್ (ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ) ಅಕ್ರಮಗಳ ಕುರಿತ ಎಲ್ಲಾ ದಾಖಲೆಗಳನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಖುದ್ದು ಭೇಟಿಯಾಗಿ ಸಲ್ಲಿಕೆ ಮಾಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶನಿವಾರ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮತ್ತು ಕೇಂದ್ರ ಗೃಹ ಸಚಿವರನ್ನು ಭೇಟಿಯಾದ ಬಳಿಕ ದೆಹಲಿಯಲ್ಲಿ ಅಕ್ರಮಗಳ ಎಲ್ಲಾ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡುತ್ತೇನೆ. ಅಲ್ಲದೆ, ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತೇನೆ. ವಿಧಾನಸಭೆಯಲ್ಲಿ ಎಲ್ಲಾ ಮಾಹಿತಿ ಬಿಚ್ಚಿಡುವ ಪ್ರಯತ್ನ ಮಾಡಿದೆ. ಆದರೆ, ಅದಕ್ಕೆ ಅವಕಾಶ ಸಿಗಲಿಲ್ಲ. ರಾಜ್ಯದ ಹಿತ ಮತ್ತು ಈ ಯೋಜನೆಗಾಗಿ ಭೂಮಿ ಕಳೆದುಕೊಂಡ ರೈತರಿಗೆ ನ್ಯಾಯ ಕೊಡಿಸುವ ದೃಷ್ಟಿಯಿಂದ ನೇರವಾಗಿ ಪ್ರಧಾನಿ ಅವರನ್ನೇ ಭೇಟಿಯಾಗಲಿದ್ದೇನೆ. ಒಂದೆರಡು ದಿನದಲ್ಲಿ ಪ್ರಧಾನಿ ಮತ್ತು ಗೃಹ ಸಚಿವರ ಭೇಟಿಗೆ ಸಮಯಾವಕಾಶ ಕೋರಲಾಗುವುದು ಎಂದು ತಿಳಿಸಿದರು.
ನಿರ್ದೇಶಕ ಟಿ.ಎಸ್.ನಾಗಾಭರಣಗೆ ತುಮಕೂರು ವಿವಿಯಿಂದ ಗೌರವ ಡಾಕ್ಟರೇಟ್!
ಮೂಲಸೌಕರ್ಯ ಮತ್ತು ರೈತರ ಹೆಸರಲ್ಲಿ ಕೋಟಿ ಕೋಟಿ ಲೂಟಿ ಹೊಡೆದಿದ್ದಾರೆ. ಹಣ ಮತ್ತು ಭೂಮಿಯನ್ನು ಕೊಳ್ಳೆ ಹೊಡೆದಿದ್ದಾರೆ. ಆ ಬಗ್ಗೆ ಎಲ್ಲಾ ದಾಖಲೆ ಸಂಗ್ರಹಿಸಿದ್ದೇನೆ. ನೇರವಾಗಿ ಪ್ರಧಾನಿ ಅವರಲ್ಲಿಯೇ ನ್ಯಾಯ ಕೇಳುತ್ತೇನೆ. ಅವರನ್ನೇ ಪ್ರಶ್ನೆ ಮಾಡುತ್ತೇನೆ. ನಮ್ಮ ರೈತರಿಗೆ ನ್ಯಾಯ ಕೊಡಿಸಿ ಎಂಬುದಾಗಿ ಒತ್ತಾಯಿಸುತ್ತೇನೆ. ನೈಸ್ ಅಕ್ರಮದ ಬಗ್ಗೆ ಸೂಕ್ತ ತನಿಖೆಯಾಗಬೇಕು. ಸದನದ ಸಮಿತಿ ವರದಿಯಲ್ಲಿ ಶಿಫಾರಸು ಮಾಡಿರುವಂತೆ ಸಿಬಿಐ ತನಿಖೆಯೇ ನಡೆಯಬೇಕು. ಸರ್ಕಾರದಲ್ಲಿರುವ ಅತ್ಯಂತ ಪ್ರಭಾವಿಯೊಬ್ಬರು ಪೆರಿಫೆರಲ್ ರಿಂಗ್‌ರೋಡ್ ಮಾಡಲು ನೈಸ್ ಜತೆ ಸೇರಿಕೊಂಡು ಏನೆಲ್ಲಾ ಕರ್ಮಕಾಂಡ ಮಾಡಿದ್ದಾರೆ ಎಂಬುದು ಗೊತ್ತಿದೆ.
ನೈಸ್ ಯೋಜನೆಯಲ್ಲಿ ಅಕ್ರಮಗಳ ಸರಣಿಯೇ ನಡೆದಿದ್ದು, ಯೋಜನೆಗಾಗಿ ಸ್ವಾಧೀನಕ್ಕೆ ಗುರುತಿಸಿರುವ, ಪ್ರಾಥಮಿಕ ಅಧಿಸೂಚನೆ ಮಾಡಲಾಗಿದ್ದ ಭೂಮಿಯನ್ನೇ ಖರೀದಿ ಮಾಡಿದ್ದ ಆ ಮಹಾನುಭಾವರಿಗೆ ಇದೆಲ್ಲವನ್ನೂ ಜೀರ್ಣ ಮಾಡುವ ತಾಕತ್ತು ಇದೆ ಎಂದು ಟೀಕಾಪ್ರಹಾರ ನಡೆಸಿದರು. ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೆ ಕಾನೂನು ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪ ಮಾಡಿದ್ದಕ್ಕೆ ಅವರಿಗೆ ಜೀವ ಬೆದರಿಕೆ ಹಾಕಿದ್ದರು. ಈ ಬೆದರಿಕೆ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆಯೂ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರ್ಕಾರವನ್ನು ಜನ ಕಿತ್ತೆಸೆಯಲಿದ್ದಾರೆ: ಗೋವಿಂದ ಕಾರಜೋಳ
ಕನ್ನಡಿಗರಿಗೆ ಏನಾಗಿದೆ: ಪ್ರತಿ ಸಣ್ಣ ವಿಷಯಕ್ಕೆ ನಾಡು, ನುಡಿ, ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮಂದಿ ಈಗೆಲ್ಲಿ ಹೋಗಿದ್ದಾರೆ? ಪಶ್ಚಿಮ ಬಂಗಾಳದಲ್ಲಿ ರೈತರ ಐದು ಸಾವಿರ ಎಕರೆಯಲ್ಲಿ ಕಾರ್ಖಾನೆ ಕಟ್ಟಲು ಹೊರಟವರ ವಿರುದ್ಧ ಅಲ್ಲಿ ಬೃಹತ್ ಹೋರಾಟ ನಡೆಯಿತು. ಆ ಹೋರಾಟದಿಂದಲೇ ಮಮತಾ ಬ್ಯಾನರ್ಜಿ ಹುಟ್ಟಿಕೊಂಡು ನಾಯಕಿಯಾಗಿ ಹೊರಹೊಮ್ಮಿದರು. ಆದರೆ, ನಮ್ಮವರಿಗೆ ಏನಾಗಿದೆ ಎಂಬುದು ಗೊತ್ತಿಲ್ಲ. ಇಷ್ಟುದೊಡ್ಡ ಪ್ರಮಾಣದಲ್ಲಿ ಜನರ ಭೂಮಿಯನ್ನು ಕೊಳ್ಳೆ ಹೊಡೆಯುತ್ತಿದ್ದರೂ ಕನ್ನಡಿಗರು ಮೌನವಾಗಿದ್ದಾರೆ. ಇಲ್ಲಿ ಏನಾಗಿದೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.