
ರಾಮನಗರ (ಫೆ.03): ಶೋಷಿತ ವರ್ಗದ ಹೆಸರಿನಲ್ಲಿ ಮೇಲೆ ಬಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಜಾ ಮಾಡುತ್ತಿದ್ದಾರೆ. ಅಷ್ಟಕ್ಕೂ ಕಾಂತರಾಜು ವರದಿ ಸ್ವೀಕರಿಸಬೇಡಿ ಅಂತ ನಿಮ್ಮನ್ನು ಹಿಡಿದುಕೊಂಡಿರುವವರು ಯಾರು ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೋಷಿತ ವರ್ಗದ ಹೆಸರಿನಲ್ಲಿ ನೀವು ಮಜಾ ಮಾಡುತ್ತಿದ್ದರೆ, ಆ ಜನರು ಬೀದಿಯಲ್ಲಿದ್ದಾರೆ. ಎಷ್ಟು ಜನರನ್ನು ಮೀಸಲಾತಿ ವ್ಯವಸ್ಥೆಯಲ್ಲಿ ಉಳಿಸಿಕೊಂಡಿದ್ದಾರೆ. ಎಷ್ಟು ಜನರಿಗೆ ಅನುಕೂಲವಾಗಿದೆ. ಮೀಸಲಾತಿ ಪಡೆದುಕೊಂಡವರ ಮತ್ತೆ ಮತ್ತೆ ಮೀಸಲು ಸೌಲಭ್ಯ ಪಡೆಯುತ್ತಿದ್ದಾರೆ. ಅದಕ್ಕೆ ಏನು ಹೇಳುತ್ತಾರೆ. ಮೀಸಲು ಸೌಲಭ್ಯ ಪಡೆದವರೇ ಎಷ್ಟು ವರ್ಷ ಪಡೆಯುತ್ತಾರೆ ಎಂಬುದನ್ನು ಜನರಿಗೆ ತಿಳಿಸಲಿ ಎಂದರು.
ಕಾಂಗ್ರೆಸ್ಸಿಗರಿಗೆ ಶೋಷಿತ ವರ್ಗದ ಜನರ ಬದುಕು ಬೇಕಿಲ್ಲ. ಸ್ವಾತಂತ್ರ್ಯ ಬಂದು 75 ವರ್ಷದಿಂದಲೂ ಅವರ ಹೆಸರು ಹೇಳಿಕೊಂಡು ರಾಜಕೀಯ ಜೀವನ ಮಾಡುತ್ತಿದ್ದಾರೆ. ಇನ್ನೂ ಎಷ್ಟು ವರ್ಷ ರಾಜಕಾರಣ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ಕಾಂತರಾಜು ವರದಿ ತೆಗೆದುಕೊಂಡಿಲ್ಲ ಎಂದು ಬೀದಿಯಲ್ಲಿ ಮಾತನಾಡಿದ್ದಾರೆ. ಆ ವರದಿಯಲ್ಲಿ ಮೆಂಬರ್ ಸೆಕ್ರೆಟರಿ ಸಹಿ ಇತ್ತಾ. ಇವತ್ತಿನವರೆಗೂ ಆ ವರದಿಗೆ ಸಹಿ ಹಾಕಿಲ್ಲ. ಸಹಿ ಹಾಕದ ವರದಿಯನ್ನು ನಾನು ಹೇಗೆ ಸ್ವೀಕರಿಸಲಿ. ಸಿದ್ದರಾಮಯ್ಯ ಅವರಿಗೆ ಇಷ್ಟೂ ಪರಿಜ್ಞಾನ ಇಲ್ಲವಾ.ಸುಮ್ಮನೆ ನನ್ನ ಮೇಲೆ ಆರೋಪ ಮಾಡುತ್ತಾರೆ ಎಂದು ಕಿಡಿಕಾರಿದರು.
ಲೂಟಿಕೋರರನ್ನ ಲೋಕಸಭೆಗೆ ಕಳಿಸಿದರೆ ಇನ್ನೇನಾಗುತ್ತೆ?: ಡಿಕೆಸು ವಿರುದ್ಧ ಎಚ್‌ಡಿಕೆ ವಾಗ್ದಾಳಿ
ಒಂದು ವರ್ಷ ಆಯಿತಲ್ಲ, ಜಯಪ್ರಕಾಶ್ ಶೆಟ್ಟಿರವರ ಕೈಯಲ್ಲಿ ಇನ್ನೂ ಏನನ್ನು ಬರೆಸುತ್ತಿದ್ದೀರಿ, ಈಗ ವರದಿಯನ್ನೇ ಪಡೆದಿಲ್ಲ ಅನ್ನುತ್ತೀರಿ. 2017ರಲ್ಲಿ ದಿನಪತ್ರಿಕೆಗಳಲ್ಲಿ ಜಾತಿವಾರು ಜನಸಂಖ್ಯೆ ವರದಿ ಬರೆಸಿದರಲ್ಲ, ಯಾರು ಬರೆಸಿದವರು. ಆ ವರದಿಯನ್ನು ಸೋರಿಕೆ ಮಾಡಿದವರು ಯಾರು. ವರದಿ ನೋಡದೆ ಅವೈಜ್ಞಾನಿಕ ಅನ್ನುತ್ತಿದ್ದಾರೆಂದು ಹೇಳುತ್ತೀರಾ. ಸೋರಿಕೆ ಆಗಿರುವುದರಿಂದಲೇ ಅವೈಜ್ಞಾನಿಕ ಅಂತ ಹೇಳುತ್ತಿದ್ದಾರೆ. ತಮ್ಮ ತಪ್ಪನ್ನು ಮರೆಮಾಚಲು ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ದೇವೇಗೌಡ್ರು ಇಲ್ಲದ್ದಿದ್ರೆ ಏನು ಮಾಡುತ್ತಿದ್ರು: ಮಾಜಿ ಪ್ರಧಾನಿ ದೇವೇಗೌಡರ ಮುಖ ನೋಡಿಕೊಂಡು ಸುಮ್ಮನಿದ್ದೀನಿ ಅಂತ ಹೇಳಿದ್ದಾರೆ. ಇಲ್ಲ ಅಂದಿದ್ದರೆ ಏನು ಮಾಡುತ್ತಿದ್ದರು ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಅವರನ್ನು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಶ್ನಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದೀನಿ. ಅವರು ನನಗೇನು ಎದುರಾಳಿನಾ. ಅದೇನು ಮಾಡುತ್ತಾರೊ ಮಾಡಲಿ ನೋಡೋಣ ಎಂದರು.
ಮಂಡ್ಯದಲ್ಲಿ ಕೋಮುಬೀಜ ಬಿತ್ತಿದ ಎಚ್‌ಡಿಕೆ: ಸಚಿವ ಎನ್.ಚಲುವರಾಯಸ್ವಾಮಿ
ರಾಮಕೃಷ್ಣ ಹೆಗಡೆ, ಜೆ.ಹೆಚ್.ಪಟೇಲ್ ಅವರನ್ನು ನಾನು ಹೊರಹಾಕಿದನಾ. ಹೆಗಡೆ ಅವರು ರಾಜಕಾರಣದಲ್ಲಿದ್ದಾಗ ನಾನು ಆಗಿನ್ನೂ ನಾನು ಚಿಕ್ಕ ಹುಡುಗ. ಅವರಿಗೆ ಇಷ್ಟೂ ಗೊತ್ತಿಲ್ಲವೇ. ನನ್ನ ಸೋಲಿನ ಬಗ್ಗೆ ಮಾತನಾಡುವವರು ಅವರು ಸಚಿವರಾಗಿದ್ದಾಗಲೂ ಸೋತರಲ್ಲ ಏಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.