ಇವತ್ತು ವಿಧಾನಸಭಾ ಚುನಾವಣೆ ನಡೆದರೆ 135 ಕ್ಕಿಂತ ಹೆಚ್ಚಿನ ಸೀಟನ್ನು ಗೆದ್ದು ಬಿಜೆಪಿ ರಾಜ್ಯದಲ್ಲಿ ಆಡಳಿತ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸದಿಂದ ನುಡಿದರು.
ಶಿವಮೊಗ್ಗ (ನ.29): ಇವತ್ತು ವಿಧಾನಸಭಾ ಚುನಾವಣೆ ನಡೆದರೆ 135 ಕ್ಕಿಂತ ಹೆಚ್ಚಿನ ಸೀಟನ್ನು ಗೆದ್ದು ಬಿಜೆಪಿ ರಾಜ್ಯದಲ್ಲಿ ಆಡಳಿತ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸದಿಂದ ನುಡಿದರು. ಜಿಲ್ಲಾ ಬಿಜೆಪಿ ವತಿಯಿಂದ ನಗರದ ಪ್ರೇರಣಾ ಸಭಾಂಗಣದಲ್ಲಿ ಬುಧವಾರ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿಜಯೇಂದ್ರ ರಾಜ್ಯದ ಅಧ್ಯಕ್ಷರಾದ ಮೇಲೆ ರಾಜ್ಯದ ಉದ್ದಗಲಕ್ಕೆ ಅಭೂತಪೂರ್ವ ಸ್ವಾಗತ ಸಿಗುತ್ತಿದೆ. ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ ಎಂದರು.
ವಿಜಯೇಂದ್ರ ಅಧ್ಯಕ್ಷ ಆಗುತ್ತಾರೆ ಎಂದು ಯಾರೂ ನಿರೀಕ್ಷೆ ಮಾಡಿರಲಿಲ್ಲ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಜೀ ಅವರು ದೂರವಾಣಿ ಮೂಲಕ ಮಾತನಾಡಿ, ಈ ವಿಷಯದ ಬಗ್ಗೆ ಮಾತನಾಡಿದಾಗ ನಾನೂ ನಂಬಿರಲಿಲ್ಲ. ವಿಜಯೇಂದ್ರ ಬಂದು ಹೇಳಿದ ಮೇಲೆಯೇ ನಾನು ನಂಬಿದ್ದು. ಮಾಧ್ಯಮದಲ್ಲಿ ಬಂದ ವರದಿ ಆಧಾರದ ಮೇಲೆ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದಾರೆ ಎಂದರು. ಈಗ ಚುನಾವಣೆ ನಡೆದರೂ ಸ್ಪಷ್ಟ ಬಹುಮತ ಬರೋದು ನಿಶ್ಚಿತ. ಆಗಿರುವ ತಪ್ಪನ್ನು ಸರಿಪಡಿಸಿಕೊಂಡು, ಮುಂದೆ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷವನ್ನು ಬಲಪಡಿಸಿ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 28 ಸ್ಥಾನಗಳನ್ನೂ ಗೆಲ್ಲಬೇಕು ಎಂದು ಸಂಕಲ್ಪ ಮಾಡಬೇಕಿದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
28 ಕ್ಷೇತ್ರಗಳನ್ನೂ ಗೆದ್ದು ಪ್ರಧಾನಿ ಮೋದಿಗೆ ಬಲ ತರುವೆ: ಬಿ.ವೈ.ವಿಜಯೇಂದ್ರ
ತವರು ಜಿಲ್ಲೆಯಲ್ಲಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಅದ್ಧೂರಿ ಸ್ವಾಗತ: ಬಿಜೆಪಿ ರಾಜ್ಯಾಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಶಿವಮೊಗ್ಗಕ್ಕೆ ಆಗಮಿಸಿದ್ದ ಬಿ.ವೈ.ವಿಜಯೇಂದ್ರ ಅವರನ್ನು ಬುಧವಾರ ಜಿಲ್ಲಾ ಬಿಜೆಪಿ ನಾಯಕರು ಅದ್ಧೂರಿ ಸ್ವಾಗತ ಕೋರಿದರು. ವಿಜಯೇಂದ್ರ ಆಗಮನ ಹಿನ್ನೆಲೆಯಲ್ಲಿ ಇಡೀ ನಗರದಲ್ಲಿ ಹಬ್ಬದ ವಾತಾವರಣ ಉಂಟಾಗಿತ್ತು. ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ನಗರದ ಎಲ್ಲೆಡೆ ಕಟೌಟ್ ಹಾಗೂ ಫ್ಲೆಕ್ಸ್‌ಗಳನ್ನು ಹಾಕಿ ಸ್ವಾಗತ ಕೋರಿದರು. ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಕೇಂದ್ರ ಬಿಜೆಪಿ ನಾಯಕರು, ಪ್ರಧಾನಿಯವರ ಕಟೌಟ್‌ಗಳು ಕೂಡ ನಗರದಲ್ಲಿ ರಾರಾಜಿಸಿದವು.
ಬೆಳಗಿನ ಜಾವ ರೈಲಿನಲ್ಲಿ ಬಂದ ಅವರನ್ನು ಶಿವಮೊಗ್ಗ ರೈಲು ನಿಲ್ದಾಣದಲ್ಲಿ ಆತ್ಮೀಯವಾಗಿ ಸ್ವಾಗತಿಸಲಾಯಿತು. ಬೆಳಗ್ಗೆ 9 ಗಂಟೆಗೆ ಬಿಜೆಪಿ ಕಚೇರಿಗೆ ಭೇಟಿ ನೀಡಿ ಅಭಿನಂದನೆ ಸ್ವೀಕರಿಸಿದರು. ಈ ಸಂದರ್ಭ ಅವರಿಗೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಚಂಡೆ ತಂಡ ಇತ್ತು. ನೂತನ ರಾಜ್ಯಾಧ್ಯಕ್ಷರು ಆಗಮಿಸುತ್ತಿದ್ದಂತೆ ಪಟಾಕಿ ಸಿಡಿಸಿ ಕಾರ್ಯಕರ್ತರು ಘೋಷಣೆ ಕೂಗಿದರು. ವಿಜಯೇಂದ್ರಗೆ ಆರತಿ ಬೆಳಗಿ ಬಿಜೆಪಿ ಕಚೇರಿಯೊಳಗೆ ಸ್ವಾಗತಿಸಲಾಯಿತು. ಬಿಜೆಪಿ ಕಚೇರಿಯನ್ನು ಚಪ್ಪರ, ತಳಿರು-ತೋರಣದಿಂದ ಅಲಂಕರಿಸಲಾಗಿತ್ತು.
ವಿಜಯೆಂದ್ರ ದೇಶದ ಹಿಂದೂ ನಾಯಕ ಆಗ್ತಾರೆ: ಈಶ್ವರಪ್ಪ ಭವಿಷ್ಯ
ಎಲ್ಲ ಅಭ್ಯರ್ಥಿಗಳ ಗೆಲ್ಲಿಸಬೇಕು- ವಿಜಯೇಂದ್ರ: ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಅವರು, ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಇರೋಣ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ ಆಗಲು ಶ್ರಮಿಸೋಣ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲ ಅಭ್ಯರ್ಥಿಗಳು ಗೆಲ್ಲಬೇಕು ಎಂದು ತಿಳಿಸಿದರು. ಈ ಸಂದರ್ಭ ಸಂಸದ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ತು ಸದಸ್ಯರಾದ ಎಸ್.ರುದ್ರೇಗೌಡ, ಡಿ.ಎಸ್. ಅರುಣ್, ಪ್ರಮುಖರಾದ ಗಿರೀಶ್ ಪಟೇಲ್ ಸೇರಿದಂತೆ ಹಲವರು ಇದ್ದರು.