*ಮೇಕೆದಾಟು ಪಾದಯಾತ್ರೆ ಬಳಿಕವೂ ಹೋರಾಟ: ಸಿದ್ದು
*ಮೇಕೆದಾಟು ಕುರಿತು ಸಿದ್ದು ಬರೆದ ಪುಸ್ತಕ ಲೋಕಾರ್ಪಣೆ
ರಾಮನಗರ (ಫೆ. 28): ಮೇಕೆದಾಟು ಪಾದಯಾತ್ರೆ ಬಳಿಕವೂ ಹೋರಾಟ: ಬಿಜೆಪಿಯವರು ಮೇಕೆದಾಟು ಯೋಜನೆ (Mekedatu Project) ಬಗ್ಗೆ ಸುಳ್ಳುಗಳನ್ನು ಹೇಳಿ ಜನರನ್ನು ತಪ್ಪು ದಾರಿಗೆ ಎಳೆಯಲು ಯತ್ನಿಸುತ್ತಿದ್ದಾರೆ. ಯೋಜನೆ ಜಾರಿಗೆ ಪ್ರಸ್ತುತ ಯಾವುದೇ ಅಡ್ಡಿ ಇಲ್ಲ. ಹೀಗಿದ್ದರೂ ಬಿಜೆಪಿ ಸರ್ಕಾರ (BJP Government) ವಿಳಂಬ ಮಾಡಿದರೆ ಪಾದಯಾತ್ರೆ ಬಳಿಕವೂ ಹೋರಾಟ ಮುಂದುವರೆಯಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ (siddaramaiah) ಎಚ್ಚರಿಕೆ ನೀಡಿದ್ದಾರೆ.
ಮೇಕೆದಾಟು ಪಾದಯಾತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗಲೇ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿದ್ದೆವು. ಬಿಜೆಪಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ಮೇಕೆದಾಟು ಯೋಜನೆಗೆ ಪರಿಸರ ಇಲಾಖೆ ಅನುಮತಿ ದೊರಕಿಸಿಕೊಡದೆ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ರಾಜ್ಯದ ಜನತೆಗೆ ವಿಳಂಬ ದ್ರೋಹ ಎಸಗಿವೆ ಎಂದು ದೂರಿದರು.
ಇದನ್ನೂ ಓದಿ: Mekedatu Padayatre: ಜೆಡಿಎಸ್ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಬಿಡದಿ ತಲುಪಿದ ಕಾಲ್ನಡಿಗೆ
ಯೋಜನೆಗೆ ಯಾವುದೇ ಅಡ್ಡಿ ಇಲ್ಲ. ಯೋಜನೆಯಿಂದ 400ಕ್ಕೂ ಹೆಚ್ಚು ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಆಗಲಿದೆ. ಅಲ್ಲದೆ ಮುಂದಿನ 50 ವರ್ಷ ಬೆಂಗಳೂರು ನಗರ ವಾಸಿಗಳಿಗೆ ನೀರಿನ ಸಮಸ್ಯೆ ನೀಗಲಿದೆ. ಅಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳಿಗೂ ನೀರು ಪೂರೈಕೆಯಾಗಲಿದೆ. ಹೀಗಿದ್ದರೂ ಡಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಯವರು ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಬಿಜೆಪಿಯವರು ಯೋಜನೆ ಬಗ್ಗೆ ಹೇಳುವುದು ನೂರಕ್ಕೆ ನೂರರಷ್ಟುಸುಳ್ಳು.
2018ರಲ್ಲಿ ಕಾವೇರಿ ವಿವಾದದ ಬಗ್ಗೆ ಅಂತಿಮ ತೀರ್ಪು ಬಂದಿದೆ. ನಾವು ಅದಕ್ಕೂ ಮೊದಲೇ ಡಿಪಿಆರ್ ಸಿದ್ಧಪಡಿಸಿ ನೀಡಿದ್ದೇವೆ. ತಮಿಳುನಾಡು ಸರ್ಕಾರ ಡಿಪಿಆರ್ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೂ ನ್ಯಾಯಾಲಯ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಯೋಜನೆ ಜಾರಿಗೆ ಸರ್ಕಾರಕ್ಕೆ ಯಾವುದೇ ಅಡ್ಡಿ ಇಲ್ಲ. ಪರಿಸರ ಇಲಾಖೆ ಅನುಮತಿ ನೀಡುವುದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಕೈಯಲ್ಲಿದೆ ಎಂದು ಹೇಳಿದರು.
ಮೇಕೆದಾಟು ಕುರಿತು ಸಿದ್ದು ಬರೆದ ಪುಸ್ತಕ ಲೋಕಾರ್ಪಣೆ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರಚಿತ ‘ಮೇಕೆದಾಟು ಯೋಜನೆ ತಪ್ಪಿಸಲಿದೆ ನೀರಿನ ರೋದನೆ’ ಕಿರು ಹೊತ್ತಗೆಯನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಭಾನುವಾರ ಬಿಡುಗಡೆ ಮಾಡಿದರು.2ನೇ ಹಂತದ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡುವ ವೇದಿಕೆ ಕಾರ್ಯಕ್ರಮದಲ್ಲಿ ಕಿರುಹೊತ್ತಿಗೆ ಬಿಡುಗಡೆ ಮಾಡಿದರು. ನಂತರ ಪಾದಯಾತ್ರಿಗಳು ಹಾಗೂ ಸಾರ್ವಜನಿಕರಿಗೆ ಈ ಹೊತ್ತಗೆ ವಿತರಿಸಲಾಯಿತು.
ಇದನ್ನೂ ಓದಿ: Congress Padayatre: ಮೇಕೆದಾಟು ಜಾರಿ ಇಚ್ಛಾಶಕ್ತಿ ಬಿಜೆಪಿಗಿಲ್ಲ: ಸುರ್ಜೇವಾಲಾ
ಈ ಹೊತ್ತಗೆ 30 ಪುಟ ಹೊಂದಿದ್ದು, ಮೇಕೆದಾಟು ಯೋಜನೆ ಮಹತ್ವ , ಕಾಂಗ್ರೆಸ್ ಸರ್ಕಾರ ಯೋಜನೆ ಅನುಷ್ಠಾನಕ್ಕೆ ತೋರಿದ ಬದ್ಧತೆ ಕುರಿತ ವಿವರ ಇದಲ್ಲಿದೆ. ನೀರಾವರಿ ಯೋಜನೆಗಳಿಗೆ ಸಂಬಂಧಿಸಿ ಬಿಜೆಪಿ ಸರ್ಕಾರಗಳು ನಡೆದುಕೊಂಡ ರೀತಿ ಕುರಿತೂ ಇಲ್ಲಿ ಉಲ್ಲೇಖವಿದೆ.
ಹೆಜ್ಜೆ ಹೆಜ್ಜೆಗೂ ಅಚ್ಚುಕಟ್ಟು ವ್ಯವಸ್ಥೆ: ಮೇಕೆದಾಟು ಪಾದಯಾತ್ರೆ ವೇಳೆ ಪಾದಯಾತ್ರಿಗಳಿಗೆ ಯಾವುದೇ ಸಮಸ್ಯೆಯಾಗದಂತೆ ಹೆಜ್ಜೆ ಹೆಜ್ಜೆಗೂ ನೀರಿನ ಬಾಟಲ್, ಎಳನೀರು, ಮಜ್ಜಿಗೆ, ಐಸ್ ಕ್ರೀಂ, ಕಬ್ಬಿನ ಹಾಲು, ತರಹೇವಾರಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳ ಹೆಚ್ಚಾಗಿದ್ದರಿಂದ ಪ್ರತಿ ಅರ್ಧ ಕಿ.ಮೀ.ಗೊಂದು ವಿಶ್ರಾಂತಿ ಸ್ಥಳ ವ್ಯವಸ್ಥೆ ಮಾಡಲಾಗಿತ್ತು. ಅಗತ್ಯವಿರುವವರು ವಿಶ್ರಾಂತಿ ಪಡೆದ ಬಳಿಕ ಮುಂದುವರೆಯಬಹುದಿತ್ತು. ಏಳು ಕಿ.ಮೀ. ಬಳಿಕ ಮಾಯಗಾನಹಳ್ಳಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು. ಬಿಡದಿ ತಲುಪಿದ ಬಳಿಕ ಸಾವಿರಾರು ಮಂದಿಗೆ ಊಟಕ್ಕೆ ಹಾಗೂ ವಾಸ್ತವ್ಯಕ್ಕೆ ಅಚ್ಚುಕಟ್ಟು ವ್ಯವಸ್ಥೆ ಕಲ್ಪಿಸಲಾಗಿತ್ತು.