*ಕಾವೇರಿ ತಾಯಿಯೇ ನಮಗೆ ನ್ಯಾಯ ಕೊಡ್ತಾಳೆ: ಸುರ್ಜೆವಾಲಾ
*ಪಾದಯಾತ್ರೆ ನಿಂದಿಸಿದರೆ ಜನ ಥೂ ಅಂತಾರೆ: ಡಿಕೆಶಿ
*ಮೇಕೆದಾಟು ಪಾದಯಾತ್ರೆ ಬಳಿಕವೂ ಹೋರಾಟ: ಸಿದ್ದು
*ಮೇಕೆದಾಟು ಕುರಿತು ಸಿದ್ದು ಬರೆದ ಪುಸ್ತಕ ಲೋಕಾರ್ಪಣೆ
ರಾಮನಗರ (ಫೆ. 28): ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವ ಇಚ್ಛಾಶಕ್ತಿ ಬಿಜೆಪಿ ಸರ್ಕಾರಗಳಿಗೆ ಇಲ್ಲ. ಇದಕ್ಕಾಗಿ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ನಾವೆಲ್ಲಾ ಒಟ್ಟಾಗಿ ಹೋರಾಡಿದರೆ ಕಾವೇರಿ ತಾಯಿಯೇ ನಮಗೆ ನ್ಯಾಯ ದೊರಕಿಸುತ್ತಾಳೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ ಹೇಳಿದ್ದಾರೆ. ಭಾನುವಾರ ರಾಮನಗರದಲ್ಲಿ ಮೇಕೆದಾಟು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಕಾವೇರಿ ನಮ್ಮ ಜೀವ, ನಮ್ಮ ಸಂಸ್ಕೃತಿ. ನಮ್ಮ ನೀರು ನಮ್ಮ ಹಕ್ಕು. ಈ ನೀರು ಉಳಿಸಿಕೊಳ್ಳಲು ನಾವು ಹೋರಾಡುತ್ತಿದ್ದೇವೆ. ಹೋರಾಡಲೇಬೇಕು ಎಂದು ಕರೆ ನೀಡಿದರು.
ನಮ್ಮ ಹೋರಾಟ ತಡೆಯಲು ಬಿಜೆಪಿ ಯತ್ನಿಸುತ್ತಿದೆ. ಎಲ್ಲಾ ಜಾತಿ, ವರ್ಗಗಳು, ಪಕ್ಷಾತೀತವಾಗಿ ನಮಗೆ ಬೆಂಬಲ ನೀಡಬೇಕು. ಈ ಹೋರಾಟವನ್ನು ನಾವು ಯಶಸ್ವಿಯಾಗಿಸುತ್ತೇವೆ. ಇದು ಭಾಷಣ ಮಾಡುವ ದಿನವಲ್ಲ. ಇತಿಹಾಸ ಬರೆಯುವ ದಿನ. ಕಾವೇರಿ ಮಾತ್ರವಲ್ಲ. ಈ ಭೂಮಿ, ನೀರು ಕೂಡ ನಮಗೆ ಉಳಿಯಬೇಕು. ಕಾವೇರಿ ಪ್ರತಿ ಹನಿ ಮೇಲೂ ಸ್ಥಳೀಯರಿಗೆ ಹಕ್ಕಿದೆ. ನೀವೆಲ್ಲರೂ ಒಗ್ಗಟ್ಟಿನ ಮೂಲಕ ಹೋರಾಟ ಮಾಡಿದರೆ ಕಾವೇರಿ ತಾಯಿಯೇ ನಮಗೆ ನ್ಯಾಯ ದೊರಕಿಸುತ್ತಾಳೆ ಎಂದರು.
ಇದನ್ನೂ ಓದಿ: Mekedatu Padayatre: ಜೆಡಿಎಸ್ ಕೋಟೆಯಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಬಿಡದಿ ತಲುಪಿದ ಕಾಲ್ನಡಿಗೆ
ಪಾದಯಾತ್ರೆ ನಿಂದಿಸಿದರೆ ಜನ ಥೂ ಅಂತಾರೆ: ‘ಯಾಕಣ್ಣ ನಾಲಿಗೆ ಇದೆ ಎಂದು ಮೇಕೆದಾಟು ಪಾದಯಾತ್ರೆ ಬಗ್ಗೆ ಏನೆಲ್ಲಾ ಮಾತನಾಡುತ್ತಿದ್ದೀರಿ. ಜನ ಛೀ.. ಥೂ ಎಂದು ಉಗಿಯುತ್ತಾರೆ. ನಿಮ್ಮ ನಾಲಿಗೆಯನ್ನು ರಕ್ಷಣೆ ಮಾಡಿಕೊಳ್ಳಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರತಿಪಕ್ಷಗಳ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಕೆದಾಟು ಪಾದಯಾತ್ರೆಯ ಮೊದಲ ದಿನ ಬಿಡದಿಗೆ ಆಗಮಿಸಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಹೇಳಿಕೆಗಳಿಗೆ ಕಿಡಿಕಾರಿದರು.
ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿದ ಅವರು, ನಮ್ಮಣ್ಣ ನನ್ನನ್ನು ಮಣ್ಣಿನ ಮಗ ಅಲ್ಲ, ಕಲ್ಲಿನ ಮಗ ಎಂದಿದ್ದಾರೆ. ಕಲ್ಲು ಆಕೃತಿ ಅದನ್ನು ಪೂಜಿಸಿದರೆ ಸಂಸ್ಕೃತಿ. ಕಲ್ಲನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ನಮ್ಮಣ್ಣ ಬೇಕಾದರೂ ಈ ಕಲ್ಲನ್ನು ಉಪಯೋಗಿಸಿಕೊಳ್ಳಲಿ. ನಾನು ಬೇಡ ಎನ್ನಲ್ಲ ಎಂದು ತಿರುಗೇಟು ನೀಡಿದರು.
ನಮ್ಮ ಪಾದಯಾತ್ರೆಯನ್ನು ಬಿಜೆಪಿ ಹಾಗೂ ಜೆಡಿಎಸ್‌ನವರು ಟೀಕಿಸುತ್ತಿದ್ದಾರೆ. ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ. ನಾಲಿಗೆ ಇದೆ ಎಂದು ಏನು ಬೇಕಾದರೂ ಮಾತನಾಡಬೇಡಿ. ನಿಮ್ಮ ನಾಲಿಗೆಯನ್ನು ರಕ್ಷಣೆ ಮಾಡಿಕೊಳ್ಳಿ ಎಂದರು.
ಇದನ್ನೂ ಓದಿ: Mekedatu Padayatre: ಕಾಂಗ್ರೆಸ್ ಮೇಕೆದಾಟು ನಡಿಗೆ 2ನೇ ಕಂತು ಅದ್ಧೂರಿ ಆರಂಭ
ನಮಗೆ ಮಹಾತ್ಮ ಗಾಂಧೀಜಿ ಸ್ಫೂರ್ತಿ. ಹೀಗಾಗಿ ಪಾದಯಾತ್ರೆಯನ್ನು ಜನಹಿತದ ಸಂಕಲ್ಪ ಇಟ್ಟುಕೊಂಡು ಮಾಡುತ್ತಿದ್ದೇವೆ. ಮಾಜಿ ಪ್ರಧಾನಮಂತ್ರಿ ದೇವೇಗೌಡ, ಮಾಜಿ ಉಪಪ್ರಧಾನಿ ಎಲ್.ಕೆ. ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸೇರಿದಂತೆ ಅನೇಕ ನಾಯಕರು ಕೂಡ ಪಾದಯಾತ್ರೆ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು.
ಪಾಂಚಜನ್ಯ ಮೊಳಗಿಸೋಣ ಬನ್ನಿ: ಇದಕ್ಕೂ ಮೊದಲು ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಕುಮಾರ್, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ನಮ್ಮ ಹೋರಾಟದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ನಾನು ಆ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಇದು ನಮ್ಮ ಹೋರಾಟ ಅಲ್ಲ. ರಾಜ್ಯ ಜನರ ಬದುಕಿಗಾಗಿ ಹೋರಾಟ, ಬೆಂಗಳೂರು ಜನರ ಕುಡಿಯುವ ನೀರಿಗಾಗಿ ಹೋರಾಟ. ಕಾವೇರಿ ಜಲಾನಯನ ಪ್ರದೇಶದ ಜನರು, ಜನರ ಹಿತಕ್ಕಾಗಿ ನಡೆಯುತ್ತಿರುವ ಹೋರಾಟ. ಅದಕ್ಕಾಗಿ ಐದು ದಿನ ಬಿಸಿಲಿದ್ದರೂ ನಾವು ಹೆಜ್ಜೆ ಹಾಕೋಣ ಎಂದು ಕರೆ ನೀಡಿದರು.
ಡಬಲ್ ಎಂಜಿನ್ ಸರ್ಕಾರ 2 ದಿನದಲ್ಲಿ ಪರಿಸರ ಇಲಾಖೆ ಅನುಮತಿ ಪಡೆದು ಯೋಜನೆ ಆರಂಭಿಸಬಹುದು. ನಾವು ಆಗ ಗುದ್ದಲಿ ಪೂಜೆ ಕಾರ್ಯಕ್ರಮಕ್ಕೆ ಇದೇ ರೀತಿ ಬಂದು ನಿಮಗೆ ಬೆಂಬಲ ಸೂಚಿಸುತ್ತಿದ್ದೆವು. ಆದರೆ ಅವರು ಜನರ ಹಿತ ಮರೆತಿದ್ದಾರೆ. ಹೀಗಾಗಿ ಇಂದು ಈ ಪಾದಯಾತ್ರೆ ಆರಂಭಿಸಿ, ಮಾಚ್‌ರ್ 3 ರಂದು ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಎಲ್ಲರೂ ಸೇರಿ ಪಾಂಚಜನ್ಯ ಮೊಳಗಿಸೋಣ ಬನ್ನಿ ಎಂದರು.