ಹಿಂದುಳಿದ ಹಾಗೂ ದಲಿತ ಹಿಂದುಗಳ ಸಂಘಟನೆ, ಮಠಗಳ ಏಳಿಗೆಗಾಗಿ ಜನವರಿ 14 ರಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಿ ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು ಎಂದು ಸಭೆಯಲ್ಲಿ ಘೋಷಣೆ ಮಾಡಲಾಯಿತು.
ಬಾಗಲಕೋಟೆ (ಅ.21): ಇದು ಅತೃಪ್ತರ ಸಭೆ ಅಲ್ಲ, ಇದು ಸಾಧುಸಂತರ ಭಕ್ತರ ಸಭೆ. ಸಂತೃಪ್ತಿಯಿಂದ ಹಿಂದುತ್ವವನ್ನು ರಾಜ್ಯದಲ್ಲಿ ಹರಿಡಿಸಲು ಹೊರಟಿರುವ ಸಭೆ ಇದಾಗಿದೆ. ಹಿಂದುಳಿದ ಹಾಗೂ ದಲಿತ ಹಿಂದುಗಳ ಸಂಘಟನೆ, ಮಠಗಳ ಏಳಿಗೆಗಾಗಿ ಜನವರಿ 14 ರಂದು ಕೂಡಲಸಂಗಮದಲ್ಲಿ ಬೃಹತ್ ಸಮಾವೇಶ ನಡೆಸಿ ಸಂಕ್ರಾಂತಿ ದಿನ ಹೊಸ ಬ್ರಿಗೇಡ್ ಸ್ಥಾಪನೆ ಮಾಡಲಾಗುವುದು ಎಂದು ಸಭೆಯಲ್ಲಿ ಘೋಷಣೆ ಮಾಡಲಾಯಿತು. ಬಾಗಲಕೋಟೆ ಚರಂತಿಮಠದ ಶಿವಾನುಭವ ಮಂಟಪದಲ್ಲಿ ಭಾನುವಾರ ಪ್ರಸಕ್ತ ಹಿಂದುಳಿದ ದಲಿತ ಮತ್ತು ಸಮಗ್ರ ಹಿಂದೂ ಸಮಾಜದ ಸಮಸ್ಯೆಗಳು ಮತ್ತು ಸವಾಲುಗಳು ಕುರಿತು ಹಮ್ಮಿಕೊಂಡಿದ್ದ ಚಿಂತನ ಮಂಥನ ಸಭೆಯಲ್ಲಿ ಹೊಸ ಬ್ರಿಗೇಡ್ ಸ್ಥಾಪನೆಗೆ ನಿರ್ಣಯ ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಮಾತನಾಡಿ, ಇದು ಅತೃಪ್ತರ ಸಭೆ ಅಲ್ಲ. ದಲಿತ, ಹಿಂದುಳಿದ ಹಿಂದೂಗಳ ಹಕ್ಕುಗಳಿಗಾಗಿ ನಡೆಯುತ್ತಿರುವ ಹೋರಾಟವಾಗಿದೆ. ಮುಸ್ಲಿಂ, ಕ್ರಿಶ್ಚಿಯನ್ ರಿಗೆ ದೊರೆಯುತ್ತಿರುವ ಸರ್ಕಾರದ ಅನುದಾನ ಹಿಂದುಳಿದ ಮಠಗಳಿಗೂ ಸಿಗಬೇಕು. ರಾಜಕಾರಣ ನನ್ನ ವೈಯಕ್ತಿಕ ವಿಚಾರ. ಈ ಸಂಘಟನೆಯಲ್ಲಿ ಅದನ್ನು ಬೆರೆಸಲು ಹೋಗುವುದಿಲ್ಲ. ಭಾರತಾಂಬೆ ಬಂಜೆ ಅಲ್ಲ. ನಾವೆಲ್ಲ ಷಂಡರಲ್ಲ. ಈ ಹಿಂದೆ ರಾಯಣ್ಣ ಬ್ರಿಗೇಡ್ ಹಿರಿಯ ಮಾತಿಗೆ ಗೌರವ ಕೊಟ್ಟು ಹಿಂಪಡೆದುಕೊಂಡೆ. ಈ ಸಾರಿ ಹಾಗೇ ಆಗುವದಕ್ಕೆ ಬಿಡುವುದಿಲ್ಲ. ಪಕ್ಷ ನನಗೆ ಡಿಸಿಎಂ, 5 ಸಾರಿ ಶಾಸಕ, ವಿ.ಪ ಸದಸ್ಯ ಎಲ್ಲವನ್ನು ಮಾಡಿದೇ. ತಾಯಿ ಸ್ವರೂಪಿ ಪಕ್ಷಕ್ಕೆ ಕೆಲವರು ಕುತ್ತಿಗೆ ಹಿಚುಕುವ ಕೆಲಸ ಮಾಡುತ್ತಿದ್ದಾರೆ. ಹಿರಿಯರು ರಕ್ತ ಸುರಿಸಿ ಕಟ್ಟಿರುವ ಪಕ್ಷವನ್ನು ಹಾಳು ಮಾಡಲು ಬಿಡುವುದಿಲ್ಲ ಅಂತ ಗರ್ಜನೆ ಮಾಡಿದರು.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಕನ್ನಡಿಗರಿಗೆ ಆಸಕ್ತಿ ಇಲ್ಲ: ಕೇಂದ್ರ ಸಚಿವ ಸೋಮಣ್ಣ
ತಿಂಥಣಿ ಕಾಗಿನೆಲೆ ಗುರುಪೀಠದ ಸಿದ್ದರಾಮಾನಂದ ಸ್ವಾಮೀಜಿ ಮಾತನಾಡಿ, ವಂಚನೆಗೆ ಒಳಗಾಗಿರುವ ಬಹುಜನ ಸಮುದಾಯಗಳ ಸಂಸ್ಕೃತಿ ರಕ್ಷಣೆಗಾಗಿ ಇದು ನಿಲುವು ತೆಗೆದುಕೊಳ್ಳಬೇಕಿದೆ. ತಾತ್ವಿಕ ಬದ್ಧತೆ, ಸಿದ್ಧಾಂತ ಬದ್ಧತೆ ಇರುವ ಸಂಘಟನೆ ಸ್ಥಾಪಿಸಲಾಗುತ್ತಿದೆ. ಗೆದ್ದೆತ್ತಿನ ಬಾಲ ಹಿಡಿಯುವವರು ನೆಮಗೆ ಬೇಕಿಲ್ಲ. ಹಿಂದು ಸಮಾಜದಲ್ಲಿ ಮೇಲ್ವರ್ಗದ ಮಠಾಧೀಶರಿಗೆ ಸರ್ಕಾರದ ಕಾಸು ಸಿಕ್ಕಿಲ್ಲ. ಈಶ್ವರಪ್ಪ ಪಕ್ಷದಿಂದ ಅನ್ಯಾಯ ಆಗಿದೆ ಅಂತ ಹೋರಾಟ ಮಾಡುತ್ತಿಲ್ಲ. ಪಕ್ಷಕ್ಕೆ ಆಗಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ್ದಾರೆ. ಸಂಘ ಪರಿವಾರ ಹಾಗೂ ಪಕ್ಷದ ಹಿರಿಯರು ಇದನೆಲ್ಲ ಗಮನಿಸುತ್ತಿಲ್ಲ ಎಂದರು.
ಎಲ್ಲೆಡೆ ಕುಟುಂಬ ರಾಜಕಾರಣ, ಸ್ವಾರ್ಥ ಹೆಚ್ಚಾಗಿದ್ದು, ನಿಸ್ವಾರ್ಥ ರಾಜಕಾರಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಈಶ್ವರಪ್ಪ ತಮ್ಮ ರಾಜಕೀಯ ಸಾಕಷ್ಟು ಏಳು ಬೀಳು ಕಂಡಿದ್ದಾರೆ. ಅವರ ಬೆನ್ನಿಗೆ ಮಠಾಧೀಶರು ನಿಲ್ಲಲಾಗುವುದು ಎಂದು ಸ್ವಾಮೀಜಿ ಅಭಯ ನೀಡಿದರು. ಮಕನಾಪುರದ ಸೋಮಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಹಿಂದುಳಿದ ವರ್ಗದ ವ್ಯಕ್ತಿಯಿಂದ ಏನೆಲ್ಲ ಲಾಭ ಪಡೆದು ಅವನನ್ನು ತುಳಿಯುವುದು ಯಾವ ರಾಜಕೀಯ. ಈಶ್ವರಪ್ಪಗೆ ಅನ್ಯಾಯವಾದರೆ ಯಾರೂ ಪ್ರಶ್ನೆ ಮಾಡಲಿಲ್ಲ. ಪಕ್ಷ ಬಿಟ್ಟು ಹೊರಗೆ ಹೋಗಿ ಬಂದವರಿಗೆ 4 ಬಾರಿ ಮುಖ್ಯಮಂತ್ರಿ ಮಾಡುವುದು ಯಾವ ನ್ಯಾಯ. ಹಿಂದುಳಿದವರನ್ನು ತುಳಿದರೆ, ಭಗವಂತ ನಿಮ್ಮನ್ನು ತುಳಿಯುತ್ತಾನೆ ಎಂದು ಬಿಜೆಪಿ ನಾಯಕರಿಗೆ ಛಾಟಿ ಬೀಸಿದರು.
ಹುಬ್ಬಳ್ಳಿಯ ಚಂದ್ರಶೇಖರ ಸ್ವಾಮೀಜಿ, ಅಭಿನವ ಬಸವರಾಜ ಸ್ವಾಮೀಜಿ, ಮಾಧುಲಿಂಗ ಸ್ವಾಮೀಜಿ, ಸೇಡಂನ ಮಾತಾ ನಂದೀಶ್ವರಿ, ಹುಲಿಜಂತಿ ಮಾಳಿಂಗರಾಯ ಸ್ವಾಮೀಜಿ, ಚಿಕ್ಕಗಲಗಲಿಯ ಜನಾರ್ಧನ ಸ್ವಾಮೀಜಿ ಹಾಗೂ ಅಮರೇಶ್ವರ ಸ್ವಾಮೀಜಿಗಳು ಮಾತನಾಡಿ, ಹಿಂದುಳಿದ, ದಲಿತ ವರ್ಗದವರ ಏಳಿಗೆಗೆ ಶ್ರಮಿಸುವ ಈಶ್ವರಪ್ಪ ಅವರ ಬೆನ್ನಿಗೆ ಎಲ್ಲ ಸ್ವಾಮೀಜಿಗಳು ಇದ್ದೇವೆ. ಹಿಂದುತ್ವ, ಹಿಂದೂ ಸಂಸ್ಕೃತಿ ಉಳಿವಿಗೆ ಕೈ ಜೋಡಿಸಲಾಗುವುದು ಎಂದು ತಿಳಿಸಿದರು. 60ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಜಿಲ್ಲೆಯ ಅನೇಕ ಬಿಜೆಪಿ ಕಾರ್ಯಕರ್ತರು ಸಹ ಸಭೆಯಲ್ಲಿ ಭಾಗವಹಿಸಿದ್ದರು.
ಯೋಗೇಶ್ವರ್ ಕಾಂಗ್ರೆಸ್ ಜತೆ ಸಂಪರ್ಕದಲ್ಲಿದ್ದಾರೆ: ಎಚ್.ಡಿ.ಕುಮಾರಸ್ವಾಮಿ
ಜಕನೂರಿನ ಮಾದುಲಿಂಗ ಸ್ವಾಮೀಜಿ, ಅಮರೇಶ್ವರ ಸ್ವಾಮೀಜಿ, ಸೋಮೇಶ್ವರ ಸ್ವಾಮೀಜಿ, ಜನಾರ್ಧನ ಸ್ವಾಮೀಜಿ, ರೇವಣಸಿದ್ದೇಶ್ವರ ಮಠದ ಶರಭಯ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಸೋಮನಕೊಪ್ಪದ ನೀಲಲೂಹಿತ ಸ್ವಾಮೀಜಿ, ಹಳಿಂಗಳಿಯ ಮಹಾವೀರ ಅಲ್ಲಮಪ್ರಭು ಸ್ವಾಮೀಜಿ, ಹಾಲುಮತ ಹುಲಜಂತಿಯ ಮಹಾಳಿಂಗರಾಯ ಸ್ವಾಮೀಜಿ, ಮಾಜಿ ಶಾಸಕ ಗೋಳಿಹಟ್ಟಿ ಶೇಖರ, ಹಿಂದುಳಿದ ವರ್ಗಗಳ ಮುಖಂಡ ಮುಕುಡಪ್ಪ, ವೀರಣ್ಣ ಹಳೇಗೌಡರ ಸೇರಿದಂತೆ ಇತರರು ಇದ್ದರು.