ಅಧಿಕಾರಿಗಳ ಮೊಬೈಲ್‌ ಮೋಹ ಬಿಡಿಸಲು ಸಚಿವ ಪ್ರಿಯಾಂಕ್‌ ಖರ್ಗೆ ಮಾಡಿದ್ದೇನು?

By Kannadaprabha News  |  First Published Oct 21, 2024, 10:15 AM IST

ವಿಜಯೇಂದ್ರ ಮಾಡುತ್ತಿರುವುದು ತಮ್ಮ ಹೊಗಳಿಕೆಯೋ ಕಾಲೆಳೆತವೋ ಎಂಬುದು ತಿಳಿಯದಂತಾದ ಕೋಟ ಮಾತ್ರ ಮುಜುಗರದ ನಗು ನಗುತ್ತಾ ಇನ್ನಷ್ಟು ಮುದುಡಿಕೊಂಡರು.


ರಾಜಕಾರಣದಲ್ಲಿ ಯಶಸ್ವಿಯಾಗಲು ನೂರಾರು ಸ್ಟ್ರಾಟಜಿಗಳಿವೆ. ಅದರಲ್ಲಿ ಅಯ್ಯೋ ಪಾಪದವ ಎಂದು ಎಲ್ಲರೂ ಭಾವಿಸುವಂತೆ ಕಾಣಿಸಿಕೊಳ್ಳುವುದು ಕೂಡ ಒಂದೇ? ಗೊತ್ತಿಲ್ಲ. ಆದರೆ, ಮೊನ್ನೆ ಉಡುಪಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ನಮ್ಮ ಕೋಟ ಶ್ರೀನಿವಾಸ ಪೂಜಾರಿ ಅವರ ಗೆಲುವಿನ ಸ್ಟ್ರಾಟಜಿಯನ್ನು ಬಿಚ್ಚಿಡುತ್ತಾ ಹೋದಂತೆ ಹೌದಲ್ಲ, ಪಾಪದವ ಅನ್ನಿಸಿಕೊಳ್ಳೋದು ಕೂಡ ಲಾಭದಾಯಕ ಎಂಬ ಭಾವ ಬರುವಂತಾಯಿತು. ಏನಾಯಿತು ಎಂದರೆ, ಉಡುಪಿಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸದಸ್ಯರ ಸಮಾವೇಶದಲ್ಲಿ ಮಾತನಾಡಿದ ವಿಜಯೇಂದ್ರ, ವೇದಿಕೆಯಲ್ಲಿದ್ದ ಕೋಟ ಪೂಜಾರರನ್ನು ತೋರಿಸಿ, ಇವರನ್ನು ನೋಡಿದ್ರೆ ನಿಮಗೇನನ್ನಿಸುತ್ತದೆ? 

ಪಾಪ ಅಂತ ಅನ್ನಿಸುವುದಿಲ್ವಾ ಎಂದು ಕಾರ್ಯಕರ್ತರನ್ನು ಕೇಳಿದರು. ಕಾರ್ಯಕರ್ತರು ಸಮರ್ಪಕ ಉತ್ತರ ಕೊಡದಿದ್ದಾಗ ವಿಜಯೇಂದ್ರ ಮಾತು ಮುಂದುವರೆಸಿ, ಕೋಟ ಅವರನ್ನು ನೋಡಿದರೆ ಪಾಪದವ ಅನ್ನಿಸುವುದಿಲ್ಲವೇ ಎಂದು ಪ್ರಶ್ನಿಸಿದರು. ಪಂಚಾಯತಿ ಚುನಾವಣೆಗೆ ನಿಂತಾಗ ನಮ್ಮ ಊರಿನವರು ಪಾಪದವರು ಕಣ್ರಿ ಅಂತ ಗೆಲ್ಲಿಸಿದ್ರಿ, ನಂತರ ತಾಪಂ, ಜಿಪಂಗೂ ಗೆಲ್ಲಿಸಿದ್ರಿ, ವಿಧಾನ ಪರಿಷತ್‌ಗೆ ಟಿಕೆಟ್ ಸಿಕ್ಕಿದಾಗ್ಲೂ ನಮ್ಮ ಪೂಜಾರ್ರು ಪಾಪದವ್ರು ಅಂತ ಗೆಲ್ಲಿಸಿದ್ರಿ, ಅದೂ ಮೂರು ಮೂರು ಬಾರಿ ಗೆಲ್ಲಿಸಿದ್ರಿ. ಯಡಿಯೂರಪ್ಪ ಮಂತ್ರಿ ಮಂಡಲದಲ್ಲಿ ಉಡುಪಿ ಜಿಲ್ಲೆಯವರು ಬೇಕು ಅಂದಾಗ ಕೋಟ ಪೂಜಾರ್ರು ಬಹಳ ಪಾಪದವರು ಅಂತ ಅವರನ್ನೇ ಮಂತ್ರಿ ಮಾಡಿದ್ರು, ನಂತ್ರ ವಿಪಕ್ಷ ನಾಯಕರನ್ನಾಗಿಯೂ ಮಾಡಿದ್ವು. ಮೊನ್ನೆ ಲೋಕಸಭೆಗೂ ಟಿಕೆಟ್ ಕೊಟ್ಟೆವು, ಆಗಲೂ ನೀವು ಕೈಬಿಡಲಿಲ್ಲ, ಪಾಪ ಪಾಪ ಅಂತಾನೇ ಓಟು ಹಾಕಿ ಗೆಲ್ಲಿಸಿದ್ರಿ, ಎಂತಹ ಅದೃಷ್ಟ ನೋಡ್ರಿ ಎಂದಾಗ ಎಲ್ಲರಿಗೂ ಹೌದಲ್ಲ ಅನಿಸಿತು.

Tap to resize

Latest Videos

ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಹಲ್ಲೆ: ಪೊಲೀಸರ ಪ್ರಕರಣ ಮರು ವಿಚಾರಣೆಗೆ ಹೈಕೋರ್ಟ್‌ ಅಸ್ತು

ಆದರೆ, ವಿಜಯೇಂದ್ರ ಮಾಡುತ್ತಿರುವುದು ತಮ್ಮ ಹೊಗಳಿಕೆಯೋ ಕಾಲೆಳೆತವೋ ಎಂಬುದು ತಿಳಿಯದಂತಾದ ಕೋಟ ಮಾತ್ರ ಮುಜುಗರದ ನಗು ನಗುತ್ತಾ ಇನ್ನಷ್ಟು ಮುದುಡಿಕೊಂಡರು. ಆಗ ಆರ್.ಅಶೋಕ್, ಛಲವಾದಿ, ಸುನಿಲ್ ಕುಮಾರ್ ಪೂಜಾರ್ರನ್ನು ನೋಡಿ ನಕ್ಕು ಛೇಡಿಸಲಾರಂಭಿಸಿದರು. ಸಭಾಂಗಣ ಕಾರ್ಯಕರ್ತರ ಚಪ್ಪಾಳೆಯಿಂದ ತುಂಬಿಹೋಯಿತು. ಮಾತು ಮುಂದುವರೆಸಿದ ವಿಜಯೇಂದ್ರ, ಕೋಟ ಅವರಷ್ಟು ಅದೃಷ್ಟದ ರಾಜಕಾರಣಿ ಯಾರೂ ಇರಲಿಕ್ಕಿಲ್ಲ, ಅವರು ಮುಂದೆ ಕೇಂದ್ರದ ಮಂತ್ರಿ ಆದ್ರೂ ಆದಾರು... ಎಂದುಬಿಟ್ಟರು. ಕೊನೆಗೆ ಕೋಟ ಅವರೇ ‘ಸಾಕು ಬಿಡಿ ಮಾರ್ರೆ’ ಎಂದಾಗ, ಇಲ್ಲಾ ನಾನು ತಮಾಷೆಗೆ ಹೇಳಿದ್ದಲ್ಲ, ಪ್ರೀತಿಯಿಂದ ಹೇಳಿದ್ದು ಎಂದರು. ಆದರೆ, ಇದನ್ನು ನಂಬಲು ಯಾರೂ ತಯಾರಿರಲಿಲ್ಲ!

ಸಚಿವರ ಮಾತಿಗೆ ಮೊಬೈಲ್‌ ಗಪ್‌ಚುಪ್‌
ಸಭೆ, ಸಮಾರಂಭ, ಬಸ್‌, ಟ್ರೈನ್‌ ಎಲ್ಲಿಯೇ ಹೋಗಿ, ಅಕ್ಕಪಕ್ಕದವರ ಜೊತೆ ಮಾತಿಲ್ಲ, ಕತೆಯಿಲ್ಲ, ತಲೆ ತಗ್ಗಿಸಿ ಮೊಬೈಲ್‌ನಲ್ಲಿ ಮುಳುಗುವವರೇ ಹೆಚ್ಚು. ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ, ಪರಿಣಾಮಕಾರಿಯಾಗಿ ಜಾರಿಗೆ ತರುವ ಉದ್ದೇಶದಿಂದ ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯ ವಿವಿಧ ಅಧಿಕಾರಿಗಳ ಸಮ್ಮೇಳನ ಸಹ ಇದಕ್ಕೆ ಹೊರತಾಗಿರಲಿಲ್ಲ.

ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಇಲಾಖೆಯ ಜವಾಬ್ದಾರಿ, ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಮಾತನಾಡುತ್ತಾ, ಮುಂಬೈ ಡಬ್ಬಾವಾಲಾಗಳ ಸೇವೆಯ ನಿಖರತೆ ಶೇ.99.99ರಷ್ಟು ಇದೆ. ನಮ್ಮ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆ ಶೇ.10ರಷ್ಟು ಇದೆ ಎಂದೆಲ್ಲಾ ಸಣ್ಣದಾಗಿ ತಿವಿಯುತ್ತಿದ್ದರು. ಆದರೆ ಮುಂದೆ ಕುಳಿತಿದ್ದ ಅನೇಕ ಅಧಿಕಾರಿಗಳು ಮೊಬೈಲ್‌ನಲ್ಲಿ ಮಗ್ನರಾಗಿದ್ದನ್ನು ನೋಡಿದ ಸಚಿವರಿಗೆ ಕೊಂಚ ಸಿಟ್ಟು ಬಂದೇ ಬಿಟ್ಟಿತು. ಆದರೂ ಬಂದ ಸಿಟ್ಟನ್ನು ತಡೆ ಹಿಡಿದು, ಇದನ್ನೆಲ್ಲ ನೋಡಿದರೆ ನನಗೆ ಬೇಸರವಾಗುತ್ತದೆ. ಕೆಆರ್‌ಐಡಿಎಲ್‌ ಎಂ.ಡಿ. ಬಸವರಾಜ್‌ ಅವರೇ, ಮೊಬೈಲ್‌ ನೋಡುವುದನ್ನು ಬಿಡಿ ಎಂದು ಹೇಳುತ್ತಿದ್ದಂತೆ ಕುಳಿತಿದ್ದ ಅಧಿಕಾರಿಗಳ ಮೊಬೈಲ್‌ಗಳು ಗಪ್‌ಚುಪ್‌ ಎಂದು ಜೇಬು ಸೇರಿಕೊಂಡಿತು.

ಸರ್ಕಾರಿ ಉದ್ಯೋಗ ಕೊಡಿಸೋದಾಗಿ ಮಹಿಳೆಗೆ ₹47 ಲಕ್ಷ ವಂಚಿಸಿದ ಶಸಸ್ತ್ರ ಮೀಸಲು ಪಡೆ ಕಾನ್‌ಸ್ಟೇಬಲ್

ಇಷ್ಟಕ್ಕೆ ಸುಮ್ಮನಾಗದ ಸಚಿವರು ಇನ್ನುಮುಂದೆ ಇಂತಹ ಅಧಿಕಾರಿಗಳ ಸಮ್ಮೇಳನ ಮಾಡಿದಾಗ ಎಲ್ಲರ ಮೊಬೈಲ್‌ಗಳನ್ನು ಪಡೆದುಕೊಳ್ಳುವ ವ್ಯವಸ್ಥೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಅಷ್ಟೇ ಅಲ್ಲ, ದಿನವಿಡೀ ನಡೆಯುವ ಸಭೆಯಲ್ಲಿ ನಾನು ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತೇನೆ. ಮುಂದೆ ಕುಳಿತರೆ ಹಿಂದಿದ್ದವರು ಏನು ಮಾಡುತ್ತಾರೆ ಎಂದು ತಿಳಿಯುವುದಿಲ್ಲ. ಹಿಂದೆ ಕುಳಿತು ಎಲ್ಲರ ಬಗ್ಗೆ ಗಮನ ಹರಿಸುತ್ತೇನೆ ಎಂದು ಖಡಕ್ಕಾಗಿ ಹೇಳುತ್ತಿದ್ದಂತೆ ಅಧಿಕಾರಿಗಳು ಮೊಬೈಲ್‌ ಸೈಲೆಂಟ್‌ ಮೋಡ್‌ನಲ್ಲಿಟ್ಟು ಜೇಬಿನಲ್ಲಿಟ್ಟುಕೊಂಡು ಭಾಷಣ ಆಲಿಸತೊಡಗಿದರು.

- ಸುಭಾಶ್ಚಂದ್ರ ವಾಗ್ಳೆ
- ಚಂದ್ರಮೌಳಿ ಎಂ.ಆರ್‌.

click me!