ಕಳೆದ 2016ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರಿಗೆ ಎರಡನೇ ಬಾರಿ ಡಬಲ್ ಧಮಾಕಾ ಎಂಬಂತೆ ಸಚಿವ ಸ್ಥಾನದ ಜೊತೆ ಜೊತೆಗೆ ಜಿಲ್ಲಾ ಉಸ್ತುವಾರಿ ಸ್ಥಾನ ಕೂಡ ಲಭಿಸಿದ್ದು, ಜಿಲ್ಲೆಯ ಜನತೆ ನಿರೀಕ್ಷೆ ಈಡೇರಿಸುವ ಜೊತೆಗೆ ಆಡಳಿತವನ್ನು ಬಿಗಿಗೊಳಿಸುವತ್ತ ಗಮನ ಹರಿಸಬೇಕಿದೆ.
ಅಪ್ಪಾರಾವ್ ಸೌದಿ
ಬೀದರ್ (ಜೂ.10) ಕಳೆದ 2016ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿಯೂ ಮಂತ್ರಿಯಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಈಶ್ವರ ಖಂಡ್ರೆ ಅವರಿಗೆ ಎರಡನೇ ಬಾರಿ ಡಬಲ್ ಧಮಾಕಾ ಎಂಬಂತೆ ಸಚಿವ ಸ್ಥಾನದ ಜೊತೆ ಜೊತೆಗೆ ಜಿಲ್ಲಾ ಉಸ್ತುವಾರಿ ಸ್ಥಾನ ಕೂಡ ಲಭಿಸಿದ್ದು, ಜಿಲ್ಲೆಯ ಜನತೆ ನಿರೀಕ್ಷೆ ಈಡೇರಿಸುವ ಜೊತೆಗೆ ಆಡಳಿತವನ್ನು ಬಿಗಿಗೊಳಿಸುವತ್ತ ಗಮನ ಹರಿಸಬೇಕಿದೆ.
undefined
ಈ ಹಿಂದಿನ ಸರ್ಕಾರದ ಲೋಪದೋಷಗಳನ್ನು ಎತ್ತಿ ಹಿಡಿದು ವಿಧಾನಸೌಧದ ಒಳ, ಹೊರಗೂ ಸತತ ಹೋರಾಟ ನಡೆಸಿ ಗಮನ ಸೆಳೆದಿದ್ದ ಖಂಡ್ರೆ ಇದೀಗ ತಮ್ಮ ಈ ಅವಧಿಯಲ್ಲಿ ಆಡಳಿತ ಹಳಿ ತಪ್ಪದಂತೆ ಎಚ್ಚರವಹಿಸಬೇಕಿದೆ. ಪ್ರವಾಸೋದ್ಯಮ, ಕೈಗಾರಿಕೋದ್ಯಮ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಜಿಡ್ಡು ಹಿಡಿದಿರುವ ವ್ಯವಸ್ಥೆಯನ್ನು ಬದಲಿಸಬೇಕಿದೆ. ಜನರ ಮನೆ ಬಾಗಿಲಿಗೆ ಯೋಜನೆ ತಲುಪುವಂತೆ, ಸಾಕಾರಗೊಳ್ಳುವ ಯೋಜನೆಗಳು ಜನರ ಮನೆ ಮುಟ್ಟುವಂತೆ ಮಾಡಬೇಕಿದೆ ಎನ್ನುತ್ತಾರೆ ಕ್ಷೇತ್ರದ ಜನತೆ.
ಸಚಿವ ಶರಣಪ್ರಕಾಶ ಪಾಟೀಲರಿಗೆ ಉಸ್ತುವಾರಿ ಪಟ್ಟ: ರಾಯಚೂರಲ್ಲಿ ಅಸಮಾಧಾನ ಸ್ಫೋಟ!...
ಜಿಲ್ಲೆಯಲ್ಲಿ ದಶಕದ ಹಿಂದೆ ಆರಂಭವಾಗಿರುವ ಒಳಚರಂಡಿ ವ್ಯವಸ್ಥೆ ಇಂದಿಗೂ ಪೂರ್ಣಗೊಂಡಿಲ್ಲ. ಒಂದು ಹಂತದಲ್ಲಿ ವಿರೋಧ ಪಕ್ಷದವರಾಗಿದ್ದಾಗ ಯುಜಿಡಿ ವಿಫಲವಾಗಿದೆ ಎಂದು ಆರೋಪಿಸಿದ್ದ ಖಂಡ್ರೆ ಇದೀಗ ನೂರಾರು ಕೋಟಿ ರು.ಗಳ ಯೋಜನೆ ಪೂರ್ಣಪ್ರಮಾಣದಲ್ಲಿ ಜನರಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖರಾಗಬೇಕಿದೆ. ಇದಕ್ಕಾಗಿ ಸಂಬಂಧಿತ ಗುತ್ತಿಗೆದಾರರ ಜುಟ್ಟು ಹಿಡಿಯಬೇಕಿದೆ. ನೀರಸವಾಗಿರುವ ಅಧಿಕಾರಿಗಳನ್ನ ಬದಲಾಯಿಸಬೇಕಿದೆ.
ಜಿಲ್ಲಾ ಸಂಕೀರ್ಣ ಹಾಗೂ ಬೀದರ್ ಮಿನಿ ವಿಧಾನಸೌಧ ನಿರ್ಮಾಣ ಖಂಡ್ರೆಗೆ ಹೊಸದೇನಿಲ್ಲ. ಸುಮಾರು 50 ಕೋಟಿ ರು.ಗಳ ಮಂಜೂರಾತಿ ದೊರೆತಾಗಿದೆ. ಕೇವಲ ರಾಜಕೀಯ, ಸ್ವ ಹಿತಾಸಕ್ತಿ, ಪ್ರತಿಷ್ಠೆಯಿಂದಾಗಿಯೇ ಒಂದು ದಶಕದಿಂದ ನಿರ್ಧಾರ ಮುಂದೂಡಲ್ಪಡುತ್ತಲೇ ಬರುತ್ತಿದೆ. ಈ ಬಗ್ಗೆ ಗಟ್ಟಿನಿರ್ಧಾರ ಕೈಗೊಳ್ಳುವ ಸಾಹಸ ಮಾಡಬೇಕಿದೆ.
ಗೋದಾವರಿ ನೆನೆಯಲಿ, ನೀರು ಹಿಡಿದಿಟ್ಟುಕೊಳ್ಳುವ ಯೋಜನೆ ತರಲಿ:
ಸದ್ಯಕ್ಕೆ ಜಿಲ್ಲೆಗೆ ಜೀವಜಲವಾಗಿರುವ ಕಾರಂಜಾ ಜಲಾಶಯ ಬರಿದಾಗುತ್ತಿದೆ. ಜಲಾಶಯಕ್ಕಾಗಿ ಬೀದಿಗೆ ಬಿದ್ದಿರುವ ರೈತ ಕುಟುಂಬಗಳಿಗೆ ಇನ್ನೂ ಸೂಕ್ತ ಪರಿಹಾರ ಸಿಕ್ಕಿಲ್ಲ. ಇಡೀ ರಾಜ್ಯದ ಪೈಕಿ ಬೀದರ್ ಜಿಲ್ಲೆಯಲ್ಲಿ ಮಾತ್ರ ಹಾದು ಹೋಗುವ ಗೋದಾವರಿ ನದಿ ನೀರಿನ ಸದ್ಬಳಕೆ ಮರೀಚಿಕೆಯಾಗಿದೆ. ಗೋದಾವರಿ ನೀರು ಹಿಡಿದಿಟ್ಟುಕೊಳ್ಳಲು ಮತ್ತಷ್ಟುಬಾಂದಾರ, ಏತ ನೀರಾವರಿಯಂತಹ ಯೋಜನೆಗಳನ್ನು ಜಿಲ್ಲೆಗೆ ತರಬೇಕಿದೆ. ಇದಕ್ಕಾಗಿ ಜಿಲ್ಲೆಯ ಉಸ್ತುವಾರಿಯಾಗಿ ಸರ್ಕಾರದ ಮುಂದೆ ನಮ್ಮ ಹಕ್ಕನ್ನು ಮಂಡಿಸಿ ಬರುವ ಬಜೆಟ್ನಲ್ಲಿ ಗೋದಾವರಿ ನೀರು ಬಳಕೆಗಾಗಿಯೇ ಪ್ರತ್ಯೇಕ ಅನುದಾನ ಪಡೆಯಬೇಕು ಎಂಬುದು ಜನರ ಆಶಯವಾಗಿದೆ.
ಇನ್ನು ಇಡೀ ವಿಶ್ವದಲ್ಲಿಯೇ ಅಪರೂಪ ಎಂಬಂತಿರುವ ಗುಹಾಂತರ ಬಾವಿಗಳ ಕರೇಜ್ ಜಿಲ್ಲಾ ಕೇಂದ್ರ ಬೀದರ್ನಲ್ಲಿದೆ. ಕಳೆದ ಬಾರಿ ಖಂಡ್ರೆ ಸಚಿವರಾಗಿದ್ದಾಗ ಬಿಡುಗಡೆಯಾಗಿದ್ದ 5 ಕೋಟಿ ರು. ಏನಾಯಿತು ಎಂಬುದೇ ಗೊತ್ತಾಗುತ್ತಿಲ್ಲ. ಕಿಂಚಿತ್ತೂ ಪುನಶ್ಚೇತನ ಆಗದಿದ್ದರೂ ಕೋಟ್ಯಂತರ ರುಪಾಯಿ ಖರ್ಚಾಗಿದೆ. ಈ ಬಗ್ಗೆ ಗಂಭೀರತೆ ತೋರಲಿ. ಪ್ರವಾಸಿ ತಾಣಗಳ ಅಭಿವೃದ್ಧಿಯಾಗಲಿ.
ರೈತರು ಅತಿವೃಷ್ಟಿ, ಅನಾವೃಷ್ಟಿಯಂಥ ಪ್ರಕೃತಿ ವಿಕೋಪಗಳಿಗೆ ತತ್ತರಿಸಿ ಹೋಗಿದ್ದಾರೆ. ಬಿಎಸ್ಎಸ್ಕೆ ಸಕ್ಕರೆ ಕಾರ್ಖಾನೆ ಮುಚ್ಚಿ ಹೋಗಿ ರೈತರು ಸಂಕಷ್ಟಕ್ಕೆ ದೂಡಲ್ಪಟ್ಟಿದ್ದಾರೆ. ಸಹಕಾರ ಹಾಗೂ ಖಾಸಗಿ ಕಾರ್ಖಾನೆಗಳ ಪೈಕಿ ಕೆಲವು ಸೂಕ್ತ ಬೆಲೆ ನೀಡುತ್ತಿಲ್ಲ, ಬಾಕಿ ನೀಡುವಲ್ಲಿ ಭಾರಿ ವಿಳಂಬ ಮಾಡುತ್ತಿವೆ. ಈ ಕುರಿತು ಸಚಿವರು ಪ್ರತ್ಯೇಕ ಸಭೆ ನಡೆಸಿ ಕಾಲಮಿತಿ ಹಾಕಬೇಕಿದೆ. ತೋಟಗಾರಿಕಾ ಬೆಳೆಗಳಿಗೆ ಪ್ರೋತ್ಸಾಹಿಸಬೇಕಿದೆ. ಸೋಯಾ ಬೆಳೆಗಾರರಿಗೆ ಸಹಕಾರವಾಗುವಂತೆ ಸಣ್ಣ ಕೈಗಾರಿಕಾಗಳನ್ನು ಆರಂಭಿಸುವುದು ಅತ್ಯಂತ ಅವಶ್ಯಕ. ಇದರಿಂದ ರೈತರಿಗೂ ಅನುಕೂಲ, ನಿರುದ್ಯೋಗ ಸಮಸ್ಯೆ ಕಿಂಚಿತ್ತಾದರೂ ಪರಿಹಾರಕ್ಕೆ ಸಹಕಾರಿಯಾಗಲಿದೆ.
ಬೀದರ್ ನಗರಸಭೆಗೆ ಚುನಾವಣೆ ಮುಗಿದು ಎರಡು ವರ್ಷ ಉರುಳಿದೆ. ಇನ್ನೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಭರ್ತಿ ಆಗಿಲ್ಲ. ಸದಸ್ಯರಿಗೂ ಅಧಿಕಾರ ಸಿಕ್ಕಿಲ್ಲ. ಇದು ನಗರದ ಅಭಿವೃದ್ಧಿಗೆ ಮಾರಕ. ಇದರತ್ತ ಗಮನಹರಿಸಬೇಕಿದೆ. ಮುಖ್ಯವಾಗಿ ಪೌರಾಡಳಿತ ಸಚಿವರಾದ ರಹೀಮ್ಖಾನ್ ಪಾತ್ರ ಇದರಲ್ಲಿ ಮುಖ್ಯವಾಗಿದೆ.
ಬೀದರ್ ಜಿಲ್ಲೆಯ ಕಲಾವಿದರಿಗೆ ಪ್ರೋತ್ಸಾಹಿಸುವತ್ತ ಕಾರ್ಯಕ್ರಮಗಳು ತರಲಿ, ಜಿಲ್ಲೆಯಲ್ಲಿ ಕ್ರೀಡಾಂಗಣಗಳ ಕೊರತೆಯಿದೆ. ಬೀದರ್ ಜಿಲ್ಲಾ ಕೇಂದ್ರದಲ್ಲಿರುವ ನೆಹರು ಕ್ರೀಡಾಂಗಣ ವ್ಯವಸ್ಥೆ ಇದೀಗ ಹದೆಗೆಟ್ಟು ಹೋಗಿದೆ. ಭಾಲ್ಕಿಯಲ್ಲಿ ಕ್ರೀಡಾಂಗಣ ನಿರ್ಮಾಣದ ಬೇಡಿಕೆ ಬಹುಬೇಗ ಈಡೇರಿಸಬೇಕಿದೆ. ಹೀಗೆಯೇ ಹತ್ತು ಹಲವಾರು ಸಾಲು ಸಾಲು ಬೇಡಿಕೆಗಳು ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಈಶ್ವರ ಖಂಡ್ರೆ ಮುಂದಿದ್ದು, ಜಿಲ್ಲೆಯ ಇನ್ನೋರ್ವ ಸಚಿವ ರಹೀಮ್ ಖಾನ್ ಜೊತೆಗೂಡಿ ಸಾಕಾರಗೊಳಿಸುವತ್ತ ತಡಮಾಡದೇ ಹೆಜ್ಜೆ ಇಡಲಿ ಎಂಬುದು ಮತದಾರರ ನಿರೀಕ್ಷೆಯಾಗಿದೆ.
ಜೀವ ಹಾನಿಯತ್ತ ಪರಿಸರ ಮಾಲಿನ್ಯ, ತಕ್ಷಣ ಕ್ರಮವಾಗಲಿ
ಬೀದರ್ ಜಿಲ್ಲೆಯಲ್ಲಿ ಪರಿಸರ ಮಾಲಿನ್ಯದ ಸಮಸ್ಯೆ ಮುಗಿಲೆತ್ತರಕ್ಕೆ ಬೆಳೆದಿದೆ. ಪರಿಸರ ಖಾತೆ ಸಚಿವರಾಗಿರುವ ಖಂಡ್ರೆ ಪರಿಸರಕ್ಕೆ ಧಕ್ಕೆ ತರುತ್ತಿರುವ ಕಾರ್ಖಾನೆಗಳಿಗೆ ಮೂಗುದಾರ ಹಾಕಬೇಕಿದೆ. ಕೇವಲ ಕಾಗದದ ಮೇಲೆ ಕ್ರಮವಾಗದೆ ಜನರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಗಂಭೀರ ಕ್ರಮವಾಗಲಿ. ಜಿಲ್ಲೆಯ ಕೈಗಾರಿಕಾ ಪ್ರದೇಶಗಳಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಅಳವಡಿಕೆ ಸರ್ಕಾರ ಸೂಕ್ತ ವ್ಯವಸ್ಥೆ ಮಾಡಲಿ ಎಂದು ಜನರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ಒಡಿಶಾ ದುರ್ಘಟನೆ: ನಮಗೆ ಸನ್ಮಾನ ಬೇಡವೆಂದ ಖಂಡ್ರೆ, ರಹೀಂ ಖಾನ್
ಕೃಷ್ಣಮೃಗ, ನವಿಲು ಸಂರಕ್ಷಣೆ:
ಜಿಲ್ಲೆಯಲ್ಲಿನ ಅರಣ್ಯೀಕರಣ ಹೆಚ್ಚಾಗಬೇಕಿದೆ. ಜೊತೆಗೆ ಹೇರಳವಾಗಿರುವ ನವಿಲುಗಳು, ಕೃಷ್ಣ ಮೃಗಗಳನ್ನು ಬೇಟೆಗಾರರಿಂದ ರಕ್ಷಿಸಲು ರಕ್ಷಿತಾರಣ್ಯ ಸ್ಥಾಪಿಸಬೇಕಿದೆ. ನವಿಲು ಧಾಮವನ್ನು ಅರಣ್ಯ ಸಚಿವ ಖಂಡ್ರೆ ಘೋಷಿಸಬೇಕಿದೆ.