ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿರುವ ಸರ್ಕಾರ ರಾಯಚೂರಿಗೆ ನೆರೆಯ ಕಲಬುರಗಿ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ನಿಯುಕ್ತಿಗೊಳಿಸಿದ್ದು, ಸ್ಥಳೀಯರಿಗೇ ಉಸ್ತುವಾರಿ ಪಟ್ಟಕಲ್ಪಿಸಬೇಕು ಎನ್ನುವ ಬೇಡಿಕೆಗೆ ಮನ್ನಣೆ ಸಿಗದ ಕಾರಣ ಜಿಲ್ಲೆ ಜನರು ಹೊಸ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಮಕೃಷ್ಣ ದಾಸರಿ
ರಾಯಚೂರು (ಜೂ.10) ರಾಜ್ಯದ ಎಲ್ಲ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿರುವ ಸರ್ಕಾರ ರಾಯಚೂರಿಗೆ ನೆರೆಯ ಕಲಬುರಗಿ ಜಿಲ್ಲೆಯ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರನ್ನು ನಿಯುಕ್ತಿಗೊಳಿಸಿದ್ದು, ಸ್ಥಳೀಯರಿಗೇ ಉಸ್ತುವಾರಿ ಪಟ್ಟಕಲ್ಪಿಸಬೇಕು ಎನ್ನುವ ಬೇಡಿಕೆಗೆ ಮನ್ನಣೆ ಸಿಗದ ಕಾರಣ ಜಿಲ್ಲೆ ಜನರು ಹೊಸ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 15 ವರ್ಷಗಳಿಂದ ಜಿಲ್ಲೆಗೆ ಸಚಿವ ಸ್ಥಾನ ಒದಗಿ ಬಂದಿರಲಿಲ್ಲ. ಆದರೆ ಎಐಸಿಸಿ ಕಾರ್ಯದರ್ಶಿ ಎನ್.ಎಸ್.ಬೋಸರಾಜುಗೆ ಈ ಬಾರಿ ಸಚಿವ ಸ್ಥಾನ ನೀಡಿದ್ದಾರೆ ಎನ್ನುವ ಸಂತೋಷ ಮಾಸುವ ಮುನ್ನವೆ, ಅವರಿಗೆ ಉಸ್ತುವಾರಿ ಜವಾಬ್ದಾರಿ ವಹಿಸಿಕೊಡದೆ ಇರುವುದು ಜಿಲ್ಲೆ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ರಾಯಚೂರು: ಕಲಬುರಗಿಗೆ ಏಮ್ಸ್ ಎಂದ ಸಚಿವ ಶರಣಪ್ರಕಾಶ ವಿರುದ್ಧ ಗೋ ಬ್ಯಾಕ್ ಚಳವಳಿ ಎಚ್ಚರಿಕೆ
ಹಿಂದೆ ನಿರಾಸೆ ಮೂಡಿಸಿದ್ದರು:
2013ರಲ್ಲಿ ಆಡಳಿತ ನಡೆಸಿದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಇದೇ ಡಾ.ಶರಣಪ್ರಕಾಶ ಪಾಟೀಲ್ ಅವರು ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದರು. ಆರಂಭದಲ್ಲಿ ಜಿಲ್ಲೆಯ ಅಭಿವೃದ್ಧಿ ಮಾಡುವ ಭರವಸೆ ಹುಟ್ಟಿಸಿದ್ದ ಶರಣಪ್ರಕಾಶ ಪಾಟೀಲ್ ಜಿಲ್ಲೆಯ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದೆ ನಿರಾಸೆ ಮೂಡಿಸಿದ್ದರು. ಹಿಂದೆ ಅವರ ಉಸ್ತುವಾರಿ ಕಾರ್ಯವನ್ನು ಕಣ್ಣಾರೆ ಕಂಡ ಜಿಲ್ಲೆಯ ಜನರು ಇದೀಗ ಮತ್ತೆ ಅವರನ್ನೇ ಉಸ್ತುವಾರಿಯನ್ನಾಗಿ ಮಾಡಿದ್ದಕ್ಕೆ ಕಿಡಿಕಾರಿದ್ದಾರೆ.
ಏಮ್ಸ್ ಪಡೆಯುವ ಹುನ್ನಾರ:
ಇತ್ತೀಚೆಗೆ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕಲಬುರಗಿಗೆ ಏಮ್ಸ್ ಪಡೆಯುವ ಪ್ರಯತ್ನ ಮಾಡುವುದಾಗಿ ಹೇಳಿಕೆ ನೀಡಿದ್ದರು. ಇದಕ್ಕೆ ರಾಯಚೂರು ಜಿಲ್ಲೆಯಲ್ಲಿ ವ್ಯಾಪಕ ವಿರೋಧ ವ್ಯಕ್ತಗೊಂಡಿರುವ ಬೆನ್ನಲ್ಲೆ ಅವರನ್ನೇ ಮತ್ತೆ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ. ಏಮ್ಸ್ಗಾಗಿ ಕಳೆದ 393 ದಿನಗಳಿಂದ ನಿರಂತರ ಧರಣಿ ನಡೆಯುತ್ತಿರುವ ಸಮಯದಲ್ಲಿಯೇ ಏಮ್ಸ್ ಪಡೆಯುವ ಹುನ್ನಾರ ಹೂಡಿರುವವರನ್ನೆ ಉಸ್ತುವಾರಿ ಸಚಿವರನ್ನಾಗಿ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ಭಾವಚಿತ್ರ ಸುಟ್ಟು ಆಕ್ರೋಶ:
ಉಸ್ತುವಾರಿ ಸಚಿವರ ಪಟ್ಟಿಬಿಡುಗಡೆಯಾಗುತ್ತಿದ್ದಂತೆ ಜಿಲ್ಲೆಯಲ್ಲಿ ಅಸಮಾಮಧಾನ ಸ್ಫೋಟಗೊಂಡಿದ್ದು, ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ರಾಯಚೂರು ಏಮ್ಸ್ ಮಂಜೂರು ಹೋರಾಟ ಸಮಿತಿ ನೇತೃತ್ವದಲ್ಲಿ ಕರವೇ (ಶಿವರಾಮೇಗೌಡ ಬಣ) ಡಾ.ರಾಜಕುಮಾರ ಅಭಿಮಾನಿಗಳ ಸಂಘ, ಅಖಿಲ ಕರ್ನಾಟಕ ರಕ್ಷಣಾ ಸಮಿತಿ, ಕನ್ನಡಿಗರ ರಕ್ಷಣಾ ಸಮಿತಿ, ಕನ್ನಡ ರಣದೀರರ ಪಡೆ ಹಾಗೂ ವಿವಿಧ ಸಂಘಟನೆಗಳು ಸೇರಿಕೊಂಡು ಮಿಂಚಿನ ಪ್ರತಿಭಟನೆ ನಡೆಸಲಾಯಿತು. ಸಚಿವ ಡಾ.ಶರಣಪ್ರಕಾಶ ಪಾಟೀಲ್ ಅವರ ಭಾವಚಿತ್ರವನ್ನು ಸುಟ್ಟಸಮಿತಿಯ ಮುಖಂಡರು ಶರಣಪ್ರಕಾಶ ಪಾಟೀಲ್ಗೆ ಉಸ್ತುವಾರಿ ಪಟ್ಟಬೇಡವೆ ಬೇಡ ಎನ್ನುವ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಮ್ಮವರೇ ನಮಗೆ ಚೆಂದ:
ಹಿಂದಿನ ಎರಡ್ಮೂರು ಸರ್ಕಾರಗಳಲ್ಲಿ (ವೆಂಕಟರಾವ್ ನಾಡಗೌಡರನ್ನು ಬಿಟ್ಟು) ಬೇರೆ ಜಿಲ್ಲೆಗಳ ಉಸ್ತುವಾರಿ ಸಚಿವರನ್ನೆ ನೇಮಕ ಮಾಡಿದ್ದರಿಂದ ಅವರೆಲ್ಲರೂ ರಾಷ್ಟ್ರೀಯ ದಿನಾಚರಣೆಗಳಲ್ಲಿ ಪಾಲ್ಗೊಳ್ಳಲು ಮಾತ್ರ ಆಗಮಿಸಿ ಉಳಿದ ವೇಳೆ ಜಿಲ್ಲೆ ಅಭಿವೃದ್ಧಿ ಕಡೆಗೆ ಗಮನ ಹರಿಸದೆ ಇರುವುದನ್ನು ಗಮನಿಸಿರುವ ಜಿಲ್ಲೆಯ ಜನರು ನಮ್ಮವರೇ ನಮಗೆ ಚೆಂದ ಎನ್ನುವ ತೀರ್ಮಾನಕ್ಕೆ ಬಂದಿರುವುದರಿಂದ ಅನ್ಯ ಜಿಲ್ಲೆಯವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಅಂಗೀಕರಿಸಲು ಮುಂದಾಗುತ್ತಿಲ್ಲ.
Agriculture: ಕಲಬುರಗಿಯಲ್ಲಿ ಕೃಷಿ ಮಾಹಿತಿ ರಥಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಚಾಲನೆ
ನಮ್ಮ ಜಿಲ್ಲೆಯವರೇ ಸಚಿವರಾಗಿರುವಾಗ ಬೇರೆ ಜಿಲ್ಲೆಯ ಡಾ.ಶರಣಪ್ರಕಾಶ ಪಾಟೀಲ್ಗೆ ಉಸ್ತುವಾರಿ ವಹಿಸಿಕೊಟ್ಟಿರುವ ಸರ್ಕಾರದ ನಿರ್ಧಾರವನ್ನು ಒಪ್ಪುವುದಿಲ್ಲ. ಕೂಡಲೇ ಜಿಲ್ಲೆಯ ಎನ್.ಎಸ್.ಬೋಸರಾಜುಗೆ ಉಸ್ತುವಾರಿ ಜವಾಬ್ದಾರಿ ನೀಡಬೇಕು. ಇಲ್ಲವಾದಲ್ಲಿ ಡಾ.ಶರಣಪ್ರಕಾಶ ಪಾಟೀಲ್ ಜಿಲ್ಲೆಗೆ ಬಂದರೆ ‘ಗೋ ಬ್ಯಾಕ್ ಚಳವಳಿ’ ಯನ್ನು ನಡೆಸಲಾಗುವುದು.
-ಅಶೋಕ ಕುಮಾರ ಜೈನ್, ಕರವೇ ಜಿಲ್ಲಾಧ್ಯಕ್ಷ, ರಾಯಚೂರು