ಬಿಜೆಪಿ, ಜನರ ಆಸೆಗಳಿಗೆ ಮಣ್ಣೆರಚಿ ನಡೆಸಿದ ದುರಾಡಳಿತ ಅಂತ್ಯವಾಗಿದೆ. ರಾಜ್ಯದಲ್ಲಿ ಗರ್ವದ ಕಾಲ ಹೋಗಿ, ಸರ್ವರ ಕಾಲ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ ಹೇಳಿದ್ದಾರೆ.
ಚಿಕ್ಕಮಗಳೂರು (ಜೂ.11) : ಬಿಜೆಪಿ, ಜನರ ಆಸೆಗಳಿಗೆ ಮಣ್ಣೆರಚಿ ನಡೆಸಿದ ದುರಾಡಳಿತ ಅಂತ್ಯವಾಗಿದೆ. ರಾಜ್ಯದಲ್ಲಿ ಗರ್ವದ ಕಾಲ ಹೋಗಿ, ಸರ್ವರ ಕಾಲ ಬಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್. ಚಂದ್ರಪ್ಪ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಸಮಿತಿ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲೆಯ ನೂತನ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಗೆದ್ದಿರುವ ನಾವು ಹಿಗ್ಗುವಂತದ್ದಲ್ಲ, ನಾವುಗಳು ಆ ರೀತಿಯಲ್ಲಿ ನಡೆದುಕೊಂಡರೆ ನಮಗೂ ಅದೇ ಕಾಲ ಬರುತ್ತದೆ ಎಂದು ಅರಿತುಕೊಳ್ಳಬೇಕು. ಇದು, ನಮಗೆ ಎಚ್ಚರಿಕೆ ಎಂದು ನೂತನ ಶಾಸಕರಿಗೆ ಕಿವಿಮಾತು ಹೇಳಿದರು.
undefined
ಜನ ರೊಚ್ಚಿಗೆದ್ದು ಕಾಂಗ್ರೆಸ್‌ಗೆ ವೋಟು ಹಾಕಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ತತ್ವದಡಿ ಅಂಬೇಡ್ಕರ್ ಸಂವಿಧಾನ ರಚಿಸಿದರು. ಆದರೆ, ಬಿಜೆಪಿಯವರು ಸಮಾನತೆ ಇಲ್ಲದ ಸಂವಿಧಾನ ಅದು, ಸಂವಿಧಾನವೇ ಅಲ್ಲ ಎಂದು ಹೇಳುತ್ತಿದ್ದರು. ಭ್ರಷ್ಟಾಚಾರಿಗಳ ಕೈಗೆ ಸಿಲುಕಿ ಸಂವಿಧಾನವನ್ನು ಬುಡಮೇಲೂ ಮಾಡಿ ಜಾತಿ, ಜಾತಿಗಳ ಮಧ್ಯೆ ವಿಷಬೀಜ ಬಿತ್ತಿ, ಜನರನ್ನು ಎತ್ತಿಕಟ್ಟಿ9 ವರ್ಷಗಳ ಕಾಲ ಕೇಂದ್ರ ಸರ್ಕಾರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿತ್ತು. ಅದ್ದರಿಂದ ಕಾಂಗ್ರೆಸ್ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು 135 ಶಾಸಕರನ್ನು ಗೆಲ್ಲಿಸುವ ಮೂಲಕ ಕರ್ನಾಟಕಕ್ಕೆ ಸಂವಿಧಾನದ ಸವಿ ನೆನಪು ತಂದುಕೊಟ್ಟಿದೆ ಎಂದು ಹೇಳಿದರು.
ನಮ್ಮ ಬಗ್ಗೆ ಜನರು ದೊಡ್ಡ ನಿರೀಕ್ಷೆ ಹೊಂದಿದ್ದಾರೆ. ನಾವು ಇದನ್ನು ಅಧಿಕಾರ ಎಂದು ಭಾವಿಸಿದರೆ ತಪ್ಪಾಗುತ್ತದೆ. ಅಧಿಕಾರದಿಂದ ಬರುವ ಮದ ಏರಿದರೆ, ನಮ್ಮ ಏಳಿಗೆಗೆ ಒಳ್ಳೆಯದಲ್ಲ ಎಂದರು. ಶಾಸಕತ್ವದ ಅಹಂ ಯಾವತ್ತೂ ಬರಬಾರದು. ಮತ ಕೊಟ್ಟಎಲ್ಲರೂ ಶಾಸಕರೇ, ಅವರ ಜತೆಯಲ್ಲಿ ನಾನು ಕಾರ್ಯಕರ್ತ ಎಂಬ ಭಾವನೆ ಹೊಂದಿರಬೇಕು.
ಕಾರ್ಯಕರ್ತರನ್ನು ದೇವರಂತೆ ಕಾಣಬೇಕು. ಅವರ ಮನಸ್ಸುಗಳಿಗೆ ನೋವಾಗುವ ರೀತಿಯಲ್ಲಿ ನಡೆದುಕೊಳ್ಳಬಾರದು. ಅವರು ನಮಗೆ ಅಧಿಕಾರ ಕೊಟ್ಟಿಲ್ಲ, ಜವಾಬ್ದಾರಿ ಕೊಟ್ಟಿದ್ದಾರೆಂದು ಭಾವಿಸಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಎಐಸಿಸಿ ಕಾರ್ಯದರ್ಶಿ ಬಿ.ಎಂ. ಸಂದೀಪ್ ಮಾತನಾಡಿ, ಚಿಕ್ಕಮಗಳೂರಿನಲ್ಲಿ ಚುನಾವಣೆ ಸಂದರ್ಭದಲ್ಲಿ ಬದುಕಿನ ಬಗ್ಗೆ ಚರ್ಚೆ ಆಗದೆ, ಭಾವನೆಯ ವಿಷಯಗಳು ಚರ್ಚೆಗಳಾದವು ಎಂದು ವಿಷಾಧ ವ್ಯಕ್ತಪಡಿಸಿದರು. ಪಕ್ಷ ಹಾಗೂ ಕಾರ್ಯಕರ್ತರಿಗೆ ಒಳ್ಳೆಯ ಹೆಸರು ತರುವ ಕೆಲಸ ಶಾಸಕರು ಮಾಡಬೇಕು ಎಂದರು.
ಮಾಜಿ ಸಚಿವೆ ಮೋಟಮ್ಮ ಮಾತನಾಡಿ, ಈ ಜಿಲ್ಲೆಯ ಅಭಿವೃದ್ಧಿಗೆ ಎಲ್ಲಾ ಶಾಸಕರು ಒಟ್ಟಾಗಿ ಕೆಲಸ ಮಾಡಬೇಕು. ಪಕ್ಷ ಕಟ್ಟುವಲ್ಲಿಯೂ ಅಧ್ಯಕ್ಷರಿಗೆ, ಮುಖಂಡರಿಗೆ ಸಹಾಯಕ ರಾಗಿರಬೇಕು ಎಂದು ತಿಳಿಸಿದರು.
ವಿಧಾನಪರಿಷತ್ ಮಾಜಿ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಮಾತನಾಡಿ, ಬಿಜೆಪಿಯ ಹಾರಾಟ, ಕೂಗಾಟ, ದಬ್ಬಾಳಿಕೆ ಜಿಲ್ಲೆಯಲ್ಲಿ ಅಂತ್ಯವಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆ ಸಂದರ್ಭದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಾ ಬಂದಿದ್ದರ ಫಲವಾಗಿ ಗೆಲುವು ಸಾಧ್ಯವಾಗಿದೆ ಎಂದರು. ನಮ್ಮ ಕಾರ್ಯ ಕರ್ತರು ನೊಂದಿದ್ದಾರೆ. ಬೆಂದಿದ್ದಾರೆ, ಅವರ ಬಗ್ಗೆ ಅಭಿಮಾನ ಇರಬೇಕು. ಬಹಳಷ್ಟುಜನ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಕ್ಷಕ್ಕಾಗಿ ಕೆಲಸ ಮಾಡಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ 5-6 ಮಂದಿ ಗುತ್ತಿಗೆದಾರರು ಊರು ಬಿಟ್ಟು ಹೋಗಿದ್ದಾರೆ, ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಹೇಳಿದರು.
ಜಿಲ್ಲೆಯ ಶಾಸಕರಾದ ಟಿ.ಡಿ. ರಾಜೇಗೌಡ, ಜಿ.ಎಚ್. ಶ್ರೀನಿವಾಸ್, ಎಚ್.ಡಿ. ತಮ್ಮಯ್ಯ, ನಯನಾ ಮೋಟಮ್ಮ, ಆನಂದ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ರಮಾನಾಥ್ ರೈ, ಮುಖಂಡರಾದ ಸಚಿನ್ ಮೀಗಾ, ರೇಖಾ ಹುಲಿಯಪ್ಪಗೌಡ, ಎಚ್.ಎಚ್. ದೇವರಾಜ್, ಡಾ. ಡಿ.ಎಲ್. ವಿಜಯಕುಮಾರ್, ಎ.ಎನ್.ಮಹೇಶ್, ಎಚ್.ವಿಶ್ವನಾಥ್, ಕೆ. ಮಹಮದ್, ರೂಬಿನ್ ಮೋಸಸ್ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ನಾಮಧಾರಿ ಸಮಾಜದಿಂದ ಸ್ವಾರ್ಥರಹಿತ ರಾಜಕಾರಣ ಸಾಧ್ಯ: ಮಂಕಾಳ ವೈದ್ಯ
ಚಿಕ್ಕಮಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ ಸ್ವಾಗತಿಸಿದರು. ಜಿಲ್ಲಾಧ್ಯಕ್ಷ ಡಾ. ಅಂಶುಮಂತ್ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಎಂ.ಸಿ. ಶಿವಾನಂದಸ್ವಾಮಿ ಕಾರ್ಯಕ್ರಮ ನಿರೂಪಿಸಿದರು.
ನಾನು ಸ್ಪರ್ಧಿಸಲ್ಲ: ಬಿ.ಎಲ್. ಶಂಕರ್
ಮುಂದಿನ ಯಾವುದೇ ಚುನಾವಣೆಗೆ ನಾನು ನಿಲ್ಲುವುದಿಲ್ಲ, ನಮಗಿಂತ ಹೆಚ್ಚು ಸಮರ್ಥರನ್ನು ನಿಲ್ಲಿಸಿ ಗೆಲ್ಲಿಸುವ ಕೆಲಸ ಮಾಡುತ್ತೇನೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಡಾ. ಬಿ.ಎಲ್. ಶಂಕರ್ ತಿಳಿಸಿದರು. ಭಾವನಾತ್ಮಕ ರಾಜಕಾರಣವನ್ನು ಮೆಟ್ಟಿನಿಲ್ಲಲು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾಧ್ಯವಾಗಲಿಲ್ಲ. ಆದರೆ, ನಮ್ಮ ಜಿಲ್ಲೆಯಲ್ಲಿ ಆ ಕೆಲಸದಲ್ಲಿ ಯಶಸ್ವಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ನ್ನು ಗೆಲ್ಲಿಸಬೇಕು ಎಂದ ಅವರು, ಕಾಂಗ್ರೆಸ್ ಪಕ್ಷದಲ್ಲಿ ಅನೇಕ ವರ್ಷಗಳ ಕಾಲ ದುಡಿದ ಲಕ್ಷಾಂತರ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಬೇಕು ಎಂದು ಹೇಳಿದರು.