ಚುನಾವಣಾ ಆಯೋಗ ಬಿಜೆಪಿ ಮೇಲೆ ಕೇಸ್‌ ಹಾಕ್ತಿಲ್ಲ: ಕೃಷ್ಣಬೈರೇಗೌಡ

Published : Mar 31, 2023, 06:01 AM IST
ಚುನಾವಣಾ ಆಯೋಗ ಬಿಜೆಪಿ ಮೇಲೆ ಕೇಸ್‌ ಹಾಕ್ತಿಲ್ಲ: ಕೃಷ್ಣಬೈರೇಗೌಡ

ಸಾರಾಂಶ

ಚುನಾವಣಾ ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ವಿರುದ್ಧ ವಿವಿಧೆಡೆ ದೂರು ದಾಖಲಿಸಲಾಗುತ್ತಿದೆ. ನಮ್ಮ ಪಕ್ಷದ ಈಶ್ವರ್‌ ಖಂಡ್ರೆ, ರೂಪಕಲಾ ಶಶಿಧರ ಮೇಲೆ ಎಫ್‌ಐಆರ್‌ ಮಾಡಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಗಳು, ನಾಯಕರ ವಿರುದ್ಧ ಎಫ್‌ಐಆರ್‌ ಆಗುತ್ತಿಲ್ಲ.

ಬೆಂಗಳೂರು(ಮಾ.31): ಮತದಾರರಿಗೆ ಹಂಚಲು ಬಿಜೆಪಿ ಮುಖಂಡರು ಸಂಗ್ರಹಿಸಿದ್ದ ಕೋಟ್ಯಂತರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡರೂ ಅವರ ವಿರುದ್ಧ ಯಾವುದೇ ದೂರು ದಾಖಲಿಸದೆ ಚುನಾವಣಾ ಅಧಿಕಾರಿಗಳು ತಾರತಮ್ಯ ಎಸಗುತ್ತಿದ್ದಾರೆ. ಆ ಪಕ್ಷದ ಮುಖಂಡರ ವಿರುದ್ಧದ ಪ್ರಕರಣ ಮುಚ್ಚಿಹಾಕಲು ಹುನ್ನಾರ ನಡೆಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಮಾಜಿ ಸಚಿವ ಕೃಷ್ಣ ಬೈರೇಗೌಡ ಆರೋಪಿಸಿದ್ದಾರೆ.

ಈ ಸಂಬಂಧ ಗುರುವಾರ ರಾಜ್ಯ ಮುಖ್ಯ ಚುನಾವಣಾ ಅಧಿಕಾರಿ ಮನೋಜ್‌ ಕುಮಾರ್‌ ಮೀನಾ ಅವರಿಗೆ ದೂರು ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಅಧಿಕಾರಿಗಳು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್‌ ನಾಯಕರ ವಿರುದ್ಧ ವಿವಿಧೆಡೆ ದೂರು ದಾಖಲಿಸಲಾಗುತ್ತಿದೆ. ನಮ್ಮ ಪಕ್ಷದ ಈಶ್ವರ್‌ ಖಂಡ್ರೆ, ರೂಪಕಲಾ ಶಶಿಧರ ಮೇಲೆ ಎಫ್‌ಐಆರ್‌ ಮಾಡಿದ್ದಾರೆ. ಆದರೆ, ಬಿಜೆಪಿ ಅಭ್ಯರ್ಥಿಗಳು, ನಾಯಕರ ವಿರುದ್ಧ ಎಫ್‌ಐಆರ್‌ ಆಗುತ್ತಿಲ್ಲ. ಅವರ ಹೆಸರನ್ನೇ ದೂರಿನಲ್ಲಿ ಸೇರಿಸುತ್ತಿಲ್ಲ. ಬಿಜೆಪಿಯವರು ಮಾಡುತ್ತಿರುವ ಚುನಾವಣಾ ಅಕ್ರಮಗಳಿಗೆ ಚುನಾವಣಾ ಅಧಿಕಾರಿಗಳೇ ಸಾತ್‌ ನೀಡುತ್ತಿದ್ದಾರೆ. ಒಂದು ರೀತಿ ಅವರ ಏಜೆಂಟ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಅಭ್ಯರ್ಥಿಗಳ ಆಯ್ಕೆಗೆ ಓಟಿಂಗ್‌: ಇಂದು 224 ಕ್ಷೇತ್ರಗಳಲ್ಲಿ ಮತದಾನ

ಸ್ವತಃ ಮುಖ್ಯಮಂತ್ರಿಗಳು, ಸಚಿವರು ಮತ್ತು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರು ಬಿಜೆಪಿಯವರ ವಿರುದ್ಧ ಯಾವುದೇ ದೂರು ದಾಖಲಿಸದಂತೆ ಚುನಾವಣಾ ಅಧಿಕಾರಿಗಳ ಮೇಲೆ ಒತ್ತಡ ಹಾಕಿದ್ದಾರೆ. ಈ ಮಾಹಿತಿಯನ್ನು ಬಿಜೆಪಿಯವರೇ ನನಗೆ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಈ ರೀತಿಯ ತಾರತಮ್ಯ ಮಾಡುತ್ತಿದ್ದು, ಬಿಜೆಪಿಯವರ ಚುನಾವಣಾ ಅಕ್ರಮಗಳಿಗೆ ಸಹಕಾರ ನೀಡುತ್ತಿದ್ದಾರೆ ಎಂದು ಕಿಡಿ ಕಾರಿದರು.

ಉದಾಹರಣೆಗೆ ನನ್ನ ಕ್ಷೇತ್ರದಲ್ಲಿ 3.6 ಕೋಟಿ ರು.ವೆಚ್ಚದ ಸಾಮಗ್ರಿಗಳನ್ನು ಸೀಜ್‌ ಮಾಡಲಾಗಿದೆ. ಆ ಸಾಮಗ್ರಿಗಳ ಮೇಲೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಯ ಹೆಸರು, ಫೋಟೋ ಕೂಡ ಇದೆ. ಆದರೂ, ಅವರ ಮೇಲೆ ಚುನಾವಣಾ ಅಧಿಕಾರಿಗಳು ಯಾವುದೇ ದೂರು ದಾಖಲಿಸಿಲ್ಲ. ಬದಲಿಗೆ ಯಾರೋ ಬೇನಾಮಿ ವ್ಯಕ್ತಿಯ ಮೇಲೆ ದೂರು ದಾಖಲಿಸಿದ್ದಾರೆ. ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ. ಈ ಸಂಬಂದ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿರುವುದಾಗಿ ಅವರು ಹೇಳಿದರು.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು