ಸಿದ್ದು ವಿರುದ್ಧ ವಿಜಯೇಂದ್ರ ಸ್ಪರ್ಧೆ ಬಗ್ಗೆ ಚರ್ಚೆ: ಯಡಿಯೂರಪ್ಪ

By Kannadaprabha NewsFirst Published Mar 31, 2023, 5:19 AM IST
Highlights

ವರುಣದಲ್ಲಿ ಸಮರ್ಥ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ, ಸಿದ್ದು ನಿಂತ ನೆಲ ಕುಸೀತಿದೆ, ಗೆಲುವು ಸುಲಭವಲ್ಲ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 

ಬೆಂಗಳೂರು(ಮಾ.31): ಮೈಸೂರು ಜಿಲ್ಲೆಯ ವರುಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ತಮ್ಮ ಪುತ್ರ ಬಿ.ವೈ.ವಿಜಯೇಂದ್ರ ಹೆಸರು ಚರ್ಚೆಯಲ್ಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ. ಗುರುವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವ ವೇಳೆ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ವಿಜಯೇಂದ್ರ ಹೆಸರು ಚರ್ಚೆಯಲ್ಲಿದೆ ಎಂದು ಉತ್ತರಿಸಿದರು.

ಸಿದ್ದರಾಮಯ್ಯ ನಿಂತಿರುವ ನೆಲ ಕುಸಿಯುತ್ತಿದೆ. ಗೆಲುವು ಸುಲಭವಲ್ಲ ಎಂಬುದು ಸಿದ್ದರಾಮಯ್ಯಗೂ ಗೊತ್ತಿದೆ. ಅಲ್ಲಿ ಪ್ರಬಲ ಅಭ್ಯರ್ಥಿ ಹಾಕಿ ಕಠಿಣ ಸ್ಪರ್ಧೆ ನೀಡುತ್ತೇವೆ. ವಿಜಯೇಂದ್ರ ಸ್ಪರ್ಧೆ ಬಗ್ಗೆ ಕೇಂದ್ರ ನಾಯಕತ್ವ ತೀರ್ಮಾನಿಸಲಿದೆ ಎಂದರು.

ಸಿದ್ದರಾಮಯ್ಯನವರ ವರುಣಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು? ತೇಲಿಬರುತ್ತಿದೆ ವಿಜಯೇಂದ್ರ ಹೆಸರು!

ಹಿಂದೆ 2018ರ ಚುನಾವಣೆಯಲ್ಲಿ ವಿಜಯೇಂದ್ರ ಅವರನ್ನು ವರುಣ ಕ್ಷೇತ್ರದಿಂದ ಕಣಕ್ಕಿಳಿಸುವ ಪ್ರಸ್ತಾಪ ಕೇಳಿಬಂದಿತ್ತು. ಕೊನೆಯ ಹಂತದಲ್ಲಿ ಪಕ್ಷದ ವರಿಷ್ಠರು ಕುಟುಂಬ ರಾಜಕಾರಣ ಬೇಡ ಎಂದು ವಿಜಯೇಂದ್ರ ಅವರ ಸ್ಪರ್ಧೆಗೆ ಬ್ರೇಕ್‌ ಹಾಕಿದ್ದರು. ಅಷ್ಟರಲ್ಲಿ ಸಿದ್ದರಾಮಯ್ಯ ಅವರೂ ಕ್ಷೇತ್ರ ಬದಲಿಸಿದ್ದರು. ಇದೀಗ ಸಿದ್ದರಾಮಯ್ಯ ಮತ್ತೆ ವರುಣದಿಂದಲೇ ಸ್ಪರ್ಧಿಸಲು ಮುಂದಾಗಿರುವುದರಿಂದ ವಿಜಯೇಂದ್ರ ಅವರನ್ನು ಕಣಕ್ಕಿಳಿಸಬೇಕು ಎಂಬ ಚರ್ಚೆ ಗಂಭೀರವಾಗಿ ನಡೆಯುತ್ತಿದೆ.

ಯಾರು ಬಂದರೂ ಸ್ವಾಗತ

ವರುಣ ವಿಧಾನಸಭಾ ಕ್ಷೇತ್ರದಲ್ಲಿ ನನಗೆ ಯಾರು ಎದುರಾಳಿ ಆದರೂ ಚಿಂತೆಯಿಲ್ಲ. ವಿಜಯೇಂದ್ರ ಅಥವಾ ಇನ್ಯಾರೇ ಬಂದು ಸ್ಪರ್ಧಿಸಿದರೂ ಸ್ವಾಗತ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ. 

ವರುಣಾದಲ್ಲಿ ಸ್ಫರ್ಧೆ ಪಕ್ಷ ತೀರ್ಮಾನ ಮಾಡಿದ ಬಳಿಕ ಹೇಳುತ್ತೇನೆ: ವಿಜಯೇಂದ್ರ

ಬಿಎಸ್‌ವೈ ಬಂದ್ರೂ ಓಕೆ

ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಅಲ್ಲ, ಯಡಿಯೂರಪ್ಪ ಅವರೇ ಸ್ಪರ್ಧೆ ಮಾಡುವುದಾದರೂ ಸ್ವಾಗತಿಸುತ್ತೇವೆ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. 

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

click me!