ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಬಿಜೆಪಿ ಉಸ್ತುವಾರಿಯಾಗಿದ್ದ ಸಚಿವ ಮಾಧುಸ್ವಾಮಿರನ್ನು ಬದಲಾಯಿಸಲಾಗಿದೆ. ಹಾಲುಮತ ಸಮುದಾಯದ ಶ್ರೀಗಳಿಗೆ ಅವಹೇಳನ ಮಾಡಿ ವಿವಾದ ಮೈಮೇಲೆಳೆದುಕೊಂಡಿರುವುದರಿಂದ ಬಿಜೆಪಿ ಈ ಕ್ರಮಕೈಗೊಂಡಿದೆ. ಹಾಗಾದ್ರೆ ಕೆ.ಆರ್. ಪೇಟೆ ಬೈ ಎಲೆಕ್ಷನ್ ಹೊಸ ಉಸ್ತುವಾರಿ ಯಾರು...?
ಬೆಂಗಳೂರು, [ನ.20]: ಕನಕ ಪೀಠದ ಶ್ರೀಗಳಿಗೆ ದರ್ಪದಿಂದ ಮಾತನಾಡಿ ಕುರುಬ ಸಮುದಾಯವನ್ನು ಎದುರು ಹಾಕಿಕೊಂಡಿರುವ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿಯನ್ನು ಕೆ.ಆರ್.ಪೇಟೆ ಉಪಚುನಾವಣೆ ಉಸ್ತುವಾರಿಯಿಂದ ಕೈಬಿಡಲಾಗಿದೆ.
ಮಾಧುಸ್ವಾಮಿಯವರ ಬದಲಿಗೆ ಡಿಸಿಎಂ ಡಾ. ಅಶ್ವತ್ ನಾರಾಯಣ್ ಅವರಿಗೆ ಕೆ.ಆರ್.ಪೇಟೆಯ ಬಿಜೆಪಿ ಉಸ್ತುವಾರಿ ನೀಡಲಾಗಿದೆ. ಇಂದು ಸಂಜೆ (ಬುಧವಾರ) ಬೆಂಗಳೂರಿನಲ್ಲಿ ನಡೆದ ಉಪಚುನಾವಣೆಯ ಬಿಜೆಪಿ ಉಸ್ತುವಾರಿಗಳ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಕನಕ ಶ್ರೀಗಳಿಗೆ ಮಾಧುಸ್ವಾಮಿ ಅವಹೇಳನ: ಬೈ ಎಲೆಕ್ಷನ್ ಹೊತ್ತಲ್ಲಿ ಭುಗಿಲೆದ್ದ ಆಕ್ರೋಶ
ಡಿಸಿಎ ಡಾ.ಅಶ್ವತ್ ನಾರಾಯಣ್ ಅವರಿಗೆ ಮೊದಲು ಹೊಸಕೋಟೆ ಕ್ಷೇತ್ರದ ಜವಾಬ್ದಾರಿ ನೀಡಲಾಗಿತ್ತು. ಆದರೆ ಈಗ ಹೊಸಕೋಟೆಗೆ ಸಿಎಂ ಸಂಸದೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ರನ್ನು ನೇಮಿಸಿ, ಕೆ.ಆರ್.ಪೇಟೆ ಉಸ್ತುವಾರಿಯನ್ನು ಅಶ್ವತ್ ನಾರಾಯಣ್ ಹೆಗಲಿಗೆ ಹಾಕಲಾಗಿದೆ.
ತುಮಕೂರು ಜಿಲ್ಲೆ ಹುಳಿಯಾರು ಪಟ್ಟಣದಲ್ಲಿ ಸರ್ಕಲ್ ಒಂದಕ್ಕೆ ಹೆಸರಿಡುವ ಸಂಬಂಧ ನಡೆದ ವಾಗ್ವಾದ ತಾರಕಕ್ಕೇರಿದೆ. ಸಚಿವ ಮಾಧುಸ್ವಾಮಿ ಕಾಗಿನೆಲೆ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ವಿರುದ‍್ಧ ಮಾತನಾಡಿದ್ದಾರೆಂದು ಆರೋಪಿಸಿ ಕುರುಬ ಸಮುದಾಯ ರಾಜ್ಯಾದ್ಯಂತ ಪ್ರತಿಭಟನೆಗಿಳಿದಿದೆ.
ಹಾಲುಮತಶ್ರೀಗೆ ಅಗೌರವ: ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ: ಮಾಧುಸ್ವಾಮಿ ಪಟ್ಟು!
ನಾಳೆ [ಗುರುವಾರ] ಹುಳಿಯಾರು ಬಂದ್ ಗೂ ಕರೆ ನೀಡಲಾಗಿದೆ. ಇದು ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಸಿಎಂ ಯಡಿಯೂರಪ್ಪ, ಮಾಧುಸ್ವಾಮಿ ಪರವಾಗಿ ಕ್ಷಮೆಯಾಚನೆ ಮಾಡಿದ್ದಾರೆ.
ಆದ್ರೆ, ಮಾಧುಸ್ವಾಮಿ ಮಾತ್ರ ಯಾವುದೇ ಕಾರಣಕ್ಕೂ ಕ್ಷಮೆ ಕೇಳಲ್ಲ ಎಂದು ದರ್ಪದಿಂದ ಮಾತನಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾಧುಸ್ವಾಮಿ ವಿರುದ್ಧ ಕುರುಬರ ಕಿಚ್ಚು ಕ್ಷಣ-ಕ್ಷಣಕ್ಕೂ ಜೋರಾಗುತ್ತಿದೆ.
ಬೈ ಎಲೆಕ್ಷನ್‌ಗೆ ಬಿಜೆಪಿ ಪಡೆ ರೆಡಿ: 15 ಕ್ಷೇತ್ರಗಳಿಗೆ ಉಸ್ತುವಾರಿಗಳ ನೇಮಕ
ಸುಮಾರು 45 ಸಾವಿರ ಕುರುಬರು ಇರುವ ಮಂಡ್ಯದ ಕೆ.ಆರ್. ಪೇಟೆಯಲ್ಲಿ ಬಿಜೆಪಿಗೆ ಹೊಡೆತ ಬೀಳುವ ಲಕ್ಷಣಗಳು ಕಾಣುತ್ತಿರುವುದರಿಂದ ಈ ಕ್ರಮಕೈಗೊಂಡಿದೆ. ಕೆ.ಆರ್.ಪೇಟೆಯಿಂದ ಬಿಜೆಪಿ ಅಭ್ಯರ್ಥಿಯಾಗಿ ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಅಖಾಡದಲ್ಲಿದ್ದಾರೆ. ಇನ್ನು ಕಾಂಗ್ರೆಸ್ ನಿಂದ ಕೆ.ಬಿ.ಚಂದ್ರಶೇಖರ್ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ದೇವರಾಜ್ ಬಿ.ಎಲ್ ಕಣಕ್ಕಿಳಿದಿದ್ದಾರೆ.
ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.