ಕಾಂಗ್ರೆಸ್‌ ತಾರಾ ಪ್ರಚಾರಕರ ಲಿಸ್ಟ್‌ನಲ್ಲಿ ಹರಿಪ್ರಸಾದ್‌ ಇಲ್ಲ!

By Web DeskFirst Published Nov 20, 2019, 9:59 AM IST
Highlights

ಕಾಂಗ್ರೆಸ್‌ ತಾರಾ ಪ್ರಚಾರಕರ ಲಿಸ್ಟ್‌ನಲ್ಲಿ ಹರಿಪ್ರಸಾದ್‌ ಇಲ್ಲ!| ಸಿದ್ದು, ದಿನೇಶ್‌ ಸೇರಿ ಕಾಂಗ್ರೆಸ್‌ಗೆ 40 ಸ್ಟಾರ್‌ ಪ್ರಚಾರಕರು| ಆಸ್ಪತ್ರೆಯಲ್ಲಿರುವ ತನ್ವೀರ್‌ ಸೇಠ್‌ಗೂ ಪಟ್ಟಿಯಲ್ಲಿ ಸ್ಥಾನ

ಬೆಂಗಳೂರು[ನ.20]: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್‌ 5ರಂದು ನಡೆಯಲಿರುವ ಉಪ ಚುನಾವಣೆಯ ಪ್ರಚಾರ ಸಂಬಂಧ ಕಾಂಗ್ರೆಸ್‌ 40 ತಾರಾ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕುತೂಹಲಕಾರಿ ಸಂಗತಿಯೆಂದರೆ, ಈ ಹಿಂದೆ ಸ್ಟಾರ್‌ ಕ್ಯಾಂಪೇನರ್‌ ಪಟ್ಟಿಯಲ್ಲಿ ಕಾಯಂ ಆಗಿ ಸ್ಥಾನ ಪಡೆಯುತ್ತಿದ್ದ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್‌ ಅವರಿಗೆ ಕೊಕ್‌ ನೀಡಲಾಗಿದೆ. ಇತ್ತೀಚೆಗೆ ಸಿದ್ದರಾಮಯ್ಯ ವಿರುದ್ಧ ಹರಿಪ್ರಸಾದ್‌ ಹರಿಹಾಯ್ದಿದ್ದರು. ಇದರ ಪರಿಣಾಮವಾಗಿಯೇ ಹರಿಪ್ರಸಾದ್‌ ಅವರು ತಾರಾ ಪ್ರಚಾರಕರ ಪಟ್ಟಿಯಿಂದ ಹೊರ ಬೀಳುವಂತಾಗಿದೆ ಎಂದು ಕಾಂಗ್ರೆಸ್‌ ಮೂಲಗಳು ಹೇಳುತ್ತವೆ.

ಇತ್ತೀಚೆಗೆ ನಡೆದಿದ್ದ ಹಿರಿಯ ನಾಯಕರ ಸಭೆಯಲ್ಲಿ ಹರಿಪ್ರಸಾದ್‌ ಹಾಗೂ ಕೆ.ಎಚ್‌. ಮುನಿಯಪ್ಪ ಅವರು ಸಿದ್ದರಾಮಯ್ಯ ಅವರ ವಿರುದ್ಧ ಕೆಂಡ ಕಾರಿದ್ದರು. ಈ ಪೈಕಿ ಮುನಿಯಪ್ಪ ಅವರು ತಾರಾ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ. ಆದರೆ, ಹರಿಪ್ರಸಾದ್‌ ಸ್ಥಾನ ಕಳೆದುಕೊಂಡಿದ್ದಾರೆ.

ಪಟ್ಟಿಯಲ್ಲಿ ಯಾರಿದ್ದಾರೆ?

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಮಾಜಿ ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌, ಪರಿಷತ್‌ ಪ್ರತಿಪಕ್ಷದ ನಾಯಕ ಎಸ್‌.ಆರ್‌. ಪಾಟೀಲ್‌, ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ 40 ಮುಖಂಡರು ತಾರಾ ಪ್ರಚಾರಕರಾಗಿದ್ದಾರೆ.

ಉಳಿದಂತೆ ಡಾ.ಎಂ. ವೀರಪ್ಪ ಮೊಯ್ಲಿ, ಡಿ.ಕೆ.ಶಿವಕುಮಾರ್‌, ಎಚ್‌.ಕೆ. ಪಾಟೀಲ್‌, ರಾಮಲಿಂಗಾರೆಡ್ಡಿ, ಸಿ.ಎಂ. ಇಬ್ರಾಹಿಂ, ಆರ್‌.ವಿ. ದೇಶಪಾಂಡೆ, ಎಂ.ಬಿ. ಪಾಟೀಲ್‌, ಕೆ.ಜೆ. ಜಾಜ್‌ರ್‍, ಸತೀಶ್‌ ಜಾರಕಿಹೊಳಿ, ಕೃಷ್ಣ ಬೈರೇಗೌಡ, ಬಿ.ಝಡ್‌. ಜಮೀರ್‌ ಅಹಮದ್‌ ಖಾನ್‌, ಡಾ| ಜಯಮಾಲಾ, ಕೆ.ರೆಹಮಾನ್‌ ಖಾನ್‌, ಕೆ.ಎಚ್‌. ಮುನಿಯಪ್ಪ, ಎಚ್‌.ಎಂ. ರೇವಣ್ಣ, ಉಮಾಶ್ರೀ, ಡಾ| ಎಚ್‌.ಸಿ.ಮಹದೇವಪ್ಪ, ಆರ್‌.ಬಿ.ತಿಮ್ಮಾಪುರ, ಐವನ್‌ ಡಿಸೋಜಾ, ಎಸ್‌.ಎಲ್‌. ಘೋಟ್ನೇಕರ್‌, ಎನ್‌.ಎಚ್‌. ಶಿವಶಂಕರರೆಡ್ಡಿ, ಯು.ಟಿ. ಖಾದರ್‌, ಶಿವಾನಂದ ಎಸ್‌.ಪಾಟೀಲ್‌, ಸಿ.ಪುಟ್ಟರಂಗಶೆಟ್ಟಿ, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ತನ್ವೀರ್‌ ಸೇಠ್‌, ಬಸವರಾಜ ರಾಯರೆಡ್ಡಿ, ವಿ.ಎಸ್‌.ಉಗ್ರಪ್ಪ, ಆರ್‌.ಧ್ರುವನಾರಾಯಣ, ನಾಸೀರ್‌ ಅಹಮದ್‌, ಮಾಣಿಕಂ ಠಾಗೋರ್‌, ಪಿ.ಸಿ. ವಿಷ್ಣುನಾದ, ಸಾಕೆ ಸೈಲಜನಾಥ್‌ ತಾರಾ ಪಟ್ಟಿಯಲ್ಲಿದ್ದಾರೆ.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

click me!