
ಮೈಸೂರು (ಫೆ.06): ಜಿ.ಟಿ.ದೇವೇಗೌಡನಿಗೆ ಜಿಟಿಡಿಯೇ ಸರಿಸಾಟಿ ಎಂಬುದು ಕ್ಷೇತ್ರದ ಜನತೆ ಅರಿತಿರುವುದರಿಂದಲೇ ಇಲ್ಲಿ ಸೇರಿದ ಜನಸಾಗರ ಸಾಕ್ಷಿಯಾಗಿದೆ. ಈ ಬಾರಿಯೂ ನನ್ನನ್ನು ಆಯ್ಕೆ ಮಾಡುವ ಮೂಲಕ ಎಚ್.ಡಿ. ಕುಮಾರಸ್ವಾಮಿ ಅವರು ಮತ್ತೊಮ್ಮ ಮುಖ್ಯಮಂತ್ರಿಯನ್ನಾಗಿ ಮಾಡಲು ಅವಕಾಶ ನೀಡಿ ಎಂದು ಶಾಸಕ ಜಿ.ಟಿ.ದೇವೇಗೌಡ ಕೋರಿದರು. ತಾಲೂಕಿನ ದಾರಿಪುರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಯುವ ನಾಯಕರ ಜನ್ಮ ದಿನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕುಮಾರಸ್ವಾಮಿ ಅವರನ್ನು ಮೂರನೇ ಬಾರಿಗೆ ಮುಖ್ಯಮಂತ್ರಿ ಮಾಡಲು ಜನ ಸಂಕಲ್ಪ ಮಾಡಿದ್ದಾರೆ.
ವಿರೋಧಿಗಳ ಹಾಕಿದ ಸವಾಲನ್ನು ಸ್ವೀಕರಿಸಿರುವ ಜನರೇ ಮತ್ತೊಮ್ಮೆ ನನ್ನನ್ನು ಗೆಲ್ಲಿಸಿ, ಆ ಮೂಲಕ ಕುಮಾರಣ್ಣ ಮುಖ್ಯಮಂತ್ರಿ ಆಗುವಂತೆ ಮಾಡಿ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಒಬ್ಬಂಟಿಗನಲ್ಲ, ಯಾರೂ ಇಲ್ಲ ಅಂತ ಭಾವಿಸಬೇಡಿ ಎಂದರು. ಮಾವಿನಹಳ್ಳಿ ಸಿದ್ದೇಗೌಡರ ಹೆಸರು ಪ್ರಸ್ತಾಪಿಸದೆ ಟಾಂಗ್ ನೀಡಿದ ಜಿ.ಟಿ. ದೇವೇಗೌಡರು, ಜಯಪುರ ಹೋಬಳಿಯ ನಾಯಕರೊಬ್ಬರು ಐದು ಸಾವಿರ ಜನರನ್ನೂ ಸೇರಿಸಲು ಸಾಧ್ಯವಿಲ್ಲ ಎಂದಿದ್ದರು. ಈ ಮಾತಿಗೆ ನಾನು ಪ್ರತಿಕ್ರಿಯಿಸಿರಲಿಲ್ಲ. ಆದರೆ, ಜಿ.ಟಿ. ದೇವೇಗೌಡ ಒಬ್ಬಂಟಿಗನಲ್ಲ ಎನ್ನುವುದನ್ನು ಜನರು ಈ ಸಮಾವೇಶದ ಮೂಲಕ ಸಾಬೀತುಪಡಿಸಿದ್ದಾರೆ.
ನಮ್ಮ ಕುಟುಂಬದ ಟಿಕೆಟ್ ಬಗ್ಗೆ ವರಿಷ್ಠರು ತೀರ್ಮಾನ: ನಿಖಿಲ್ ಕುಮಾರಸ್ವಾಮಿ
ನಾನು ಮಾತನಾಡುವುದಿಲ್ಲ. ಆದರೆ, ಎಲ್ಲರನ್ನೂ ಪ್ರೀತಿಸುವುದೇ ತಪ್ಪಾ, ನಂಬೋದು ತಪ್ಪಾ? ಈ ಹೋಬಳಿಯ ಮುಖಂಡರೊಬ್ಬರು ನನ್ನ ಮತ್ತು ಮಗನ ಬಗ್ಗೆ ಮಾತನಾಡಿ ಹೇಳಿದ ಮಾತಿಗೆ ಸವಾಲಾಗಿ ಸ್ವೀಕರಿಸಿ ಸಮಾವೇಶ ಮಾಡಿದ್ದಕ್ಕೆ ತುಂಬು ಹೃದಯದ ನಮಸ್ಕಾರ ಹೇಳುತ್ತೇನೆ ಎಂದು ಎರಡು ಕೈ ಮುಗಿದು ನಮಸ್ಕರಿಸಿದರು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐವತ್ತು ವರ್ಷದಿಂದ ರಾಜಕೀಯ ಮಾಡಿಕೊಂಡು ಬಂದಿದ್ದೇನೆ. ಕ್ಷೇತ್ರದ ಜನರು ಎರಡು ಬಾರಿಯಿಂದ ನನ್ನನ್ನು ಗೆಲ್ಲಿಸಿದ್ದಾರೆ. ಈ ಕ್ಷೇತ್ರದ ಜನರ ಋುಣ ತೀರಿಸಲು ಆಗುವುದಿಲ್ಲ ಎಂದರು.
ಕುಮಾರಪರ್ವ ಮಾಡಿದ ಮೇಲೆ ಕುಮಾರಸ್ವಾಮಿ ಅವರು ಎರಡನೇ ಬಾರಿ ಮುಖ್ಯಮಂತ್ರಿ ಆದರು. ಈಗ ಚಾಮುಂಡೇಶ್ವರಿಯ ನೆಲದಲ್ಲೇ ಪಂಚರತ್ನ ಯಾತ್ರೆ ಮಾಡುವ ಮೂಲಕ ಮೂರನೇ ಬಾರಿಗೆ ಸಿಎಂ ಮಾಡುವ ಗುರಿ ಹೊಂದಲಾಗಿದೆ. ಎಚ್.ಡಿ. ದೇವೇಗೌಡರು ಇಳಿ ವಯಸ್ಸಿನಲ್ಲೂ ಪಕ್ಷ ಸಂಘಟನೆ ಮಾಡುತ್ತಿದ್ದಾರೆ. ಅವರು ಜೀವಂತವಾಗಿ ಇರುವಾಗಲೇ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಿಎಂ ಮಾಡಿ ಕನಸು ನನಸು ಮಾಡಬೇಕು. ನನ್ನನ್ನು ಗೆಲ್ಲಿಸಿದರೆ ಕುಮಾರಸ್ವಾಮಿ ಸಿಎಂ ಮಾಡಿದಂತೆ ಎಂದು ಅವರು ಹೇಳಿದರು. ಈ ಕ್ಷೇತ್ರದ ಜನ ನನ್ನನ್ನು ಮಗನಂತೆ ಕಂಡಿದ್ದಾರೆ. 2018ರ ಚುನಾವಣೆಯಲ್ಲೂ ಕೈ ಬಿಡದೆ ಆಯ್ಕೆ ಮಾಡಿದ್ದೀರಾ?
ಮುಂದೆಯೂ ನಮ್ಮೊಂದಿಗೆ ಇದ್ದು ಗೆಲುವಿಗೆ ಕೆಲಸ ಮಾಡಬೇಕು. ಎಚ್.ಡಿ. ದೇವೇಗೌಡರು ಕಟ್ಟಿದ ಪಕ್ಷವನ್ನು ಉಳಿಸಬೇಕಾದರೆ ಚಾಮುಂಡೇಶ್ವರಿ ಕ್ಷೇತ್ರದಿಂದಲೇ ವಿಜಯದ ಪತಾಕೆ ಹಾರಿಸಬೇಕು ಎಂದು ಅವರು ಕರೆ ನೀಡಿದರು. ಕ್ಷೇತ್ರವು ನಾನು ಬಂದ ಮೇಲೆ ಮತ್ತು ಮೊದಲು ಹೇಗಿತ್ತು ಎಂಬುದನ್ನು ವಿರೋಧಿಗಳು ಅರಿತು ಮಾತನಾಡಬೇಕು. ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ದಾಖಲೆಯ ರೀತಿಯ ಅಭಿವೃದ್ಧಿ ಮಾಡಿದ್ದೇನೆ. ಕ್ಷೇತ್ರದಲ್ಲಿ ನಾಲ್ಕು ಪಟ್ಟಣ ಪಂಚಾಯಿತಿ, ಒಂದು ನಗರಸಭೆಯನ್ನಾಗಿ ಮಾಡಿಸಿ ಅಭಿವೃದ್ಧಿಗೆ ಒತ್ತು ನೀಡಿದ್ದೇನೆ. ಉಂಡುವಾಡಿ, ಕಬಿನಿ ನದಿಯಿಂದ ಪ್ರತಿಯೊಂದು ಹಳ್ಳಿ, ಬಡಾವಣೆಗಳಿಗೆ ನೀರು ಒದಗಿಸುವ ಕೆಲಸ ಮಾಡಲಾಗಿದೆ ಎಂದರು.
ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬದವರ ವಿರುದ್ಧ ಡಿ.ಕೆ.ಸುರೇಶ್ ವಾಗ್ದಾಳಿ
ಜೆಡಿಎಸ್ ಯುವ ಘಟಕದ ರಾಜ್ಯ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಎಂಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ, ಲಲಿತಾ ದೇವೇಗೌಡ, ಶಾಸಕರಾದ ಕೆ. ಮಹದೇವ್, ಎಂ. ಅಶ್ವಿನ್‌ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ಮುಖಂಡ ಬೆಳವಾಡಿ ಶಿವಮೂರ್ತಿ, ನಗರಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಎಸ್‌ಬಿಎಂ ಮಂಜು, ರಮಣಿ, ಮಾಜಿ ಸದಸ್ಯರಾದ ಕೆ.ವಿ. ಮಲ್ಲೇಶ್, ಎಸ್. ಬಾಲು, ಜಿಪಂ ಮಾಜಿ ಸದಸ್ಯರಾದ ಸಿದ್ದಲಿಂಗಪುರ ದಿನೇಶ್, ಮುಖಂಡರಾದ ಕೋಟೆಹುಂಡಿ ಮಹದೇವ್, ಉದ್ಬೂರು ಮಹದೇವಸ್ವಾಮಿ, ಮೈಮುಲ್ ನಿರ್ದೇಶಕ ಕೆ. ಉಮಾಶಂಕರ್, ಒಕ್ಕಲಿಗರ ಸಂಘದ ನಿರ್ದೇಶಕ ಎಂ.ಬಿ. ಮಂಜೇಗೌಡ, ಮಾಜಿ ಮೇಯರ್ ಎಂ.ಜೆ. ರವಿಕುಮಾರ್ ಮೊದಲಾದವರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.