ಮುಂದಿನ 10, 12 ವರ್ಷಗಳಲ್ಲಿ ಡಾ.ಕೆ.ಸುಧಾಕರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭವಿಷ್ಯ ನುಡಿದಿದ್ದಾರೆ.
ಚಿಕ್ಕಬಳ್ಳಾಪುರ (ಜ.10): ಮುಂದಿನ 10, 12 ವರ್ಷಗಳಲ್ಲಿ ಡಾ.ಕೆ.ಸುಧಾಕರ್ ಅವರು ಈ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ಅವರಿಗೆ ರಾಜ್ಯದ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದೆ ಎಂದು ರಾಜ್ಯ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಭವಿಷ್ಯ ನುಡಿದಿದ್ದಾರೆ. ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಸಂಜೆ ‘ಚಿಕ್ಕಬಳ್ಳಾಪುರ ಉತ್ಸವ’ ದ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸುಧಾಕರ್ ಅವರು ಚಿಕ್ಕಬಳ್ಳಾಪುರ ಉತ್ಸವವನ್ನು ತುಂಬ ವ್ಯವಸ್ಥಿತವಾಗಿ ಮಾಡಿದ್ದಾರೆ.
ಇದನ್ನು ನೋಡಿ ನನಗೆ ಖುಷಿಯಾಗಿದೆ. ಸುಧಾಕರ್ ನನ್ನ ರಾಜಕೀಯ ನಾಯಕರು. ಜೊತೆಗೆ ಬದ್ದತೆ ಇರುವ ರಾಜಕಾರಣಿ. ರಾಜ್ಯಕ್ಕೆ ಸಿಎಂ ಬೊಮ್ಮಾಯಿಯವರು ಚಾಣಕ್ಯರಾದರೆ, ಚಿಕ್ಕಬಳ್ಳಾಪುರಕ್ಕೆ ಸಚಿವ ಸುಧಾಕರ್ ಚಾಣಕ್ಯ. ಘಟಾನುಘಟಿ ನಾಯಕರನ್ನು ಎದುರು ಹಾಕಿಕೊಂಡು ಜಿಲ್ಲೆಗೆ ಮೆಡಿಕಲ್ ಕಾಲೇಜ್ ತಂದರು. 20-30 ಸಾವಿರ ಆಶ್ರಯ ಮನೆಗಳನ್ನು ಕೊಡುವ ಕೆಲಸ ಮಾಡುತ್ತಿದ್ದಾರೆ. ಸಾಕಷ್ಟುವಿರೋಧದ ನಡುವೆ, ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ತರುವ ಪ್ರಯತ್ನ ಮಾಡುತ್ತಿದ್ದಾರೆ. ಚಿಮೂಲ್ ಆಗಬಾರದು.
Chikkaballapur Utsav: ಡಾ.ಸುಧಾಕರ್ ದೂರದೃಷ್ಟಿ ನಾಯಕ: ಸಚಿವ ಮುನಿರತ್ನ
ಇದರಿಂದ ಸುಧಾಕರ್‌ಗೆ ಒಳ್ಳೆಯ ಹೆಸರು ಬರುತ್ತದೆ ಎಂದು ಕೆಲವರು ಕೋರ್ಚ್ ಮುಖಾಂತರ ವಿಭಜನೆ ಆಗದ ರೀತಿ ನೋಡಿಕೊಳ್ಳುತ್ತಿದ್ದಾರೆ. ಆದರೆ, ಸುಧಾಕರ್ ಪಟ್ಟು ಬಿಡುವುದಿಲ್ಲ. ಅವರಿಗೆ ಎದೆಗಾರಿಕೆ ಇದೆ. ಚಿಕ್ಕಬಳ್ಳಾಪುರಕ್ಕೆ ಚಿಮೂಲ್‌ನ್ನು ತಂದೇ ತರುತ್ತಾರೆ. ಇದಕ್ಕೆ ಸ್ವಲ್ಪ ಅಡಚಣೆ ಇದ್ದು, ಎಲ್ಲವನ್ನೂ ನಿವಾರಿಸಲಿದ್ದಾರೆ. ಸಿಎಂ ಮನವೊಲಿಸಿ ಅನೇಕ ಯೋಜನೆಗಳನ್ನು ಚಿಕ್ಕಬಳ್ಳಾಪುರಕ್ಕೆ ತಂದಿದ್ದಾರೆ. ಸುಧಾಕರ್ ಮೇಲೆ ಚಿಕ್ಕಬಳ್ಳಾಪುರ ಜನರ ಆರ್ಶೀವಾದ ಇರಲಿ. ಅವರನ್ನು ನೀವು ಉಳಿಸಿಕೊಳ್ಳಬೇಕು ಎಂದರು.
ಯಾವುದೇ ಯೋಜನೆ, ಕಾರ್ಯಕ್ರಮ, ಅಭಿವೃದ್ದಿ ಕಾರ್ಯಗಳಿರಲಿ, ಸುಧಾಕರ್ ಅದನ್ನು ಅಚ್ಚುಕಟ್ಟಾಗಿ ಮಾಡುತ್ತಾರೆ. ಎರಡು ಬಾರಿ ಶಾಸಕರಾಗಿ, ಒಂದು ಬಾರಿ ಮಂತ್ರಿಯಾಗಿ ಮೂರು ವರ್ಷದಲ್ಲಿ ರಾಜ್ಯದ 224 ಕ್ಷೇತ್ರಗಳಲ್ಲಿ ಆಗದ ಕೆಲಸವನ್ನು ಇಲ್ಲಿ ಸುಧಾಕರ್ ಮಾಡಿ ತೋರಿಸಿದ್ದಾರೆ. ಜನರ ವಿಶ್ವಾಸ, ಪ್ರೀತಿ ಜೊತೆಗೆ ಮತದಾರರಿಗೆ ಕೊಟ್ಟಭರವಸೆಗಳನ್ನು ಹುಸಿಗೊಳಿಸದೇ ಕ್ಷೇತ್ರದಲ್ಲಿ ಶಿಕ್ಷಣ, ಆರೋಗ್ಯ, ಮೂಲ ಸೌಕರ್ಯಗಳ ಅಭಿವೃದ್ದಿಗೆ ಶ್ರಮಿಸಿದ್ದಾರೆ. ರಾಜ್ಯದಲ್ಲಿ ಅವರ ದೂರದೃಷ್ಠಿಯಿಂದ ರೂಪಿಸಿರುವ ‘ನಮ್ಮ ಕ್ಲಿನಿಕ್’ ಜನಪರವಾಗಿದೆ ಎಂದರು.
ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್: ಯಾರು, ಏನೇ, ಎಷ್ಟೇ ಅಡೆತಡೆ ಮಾಡಿದರೂ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟ ಹಾಗೂ ಡಿಸಿಸಿ ಬ್ಯಾಂಕ್‌ನ್ನು ತಂದೇ ತರುತ್ತೇವೆ. ಜಿಲ್ಲೆಗೆ ಪ್ರತ್ಯೇಕ ಡಿಸಿಸಿ ಬ್ಯಾಂಕ್ ತರಲಿಕ್ಕೆ ಈಗಾಗಲೇ ಮುಖ್ಯಮಂತ್ರಿ ಬಳಿ ಚರ್ಚೆ ನಡೆಸಿದ್ದೇವೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.
8 ದಿನಗಳ ಚಿಕ್ಕಬಳ್ಳಾಪುರ ಉತ್ಸವಕ್ಕೆ ಅದ್ಧೂರಿ ಚಾಲನೆ: ದಸರಾ ಜಂಬೂ ಸವಾರಿ ಶೈಲಿಯಲ್ಲಿ ಮೆರವಣಿಗೆ
ಕೋವಿಡ್ ವ್ಯವಸ್ಥಿತವಾಗಿ ನಿರ್ವಹಣೆ: ಸುಧಾಕರ್ ಅವರು ಕೋವಿಡ್ ಸಂಕಷ್ಟವನ್ನು ಚೆನ್ನಾಗಿ ನಿರ್ವಹಿಸಿದರು. ಸ್ವತ: ವೈದ್ಯರಾಗಿದ್ದಕ್ಕೆ ಅವರು ಆರೋಗ್ಯ ಇಲಾಖೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕೋವಿಡ್ ವೇಳೆ ಎಲ್ಲರನ್ನು ಸುರಕ್ಷಿತವಾಗಿ ರಕ್ಷಿಸುವ ಕೆಲಸವನ್ನು ಸುಧಾಕರ್ ಮಾಡಿದ್ದಾರೆ. ಕರ್ನಾಟಕದ ಜನತೆ ಇದನ್ನು ನೆನಪಿಟ್ಟುಕೊಳ್ಳಬೇಕು. ಆಗ ಸಿಎಂ ಆಗಿದ್ದ ಯಡಿಯೂರಪ್ಪನವರು ಸುಧಾಕರ್‌ಗೆ ಸಂಪೂರ್ಣ ಸಹಕಾರ ಕೊಟ್ಟರು ಎಂದರು. ಇದೇ ವೇಳೆ, ಉತ್ಸವದ ಮುಖ್ಯ ವೇದಿಕೆಯಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಅವರನ್ನು ಸುಧಾಕರ್ ಸನ್ಮಾನಿಸಿದರು. ಬಳಿಕ, ಉತ್ಸವದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಜನರ ಮನಸೂರೆಗೊಂಡಿತು.