ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಕುಡಿಯುವ ನೀರಿನ ವಿಚಾರದಲ್ಲಿ ಮೈಮರೆತಿದೆ. ಆದರೂ ದುರಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇವರಿಗೆ ಕಿಂಚಿತ್ತೂ ರಾಜ್ಯದ ಮೇಲೆ ಕಾಳಜಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡದ ಇದೂ ಒಂದು ಸರ್ಕಾರವೇ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನಿಸಿದರು.
ಮಂಡ್ಯ (ಸೆ.14): ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯದ ಕಾಂಗ್ರೆಸ್ ಸರ್ಕಾರ, ಕುಡಿಯುವ ನೀರಿನ ವಿಚಾರದಲ್ಲಿ ಮೈಮರೆತಿದೆ. ಆದರೂ ದುರಹಂಕಾರದ ಮಾತುಗಳನ್ನು ಆಡುತ್ತಿದ್ದಾರೆ. ಇವರಿಗೆ ಕಿಂಚಿತ್ತೂ ರಾಜ್ಯದ ಮೇಲೆ ಕಾಳಜಿ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ಮಾಡದ ಇದೂ ಒಂದು ಸರ್ಕಾರವೇ ಎಂದು ಮಾಜಿ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರಶ್ನಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡಿಗೆ ನೀರು ಬಿಡಬಾರದಿತ್ತು. ಮುಖ್ಯಮಂತ್ರಿ ಸ್ಟಾಲಿನ್ ಓಲೈಸಲು ಇವರೇ ನೀರು ಬಿಟ್ಟಿದ್ದಾರೆ. ಡಿಎಂಕೆ ಜತೆ ಸೇರಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದ್ದಾರೆ.
ಸುಪ್ರೀಂ ಕೋರ್ಟ್, ಕಾವೇರಿ ನೀರು ನಿಯಂತ್ರಣ ಸಮಿತಿಗೆ ವಾಸ್ತವ ಸ್ಥಿತಿ ಆರ್ಥ ಮಾಡಿಸುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಿಲ್ಲ. ನಮ್ಮ ಸರ್ಕಾರದಲ್ಲಿ ಯಾವತ್ತೂ ಕುಡಿಯುವ ನೀರಿನ ಅಭಾವ ಇರಲಿಲ್ಲ. ಇಂದಿನ ಪರಿಸ್ಥಿತಿಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದರು. ನೀರನ್ನ ಬಿಡಬೇಡಿ ಎಂದು ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದ್ದೇವೆ. ನ್ಯಾಯಾಲಯದಲ್ಲಿ ಸವಾಲುಗಳನ್ನು ಎದುರಿಸಬೇಕು. ಆದರೆ, ಕಾಂಗ್ರೆಸ್ ಈ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಸೌಜನ್ಯವಾಗಿ ಈ ವಿಚಾರದಲ್ಲಿ ಮಾತನಾಡಿಲ್ಲ. ಕೇವಲ ದುರಹಂಕಾರದ ಮಾತುಗಳನ್ನಷ್ಟೇ ಆಡುತ್ತಿದ್ದಾರೆ. ನೀರು ನಿರ್ವಹಣೆಯಲ್ಲಿ ಕಾಂಗ್ರೆಸ್ ಸಂಪೂರ್ಣ ವಿಫಲವಾಗಿದೆ ಎಂದರು.
ದೇವೇಗೌಡರ ಕುಟುಂಬದ ಬಗ್ಗೆ ಸುಳ್ಳು ಹೇಳುವುದನ್ನು ಮೊಯ್ಲಿ ಬಿಡಲಿ: ಎಚ್.ಡಿ.ಕುಮಾರಸ್ವಾಮಿ
ಕೇಂದ್ರದ ವಿರುದ್ಧ ಗೂಬೆ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಗೂಬೆ ಕೂರಿಸೋಕೆ ಹೋಗಿ ಇವರೇ ಗೂಬೆಗಳಾಗಿದ್ದಾರೆ. ಪೆನ್ನು ಕೊಡಿ, ಪೇಪರ್ ಕೊಡಿ ಅಂತ ಅಧಿಕಾರ ತೆಗೆದುಕೊಂಡರು. ಈಗ ಪೆನ್ನು ಪೇಪರನ್ನು ಜೇಬಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಅಧಿಕಾರದ ಅಮಲಿನಲ್ಲಿ ಮೈಮರೆತಿದ್ದಾರೆ. 135 ಜನ ಗೆದ್ದಿದ್ದೀವಿ ಅಂತ ಆಕಾಶದಲ್ಲಿ ಹಾರಾಡುತ್ತಿದ್ದಾರೆ. ಭೂಮಿ ಮೇಲಿನ ನೀರಿನ ಸಮಸ್ಯೆ ಕಾಣ್ತಿಲ್ಲ ಎಂದು ಛೇಡಿಸಿದರು.
ನೂರು ಹಗರಣ: ಕಾಂಗ್ರೆಸ್ ಸರ್ಕಾರ 100 ದಿನ ಪೂರೈಸಿದ ಸಮಯದಲ್ಲಿ 100 ಹಗರಣ ಮಾಡಿದ್ದು, ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟ ರೂಪಿಸಬೇಕಿದೆ. ವರ್ಗಾವಣೆ, ಭ್ರಷ್ಟಾಚಾರದಿಂದ ಸರ್ಕಾರ ನಡೆಯುತ್ತಿದೆ. ಕಾವೇರಿ ನೀರಿನ ವಿಚಾರದಲ್ಲಿ ನಿರ್ಲಕ್ಷ್ಯವಹಿಸಿದ್ದು, ತಮಿಳುನಾಡಿಗೆ ಬೇಕಾಬಿಟ್ಟಿ ನೀರು ಹರಿಸಿ ನಾಲ್ಕೈದು ಜಿಲ್ಲೆಗಳಿಗೆ ಕುಡಿಯುವ ನೀರಿಗೂ ಹಾಹಾಕಾರ ತಂದಿದೆ ಎಂದರು. ರಾಜ್ಯದ ರೈತರಿಗೆ ಕಾಂಗ್ರೆಸ್ ಸರ್ಕಾರ ಅನ್ಯಾಯ ಮಾಡುತ್ತಿದೆ. ರೈತ ವಿರೋಧಿ ನಿಲುವು ತೆಗೆದುಕೊಳ್ಳುತ್ತಿದ್ದು, ಕಾಂಗ್ರೆಸ್‌ಗೆ ರೈತ ವಿರೋಧಿ ಹಣೆಪಟ್ಟಿ ಮುಂದುವರೆಯುತ್ತಿದೆ. ನೀವು ಏನೇ ಹೇಳಿದರೂ ನಾವು ಮಾಡುವ ಕೆಲಸ ಮಾಡುತ್ತೇವೆ ಎಂದು ಮೊಂಡುತನ ಮಾಡುತ್ತಿದೆ ಎಂದರು.
ಸನಾತನ ಧರ್ಮದ ಬಗ್ಗೆ ಹಗುರ ಮಾತು: ತಮಿಳುನಾಡಿನ ಸಚಿವರಾದ ಉದಯ ನಿಧಿ ಹಾಗೂ ಪೊನ್‌ಮುಡಿ ಸನಾತನ ಧರ್ಮದ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ. ಇದಕ್ಕೆ ಕಾಂಗ್ರೆಸ್ ಕೂಡಾ ಬೆಂಬಲ ಕೊಡುತ್ತಿದೆ. ಪ್ರತಿಯೊಂದು ವಿಚಾರದಲ್ಲೂ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು. ರಾಜ್ಯದಲ್ಲಿ ಪಕ್ಷವನ್ನು ಉಳಿಸಿಕೊಳ್ಳೊದು ಗೊತ್ತು, ಬೆಳೆಸೋದು ಗೊತ್ತು. ಪ್ರತಿ ಕ್ಷೇತ್ರದಲ್ಲಿ ಶಕ್ತಿ ತುಂಬುವ ಕೆಲಸ ಮಾಡ್ತೀವಿ. ಪಕ್ಷವನ್ನ ಮುಂದೆ ತೆಗದುಕೊಂಡು ಹೋಗುವ ಕೆಲಸ ಮಾಡುತ್ತೇವೆ. ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಲಿದೆ. ಎಲ್ಲ ಸವಾಲುಗಳನ್ನು ಸ್ವೀಕರಿಸಿ ಕೆಲಸ ಮಾಡುತ್ತೇವೆ ಎಂದರು.
ಎತ್ತಿನಹೊಳೆ ಕಾಮಗಾರಿಯಿಂದ ಮನೆಗಳಲ್ಲಿ ಬಿರುಕು: ಶಾಸಕ ರೇವಣ್ಣ ಕಿಡಿ
ಕಾಂಗ್ರೆಸ್ ಮುಳುಗುವ ದೋಣಿ: ಬಿಜೆಪಿಯ 30ಕ್ಕೂ ಹೆಚ್ಚು ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿರುವ ವಿಚಾರಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಕಾಂಗ್ರೆಸ್ ಮುಳುಗುವ ದೋಣಿ. ಅದಕ್ಕೆ ದಿಕ್ಕಿಲ್ಲ, ನಾಯಕತ್ವ ಇಲ್ಲ. ಆ ಪಕ್ಷಕ್ಕೆ ಯಾರು ಹೋಗ್ತಾರೆ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರದಲ್ಲಿ ಸ್ಟ್ಯಾಟರ್ಜಿ ಇದೆ. ಮುಂದೆ ಆಯ್ಕೆ ಆಗಲಿದೆ ಎಂದರು. ಗೋಷ್ಠಿಯಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್, ಮುಖಂಡರಾದ ಎಸ್.ಸಚ್ಚಿದಾನಂದ, ಡಾ.ಇಂದ್ರೇಶ್, ಮುನಿರಾಜು ಇತರರಿದ್ದರು.