ಗ್ರಾಮ ಪಂಚಾಯತಿ ರಾಜಕಾರಣದ ಕಥೆ ಬಿಚ್ಚಿಟ್ಟ ನಾಯಿ 'ಕ್ರಿಶ್' ಅದ್ಧೂರಿ ಬರ್ತ್‌ಡೇ ಪಾರ್ಟಿ...!

By Suvarna News  |  First Published Jun 23, 2022, 4:41 PM IST

• ಗ್ರಾಮ ಪಂಚಾಯತಿ ರಾಜಕಾರಣದ ಕಥೆ ಬಿಚ್ಚಿಟ್ಟ ನಾಯಿ 'ಕ್ರಿಶ್' ಅದ್ಧೂರಿ ಬರ್ತ್‌ಡೇ..!
• ನೆಚ್ಚಿನ ನಾಯಿ ಬರ್ತ್‌ಡೇಗೆ 3 ಕ್ವಿಂಟಾಲ್ ಚಿಕನ್, ಸಾವಿರಾರು ಮೊಟ್ಟೆ, ಅರ್ಧ ಕ್ವಿಂಟಾಲ್ ಕಾಜೂಕರೀ..!
• ಭರ್ಜರಿ ಬಾಡೂಟ ಸವಿದ ಮೂರು ಸಾವಿರಕ್ಕೂ ಹೆಚ್ಚು ಜನ..!


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ ಬೆಳಗಾವಿ

ಬೆಳಗಾವಿ, (ಜೂನ್.23):
ತೀವ್ರ ಜಿದ್ದಾಜಿದ್ದಿನ ರಾಜಕಾರಣಕ್ಕೆ ಬೆಳಗಾವಿ ಉತ್ತಮ ಉದಾಹರಣೆ. ಈ ಜಿದ್ದಾಜಿದ್ದಿನ ರಾಜಕಾರಣ ಬೆಳಗಾವಿಯಲ್ಲಿ ಕೇವಲ ಹಿರಿಯ ರಾಜಕಾರಣಿಗಳಿಗಷ್ಟೇ ಸೀಮಿತವಾಗಿಲ್ಲ. ಗ್ರಾಮ ಪಂಚಾಯತಿ ಮಟ್ಟದಲ್ಲಿಯೂ ವೈಯಕ್ತಿಕ ಪ್ರತಿಷ್ಠೆ. ಜಿದ್ದಾಜಿದ್ದಿನ ರಾಜಕಾರಣ ಹೇಗಿರುತ್ತೆ ಎಂಬುದಕ್ಕೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿರುವ ನೆಚ್ಚಿನ ನಾಯಿಯ ಬರ್ತ್ ಡೇ ಸಾಕ್ಷಿ. 

ನೆಚ್ಚಿನ ನಾಯಿ 'ಕ್ರಿಶ್' ಬರ್ತ್‌ಡೇಗೆ ಒಂದು ಕ್ವಿಂಟಾಲ್ ತೂಕದ ಬೃಹತ್ ಕೇಕ್ ತಂದು ನಾಯಿ 'ಕ್ರಿಶ್‌'ಗೆ ಬರ್ತ್ ಡೇ ಕ್ಯಾಪ್ ಹಾಕಿಸಿ ಕೇಕ್ ಕಟ್ ಮಾಡಿ ತಿನ್ನಿಸಿ ಸಂಭ್ರಮಿಸಿದ್ದಾರೆ‌. ತುಕ್ಕಾನಟ್ಟಿ ಮಾಜಿ ಗ್ರಾಮ ಪಂಚಾಯತಿ ಸದಸ್ಯ ಶಿವಪ್ಪ ಮರ್ದಿ, ಸಿದ್ದಪ್ಪ ಹಮ್ಮನವರ್ ರೈತ ಮುಖಂಡ ಭೀಮಶಿ ಗದಾಡಿ ಸೇರಿದಂತೆ ತುಕ್ಕಾನಟ್ಟಿ ಗ್ರಾ‌ಮ ಪಂಚಾಯತಿ ಮಾಜಿ ಸದಸ್ಯರು ತಮ್ಮ ನೆಚ್ಚಿನ ನಾಯಿ ಕ್ರಿಶ್  ಹುಟ್ಟುಹಬ್ಬ ಅದ್ದೂರಿಯಾಗಿ ಆಚರಿಸಿದ್ದಾರೆ‌‌.

Tap to resize

Latest Videos

777 ಚಾರ್ಲಿ ಎಫೆಕ್ಟ್: ಲ್ಯಾಬ್ರಡಾರ್ ನಾಯಿಗೆಲ್ಲಿಲ್ಲದ ಡಿಮ್ಯಾಂಡ್: ಚಿತ್ರ ತಂಡಕ್ಕೆ ಪೇಚಾಟ!

ಅದ್ಧೂರಿ ಬರ್ತ್ ಡೇಗೆ  ಕಾರಣ ಗ್ರಾಮ ಪಂಚಾಯತಿ ರಾಜಕಾರಣ
ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯತಿ ಸದಸ್ಯರಾಗಿದ್ದ ಶಿವಪ್ಪ ಮರ್ದಿ ಹಾಗೂ ಇತರ ಸದಸ್ಯರು ಇತ್ತೀಚೆಗೆ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಪರಾಭಗೊಂಡಿದ್ದರು. ಚುನಾವಣೆ ಗೆದ್ದ ತುಕ್ಕಾನಟ್ಟಿ ಪಂಚಾಯತಿ ಸದಸ್ಯರ ಪೈಕಿ ಓರ್ವ ತನ್ನ ಹುಟ್ಟುಹಬ್ಬ ಆಚರಣೆ ದಿನದಂದು ಮಾಜಿ ಗ್ರಾಮ ಪಂಚಾಯತಿ ಸದಸ್ಯರಿಗೆ ನಾಯಿ, ಹಂದಿ ಅಂತಾ ಕರೆದು ಅವಹೇಳನ ಮಾಡಿದ್ದರಂತೆ. ಇದರಿಂದ ಕುಪಿತಗೊಂಡ ಮಾಜಿ ಗ್ರಾ.ಪಂ.ಸದಸ್ಯ ಶಿವಪ್ಪ ಮರ್ದಿ ಒಂದು ಕ್ವಿಂಟಾಲ್ ಕೇಕ್ ಮಾಡಿಸಿ ಅದ್ದೂರಿಯಾಗಿ ತನ್ನ ನೆಚ್ಚಿನ ಶ್ವಾನ 'ಕ್ರಿಶ್' ಬರ್ತ್ ಡೇ ಆಚರಿಸಿದ್ದಾರೆ.  ಇನ್ನು ನಾಯಿ ಕ್ರಿಶ್ ಬರ್ತ್ ಡೇಗೆ ಒಂದು ಕ್ವಿಂಟಾಲ್ ಕೇಕ್ ಮಾತ್ರವಲ್ಲ...  ಮೂರು ಕ್ವಿಂಟಾಲ್ ಚಿಕನ್, ಸಾವಿರಾರು ಮೊಟ್ಟೆಗಳು, 50 ಕೆಜಿ ಕಾಜು ಕರಿ, ರೋಟಿ, ಅನ್ನ, ಸಾಂಬಾರ ಸೇರಿ ಭರ್ಜರಿ ಬಾಡೂಟ ಮಾಡಿಸಿದ್ದಾರೆ. 

ತುಕ್ಕಾನಟ್ಟಿ ಅಷ್ಟೇ ಅಲ್ಲದೇ ಸುತ್ತಮುತ್ತಲಿನ ಗ್ರಾಮಸ್ಥರು ಸೇರಿ 3 ಸಾವಿರಕ್ಕೂ ಹೆಚ್ಚು ಜನರಿಗೆ ಭರ್ಜರಿ ಬಾಡೂಟ ಮಾಡಿಸಿದ್ದಾರೆ. ಗ್ರಾಮದ ಪ್ರಮುಖ ರಸ್ತೆಗಳಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ಮಾಡಿ ವೇದಿಕೆಗೆ ತಂದು ಒಂದು ಕ್ವಿಂಟಾಲ ಕೇಕ್ ಕಟ್ ಮಾಡಿಸಿ ಸ್ಥಳೀಯ ಕಲಾವಿದರಿಂದ ರಸಮಂಜರಿ ಕಾರ್ಯಕ್ರಮ ಮಾಡಿಸಿದ್ದಾರೆ‌. 

ಹಾಲಿ ಮಾಜಿ ಗ್ರಾಮ ಪಂಚಾಯತಿ ಸದಸ್ಯರ ರಾಜಕೀಯ ತಿಕ್ಕಾಟದ ಮಧ್ಯೆ ಸಾಕು ನಾಯಿ ಕ್ರಿಶ್ ಅದ್ಧೂರಿ ಬರ್ತ್ ಡೇ ನಡೆದಿದೆ. ಸುತ್ತಮುತ್ತಲಿನ ಗ್ರಾಮಗಳಲ್ಲಿ ಸದ್ಯ ಎಲ್ಲಿ ನೋಡಿದಲ್ಲಿ 'ಕ್ರಿಶ್' ಬರ್ತ್ ಡೇ ಬಗ್ಗೆಯೇ ಚರ್ಚೆ ನಡೆಯುತ್ತಿದೆ‌.

click me!