* ರಮೇಶ್ ಜಾರಕಿಹೊಳಿ ಫಡ್ನವೀಸ್ ಜೊತೆ ಸಂಪರ್ಕ
* ಬಿಜೆಪಿ ಅಧಿಕಾರಕ್ಕೆ ತರಲು ಮಾಜಿ ಸಿಎಂಗೆ ಸಾಥ್
* 17 ಶಾಸಕರ ಕಾದಿದ್ದ ಫಡ್ನವೀಸ್
ಬೆಳಗಾವಿ/ಗೋಕಾಕ(ಜೂ.23): ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಕ್ಷಿಪ್ರ ರಾಜಕೀಯ ಬೆಳವಣಿಗೆ ಹಿನ್ನೆಲೆಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮುಂಬೈಗೆ ತೆರಳಿರುವುದು ತೀವ್ರ ಕುತೂಹಲ ಮೂಡಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪ್ರಯತ್ನ ನಡೆಸುತ್ತಿದ್ದು, ಅವರ ಜತೆಗೆ ಜಾರಕಿಹೊಳಿ ನಿಕಟ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.
2018ರಲ್ಲಿ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಪತನಕ್ಕೆ ರಮೇಶ್ ಜಾರಕಿಹೊಳಿ ಅವರ ಬಂಡಾಯ ಕಾರಣವಾಗಿತ್ತು. ಆ ಬಳಿಕ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಜಾರಕಿಹೊಳಿ ಸಚಿವ ಸ್ಥಾನ ಪಡೆದಿದ್ದರೂ ಸಿ.ಡಿ. ಪ್ರಕರಣದಿಂದಾಗಿ ಅನಿವಾರ್ಯವಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಇದೀಗ ಸಿ.ಡಿ. ಪ್ರಕರಣದಲ್ಲಿ ಹೊರಬಂದು ಮತ್ತೊಮ್ಮೆ ಸಚಿವರಾಗಲು ಯತ್ನಿಸುತ್ತಿರುವ ಜಾರಕಿಹೊಳಿಗೆ ಫಡ್ನವೀಸ್ ಬೆನ್ನೆಲುಬಾಗಿ ನಿಂತಿದ್ದಾರೆ.
ಹೊಸ ದಾಳ ಉರುಳಿಸಿದ ಠಾಕ್ರೆ-ಪವಾರ್, ಬಂಡಾಯ ನಾಯಕ ಶಿಂಧೆಗೆ ಸಿಎಂ ಹುದ್ದೆ ಆಫರ್!
ಮಹಾರಾಷ್ಟ್ರದಲ್ಲಿ ಇದೀಗ ಅಘಾಡಿ ಸರ್ಕಾರ ಪತನದಂಚಿಗೆ ತಲುಪಿದ್ದು, ಮತ್ತೆ ಬಿಜೆಪಿ ಸರ್ಕಾರ ಅಧಿಕಾರಕ್ಕೇರುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ಬಿಜೆಪಿ ನಾಯಕ ಫಡ್ನವೀಸ್ ಬೆಂಬಲಕ್ಕೆ ನಿಲ್ಲುವ ಮೂಲಕ ತಮ್ಮ ‘ರಾಜಕೀಯ ಗುರು’ ಋುಣ ತೀರಿಸಲು ಜಾರಕಿಹೊಳಿ ಅವರು ಮುಂಬೈಗೆ ತೆರಳಿದ್ದಾರೆ ಎನ್ನಲಾಗಿದೆ. ಜಾರಕಿಹೊಳಿ ಮೂರ್ನಾಲ್ಕು ದಿನದಿಂದ ಮುಂಬೈನಲ್ಲೇ ಇದ್ದಾರೆ.
17 ಶಾಸಕರ ಕಾದಿದ್ದ ಫಡ್ನವೀಸ್:
ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಪತನಕ್ಕೆ ಕಾರಣರಾದ 17 ಶಾಸಕರಿಗೆ ಬಿಜೆಪಿ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಪರೋಕ್ಷವಾಗಿ ಆಶ್ರಯ ನೀಡಿತ್ತು. ಅಂದು ಮಹಾರಾಷ್ಟ್ರ ಸಿಎಂ ಆಗಿದ್ದ ಫಡ್ನವಿಸ್ ತಿಂಗಳ ಕಾಲ 17 ಶಾಸಕರಿಗೆ ಪರೋಕ್ಷವಾಗಿ ಆಶ್ರಯ ನೀಡಿದ್ದರು. ಆಗಲೇ ರಮೇಶ್ ಜಾರಕಿಹೊಳಿ ಹಾಗೂ ಫಡ್ನವಿಸ್ ನಡುವಿನ ಸ್ನೇಹ ಗಟ್ಟಿಯಾಗಿತ್ತು.