* ತಮ್ಮದೇ ಪಕ್ಷದ ಮಾಜಿ ಶಾಸಕರೊಬ್ಬರಿಗೆ ಕ್ಷಮೆ ಕೋರಿದ ಡಿಕೆ ಶಿವಕುಮಾರ್
* ಪತ್ರದ ಮೂಲಕ ಕ್ಷಮೆಯಾಚಿಸಿದ ಡಿಕೆ ಶಿವಕುಮಾರ್
* ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ರೆ ವಿಷಾದಿಸುವೆ ಎಂದು ಪತ್ರ
ಬೆಂಗಳೂರು, (ಮಾ.11): ಮೇಕೆದಾಟು ಪಾದಯಾತ್ರೆ ಎರಡನೇ ಹಂತದ ವೇಳೆ ಘಟನೆಗೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ತಮ್ಮದೇ ಪಕ್ಷದ ಮಾಜಿ ಶಾಸಕರೊಬ್ಬರ ಬಳಿ ಕ್ಷಮೆ ಕೋರಿದ್ದಾರೆ.
ಹೌದು..ಮೇಕೆದಾಟು ಪಾದಯಾತ್ರೆಯ ವೇಳೆ ಬಿ.ಆರ್. ಪಾಟೀಲ್ ಅವರನ್ನು ತಳ್ಳಿ, ಟೋಪಿ ಕಿತ್ತು ಹಾಕಿದರೆಂಬ ಆರೋಪಕ್ಕೆ ಸಂಬಂಧಿಸಿದಂತೆ ಡಿಕೆಶಿ ಪತ್ರ ಬರೆದು ಕ್ಷಮೆಯಾಚಿಸಿದ್ದಾರೆ.
Five State Election Result: ಹುಮ್ಮಸ್ಸಿನಲ್ಲಿದ್ದ ಕರ್ನಾಟಕ ಕಾಂಗ್ರೆಸ್‌ಗೆ ಪಂಚರಾಜ್ಯ ಶಾಕ್..!
ತಮ್ಮನ್ನು ತಳ್ಳಿ ಅವಮಾನಿಸುವ ಯಾವುದೇ ಉದ್ದೇಶ ಇಲ್ಲ, ನನ್ನ ಅರಿವಿನಲ್ಲೂ ಇಲ್ಲ. ಜನರ ಗುಂಪಿನಲ್ಲಿ ನನ್ನ ಅರಿವಿಗೆ ಬಾರದೇ ಅಚಾತುರ್ಯವಾಗಿದ್ದರೆ ವಿಷಾದಿಸುವೆ ಎಂದು ಮಾಜಿ ಶಾಸಕ ಬಿ.ಆರ್. ಪಾಟೀಲ್ ಅವರಿಗೆ ಪತ್ರ ಬರೆದು ಡಿ.ಕೆ.ಶಿವಕುಮಾರ್ ಕ್ಷಮೆ ಕೋರಿದ್ದಾರೆ.
ಮೇಕೆದಾಟು ಪಾದಯಾತ್ರೆ ಸಂದರ್ಭದಲ್ಲಿ ನಾನು ತಮ್ಮನ್ನು ತಳ್ಳಿ ಅವಮಾನ ಮಾಡಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಕಂಡು ನನಗೆ ಖೇದವಾಗಿದೆ. ತಮ್ಮಂತಹ ಹಿರಿಯರ ಜೊತೆ ಅನುಚಿತವಾಗಿ ನಡೆದುಕೊಳ್ಳುವುದನ್ನು ಕನಸು ಮನಸ್ಸಿನಲ್ಲಿ ಎಣಿಸಲು ಸಾಧ್ಯವಿಲ್ಲ. ಜನರ ನೂಕು ನುಗ್ಗಲಿನ ಸಮಯದಲ್ಲಿ ಏನಾದರೂ ಅಂತಹ ಅಚಾತುರ್ಯ ನಡೆದಿದ್ದರೆ ಅದಕ್ಕಾಗಿ ವಿಷಾದಿಸುತ್ತೇನೆಂದು ಹೇಳಿದ್ದಾರೆ.
ಪಾದಯಾತ್ರೆ ಅರಮನೆ ಮೈದಾನಕ್ಕೆ ಬಂದ ಸಂದರ್ಭದಲ್ಲಿ ಪಾಟೀಲ್ ಅವರನ್ನು ಅನುಚಿತವಾಗಿ ನಡೆಸಿಕೊಂಡರೆಂಬ ಆರೋಪ ಕೇಳಿ ಬಂದಿತ್ತು. ಪಾಟೀಲ್ ಈ ಬಗ್ಗೆ ಪಕ್ಷದ ಹೈಕಮಾಂಡ್ಗೂ ದೂರು ನೀಡಿದ್ದರು. ಹಿರಿಯ ಮುಖಂಡರಿಗೆ ಅಪಮಾನ ಮಾಡಿದ ಬಗ್ಗೆ ಹೈಕಮಾಂಡ್ ಸಹ ಅಸಮಾಧಾನ ವ್ಯಕ್ತಪಡಿಸಿತ್ತು. ಆ ಹಿನ್ನೆಲೆಯಲ್ಲಿ ಡಿಕೆಶಿ ಗುರುವಾರ ಪತ್ರ ಬರೆದಿದ್ದಾರೆ. ಗೋವಾದಿಂದ ವಾಪಸಾದ ಬಳಿಕ ಖುದ್ದು ಭೇಟಿ ಮಾಡುವುದಾಗಿಯೂ ಪತ್ರದಲ್ಲಿ ಡಿಕೆಶಿ ತಿಳಿಸಿದ್ದಾರೆ.
ಡಿಕೆ ಶಿವಕುಮಾರ್ : ಪಾದಯಾತ್ರೆಯಲ್ಲೇ ಬಿಆರ್ ಪಾಟೀಲ್ ಟೋಪಿ ಕಿತ್ತೆಸೆದು ತಳ್ಳಿದ್ರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿತ್ತು. ಅಲ್ಲದೇ ಈ ಬಗ್ಗೆ ಸಾಕಷ್ಟು ಟ್ರೋಲ್‌ಗಳು ಸಹ ಮಾಡಲಾಗಿತ್ತು.
ಇನ್ನು ಬಿಆರ್ ಪಾಟೀಲ್ ಅವರಿಗೆ ಅವಮಾನ ಮಾಡಿದ್ದಾರೆಂದು ಕ್ಷೇತ್ರದ ಅಭಿಮಾನಿಗಳು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದ್ದರು.