
ಬೆಂಗಳೂರು (ಸೆ.01): ಬಿಜೆಪಿಯವರಿಗೆ ರಾಜಕೀಯ ಇಚ್ಛಾಸಕ್ತಿ ಇದ್ದರೆ ಧರ್ಮಸ್ಥಳ ಯಾತ್ರೆ ಬದಲು ಕರ್ನಾಟಕದ ಪಾಲಿನ ಹಣ ಕೊಡಿಸಲು ದೆಹಲಿಯಲ್ಲಿ ಹೋರಾಟ ಮಾಡಲಿ. ಭದ್ರಾ ಮೇಲ್ದಂಡೆ, ಮೇಕೆದಾಟು, ಮಹದಾಯಿಗೆ ಅನುಮತಿ ಕೊಡಿಸಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರಿಗೆ ಜನರ ಹಿತಾಸಕ್ತಿ ಬೇಕಿದ್ದರೆ, ರಾಜಕೀಯ ಇಚ್ಛಾಸಕ್ತಿ ಇದ್ದರೆ ಅಭಿವೃದ್ಧಿ ಬಗ್ಗೆ ಹೋರಾಟ ಮಾಡಬೇಕು ಎಂದು ಆಗ್ರಹ ಮಾಡಿದರು.
ಬಿಜೆಪಿಯವರು ಧರ್ಮಸ್ಥಳಕ್ಕೆ ಹೋಗಿ ತಮ್ಮ ವೈಯಕ್ತಿಕ ಲಾಭಕ್ಕೆ ಪ್ರಾರ್ಥನೆ ಮಾಡಿಕೊಂಡು ಬರುತ್ತಾರೆಯೇ ಹೊರತು ಬೇರೇನೂ ಇಲ್ಲ. ಇವರ ಹೋರಾಟ ಧರ್ಮಸ್ಥಳದಲ್ಲಿ ಅಲ್ಲ, ಎಲ್ಲಾ ಸಂಸದರು, ಶಾಸಕರನ್ನು ಕರೆದುಕೊಂಡು ಹೋಗಿ ದೆಹಲಿಯಲ್ಲಿ ಹೋರಾಟ ಮಾಡಿ ರಾಜ್ಯಕ್ಕೆ ಅನುದಾನ ತರಲಿ. ಬೆಂಗಳೂರಿನ ಅಭಿವೃದ್ಧಿಗೆ ಕೇಂದ್ರದಿಂದ ಹಣ ಕೊಡಿಸಲಿ. ಮೇಕೆದಾಟು, ಭದ್ರಾ ಮೇಲ್ದಂಡೆ, ಮಹದಾಯಿಗೆ ಅನುಮತಿ ಕೊಡಿಸಲಿ ಎಂದು ಹೇಳಿದರು.
ಸಗಣಿ ಮೇಲೆ ಕಲ್ಲು ಹಾಕಲ್ಲ: ಶಿವಕುಮಾರ್ ಅವರಿಗೆ ಶಾಸಕರ ಬೆಂಬಲ ಇಲ್ಲದಿರುವ ಕಾರಣಕ್ಕೆ ಬಿಜೆಪಿ ಕರೆದುಕೊಳ್ಳುತ್ತಿಲ್ಲ ಎನ್ನುವ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ‘ಕಸ, ಸಗಣಿ ಮೇಲೆ ಕಲ್ಲು ಹಾಕುವುದಕ್ಕೆ ನಾನು ಇಷ್ಟಪಡುವುದಿಲ್ಲ’ ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.
ಗುಂಪು ಕಲಹ ಕಾರಣ: ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ಮೃತದೇಹಗಳನ್ನು ಹೂತ ಆರೋಪ ಪ್ರಕರಣ ಬಿಜೆಪಿಯವರೇ ಹೆಣೆದ ಷಡ್ಯಂತ್ರವಾಗಿದ್ದು, ಅವರ ಪಕ್ಷದ ಎರಡು ಗುಂಪುಗಳ ನಡುವಿನ ಆಂತರಿಕ ಜಗಳದಲ್ಲಿ ಧರ್ಮಸ್ಥಳಕ್ಕೆ ಮಸಿ ಬಳಿಯುವ ಪ್ರಯತ್ನ ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಧರ್ಮಸ್ಥಳ ಪ್ರಕರಣವನ್ನು ಎನ್‌ಐಎಗೆ ವಹಿಸಲು ಆಗ್ರಹಿಸಿ ಸೆ.1ರಂದು ಬಿಜೆಪಿಯವರು ಧರ್ಮಸ್ಥಳದಲ್ಲೇ ಧರ್ಮಜಾಗೃತಿ ಸಭೆ ಆಯೋಜಿಸಿರುವ ಕುರಿತು ವಿಧಾನಸೌಧದಲ್ಲಿ ಮಂಗಳವಾರ ಪ್ರತಿಕ್ರಿಯಿಸಿದ ಅವರು, ಪ್ರಕರಣದ ತನಿಖೆಗೆ ಎಸ್‌ಐಟಿ ರಚಿಸಿದ ಸರ್ಕಾರದ ಕ್ರಮವನ್ನು ಅವರ ಪಕ್ಷದ ನಾಯಕರೇ ಸ್ವಾಗತಿಸಿದ್ದರು. ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಕುಟುಂಬದವರೂ ಸ್ವಾಗತಿಸಿದ್ದಾರೆ ಎಂದರು.
ನಾವು ಸತ್ಯ ಹೊರತರಲು ಪ್ರಯತ್ನ ಮಾಡುತ್ತಿದ್ದೇವೆ ಅಷ್ಟೆ. ಈಗ ಧರ್ಮಸ್ಥಳವನ್ನು ಬಿಜೆಪಿಯವರು ಅಶುದ್ಧ ಮಾಡಲು ಹೊರಟಿದ್ದಾರೆ, ಇದು ಬಿಜೆಪಿಯ ಎರಡು ಬಣಗಳ ಆಂತರಿಕ ಕಲಹದಿಂದ ನಡೆದ ಷಡ್ಯಂತ್ರ ಎನ್ನುವುದು ಎಲ್ಲರಿಗೂ ಗೊತ್ತಾಗಿದೆ. ನಾನು ಬಾಯಿಮುಚ್ಚಿಕೊಂಡು ಸುಮ್ಮನೆ ಇದ್ದೇನೆ. ಇದನ್ನು ಎಲ್ಲಿ ಹೊರಗೆಳೆಯುತ್ತೆವೆಯೋ ಎಂದು ಅದನ್ನು ಮುಚ್ಚಿಹಾಕಲು ಧರ್ಮಸಭೆ ಮಾಡಲು ಎಂದು ಹೊರಟಿದ್ದಾರೆ ಎಂದು ಟೀಕಿಸಿದ ಅವರು, ಇಂತಹ ರಾಜಕೀಯ ಕುತಂತ್ರಕ್ಕೆ ತಾವು, ಧರ್ಮ ಕ್ಷೇತ್ರವನ್ನು ದುರ್ಬಳಕೆ ಮಾಡಿಕೊಳ್ಳಲು ಅವಕಾಶ ನೀಡಬಾರದು ಎಂದು ನಾನು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರಿಗೆ ಮನವಿ ಮಾಡುತ್ತೇನೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.